
ಯುವ ರಾಜ್‌ಕುಮಾರ್ ನಟಿಸಿರುವ ಎಕ್ಕ ಚಿತ್ರ ಜುಲೈ 18 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಯುವ ಚಿತ್ರದ ನಂತರ ಯುವ ರಾಜ್‌ಕುಮಾರ್ ಅವರು ಎಕ್ಕ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ. ಚಿತ್ರವನ್ನು ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿದ್ದು, ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಎಕ್ಕ ಚಿತ್ರತಂಡದೊಂದಿಗಿನ ಇತ್ತೀಚಿನ ಮಾಧ್ಯಮ ಸಂವಾದದಲ್ಲಿ, ಚಿತ್ರತಂಡ ಮಾಹಿತಿ ಬಹಿರಂಗಪಡಿಸಿದರು. ಈಗಾಗಲೇ ಟೀಸರ್ ಮತ್ತು ಹಾಡುಗಳೊಂದಿಗೆ, ವಿಶೇಷವಾಗಿ 'ಬ್ಯಾಂಗಲ್ ಬಂಗಾರಿ' ಹಾಡು ತೀವ್ರ ಸಂಚಲನ ಮೂಡಿಸಿದೆ. ಈ ಕಾರ್ಯಕ್ರಮದಲ್ಲಿ ಯುವರಾಜ್‌ಕುಮಾರ್ ಮತ್ತು ನಿರ್ದೇಶಕ ರೋಹಿತ್ ಪದಕಿ ಸೇರಿದಂತೆ ಚಿತ್ರದ ಪ್ರಮುಖ ಪಾತ್ರವರ್ಗ ಭಾಗವಹಿಸಿತ್ತು.
ನಿರ್ಮಾಪಕ ಕಾರ್ತಿಕ್ ಗೌಡ ಈ ಸಹಯೋಗದ ಹಿಂದಿನ ಕಾರಣವನ್ನು ವಿವರಿಸುತ್ತಾ, ಇದು ಕೇವಲ ಹಣದ ಬಗ್ಗೆ ಅಲ್ಲ. ಬದಲಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ ಮತ್ತು ಬೋಗೇಂದ್ರ ಅವರಂತಹ ನಿರ್ಮಾಪಕರ ನಡುವಿನ ವಿಚಾರಗಳ ವಿನಿಮಯ ಮತ್ತು ದೈನಂದಿನ ಸೃಜನಶೀಲ ಚರ್ಚೆಗಳನ್ನು ಒಳಗೊಂಡಿತ್ತು. ಈ ರೀತಿಯ ಸಹಯೋಗವು ಸಿನೆಮಾದ ಭವಿಷ್ಯ ಎಂದು ನಾವು ನಂಬುತ್ತೇವೆ. ಭವಿಷ್ಯದಲ್ಲಿ ಹೊಸ ಮುಖಗಳು ಮತ್ತು ಯುವ ಪ್ರತಿಭೆಗಳೊಂದಿಗೆ ಕೈಜೋಡಿಸಲು ನಿರ್ಮಾಣ ಸಂಸ್ಥೆಗಳು ಮುಕ್ತವಾಗಿವೆ ಎಂದು ಹೇಳಿದರು.
ಮೂಲತಃ ಜೂನ್ 6 ರಂದು ಬಿಡುಗಡೆಯಾಗಬೇಕಿದ್ದ ಎಕ್ಕ ಚಿತ್ರವನ್ನು ಒಂದು ತಿಂಗಳು ಮುಂದೂಡಲಾಯಿತು. 'ಎಲ್ಲವೂ ಪರಿಪೂರ್ಣವಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಸಿನಿಮಾ ಪ್ರಬಲವಾಗಿದ್ದರೆ, ಪ್ರೇಕ್ಷಕರು ಖಂಡಿತವಾಗಿಯೂ ಚಿತ್ರಮಂದಿರಗಳಿಗೆ ಹೋಗುತ್ತಾರೆ' ಎಂದು ಕಾರ್ತಿಕ್ ಹೇಳಿದರು.
ನಟ ಯುವ ರಾಜ್‌ಕುಮಾರ್ ಮಾತನಾಡಿ, 'ಹೌದು, ಅವರ ಬೆಂಬಲ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ ಮತ್ತು ಇದು ಅದೃಷ್ಟ ಎಂದು ಭಾವಿಸುತ್ತೇನೆ, ಆದರೆ ಅದೇ ವೇಳೆ ನಟನಾಗಿ ನಾನು ಉತ್ತಮವಾಗಿ ನಟಿಸಬೇಕು ಎಂಬುದು ನನಗೆ ತಿಳಿದಿದೆ. ನಾನು ಪರದೆ ಮೇಲೆ ಕಾಣಿಸಿಕೊಂಡು ಪ್ರದರ್ಶನ ನೀಡದಿದ್ದರೆ, ಪ್ರೇಕ್ಷಕರು ನನ್ನನ್ನು ಸ್ವೀಕರಿಸುತ್ತಾರೆಯೇ? ಅಂತಿಮವಾಗಿ, ನಮಗೆ ಥಂಬ್ಸ್-ಅಪ್ ನೀಡುವುದು ಪ್ರೇಕ್ಷಕರು. ನಾವು ಅವರನ್ನು ಮೋಸ ಮಾಡಲು ಸಾಧ್ಯವಿಲ್ಲ. ನಾನು ಚೆನ್ನಾಗಿ ನಟಿಸಿದರೆ ಮಾತ್ರ ಅವರು ನನ್ನನ್ನು ಮೇಲಕ್ಕೆತ್ತುತ್ತಾರೆ. ಇಲ್ಲದಿದ್ದರೆ, ಅವರು ಹಾಗೆ ಮಾಡುವುದಿಲ್ಲ. ಈ ಚಿತ್ರವು ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಎಂದರು.
ನಿರ್ದೇಶಕ ರೋಹಿತ್ ಪದಕಿ, ಎಕ್ಕ ಚಿತ್ರವು ಆ್ಯಕ್ಷನ್, ಎಮೋಷನ್ಸ್ ಮತ್ತು ಕೌಟುಂಬಿಕ ಮೌಲ್ಯಗಳನ್ನು ಮಿಶ್ರಣ ಮಾಡುವ ಸಂಪೂರ್ಣ ಕಮರ್ಷಿಯಲ್ ಎಂಟರ್‌ಟೈನ್‌ಮೆಂಟ್ ಆಗಿದೆ. ನೀವು ಉತ್ತಮ ಚಿತ್ರವನ್ನು ಮಾಡಲು ಬಯಸಿದಾಗ, ನಿಮಗೆ ಬಲಿಷ್ಠವಾದ ಅಡಿಪಾಯ ಬೇಕು. ನಾವು ಇಲ್ಲಿಯವರೆಗೆ ಬಿಡುಗಡೆ ಮಾಡಿರುವ ಪ್ರತಿಯೊಂದು ವಿಷಯದಲ್ಲಿಯೂ ನಮ್ಮ ಶ್ರಮ ಮತ್ತು ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಆ ಭಾವನೆಯನ್ನು ಪ್ರೇಕ್ಷಕರು ಸಹ ಅನುಭವಿಸುತ್ತಾರೆ ಎಂದು ನಾನು ನಂಬುತ್ತೇನೆ' ಎಂದು ಅವರು ಹೇಳಿದರು.
ಚಿತ್ರದಲ್ಲಿ ಯುವ ರಾಜ್‌ಕುಮಾರ್‌ಗೆ ಜೋಡಿಯಾಗಿ ಸಂಜನಾ ಆನಂದ್ ಮತ್ತು ಸಂಪದಾ ನಟಿಸಿದ್ದಾರೆ. ಇನ್ನುಳಿದಂತೆ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯ, ಸಾಧು ಕೋಕಿಲಾ, ಜಾಲಿ ಜ್ಯಾಕ್, ಪುನೀತ್ ರುದ್ರನಾಗ್, ಡಾ. ಸೂರಿ, ಹರಿಣಿ, ಶ್ರುತಿ ಮತ್ತು ರಾಹುಲ್ ದೇವ್ ಶೆಟ್ಟಿ ಸೇರಿದಂತೆ ಇತರರು ನಟಿಸಿದ್ದಾರೆ. 'ಎಕ್ಕ' ಚಿತ್ರಕ್ಕೆ ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿದೆ.
'ಈ ಚಿತ್ರದಲ್ಲಿ ಕೆಲಸ ಮಾಡುವುದು ತುಂಬಾ ಸಂತೋಷ ತಂದಿದೆ' ಎಂದು ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಚರಣ್ ರಾಜ್ ಹೇಳಿದರು. ತಮ್ಮ ಕೆಲಸದ ಪ್ರಗತಿಯ ಕುರಿತು ಮಾತನಾಡಿದ ಅವರು, 'ಇದೀಗ ನಾವು ಹಿನ್ನೆಲೆ ಸಂಗೀತದ ಕೆಲಸ ಮಾಡುತ್ತಿದ್ದೇವೆ. ನಮ್ಮ ಕೆಲಸಕ್ಕೆ ಪ್ರೇಕ್ಷಕರಿಂದ ಬಂದಿರುವ ಸಕಾರಾತ್ಮಕ ಪ್ರತಿಕ್ರಿಯೆ ನಿಜಕ್ಕೂ ಸಂತೋಷಕರವಾಗಿದೆ' ಎಂದು ಹೇಳಿದರು.
Advertisement