
ಬೆಂಗಳೂರು: ಕನ್ನಡದ ಖ್ಯಾತ ಗಾಯಕಿ ಅರ್ಚನಾ ಉಡುಪ ಅವರಿಗೆ ಕ್ಯಾನ್ಸರ್ ತಗುಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಗಾಯಕಿ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅರ್ಚನಾ ಅವರು, ಆರೋಗ್ಯದ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿರುವವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ನನಗೆ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲ. ಕಳೆದ ಕೆಲ ದಿನಗಳಿಂದ ಕ್ಯಾನರ್ ಇದೆ, ನಾನುಹಾಡುವುದನ್ನು ನಿಲ್ಲಿಸಿದ್ದೇನೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಇದರಿಂದ ನನ್ನ ಕುಟುಂಬಸ್ಥರಿಗೆ ಬಹಳನೋವಾಗಿದೆ, ವೃತ್ತಿಗೆ ಹೊಡೆತ ಬೀಳುತ್ತಿದೆ ಎಂದು ಹೇಳಿದ್ದಾರೆ.
ಎಲ್ಲರಿಗೂ ನಮಸ್ಕಾರ. ನನ್ನನ್ನು ತುಂಬಾ ದಿನಗಳಿಂದ ಕಾಡುತ್ತಿದ್ದ ಎರಡು ಮುಖ್ಯವಾದ ವಿಚಾರವನ್ನು ಇವತ್ತು ನಾನು ನಿಮ್ಮ ಮುಂದೆ ಹಂಚಿಕೊಳ್ಳಬೇಕು ಅಂತ ಈ ವಿಡಿಯೋ ಮಾಡುತ್ತಿದ್ದೇನೆ. ಈ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳಲೇಬೇಕು. 3-4 ವರ್ಷಗಳ ಹಿಂದೆ ನಾನು ಒಂದು ಸಂದರ್ಶನ ನೀಡಿದ್ದೆ. 20 ವರ್ಷಗಳ ಹಿಂದೆ ನನ್ನ ಗಂಟಲುದಲ್ಲಿ ಸಣ್ಣ ಸಮಸ್ಯೆ ಉಂಟಾಗಿ, ತಿಂಗಳುಗಳ ಕಾಲ ನನಗೆ ಹಾಡಲು ಆಗುತ್ತಾ ಇರಲಿಲ್ಲ ಎಂಬ ವಿಷಯವನ್ನು ಆ ಸಂದರ್ಶನದಲ್ಲಿ ಹೇಳಿದ್ದೆ. ಪೂರ್ತಿಯಾಗಿ ಸಂದರ್ಶನ ನೋಡದೇ, ಕೇವಲ ಚಿಕ್ಕ ತುಣುಕು ನೋಡಿಕೊಂಡು, ನನಗೆ ಹಾಡಲು ಆಗುತ್ತಿಲ್ಲ, ಹಾಡುವುದು ನಿಲ್ಲಿಸಿದ್ದೇನೆ, ಗಂಟಲು ಹೊರಟು ಹೋಗಿದೆ ಅಂತ ತುಂಬಾ ಜನ ಹಬ್ಬಿಸಿದ್ದಾರೆ.
ಇದು ನನ್ನ ಮನಸ್ಸಿಗೆ ತುಂಬ ನೋವು ಕೊಡುತ್ತಿದೆ. ಎಲ್ಲಿ ಹೋದರೂ, ನೀವು ಈಗ ಆರೋಗ್ಯವಾಗಿ ಇದ್ದೀರಾ? ಹಾಡುತ್ತಿದ್ದೀರಾ? ಅಂತ ಕೇಳುತ್ತಾರೆ. ನಾನು ಈಗ ಮೊದಲಿಗಿಂತ ಹೆಚ್ಚು ಬ್ಯುಸಿ ಆಗಿದ್ದೇನೆ, ಹಾಗು ಮೊದಲಿಗಿಂತ ಹೆಚ್ಚು ಹಾಡುಗಳನ್ನು ಹಾಡುತ್ತಿದ್ದೇನೆ.
ಇನ್ನೊಂದು ವಿಷಯವೆಂದರೆ ಏನೆಂದರೆ, ಶಾರ್ಟ್ ಹೇರ್ ಕಟ್. ಇದನ್ನು ಯಾಕೆ ಮಾಡಿಸಿದ್ದು ಎಂದರೆ, ನಾನು ಒಂದು ಹೊಸ ಧಾರಾವಾಹಿಯಲ್ಲಿ ಪಾತ್ರ ಒಪ್ಪಿಕೊಂಡಿದ್ದೇನೆ. ಆ ಪಾತ್ರಕ್ಕೆ ಇದೇ ರೀತಿಯ ಹೇರ್ ಕಟ್ ಮಾಡಿಸಿಕೊಳ್ಳಬೇಕು ಎಂದು ಚಾನೆಲ್ನವರು ಹೇಳಿದ್ದರಿಂದ ನಾನು ಹೀಗೆ ಮಾಡಿಸಿಕೊಳ್ಳಬೇಕಾಯಿತು. ನನಗೆ ಯಾವ ಆರೋಗ್ಯದ ಸಮಸ್ಯೆಯೂ ಇಲ್ಲ. ಅವರವರೇ ಏನೇನೋ ಊಹೋಪೋಹಗಳನ್ನು ಮಾಡಿಕೊಂಡು, ನನಗೆ ಕ್ಯಾನ್ಸರ್ ಬಂದಿದೆ ಎಂಬ ಹಂತಕ್ಕೆ ಮಾತನಾಡಿ ಬಿಟ್ಟಿದ್ದಾರೆ. ಇದರಿಂದ ನನಗಿಂತಲೂ ಹೆಚ್ಚಾಗಿ ನನ್ನ ತಂದೆ-ತಾಯಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ತುಂಬ ನೋವಾಗಿದೆ. ಎಲ್ಲರ ಬಳಿ ನನ್ನ ಕೋರಿಕೆ ಇಷ್ಟೇ.. ಸಾಮಾಜಿಕ ಜಾಲತಾಣಗಳ ಸಣ್ಣ ಸಣ್ಣ ವಿಡಿಯೋ ಕ್ಲಿಪ್ ನೋಡಿ ದಯವಿಟ್ಟು ಏನೇನೋ ಊಹೆ ಮಾಡಬೇಡಿ, ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. ದೇವರ ದಯದಿಂದ ನಾನು ಗಟ್ಟಿಮುಟ್ಟಾಗಿ ಆರೋಗ್ಯವಾಗಿದ್ದೇನೆಂದು ಹೇಳಿದ್ದಾರೆ.
Advertisement