
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ನಟ ಅಭಿಮಾನಿಗಳ ನಡುವಿನ Fan War ವಿಚಾರಕ್ಕೆ ಸಂಬಂಧಿಸಿದಂತೆ 'ಜೂನಿಯರ್ ಅಪ್ಪು' ಎಂದೇ ಕರೆಯಲಾಗುವ ನಟ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್ ವಾರ್ ಹೊಸದೇನಲ್ಲ. ಇದು ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ನಟರ ಅಭಿಮಾನಿಗಳ ನಡುವೆ ಇದು ವಿಪರೀತಕ್ಕೆ ಹೋಗಿದ್ದೂ ಇದೆ. ಈ ಹಿಂದೆ ನಟ ದರ್ಶನ್ ಮತ್ತು ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಜಟಾಪಟಿ ತಾರಕಕ್ಕೆ ಹೋಗಿತ್ತು.
ಸೋಷಿಯಲ್ ಮೀಡಿಯಾಗಳಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಟೀಕೆ, ಟ್ರೋಲ್, ಮೀಮ್ ಮಾಡುವ ಮೂಲಕ ಅಭಿಮಾನದ ಹೆಸರಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ಇನ್ನು ಯಾವುದಾದರೂ ವೇದಿಕೆಗಳಲ್ಲಿ ನಟರಿದ್ದಾಗ ಬೇರೆ ನಟರ ಅಭಿಮಾನಿಗಳು ಬೇಕಂತಲೇ ಘೋಷಣೆ ಕೂಗುವುದು ಕೂಡ ಇತ್ತೀಚೆಗೆ ಹೆಚ್ಚಾಗಿದೆ.
ಇದೀಗ ಮತ್ತೆ ದರ್ಶನ್ ರ ಡೆವಿಲ್ ಚಿತ್ರ ಮತ್ತು ಯುವರಾಜ್ ಕುಮಾರ್ ರ ಎಕ್ಕ ಚಿತ್ರದ ವಿಚಾರವಾಗಿ ಮತ್ತೆ ಫ್ಯಾನ್ಸ್ ವಾರ್ ಆರಂಭವಾಗಿದೆ. ಯುವರಾಜ್ ಕುಮಾರ್ ಪಾಲ್ಗೊಂಡಿದ್ದ ವೇದಿಕೆಯಲ್ಲಿ ನಟ ದರ್ಶನ್ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಕೂಗಿದ ಘಟನೆ ನಡೆದಿದೆ. ಈ ಬಗ್ಗೆ ನಟ ಯುವರಾಜ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ.
'ಮ್ಯಾಟ್ರು ಮುಗಿಸಿ ಬಿಡೋಣ..'
ಡಾ.ರಾಜ್‌ಕುಮಾರ್ ಕುಟುಂಬದ ಮೂರನೇ ತಲೆಮಾರು ಈಗ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದೆ. ಈ ಪೈಕಿ ರಾಘವೇಂದ್ರ ರಾಜ್‌ಕುಮಾರ್ ಪುತ್ರ, ನಟ ಯುವ ರಾಜ್‌ಕುಮಾರ್ ಆರಂಭದಲ್ಲೇ ಜ್ಯೂನಿಯರ್ ಅಪ್ಪು ಎಂದು ಕರೆಸಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಯುವ ರಾಜ್‌ಕುಮಾರ್ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗಲೇ ನಟ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದು ಡಿಬಾಸ್. ಡಿಬಾಸ್ ಎಂದು ಕೂಗಾಡಿದ್ದಾರೆ. ಈ ವೇಳೆ ಇದಕ್ಕೆ ಪ್ರತಿಕ್ರಿಯಿಸಿದ ನಟ ಯುವ ಕೂಡ ಮ್ಯಾಟರ್ ಮಗಿಸಿ ಬಿಡೋಣ ಎಂದಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ರಾಮನಗರದ ಐತಿಹಾಸಿಕ ಶ್ರೀಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ನಟ ಯುವ ರಾಜ್‌ಕುಮಾರ್ ಹಾಗೂ ಎಕ್ಕ ಚಿತ್ರತಂಡ ಕೂಡ ಭಾಗಿಯಾಗಿತ್ತು. ಯುವ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ದರ್ಶನ್ ಅಭಿಮಾನಿಗಳು 'ಡಿಬಾಸ್.... ಡಿ ಬಾಸ್..' ಎಂದು ಜೋರಾಗಿ ಕೂಗಾಡಿದ್ದಾರೆ. ಆಗ ಯುವ ರಾಜ್‌ಕುಮಾರ್ ತಮ್ಮದೇ ದಾಟಿಯಲ್ಲಿ ಮಾತನಾಡಿದ್ದಾರೆ. 'ಖುಷಿಯ ವಿಚಾರ ಏನಂದ್ರೆ, ಬೇರೆ ಬೇರೆ ನಟರ ಅಭಿಮಾನಿಗಳು ಕೂಡ ಇಲ್ಲಿಗೆ ಬಂದಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಇರಲಿ, ನಿಮ್ಮ ಪ್ರೀತಿ ಇರಲಿ. ಆ ದೇವರು ನಿಮ್ಮೆಲ್ಲರನ್ನು ತುಂಬಾ ಚೆನ್ನಾಗಿ ಇಟ್ಟಿರಲಿ' ಎಂದಿದ್ದಾರೆ.
ಇರೋದು ಒಬ್ಬರೇ ಅಪ್ಪು
ಬಳಿಕ 'ಕೊನೆಯದಾಗಿ ಮ್ಯಾಟರ್ ಮುಗಿಸೋಣ! ಆಟ ಶುರು ಮಾಡಿದವನು ರಾಜ, ಅದನ್ನ ಆಡಿ ಮುಗಿಸೋನೆ ಎಕ್ಕ' ಎಂದು ಡೈಲಾಗ್ ಹೊಡೆದಿದ್ದಾರೆ. ಆಗ ಅಪ್ಪು ಅಭಿಮಾನಿಗಳು ಅಪ್ಪು..ಅಪ್ಪು ಎಂದು ಘೋಷಣೆ ನೀಡಿ ಕೌಂಟರ್ ಕೊಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 'ಬೆಂಗಳೂರಿಗೆ ಸಾವಿರ ಜನ ಬರ್ತಾರೆ, ಹೋಗ್ತಾರೆ. ಇರೋದು ಒಬ್ರೇ ಅಪ್ಪು, ಲೋಕಲ್' ಎಂದೂ ಯುವ ಮತ್ತೊಂದು ಡೈಲಾಗ್ ಹೊಡೆದಿದ್ದಾರೆ. ಆಗ ಅಲ್ಲಿ ನೆರೆದಿದ್ದವರೆಲ್ಲ ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ.
Advertisement