
ಮದುವೆಗಾಗಿ ಸ್ವಲ್ಪ ಸಮಯ ಬಿಡುವು ಮಾಡಿಕೊಂಡಿದ್ದ ಡಾಲಿ ಧನಂಜಯ್, 'ಹಲಗಲಿ' ಚಿತ್ರದ ಚಿತ್ರೀಕರಣದಲ್ಲಿ ಮತ್ತೆ ತೊಡಗಿಕೊಳ್ಳಲಿದ್ದಾರೆ. ಚಿತ್ರದ ಶೇ 40ರಷ್ಟು ಚಿತ್ರೀಕರಣ ಬಾಕಿ ಉಳಿದಿದ್ದು, ಈ ಚಿತ್ರದ ಚಿತ್ರೀಕರಣ ಒಂದು ತಿಂಗಳ ಕಾಲ ನಡೆಯಲಿದೆ ಎನ್ನಲಾಗಿದೆ. ಇದಲ್ಲದೆ, ಧನಂಜಯ್ ಶಂಕರ್ ಗುರು ನಿರ್ದೇಶನದ 'ಅಣ್ಣಾ ಫ್ರಂ ಮೆಕ್ಸಿಕೋ' ಚಿತ್ರದ ಚಿತ್ರೀಕರಣದಲ್ಲೂ ಭಾಗಿಯಾಗಲಿದ್ದಾರೆ. ಇದರೊಂದಿಗೆ 'ಜಿಂಗೊ' ಚಿತ್ರದಲ್ಲೂ ನಟಿಸಲಿದ್ದು, ಚಿತ್ರ ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.
ಈಮಧ್ಯೆ, ಧನಂಜಯ್ ಮತ್ತು ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಿರ್ದೇಶಕ ಹೇಮಂತ್ ಎಂ ರಾವ್ ಹೊಸ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಆರಂಭಿಕ ಚರ್ಚೆಗಳಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಲ್ಲವೂ ಅಂದುಕೊಂಡಂತೆ ಆದರೆ, ಧನಂಜಯ್ ಅವರಿಗೆ ಹೇಮಂತ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮತ್ತು ಚೈತ್ರಾ ಜೆ ಆಚಾರ್ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಂತರ ಹೇಮಂತ್ ರಾವ್ ಅವರು ಶಿವರಾಜ್‌ಕುಮಾರ್ ಅವರ 'ಭೈರವನ ಕೊನೆ ಪಾಠ' ಚಿತ್ರ ನಿರ್ದೇಶಿಸಲು ಎದುರು ನೋಡುತ್ತಿದ್ದಾರೆ. ಈ ಯೋಜನೆ ಪ್ರಾರಂಭಿಸುವ ಮೊದಲು ಶಿವಣ್ಣ ತಮ್ಮ ಇತರೆ ಚಿತ್ರಗಳನ್ನು ಪೂರ್ಣಗೊಳಿಸಲೆಂದು ಕಾಯುತ್ತಿದ್ದಾರೆ. ನಿರ್ದೇಶನವಷ್ಟೇ ಅಲ್ಲದೆ ದಾಕ್ಷಾಯಣಿ ಟಾಕೀಸ್ ಬ್ಯಾನರ್ ಅಡಿಯಲ್ಲಿ 'ಅಜ್ಞಾತವಾಸಿ' ಎಂಬ ಚಿತ್ರವನ್ನು ಸಹ ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ಏಪ್ರಿಲ್ 10ರಂದು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
ನಟ ಧನಂಜಯ್ ಮತ್ತು ನಿರ್ದೇಶಕ ಹೇಮಂತ್ ರಾವ್ ನಡುವಿನ ಸಹಯೋಗವು ಆಸಕ್ತಿದಾಯಕ ಚಿತ್ರವಾಗಲಿದ್ದು, ಅಭಿಮಾನಿಗಳಲ್ಲಿ ಈಗಾಗಲೇ ನಿರೀಕ್ಷೆ ಗರಿಗೆದರಿದೆ.
Advertisement