
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ನಟ ಶಿವರಾಜ್ ಕುಮಾರ್ ಮನೆ ಗೇಟ್ ಮುಂದೆ ಕಾದಿರುವ ಘಟನೆ ವರದಿಯಾಗಿದೆ.
ಈ ಹಿಂದೆ ವೈರಲ್ ಆಗಿದ್ದ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ನಟ ಮನು ಶಿವಣ್ಣನ ಕಾಣಲು ಅವರ ಮನೆಗೆ ಹೋಗಿದ್ದಾರೆ ಎನ್ನಲಾಗಿದೆ. ಇದರಲ್ಲಿ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್‌ವುಡ್ ನಟರ ಸಾವಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪ ಮಾಡಲಾಗಿತ್ತು.
ಈ ಹಿನ್ನೆಲೆ ಮಡೆನೂರು ಮನು ಜೈಲಿಂದ ಹೊರಬಂದ ಮೇಲೆ ಆ ಆಡಿಯೋ ನನ್ನದಲ್ಲ, ನಾನು ಎಲ್ಲ ನಟರ ಬಳಿ ಕ್ಷಮೆ ಕೇಳುವುದಾಗಿ ಹೇಳಿದ್ದರು. ಹೀಗಾಗಿ ಕ್ಷಮೆ ಕೇಳಲು ನಟ ಶಿವರಾಜ್‌ಕುಮಾರ್ ಅವರ ನಿವಾಸದ ಬಳಿ ಮಡೆನೂರು ಮನು ತಮ್ಮ ಕುಟುಂಬದೊಂದಿಗೆ ತೆರಳಿದ್ದರು.
ಗೇಟ್ ಓಪನ್ ಆಗಲಿಲ್ಲ.. ಕಾದು ಕಾದು ಸುಸ್ತಾದ ಮನು
ನಾಗವಾರದಲ್ಲಿರುವ ಶಿವಣ್ಣನ ನಿವಾಸ ಶ್ರೀಮುತ್ತು ಮುಂದೆ ತನ್ನ ಮಗು, ಪತ್ನಿ ಜೊತೆ ಮಡೆನೂರು ಮನು ನಿಂತು ಕಾದಿದ್ದಾರೆ. ಮಡೆನೂರು ಮನು ಎಷ್ಟೇ ಕಾದರು ಶಿವಣ್ಣನ ಮನೆಯ ಗೇಟ್ ಓಪನ್ ಆಗಲಿಲ್ಲ. ಪರಿಣಾಮ ನಟ ಮನು ಮತ್ತು ಅವರ ಕುಟುಂಬ ಕಾದು ಕಾದು ಸುಸ್ತಾಗಿ ಬರಿಗೈಲಿ ಮನೆಗೆ ವಾಪಸ್ ಆಗಿದೆ ಎಂದು ಹೇಳಲಾಗಿದೆ. ಮಡೆನೂರು ಮನು ಶಿವಣ್ಣನಿಗಾಗಿ ಕಾಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಆಡಿಯೋ ವೈರಲ್
ಅತ್ಯಾಚಾರ ಪ್ರಕರಣದ ವೇಳೆ ಇದೇ ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋವೊಂದು ವ್ಯಾಪಕ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಮನು ನಟ ಶಿವರಾಜ್ ಕುಮಾರ್, ದರ್ಶನ್ ಮತ್ತು ಸುದೀಪ್ ಸೇರಿದಂತೆ ಕನ್ನಡದ ಪ್ರಮುಖ ನಟರ ಕುರಿತು ಮಾತನಾಡಿದ್ದರು ಎಂದು ಹೇಳಲಾಗಿದೆ. ಪ್ರಮುಖವಾಗಿ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್‌ವುಡ್ ನಟರ ಸಾವಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪ ಮಾಡಲಾಗಿತ್ತು.
ಈ ಆಡಿಯೋ ವೈರಲ್ ಆದ ಬೆನ್ನಲ್ಲೇ ಮಡೆನೂರು ಮನು ವಿರುದ್ಧ ಶಿವಣ್ಣನ ಅಭಿಮಾನಿಗಳು ಕೂಡ ಕೆರಳಿದ್ದರು. ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದರು. ಫಿಲಂ ಚೇಂಬರ್ ಕೂಡ ಈ ಆರೋಪ ಸುಳ್ಳು ಎಂದು ಸಾಬೀತಾಗುವವರೆಗೆ ಮನು ಮೇಲೆ ನಿಷೇಧ ಹೇರುವುದಾಗಿ ತಿಳಿಸಿತ್ತು.
ಜಾಮೀನು ಮಂಜೂರು; ಷಡ್ಯಂತ್ರ ಎಂದ ನಟ
ಇನ್ನು ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಜೈಲಿನಿಂದ ಹೊರ ಬಂದ ನಟ ಮನು, ಬಳಿಕ ಮಾತನಾಡಿ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಅಲ್ಲಗಳೆದರು.
'ಆ ಆಡಿಯೋ ನನ್ನದಲ್ಲ. ನನ್ನ ಸಿನಿಮಾ ಬರುವ ಹೊತ್ತಲ್ಲೇ ಈ ಆಡಿಯೋ ಹರಿಬಿಟ್ಟು ನನ್ನ ಮೇಲೆ ಷಡ್ಯಂತ್ರ ಮಾಡಿದ್ದಾರೆ. ಶಿವಣ್ಣನ ದೊಡ್ಡವರು. ನಾನು ಅವರ ಬಗ್ಗೆ ಆ ರೀತಿ ಮಾತನಾಡಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ನಾನೇ ಖುದ್ದಾಗಿ ಶಿವಣ್ಣ ಅವರನ್ನು ಭೇಟಿಯಾಗಿ ಕ್ಷಮೆ ಕೇಳುತ್ತೇನೆ' ಎಂದು ಮನು ಹೇಳಿದ್ದರು.
ಅಲ್ಲದೆ ಇತ್ತೀಚೆಗೆ ಎನ್.ಆರ್.ರಮೇಶ್ ಅವರನ್ನು ಭೇಟಿಯಾಗಿದ್ದ ಮನು ಮೂವರು ನಟರಿಗೆ ಕ್ಷಮೆಯಾಚಿಸಿದ್ದರು. ಕಲೆ ನಂಬಿ ಬಂದ ನನ್ನನ್ನು ಕ್ಷಮಿಸಿ ಎಂದು ಮನು ಬೇಡಿಕೊಂಡಿದ್ದರು. ನಾನು ಉದ್ದೇಶಪೂರ್ವಕವಾಗಿ ಆ ರೀತಿ ಮಾತನಾಡಿಲ್ಲ. ಇದೆಲ್ಲವೂ ಷಡ್ಯಂತ್ರ ಎಂದಿದ್ದರು.
Advertisement