
ಬೆಂಗಳೂರು: ತಮಿಳಿನಿಂದ ಕನ್ನಡ ಹುಟ್ಟಿತು ಎಂದು ನಟ ಕಮಲ್ ಹಾಸನ್ ಅವರು ಹೇಳಿಕೆ ನೀಡಿದ್ದು, ಈ ಹೇಳಿಕೆ ವಿವಾದ ಸೃಷ್ಟಿಸಿದೆ. ಈ ನಡುವೆ ಕಮಲ್ ಹಾಸನ್ ಅವರ ಹೇಳಿಕೆ ಕುರಿತು ಇದೇ ಮೊದಲ ಬಾರಿಗೆ ನಟ ಶಿವರಾಜ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ವಿವಾದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್ ಅವರು, ಕಮಲ್ ಹಾಸನ್ ನನಗೆ ಬಹಳ ಇಷ್ಟ. ನನ್ನ ತಂದೆ ಮತ್ತು ಕಮಲ್ ಅವರ ಸಂಬಂಧ ಬೇರೆ. ಅದಕ್ಕಾಗಿ ನಾನು ಅವರ ಅಭಿಮಾನಿಯಲ್ಲ. ನಾನು ಕಮಲ್ ಅವರನ್ನು ನನಗೆ ಸ್ಪೂರ್ತಿ ಎಂದು ಭಾವಿಸಿದ್ದೇನೆ. ನಮ್ಮನ್ನ ಅವರ ಕಾರ್ಯಕ್ರಮಕ್ಕೆ ಕರೆದಿದ್ದರು. ಹೀಗಾಗಿ ಹೋಗಿದ್ದೆವು. ಕಮಲ್ ಅವರು ಬಂದಿದ್ದಾಗ ಅವರು ಕನ್ನಡದ ಬಗ್ಗೆ, ಕರ್ನಾಟಕ, ಬೆಂಗಳೂರಿನ ಬಗ್ಗೆ ಬಹಳ ಹೆಮ್ಮೆಯಿಂದ ಮಾತನಾಡಿದರು. ಹಲವು ವಿಷಯಗಳನ್ನು ನೆನಪು ಮಾಡಿಕೊಂಡರು. ಅವರು ದೊಡ್ಡವರು, ಅವರಿಗೆ ಗೊತ್ತಾಗುತ್ತೆ, ಯಾವುದಕ್ಕೇ ಏನು ಮಾಡಬೇಕೊ ಅದನ್ನು ಅವರು ಮಾಡಿಯೇ ಮಾಡುತ್ತಾರೆಂದು ಹೇಳಿದರು.
ವೇದಿಕೆ ಮೇಲೆ ಏನು ತಪ್ಪಾಯ್ತು ಎಂಬುದು ನನಗೂ ಗೊತ್ತಾಗಲಿಲ್ಲ. ಇಂದು ಬಂದು ನೋಡಿದಾಗ ವಿವಾದ ಆಗಿತ್ತು. ಅವರು ಇಲ್ಲಿಯೇ ಇದ್ದರು, ಎಲ್ಲರೊಟ್ಟಿಗೆ ಮಾತನಾಡುತ್ತಿದ್ದರು. ಇಲ್ಲಿಯೇ ಅವರನ್ನು ಕೇಳಬಹುದಿತ್ತು, ಯಾಕೆ ಆಗ ಕೇಳಲಿಲ್ಲವೊ ಗೊತ್ತಿಲ್ಲ. ಆದರೆ, ಕನ್ನಡ ಪ್ರೀತಿ ಎಂಬುದು ಯಾರೋ ಒಬ್ಬರು ಮಾತನಾಡಿದಾಗ ಮಾತ್ರವೇ ಬರಬಾರದು. ಕನ್ನಡ ಪ್ರೇಮ ಎಂಬುದು ಸದಾ ಕಾಲ ಜೊತೆಗೆ ಇರಬೇಕು ಎಂದು ತಿಳಿಸಿದರು.
ನಾವು ಕನ್ನಡಕ್ಕಾಗಿ ಹೋರಾಡುತ್ತೇವೆ. ಸಾಯುತ್ತೇವೆನ್ನುತ್ತಾರೆ. ಆದರೆ, ಕೇವಲ ಮಾತಿನಲ್ಲಿ ಮಾತನಾಡಿ, ಫೋಸು ಕೊಡುವುದು ದೊಡ್ಡ ವಿಷಯ ಅಲ್ಲ. ಕನ್ನಡಕ್ಕೆ ಏನು ಮಾಡುತ್ತಿದ್ದೀವಿ ಎಂಬುದನ್ನು ನೀವೇ ಹುಡುಕಿ ನೋಡಿ, ನಿಮ್ಮ ಮನಸ್ಸನ್ನು ಕೇಳಿಕೊಂಡು ನೋಡಿ ನಿಮಗೆ ಉತ್ತರ ಸಿಗುತ್ತದೆ. ಕನ್ನಡ ಸಿನಿಮಾಕ್ಕೆ ನೀವು ಏನು ಮಾಡಿದ್ದೀರಿ, ಯಾರೋ ಸ್ಟಾರ್ ನಟರ ಸಿನಿಮಾಗಳಿಗೆ ಬೆಂಬಲ ಕೊಟ್ಟರೆ ಮಾತ್ರ ಸಾಲದು. ಹೊಸಬರ ಸಿನಿಮಾಕ್ಕೂ ಬೆಂಬಲ ಕೊಡಿ. ನಾವು ಮಾಡುತ್ತಿರುವುದು ಸರಿಯಾ, ತಪ್ಪಾ ಎಂದು ನೀವೇ ಕೇಳಿಕೊಳ್ಳಿ, ನಿಮಗೆ ಉತ್ತರ ಸಿಗುತ್ತೆ.
ಕಮಲ್ ಹಾಸನ್ ಬಗ್ಗೆ ನಾನು ಪ್ರತ್ಯೇಕವಾಗಿ ಮಾತನಾಡಬೇಕಾಗಿಲ್ಲ. ಅವರು ಹಿರಿಯರು, ಯಾವುದು ಸರಿ ತಪ್ಪು ಎಂಬುದು ಅವರಿಗೆ ಗೊತ್ತಿರುತ್ತೆ. ಅವರಿಗೂ ಕನ್ನಡ ಭಾಷೆ ಬಗ್ಗೆ ಪ್ರೀತಿ ಇದೆ. ಸಾಕಷ್ಟು ಕನ್ನಡ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ. ಈ ಸಮಯದಲ್ಲಿ ಏನು ಮಾಡಬೇಕೊ ಅದನ್ನು ಅವರು ಮಾಡುತ್ತಾರೆ ಎಂಬ ಭರವಸೆ ನನಗೆ ಇದೆ ಎಂದಿದ್ದಾರೆ.
Advertisement