
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ (Toxic Movie) ಮತ್ತೆ ಸುದ್ದಿಗೆ ಬಂದಿದ್ದು, ಈ ಬಾರಿ ಹಾಲಿವುಡ್ ನಟ ಕನ್ನಡದ ಈ ಬಹು ನಿರೀಕ್ಷಿತ ಚಿತ್ರದ ಕುರಿತು ಮಾತನಾಡಿರುವ ಮಾತುಗಳು ವ್ಯಾಪಕ ವೈರಲ್ ಆಗುತ್ತಿವೆ.
ಹೌದು.. ರಾಕಿಂಗ್ ಸ್ಟಾರ್ ಯಶ್ (Yash) ಸದ್ಯ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಹಾಲಿವುಡ್ ನಟ ಕೈಲ್ ಪೌಲ್ (KylePaul) ಒಬ್ಬರಾಗಿದ್ದು, ಚಿತ್ರೀಕರಣದ ತಮ್ಮ ಅದ್ಭುತ ಅನುಭವವನ್ನು ಕೈಲ್ ಪೌಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ವಿಡಿಯೋ ಹಂಚಿಕೊಂಡಿರುವ ಕೈಲ್ ಪೌಲ್, 'ಟಾಕ್ಸಿಕ್’ ಸಿನಿಮಾದಲ್ಲಿ ಎಮೋಷನಲ್ ಸನ್ನಿವೇಶಗಳಿವೆ. ಭಾರತದ ಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ. ಇಂತಹ ಸನ್ನಿವೇಶಗಳಲ್ಲಿ ನಟಿಸಿದ್ದನ್ನು ಮರೆಯೋಕೆ ಸಾಧ್ಯವಿಲ್ಲ.
ನಿರ್ದೇಶಕಿ ಗೀತು ನಟಿಸಲು ಬಹಳ ಸಹಕಾರ ನೀಡಿದರು. ಬಹಳ ಸಮಯ ತೆಗೆದುಕೊಂಡು ನಟಿಸಲು ಹೇಳುತ್ತಿದ್ದರು, ಸದಾ ಹುರಿದುಂಬಿಸುತ್ತಿದ್ದರು. ಚಿತ್ರತಂಡದ ಜೊತೆ ಕೆಲಸ ಮಾಡಿದ ಅನುಭವ ನಿಜಕ್ಕೂ ಅದ್ಭುತವಾಗಿತ್ತು ಎಂದು ಕೈಲ್ ಪೌಲ್ ಕೊಂಡಾಡಿದ್ದಾರೆ.
ಮಾತ್ರವಲ್ಲದೇ ಚಿತ್ರದಲ್ಲಿ ಕನ್ನಡವೇ ಬಾರದ ಕೈಲ್ ಪೌಲ್ ಕೂಡ ಕನ್ನಡದಲ್ಲೇ ಡೈಲಾಗ್ ಹೇಳಿ ಥ್ರಿಲ್ ಆಗಿದ್ದಾರೆ.
ಅಂದಹಾಗೆ ‘ಟಾಕ್ಸಿಕ್’ ಚಿತ್ರವು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಒಟ್ಟಿಗೆ ಶೂಟ್ ಮಾಡಲಾಗುತ್ತಿದೆ. ಈ ಸಿನಿಮಾಗೆ ಹಾಲಿವುಡ್‌ನ ಫೇಮಸ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಆಕ್ಷನ್ ದೃಶ್ಯಗಳನ್ನು ಡೈರೆಕ್ಷನ್ ಮಾಡಿದ್ದಾರೆ.
ಯಶ್ ಮತ್ತು ಕೆವಿಎನ್ ಸಂಸ್ಥೆ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಕೆಜಿಎಫ್ 2’ ಬಳಿಕ ಯಶ್ ಅವರು ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಸಿನಿಮಾ ಮುಹೂರ್ತ ಕಾರ್ಯಕ್ರಮ ಜರುಗಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.
Advertisement