
ಹೈದರಾಬಾದ್: ಖ್ಯಾತ ನಿರ್ದೇಶಕ ಶಂಕರ್ (Shankar) ನಿರ್ದೇಶನದ ಮತ್ತು ಖ್ಯಾತ ನಟ ರಾಮ್ ಚರಣ್ (Ram Charan) ಪೊಲಿಟಿಕಲ್ ಡ್ರಾಮಾ ಚಿತ್ರ ಗೇಮ್ ಚೇಂಜರ್ ಚಿತ್ರ ಬಾಕ್ಸಾಫೀಸ್ ನಲ್ಲಿ ವಿಫಲವಾಗಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ ಇದೇ ಚಿತ್ರದ ವಿಚಾರವಾಗಿ ಚಿತ್ರದ ಎಡಿಟರ್ ನೀಡಿರುವ ಹೇಳಿಕೆ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
ಹೌದು.. ನಿರ್ದೇಶಕ ಶಂಕರ್ (Shankar) ನಿರ್ದೇಶನದ ಗೇಮ್ ಚೇಂಜರ್ ಚಿತ್ರದ ಸೋಲು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ನೂರಾರು ಕೋಟಿ ರೂಗಳ ವೆಚ್ಚದಲ್ಲಿ ತಯಾರಾದ ಈ ಚಿತ್ರವನ್ನು ನಿರ್ಮಾಪರ ದಿಲ್ ರಾಜು ನಿರ್ಮಿಸಿದ್ದರು.
ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆ ಕಂಡಿದ್ದ ಈ ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಹಿಂದೆ ಬಿದ್ದಿತು. ಸಿನಿಮಾ ವಿಮರ್ಶಕರೂ ಕೂಡ ಚಿತ್ರದ ಕುರಿತು ನಕಾರಾತ್ಮಕ ವಿಮರ್ಶೆ ನೀಡಿದ್ದರು. ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ವಿಫಲವಾಗಿತ್ತು.
'ಗೇಮ್ ಚೇಂಜರ್' ಚಿತ್ರದ ಎಡಿಟರ್ ಹೇಳಿಕೆ
ಇನ್ನು ಈ ಚಿತ್ರಕ್ಕೆ ಸಂಕಲನಕಾರನಾಗಿ ಕೆಲಸ ಮಾಡಿದ್ದ ಶಮೀರ್ ಮಹ್ಮದ್ ಇದೀಗ ಚಿತ್ರದ ಕುರಿತು ಮಾತನಾಡಿದ್ದು, ಎರಡು ಗಂಟೆ ಐವತ್ತು ನಿಮಿಷಗಳ ಸಿನಿಮಾ ಮಾಡಲು ಇಡೀ ವರ್ಷ ಎಡಿಟಿಂಗ್ ಮಾಡಬೇಕಾಯಿತು ಎಂದು ಹೇಳಿದ್ದಾರೆ.
‘ನಾನು ಒಂದು ವರ್ಷ ಆ ಚಿತ್ರದೊಂದಿಗೆ ಕಳೆದಿದ್ದೇನೆ. ನಾನು ಮೂರು ವರ್ಷಗಳ ಕಾಲ ಅಲ್ಲಿಗೆ ಹೋಗಿದ್ದೆ. ಕೊನೆಯ ಆರು ತಿಂಗಳಲ್ಲಿ ನಾನು ಅವರೊಂದಿಗೇ ಇದ್ದೆ. ಇನ್ನೂ ಒಂದು ತಿಂಗಳು ಇರಬೇಕಾಗಿ ಬರಬಹುದು ಎಂದರು. ನಾನು ಎಡಿಟಿಂಗ್ ಮಾಡುವಾಗ ಸಿನಿಮಾದ ಅವಧಿ ಏಳೂವರೆ ಗಂಟೆ ಇತ್ತು, ನಾನು ಅದನ್ನು ಮೂರುವರೆ ಗಂಟೆ ಇಳಿಸಿದೆ. ಆ ಬಳಿಕ ಹೊಸ ಎಡಿಟರ್ ಬಂದು ಅದನ್ನು ಮೂರುಗಂಟೆಗೆ ಇಳಿಸಿದರು’ ಎಂದು ಶಮೀರ್ ಹೇಳಿದ್ದಾರೆ.
ಭಯಾನಕ ಅನುಭವವಾಗಿತ್ತು
‘ಶಂಕರ್ ಜೊತೆ ಕೆಲಸ ಮಾಡುವುದು ನನಗೆ ತುಂಬಾ ಭಯಾನಕ ಅನುಭವವಾಗಿತ್ತು. ನಾನು ಬಹಳ ಉತ್ಸಾಹದಿಂದ ಅಲ್ಲಿಗೆ ಹೋದೆ. ಆದರೆ ಅಲ್ಲಿ ಏನೋ ಬೇರೆ ಲೋಕದಲ್ಲಿ ನಡೆಯುತ್ತಿತ್ತು. ಅವರು ಎಡಿಟಿಂಗ್ಗೆ ಒಂದು ದಿನಾಂಕವನ್ನು ನಿಗದಿಪಡಿಸುತ್ತಿದ್ದರು.
ಆದರೆ ಹತ್ತು ದಿನಗಳ ನಂತರವೇ ಅವರು ಬರುತ್ತಿದ್ದರು. ಅದೇ ಮಾದರಿಯು ಹಲವಾರು ದಿನಗಳವರೆಗೆ ಮುಂದುವರೆಯಿತು. ನಾನು 300-350 ದಿನಗಳ ಕಾಲ ಚೆನ್ನೈನಲ್ಲಿಯೇ ಇದ್ದೆ. ನಾನು ಸಿನಿಮಾ ತೊರೆದೆ. ಗೇಮ್ ಚೇಂಜರ್ ಚಿತ್ರಕ್ಕಾಗಿ ಮಾರ್ಕೋ ಸಿನಿಮಾನ ಕೈ ಬಿಟ್ಟಿದ್ದರೆ ನಾನು ದೊಡ್ಡ ತಪ್ಪು ಮಾಡಿದಂತೆ ಆಗುತ್ತಿತ್ತು ಎಂದು ಶಮೀರ್ ಹೇಳಿದ್ದಾರೆ.
ಅಲ್ಲದೆ ಶಂಕರ್ ಕೆಲಸದ ರೀತಿ ನೋಡಿದವರಿಗೆ ಶಾಕ್ ಆಗಿದೆ. ಏಳೂವರೆ ಗಂಟೆ ಸಿನಿಮಾ ಶೂಟ್ ಮಾಡುತ್ತಾರೆ ಎಂದರೆ ನಿರ್ಮಾಪಕರ ದುಡ್ಡನ್ನು ಅದೆಷ್ಟು ದುಂದುವೆಚ್ಚ ಮಾಡಿರಬೇಡ ಎಂದು ಅನೇಕರು ಹೇಳಿದ್ದಾರೆ ಎಂದು ಶಮೀರ್ ಹೇಳಿದ್ದಾರೆ.
Advertisement