
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ನಾಯಕನಾಗಿ ನಟಿಸಿರುವ 'ಜೂನಿಯರ್' ಚಿತ್ರದ ಎರಡನೇ ಹಾಡು 'ವೈರಲ್ ವಯ್ಯಾರಿ' ಇದೀಗ ಬಿಡುಗಡೆ ಆಗಿದೆ. ಈ ಹಾಡಿನಲ್ಲಿ ಕಿರೀಟಿ ಜೊತೆಗೆ ಶ್ರೀಲೀಲಾ ಹೆಜ್ಜೆ ಹಾಕಿದ್ದು, ಹೈ ಎನರ್ಜಿಟಿಕ್ ಹಾಡಾಗಿದೆ. ಹಾಡಿಗೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದು, ಬಿಡುಗಡೆಯಾದ ಒಂದೇ ದಿನಕ್ಕೆ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ.
ಚಿತ್ರವು ಜುಲೈ 18 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಜೂನಿಯರ್ ಚಿತ್ರದ ಮೊದಲ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಇದೀಗ 'ವೈರಲ್ ವಯ್ಯಾರಿ' ಹಾಡು ಬಿಡುಗಡೆಯಾಗಿದೆ. ಕನ್ನಡ ಆವೃತ್ತಿಗೆ ಪವನ್ ಭಟ್ ಸಾಹಿತ್ಯ ಬರೆದಿದ್ದು, ಹರಿಪ್ರಿಯಾ ಮತ್ತು ದೀಪಕ್ ಬ್ಲೂ ಧ್ವನಿ ನೀಡಿದ್ದಾರೆ. ಶ್ರೀಲೀಲಾ ಸಖತ್ ಆಗಿ ಡ್ಯಾನ್ಸ್ ಮಾಡಿದ್ದು, ಕಿರೀಟಿಯ ಎನರ್ಜಿ ಸ್ಟೆಪ್ ಕೂಡ ಉತ್ತಮವಾಗಿದೆ. ಹಾಡಿನಲ್ಲಿರುವ ಅವರ ಕೆಮಿಸ್ಟ್ರಿ ದೊಡ್ಡ ಪರದೆ ಮೇಲೆ ಹೇಗೆ ಕಾಣಲಿದೆ ಎಂಬ ನಿರೀಕ್ಷೆ ಹೆಚ್ಚಿಸಿದೆ.
ತೆಲುಗಿನಲ್ಲೂ ಚಿತ್ರ ಬಿಡುಗಡೆಯಾಗಲಿದ್ದು, ತೆಲುಗು ಆವೃತ್ತಿಯ ವೈರಲ್ ವಯ್ಯಾರಿಗೆ ಅಭಿಮಾನಿಗಳಿಂದ ಅತ್ಯಾಕರ್ಷಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುಷ್ಪ 2: ದಿ ರೂಲ್‌ನ 'ಕಿಸ್ ಕಿಸ್ ಕಿಸ್ಸಾಕ್' ಹಾಡಿನಲ್ಲಿ ಕಾಣಿಸಿಕೊಂಡ ಬಳಿಕ ಶ್ರೀಲೀಲಾ ಮತ್ತೊಮ್ಮೆ ಒಂದೊಳ್ಳೆ ಹಾಡಿನಲ್ಲಿ ಹೆಜ್ಜೆಯಾಕಿದ್ದಾರೆ.
ಜೂನಿಯರ್ ಚಿತ್ರದಲ್ಲಿ ರವಿಚಂದ್ರನ್, ಜೆನಿಲಿಯಾ ಮತ್ತು ಇತರರು ನಟಿಸಿದ್ದಾರೆ. ಚಿತ್ರಕ್ಕೆ ರಾಧಾಕೃಷ್ಣ ರೆಡ್ಡಿ ಅವರ ನಿರ್ದೇಶನವಿದ್ದು, ಸಾಯಿ ಕೊರ್ರಪಾಟಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಚಿತ್ರಕ್ಕೆ ಕೆಕೆ ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣವಿದೆ.
Advertisement