

ಕೆಲವು ದಿನಗಳ ಹಿಂದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂದೀಪ್ ರೆಡ್ಡಿ ವಂಗಾ, ತಮ್ಮ ಬಹು ನಿರೀಕ್ಷಿತ ಪ್ರಭಾಸ್ ಅಭಿನಯದ 'ಸ್ಪಿರಿಟ್' ಚಿತ್ರದ ಚಿತ್ರೀಕರಣ ನವೆಂಬರ್‌ನಲ್ಲಿ ಪ್ರಾರಂಭವಾಗಲಿದೆ ಎಂದು ದೃಢಪಡಿಸಿದ್ದರು. ಇದೀಗ ಚಿತ್ರವು ಭಾನುವಾರ ಮುಹೂರ್ತ ಸಮಾರಂಭದೊಂದಿಗೆ ಅಧಿಕೃತವಾಗಿ ಸೆಟ್ಟೇರಿದೆ.
ಮುಹೂರ್ತ ಸಮಾರಂಭದ ಚಿತ್ರಗಳನ್ನು ನಿರ್ಮಾಣ ಬ್ಯಾನರ್ ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಕಾರ್ಯಕ್ರಮಕ್ಕೆ ಪ್ರಭಾಸ್ ಗೈರಾಗಿದ್ದು, ಮೆಗಾಸ್ಟಾರ್ ಚಿರಂಜೀವಿ ಅತಿಥಿಯಾಗಿ ಸೇರಿದ್ದಾರೆ.
ಸಂದೀಪ್ ರೆಡ್ಡಿ ವಂಗಾ, ನಾಯಕಿಯಾಗಿ ನಟಿಸಲಿರುವ ತೃಪ್ತಿ ದಿಮ್ರಿ ಮತ್ತು ಪ್ರಣಯ್ ರೆಡ್ಡಿ ವಂಗಾ, ಕೃಷನ್ ಕುಮಾರ್ ಮತ್ತು ಪ್ರಭಾಕರ್ ರೆಡ್ಡಿ ವಂಗಾ ಅವರೊಂದಿಗೆ ಚಿತ್ರದ ನಿರ್ಮಾಪಕರಾದ ಭೂಷಣ್ ಕುಮಾರ್ ಭಾಗವಹಿಸಿದ್ದಾರೆ. ಸಹ-ನಿರ್ಮಾಪಕರಾಗಿ ಶಿವ್ ಚನಾನ ಚಿತ್ರತಂಡ ಸೇರಿಕೊಂಡಿದ್ದಾರೆ.
ನಾಲ್ಕು ವಾರಗಳ ಹಿಂದೆ ಬಿಡುಗಡೆಯಾದ ಸ್ಪಿರಿಟ್ ಚಿತ್ರದ ಮೊದಲ ಆಡಿಯೋ ಟೀಸರ್, ನಾಯಕ ಪ್ರಭಾಸ್ ಅವರ ಪರಿಚಯದೊಂದಿಗೆ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿತು. ಈ ಟೀಸರ್‌ನಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿರುವ ಪ್ರಕಾಶ್ ರಾಜ್ ಮತ್ತು ವಿವೇಕ್ ಒಬೆರಾಯ್ ಅವರ ಧ್ವನಿಗಳು ಸಹ ಇದ್ದವು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚೊಚ್ಚಲ ಚಿತ್ರ ಅರ್ಜುನ್ ರೆಡ್ಡಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಚನಾ ಕೂಡ ನಟಿಸುತ್ತಿದ್ದಾರೆ. ಈ ಯೋಜನೆಗೆ ಅನಿಮಲ್ ಚಿತ್ರದ ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಮೇಶ್ವರ್ ಸಾಥ್ ನೀಡುತ್ತಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ಅವರು ಸ್ಕ್ರಿಪ್ಟ್ ಬರಹಗಾರರಾಗಿ ಕೆಲಸ ಮಾಡುವುದರ ಜೊತೆಗೆ, ಸ್ಪಿರಿಟ್‌ನ ಸಂಕಲನಕಾರರೂ ಆಗಿದ್ದಾರೆ. ಛಾಯಾಗ್ರಾಹಕರಾಗಿ ರಾಜ್ ತೋಟಾ ಮತ್ತು ನಿರ್ಮಾಣ ವಿನ್ಯಾಸಕರಾಗಿ ಸುರೇಶ್ ಸೆಲ್ವರಾಜನ್ ಇದ್ದಾರೆ. ಸುಪ್ರೀಂ ಸುಂದರ್ ಆ್ಯಕ್ಷನ್ ಕೊರಿಯೋಗ್ರಫಿಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಈಮಧ್ಯೆ, ನಟ ಪ್ರಭಾಸ್ ಸದ್ಯ ನಿರ್ದೇಶಕ ಹನು ರಾಘವಪುಡಿ ಅವರೊಂದಿಗೆ ಫೌಜಿ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
Advertisement