ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ನಟ ಧ್ರುವ ಸರ್ಜಾ ಇದೀಗ ಹೊಸ ಚಿತ್ರದಲ್ಲಿ ಪ್ರೇಕ್ಷಕರ ಎದುರು ಬರಲು ಸಿದ್ಧವಾಗಿದ್ದಾರೆ. ಆಕ್ಷನ್ ಪ್ರಿನ್ಸ್ ಇದೀಗ ಕೆರೆಬೇಟೆ ಚಿತ್ರದ ಖ್ಯಾತಿಯ ನಿರ್ದೇಶಕ ರಾಜ್‌ಗುರು ಬಿ ಅವರೊಂದಿಗೆ ಕಂಟೆಂಟ್ ಆಧರಿತ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಕಥೆಯು ಗ್ರಾಮೀಣ ಹಿನ್ನೆಲೆಯಲ್ಲಿ ಬೇರೂರಿದ್ದು, ನಾಟಕ ಮತ್ತು ಆ್ಯಕ್ಷನ್ ಮಿಶ್ರಣ ಹೊಂದಿದೆ. ಚಿತ್ರಕ್ಕೆ ಗೋಲ್ಡ್‌ಮೈನ್ಸ್ ಟೆಲಿಫಿಲ್ಮ್ಸ್‌ನ ಮನೀಶ್ ಶಾ ಅವರು ಬಂಡವಾಳ ಹೂಡುತ್ತಿದ್ದಾರೆ.
ಈ ಚಿತ್ರದ ನಾಯಕಿ ಯಾರೆಂಬ ಬಗ್ಗೆ ಸಾಕಷ್ಟು ಊಹಾಪೋಹಗಳಿದ್ದರೂ, ರಾಜ್‌ಗುರು ನಿರ್ದೇಶನದ ಚಿತ್ರದಲ್ಲಿ ಧ್ರುವ ಸರ್ಜಾ ಅವರಿಗೆ ಜೋಡಿಯಾಗಿ ನಟಿ ರಚಿತಾ ರಾಮ್ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಭರ್ಜರಿ (2017) ಬಿಡುಗಡೆಯಾದ ಎಂಟು ವರ್ಷಗಳ ನಂತರ ಧ್ರುವ ಮತ್ತು ರಚಿತಾ ಬೆಳ್ಳಿತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.
ಚೇತನ್ ಕುಮಾರ್ ನಿರ್ದೇಶನದ ಭರ್ಜರಿ ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ಸಖತ್ ವರ್ಕ್ ಆಗಿತ್ತು. ಇದೀಗ ಈ ಜೋಡಿ ಅದೇ ಕೆಮಿಸ್ಟ್ರಿಯನ್ನು ತೆರೆಮೇಲೆ ಮರುಸೃಷ್ಟಿಸುತ್ತದೆಯೇ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲವಾದರೂ, ಚಿತ್ರವು ಪ್ರೀ-ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಅದ್ಧೂರಿ ಮುಹೂರ್ತ ಕಾರ್ಯಕ್ರಮ ನೆರವೇರುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಈಮಧ್ಯೆ, ನಟ ಧ್ರುವ ಅವರು ನಿರ್ದೇಶಕ ಸೂರಿ ಜೊತೆ ಮತ್ತೊಂದು ಯೋಜನೆಗೆ ತಯಾರಿ ನಡೆಸುತ್ತಿದ್ದಾರೆ. ರಚಿತಾ ರಾಮ್ ಕೂಡ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದು, ದುನಿಯಾ ವಿಜಯ್ ಜೊತೆ ಲ್ಯಾಂಡ್ ಲಾರ್ಡ್, ಜೈದ್ ಖಾನ್ ಜೊತೆ ಕಲ್ಟ್ ಮತ್ತು ನೀನಾಸಂ ಸತೀಶ್ ಜೊತೆ ಅಯೋಗ್ಯ 2 ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ.
ಇಬ್ಬರೂ ವಿಶಿಷ್ಟ ಪಾತ್ರಗಳನ್ನು ಆಯ್ಕೆ ಮಾಡುವತ್ತ ಗಮನಹರಿಸಿದ್ದು, ರಾಜ್‌ಗುರು ಅವರು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಸ್ಕ್ರಿಪ್ಟ್ ರೂಪಿಸಿದ್ದಾರೆ ಎಂದು ವರದಿಯಾಗಿದೆ. ಧ್ರುವ, ಈ ಹಿಂದೆ ಹೇಳಿದಂತೆ, ವರ್ಷಕ್ಕೆ ಕನಿಷ್ಠ ಎರಡು ಚಿತ್ರಗಳನ್ನು ನೀಡುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಅವರು ಈ ಯೋಜನೆಯ ಚಿತ್ರೀಕರಣ ಪ್ರಾರಂಭಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಚಿತ್ರದ ತಾಂತ್ರಿಕ ತಂಡ ಮತ್ತು ಉಳಿದ ಪಾತ್ರವರ್ಗದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದಿದ್ದರೂ, ಈ ವರ್ಷ ಈ ಯೋಜನೆಯು ಸೆಟ್ಟೇರಲಿದೆ ಮತ್ತು ತಂಡವು ಆದಷ್ಟು ಬೇಗ ಪೂರ್ಣಗೊಳಿಸಲು ಯೋಜಿಸುತ್ತಿದೆ ಎಂದು ಉದ್ಯಮದ ಒಳಗಿನವರು ಸೂಚಿಸುತ್ತಾರೆ.
Advertisement