
ಬೆಂಗಳೂರು: ಕಾಂತಾರ ಚಾಪ್ಟರ್-1 ಚಿತ್ರೀಕರಣ ಸಂದರ್ಭದಲ್ಲಿ ಯಾವುದೇ ಅವಘಡ ನಡೆದಿಲ್ಲ ಎಂದು ಹೊಂಬಾಳೆ ಫಿಲಂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕ ಆದರ್ಶ್ ಅವರು, ಮಾಣಿ ಜಲಾಶಯದ ಹಿನ್ನೀರಿನಲ್ಲಿ ಕಾಂತಾರ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್‌ಗಾಗಿ ಬ್ಯಾಕ್ ಡ್ರಾಪ್‌ನಲ್ಲಿ ದೋಣಿ ಸೆಟ್ ಹಾಕಲಾಗಿತ್ತು. ಇಲ್ಲಿ ಭಾರೀ ಗಾಳಿ, ಮಳೆಗೆ ಆ ಸೆಟ್ ಕೆಳಗೆ ಬಿದ್ದಿದೆ. ಬ್ಯಾಕ್ ಡ್ರಾಪ್ ಕೆಳಗೆ ಬಿದ್ದಾಗ ಆ ಸುತ್ತಮುತ್ತಲು ನಮ್ಮ ಶೂಟಿಂಗ್‌ನವರು ಇರಲಿಲ್ಲ. ಇದರಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ಹೇಳಿದ್ದಾರೆ.
ಘಟನೆ ನಡೆದ ಸ್ಥಳದಿಂದ ದೂರದಲ್ಲಿ ಚಿತ್ರೀಕರ ನಡೆಯುತ್ತಿತ್ತು. ಹೀಗಾಗಿ, ಯಾವುದೇ ಅವಘಡಗಳು ಸಂಭವಿಸಿಲ್ಲ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಚಿತ್ರೀಕರಣ ಯೋಜಿಸಿದಂತೆಯೇ ಮುಂದುವರೆಯಲಿದೆ. ಶೂಟಿಂಗ್‌ಗಾಗಿ ಎಲ್ಲಾ ಇಲಾಖೆಗಳ ಅನುಮತಿ ಪಡೆದಿದ್ದೇವೆ. ದೋಣಿಗಳು, ಮೀನುಗಾರರು, ಈಜುಗಾರರು, ಸ್ಕೂಬಾ ಡೈವರ್‌ಗಳು ಮತ್ತು ಲೈಫ್ ಜಾಕೆಟ್‌ಗಳಂತಹ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆಂದು ತಿಳಿಸಿದರು.
ಕ್ಯಾಮೆರಾ ಹಾನಿ ಮತ್ತು ರಿಷಬ್ ಶೆಟ್ಟಿ ಇತರರಿಗೆ ತೊಂದರೆಯಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಕ್ಯಾಮೆರಾಗಳಿಗೆ ಯಾವುದೇ ಹಾನಿಯಾಗಿಲ್ಲ. ಅವು ಮುಳುಗಿದ್ದರೆ, ನಾವು ಚಿತ್ರೀಕರಣವನ್ನು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ. ಪೊಲೀಸರು ಸ್ಥಳವನ್ನು ಪರಿಶೀಲಿಸಿದ್ದು, ಯಾವುದೇ ಅವಘಡ ಸಂಭವಿಸಿಲ್ಲ ಎಂದು ದೃಢಪಡಿಸಿದ್ದಾರೆಂದು ಹೇಳಿದ್ದಾರೆ.
Advertisement