
ಎರಡು ದಶಕಗಳಿಗೂ ಹೆಚ್ಚು ಕಾಲ ಹಿಂದಿ ಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಅನುರಾಗ್ ಕಶ್ಯಪ್, ಇದೀಗ ದಕ್ಷಿಣ ಭಾರತದ ಚಿತ್ರರಂಗದತ್ತ ಮುಖಮಾಡಿದ್ದಾರೆ. ತಮ್ಮ ವಿಶಿಷ್ಟ ಚಿತ್ರ ನಿರ್ದೇಶನಕ್ಕೆ ಹೆಸರಾದ ಅನುರಾಗ್ ಕಶ್ಯಪ್ ಅವರು ನಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುಜಯ್ ಶಾಸ್ತ್ರಿ ನಿರ್ದೇಶನದ 8 ಚಿತ್ರದ ಮೂಲಕ ಅನುರಾಗ್ ಕಶ್ಯಪ್ ಅವರು ನಟನೆಯ ಅದೃಷ್ಟ ಪರೀಕ್ಷೆಗಿಳಿಸಿದ್ದಾರೆ. AVR ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
'ನಾವು ಮಾತುಕತೆ ನಡೆಸಿದ್ದೇವೆ. ಸುಜಯ್ ಹೇಳಿದ ಕಥೆಯನ್ನು ಅನುರಾಗ್ ಕೇಳಿದರು ಮತ್ತು ಇಷ್ಟಪಟ್ಟರು. ತಕ್ಷಣವೇ ಆ ಪಾತ್ರದೊಂದಿಗೆ ತಮ್ಮನ್ನು ಕಲ್ಪಿಸಿಕೊಂಡರು. ಇದು ಅವರಿಗೆ ಒಂದು ರೋಮಾಂಚಕಾರಿ ಯೋಜನೆಯಾಗಿದೆ ಮತ್ತು ನಮ್ಮ ಯೋಜನೆಯೊಂದಿಗೆ ಅವರು ನಟನೆಗೆ ಪದಾರ್ಪಣೆ ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ' ಎಂದು ಅರವಿಂದ್ ಹೇಳುತ್ತಾರೆ.
ಸೂಪರ್ ಮಾಡೆಲ್ ಆಗಿದ್ದ ಆಯೇಷಾ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮತ್ತಷ್ಟು ರೋಮಾಂಚನವನ್ನುಂಟುಮಾಡಿದೆ. ಅನುರಾಗ್ ಅವರ ಪಾತ್ರದ ಕುರಿತು ಮತ್ತು ಚಿತ್ರೀಕರಣದ ವಿವರಗಳು ಇನ್ನೂ ಗೌಪ್ಯವಾಗಿದ್ದರೂ, ಚಿತ್ರತಂಡ 27 ದಿನಗಳಲ್ಲಿ ಅನುರಾಗ್ ಕಶ್ಯಪ್ ಅವರ ಚಿತ್ರೀಕರಣವನ್ನು ಪೂರ್ಣಗೊಳಿಸಲು ಯೋಜಿಸಿದೆ. ಪೆದ್ರೊ ಖ್ಯಾತಿಯ ನಟೇಶ್ ಹೆಗ್ಡೆ ನಿರ್ದೇಶನದ ಮುಂಬರುವ ಕನ್ನಡ ಚಿತ್ರ 'ವಾಘಚಿಪಾಣಿ'ಯನ್ನು ಅನುರಾಗ್ ನಿರ್ಮಿಸುತ್ತಿದ್ದಾರೆ.
ಅನುರಾಗ್ ಈಗಾಗಲೇ ತಮಿಳು ಚಿತ್ರ ಮಹಾರಾಜ ಮತ್ತು ಮಲಯಾಳಂ ಚಿತ್ರ ರೈಫಲ್ ಕ್ಲಬ್‌ನಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ 'ವಿಡುತಲೈ ಭಾಗ 2' ರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರ ಡಕಾಯಿತ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.
Advertisement