
ರಾಷ್ಟ್ರ ಪ್ರಶಸ್ತಿ ವಿಜೇತ ರಿಷಭ್ ಶೆಟ್ಟಿ ಅವರ ಹಿಟ್ ಚಿತ್ರ 'ಕಾಂತಾರ'ದ ಪೂರ್ವಭಾಗವಾದ 'ಕಾಂತಾರ: ಚಾಪ್ಟರ್ 1' ಅದ್ಭುತ ಆರಂಭವನ್ನು ಕಂಡಿದೆ. ಬಿಡುಗಡೆಗೂ ಮುನ್ನವೇ ತೀವ್ರ ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರವು ಅಕ್ಟೋಬರ್ 2ರಂದು ದೇಶದಾದ್ಯಂತ ಬಿಡುಗಡೆ ಕಂಡಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿದೆ.
ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಈ ಚಿತ್ರವು ಎಲ್ಲ ಭಾಷೆಗಳಲ್ಲಿ ಬಿಡುಗಡೆಯಾದ ಮೊದಲನೇ ದಿನ 60 ಕೋಟಿ ರೂ. ಗಳಿಸಿದೆ. ಈ ಚಿತ್ರವು ಹಿಂದಿಯಲ್ಲಿ ಸುಮಾರು 19–21 ಕೋಟಿ ರೂ. ಗಳಿಸಿದೆ. ಇದು ಈ ವರ್ಷದ ಇದುವರೆಗಿನ ಅತಿದೊಡ್ಡ ಬಿಡುಗಡೆ ಎಂದು ಹೇಳಲಾಗುತ್ತಿದೆ.
ಈ ಕನ್ನಡ ಚಿತ್ರವು ಧರ್ಮ ಪ್ರೊಡಕ್ಷನ್ಸ್‌ನ ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ ಜೊತೆ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನೀಡಿದೆ. ವರುಣ್ ಧವನ್, ಜಾನ್ವಿ ಕಪೂರ್, ರೋಹಿತ್ ಸರಾಫ್ ಮತ್ತು ಸಾನ್ಯಾ ಮಲ್ಹೋತ್ರಾ ನಟಿಸಿದ ಈ ಚಿತ್ರವು ಮೊದಲ ದಿನ 9.25 ಕೋಟಿ ರೂ.ಗಳನ್ನು ಗಳಿಸಿದೆ.
ರಿಷಬ್ ಶೆಟ್ಟಿ ಅಭಿನಯದ ಈ ಚಿತ್ರವು ಹಿಂದಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಕನ್ನಡದ ಎರಡನೇ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಮೂಲಕ 54 ಕೋಟಿ ರೂ. ನಿವ್ವಳ ಗಳಿಕೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್: ಚಾಪ್ಟರ್ 2 ನಂತರದ ಸ್ಥಾನ ಪಡೆದಿದೆ.
125 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದ ಆರಂಭಿಕ ಗಳಿಕೆಯಲ್ಲಿ ಹೆಚ್ಚಿನ ಏರಿಕೆ ಕಂಡಿದೆ.
ಕಾಂತಾರ: ಚಾಪ್ಟರ್ 1 ಅನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದಾರೆ. ರಿಷಭ್ ಅವರೊಂದಿಗೆ ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗೌತಮ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಜಯರಾಮ್, ರುಕ್ಮಿಣಿ ವಸಂತ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Advertisement