ಬಾಕ್ಸ್ ಆಫೀಸ್‌ನಲ್ಲಿ ನಿಲ್ಲದ ಕಾಂತಾರ: ಚಾಪ್ಟರ್ 1 ಓಟ; ವಿಶ್ವದಾದ್ಯಂತ 400 ಕೋಟಿ ರೂ ಗೂ ಅಧಿಕ ಗಳಿಕೆ
ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ: ಚಾಪ್ಟರ್ 1' ಬಾಕ್ಸ್ ಆಫೀಸ್‌ನಲ್ಲಿ ದಿನೇ ದಿನೇ ದಾಖಲೆಗಳನ್ನು ಮುರಿಯುತ್ತಾ ಸಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ ಈ ಬಹುಭಾಷಾ ಚಿತ್ರವು ಅಕ್ಟೋಬರ್ 2ರಂದು ಬಿಡುಗಡೆಯಾಯಿತು. ಅಂದಿನಿಂದ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಬಿಡುಗಡೆಯಾದ ಮೊದಲ ವಾರದಲ್ಲೇ ಚಿತ್ರವು ಭರ್ಜರಿ ಕಲೆಕ್ಷನ್ ಮಾಡಿದ್ದು, ಮಂಗಳವಾರ ಭಾರತದಾದ್ಯಂತ ₹33.5 ಕೋಟಿಗೂ ಹೆಚ್ಚು ಗಳಿಸಿದೆ. ದೇಶೀಯವಾಗಿ ಒಟ್ಟು ₹300 ಕೋಟಿಯನ್ನು ಮೀರಿದೆ. ಹಿಂದಿ ಆವೃತ್ತಿಯೊಂದರಲ್ಲೇ ಬಿಡುಗಡೆಯಾದ ಆರನೇ ದಿನ ₹10.5–11.5 ಕೋಟಿ ಗಳಿಸಿದೆ. ಇದು ಶೇ 20 ರಷ್ಟು ಜಿಗಿತ ಕಂಡಿದೆ ಮತ್ತು ಆರು ದಿನಗಳ ಒಟ್ಟು ಗಳಿಕೆ ₹93 ಕೋಟಿಗಿಂತ ಹೆಚ್ಚಾಗಿದೆ. ಶೀಘ್ರದಲ್ಲೇ ಹಿಂದಿಯಲ್ಲಿ ₹100 ಕೋಟಿ ಗಡಿ ದಾಟುವ ನಿರೀಕ್ಷೆಯಿದೆ. 2025ರ ಈ ಮೈಲಿಗಲ್ಲು ಸಾಧಿಸಿದ ಮೊದಲ ದಕ್ಷಿಣ ಭಾರತೀಯ ಚಿತ್ರ ಇದಾಗಿದೆ.
ಎಲ್ಲ ಆವೃತ್ತಿಗಳಲ್ಲಿ, ಕಾಂತಾರ: ಚಾಪ್ಟರ್ 1 ಕೇವಲ ಆರು ದಿನಗಳಲ್ಲಿ ವಿಶ್ವದಾದ್ಯಂತ ₹400 ಕೋಟಿ ಗಳಿಸಿ ಅಚ್ಚರಿ ಮೂಡಿಸಿದೆ. ಈ ಮೈಲಿಗಲ್ಲನ್ನು ತಲುಪಿದ ವರ್ಷದ ಮೊದಲ ಕನ್ನಡ ಚಿತ್ರವಾಗಿದೆ. ಇದು ಈಗ 2025ರಲ್ಲಿ ಜಾಗತಿಕ ಬಾಕ್ಸ್ ಆಫೀಸ್ ಅನ್ನು ಆಳಿರುವ ಆಯ್ದ ಕೆಲವು ಭಾರತೀಯ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. ಈ ಸಾಲಿನಲ್ಲಿ ಛಾವಾ, ಕೂಲಿ ಮತ್ತು ಸೈಯಾರಾ ಚಿತ್ರಗಳಿವೆ.
2022ರ ಬ್ಲಾಕ್‌ಬಸ್ಟರ್ ಚಿತ್ರ 'ಕಾಂತಾರ'ದ ಪ್ರೀಕ್ವೆಲ್ ಆಗಿರುವ ಈ ಚಿತ್ರಕ್ಕೆ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಅವರ ಶಕ್ತಿಯುತ ಸಂಗೀತವಿದೆ. ಕಾಂತಾರ: ಚಾಪ್ಟರ್ 1 ಕೇವಲ ದಾಖಲೆಗಳನ್ನು ಮುರಿಯುವುದಷ್ಟೇ ಅಲ್ಲದೆ, ಸಿನಿಮೀಯ ಭಕ್ತಿಯನ್ನು ಪುನಃ ಬರೆಯುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ