
ಕಾಂತಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ನಂತರ, ರಿಷಬ್ ಶೆಟ್ಟಿ ಮತ್ತೊಮ್ಮೆ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ. ಈ ಬಾರಿ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ ಕಾಂತಾರ: ಚಾಪ್ಟರ್ 1 ಮೂಲಕ ದಾಖಲೆ ಬರೆದಿದ್ದಾರೆ. ಬಾಕ್ಸ್ ಆಫೀಸ್ ಗಳಿಕೆಯನ್ನು ಮೀರಿ ಚಿತ್ರ ಯಶಸ್ಸು ಕಂಡಿದ್ದು, IMDbಯ ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಚಿತ್ರದ ತಾರೆಯಲು ಜಿಗಿತ ಕಂಡಿದ್ದಾರೆ.
IMDbಯ ಇತ್ತೀಚಿನ ಸಾಪ್ತಾಹಿಕ ಶ್ರೇಯಾಂಕದಲ್ಲಿ, ರಿಷಬ್ 75ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರ ಸಹನಟಿ ರುಕ್ಮಿಣಿ ವಸಂತ್ 37ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿದ್ದಾರೆ. ಚಿತ್ರದಲ್ಲಿ ಪ್ರತಿಸ್ಪರ್ಧಿಯಾಗಿ ನಟಿಸಿರುವ ಬಾಲಿವುಡ್ ನಟ ಗುಲ್ಶನ್ ದೇವಯ್ಯ 213ನೇ ಸ್ಥಾನದಿಂದ 22ನೇ ಸ್ಥಾನಕ್ಕೆ ಏರಿದ್ದಾರೆ. ಈ ಏರಿಕೆಯು ಭಾಷೆಗಳು ಮತ್ತು ಪ್ರದೇಶಗಳನ್ನು ಮೀರಿ ಕಾಂತಾರ: ಚಾಪ್ಟರ್ 1 ಭಾರತದಾದ್ಯಂತ ಪ್ರೇಕ್ಷಕರೊಂದಿಗೆ ಹೇಗೆ ಸಂಪರ್ಕ ಹೊಂದಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಅಕ್ಟೋಬರ್ 2ರಂದು ಬಿಡುಗಡೆಯಾದ ಕಾಂತಾರ: ಚಾಪ್ಟರ್ 1 ಈಗಾಗಲೇ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ₹450 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಮತ್ತು ಚಿತ್ರಮಂದಿರಗಳಲ್ಲಿ ತನ್ನ ಭರ್ಜರಿ ಪ್ರದರ್ಶನವನ್ನು ಮುಂದುವರೆಸಿದೆ. ಕರಾವಳಿ ಕರ್ನಾಟಕದ ಭೂದೃಶ್ಯಗಳನ್ನು ಜೀವಂತಗೊಳಿಸುವ ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಅವರ ಕೈಚಳಕ ಮತ್ತು ಬಿ ಅಜನೀಶ್ ಲೋಕನಾಥ್ ಅವರ ಸ್ಮರಣೀಯ ಹಿನ್ನೆಲೆ ಸಂಗೀತಕ್ಕಾಗಿ ಈ ಚಿತ್ರವು ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದೆ.
2022ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಚಿತ್ರ ಕಾಂತಾರದ ಪ್ರೀಕ್ವೆಲ್ ಇದಾಗಿದ್ದು, ನಿರ್ದೇಶನದೊಂದಿಗೆ ರಿಷಭ್ ಶೆಟ್ಟಿ ಅವರೇ ನಟಿಸಿದ್ದಾರೆ.
ರಣಬೀರ್ ಕಪೂರ್ (ಈಗ 18 ನೇ ಸ್ಥಾನ) ಮತ್ತು ಮೃಣಾಲ್ ಠಾಕೂರ್ (23 ನೇ ಸ್ಥಾನ) ಅವರಂತಹ ಇತರ ತಾರೆಯರು ಸಹ ಶ್ರೇಯಾಂಕದಲ್ಲಿ ಮೇಲೇರಿದ್ದಾರೆ. ಆದರೆ, ಕಾಂತಾರ ಚಿತ್ರದ ತಾರೆಯರು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವುದು ಪ್ರಾದೇಶಿಕ ಚಿತ್ರಗಳಿಗೆ ಸ್ಫೂರ್ತಿಯಾಗಿದೆ.
Advertisement