
ಬೆಂಗಳೂರು: ಬೆಂಗಳೂರು ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಮಲಯಾಳಂ ‘ಲೋಕಃ ಚಾಪ್ಟರ್ 1 ಚಂದ್ರʼ ಮಲಯಾಳಂ ಚಿತ್ರತಂಡ ಕೊನೆಗೂ ಕ್ಷಮೆಯಾಚಿಸಿದೆ.
ದಕ್ಷಿಣ ಭಾರತದ ಜನಪ್ರಿಯ ನಟಿ ಕಲ್ಯಾಣಿ ಪ್ರಿಯದರ್ಶನ್ ಅಭಿನಯದ ಮಲಯಾಳಂ ಚಿತ್ರ ‘ಲೋಕಃ: ಚಾಪ್ಟರ್ 1- ಚಂದ್ರ’ ಇತ್ತೀಚೆಗೆ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಚಿತ್ರ ಬಾಕ್ಸಾಫಿಸ್ ನಲ್ಲಿ ಕಮಾಲ್ ಮಾಡುತ್ತಿದ್ದು, ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಚಿತ್ರ ರಿಲೀಸ್ ಆಗಿ 5 ದಿನಗಳಲ್ಲಿ ಜಾಗತಿಕವಾಗಿ 81 ಕೋಟಿ ರೂ. ದೋಚಿಕೊಂಡಿದೆ. ಸದ್ಯದಲ್ಲೇ 100 ಕೋಟಿ ರೂ. ಕ್ಲಬ್ ಸೇರುವ ಸಾಧ್ಯತೆ ಇದೆ.
ಆದರೆ ಇದೇ ಚಿತ್ರದಲ್ಲಿನ ಸಂಭಾಷಣೆಯೊಂದು ವ್ಯಾಪಕ ವಿವಾದ ಸೃಷ್ಟಿಸಿದ್ದು, ಕನ್ನಡಿಗರಿಗೆ ಅವಮಾನ ಮಾಡುವ ಸಂಭಾಷಣೆ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
'ಬೆಂಗಳೂರಿನ ಹುಡಿಗಿಯರು ಡ***ರ್ ಗಳು..!': ವಿವಾದಿತ ಸಂಭಾಷಣೆ
ಮೂಲಗಳ ಪ್ರಕಾರ ಈ ಚಿತ್ರದ ಶೂಟಿಂಗ್ ಬಹುತೇಕ ಬೆಂಗಳೂರಿನಲ್ಲೇ ನಡೆದಿದೆ. ಚಿತ್ರದ ಕಥೆಗೂ ಬೆಂಗಳೂರಿನ ನಂಟಿದ್ದು, ಈ ಚಿತ್ರದಲ್ಲಿ ಬೆಂಗಳೂರಿಗರಿಗೆ ಅವಮಾನ ಮಾಡುವ ಪದ ಬಳಕೆ ಆಗಿದೆ ಎನ್ನಲಾಗಿದೆ.
ಬೆಂಗಳೂರೆಂದರೆ ಕೇವಲ ಕ್ರೈಂ, ಪಾರ್ಟಿ, ಡ್ರಗ್ಸ್‌ಗಳಿಗೆ ಸೀಮಿತ ಎನ್ನುವ ರೀತಿಯಲ್ಲಿ ಚಿತ್ರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಮಾತ್ರವಲ್ಲದೇ 'ಬೆಂಗಳೂರಿನ ಹುಡಿಗಿಯರು ಡ***ರ್ ಗಳು.. ಎಂಬ ಸಂಭಾಷಣೆ ಕೂಡ ಇದೆ ಎಂದು ಹೇಳಲಾಗಿದೆ.
ಬೆಂಗಳೂರಿನ ಹುಡುಗಿಯರನ್ನು ಮದುವೆ ಆಗಲ್ಲ.. ಅವರು ನಡತೆಗೆಟ್ಟವರು ಎಂಬಂತಹ ಡೈಲಾಗ್ ಒಂದನ್ನು ಲೋಕ ಸಿನಿಮಾದಲ್ಲಿರುವ ಪಾತ್ರವೊಂದು ಹೇಳಿದ್ದು, ಇದಕ್ಕೆ ಕನ್ನಡಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ʼʼಬೆಂಗಳೂರಿನವರು ಡಗಾರ್‌ಗಳುʼʼ ಎನ್ನುವ ಪದ ಬಳಕೆ ಮಾಡಲಾಗಿತ್ತು. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.
ವ್ಯಾಪಕ ಆಕ್ರೋಶ
ಚಿತ್ರದಲ್ಲಿನ ಈ ಸಂಭಾಷಣೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಕನ್ನಡದ ಖ್ಯಾತ ನಿರ್ದೇಶಕ ಮಂಸೋರೆ ಮತ್ತಿತರರು ಇದರ ವಿರುದ್ಧ ಧ್ವನಿ ಎತ್ತಿದ್ದರು. ʼʼಕನ್ನಡ ಚಿತ್ರ ʼಭೀಮʼ, ಮಲಯಾಳಂನ ʼಆಫೀಸರ್ ಆನ್ ಡ್ಯೂಟಿʼ, ʼಆವೇಶಮ್ʼ ಮತ್ತು ಈಗ ‘ಲೋಕಃʼನಲ್ಲಿ ಬೆಂಗಳೂರನ್ನು ಡ್ರಗ್ಸ್ ಮತ್ತು ಅಪರಾಧಗಳ ರಾಜಧಾನಿ ಎಂದು ಬಿಂಬಿಸಲಾಗಿದೆ.
ಒಂದುಕಾಲದಲ್ಲಿ ಬೆಂಗಳೂರನ್ನು ಉತ್ತಮ ನಗರವಾಗಿ ಚಿತ್ರೀಕರಿಸಲಾಗುತ್ತಿತ್ತು. ಅನಿಯಂತ್ರಿತ ವಲಸೆಯಿಂದಾಗಿ ಬೆಂಗಳೂರಿಗೆ ಇಂತಹ ಸ್ಥಿತಿ ಬಂದಿದೆʼʼ ಎಂದು ಮಂಸೋರೆ ಕಿಡಿಕಾರಿದ್ದಾರೆ.
ವಿವಾದ ಬೆನ್ನಲ್ಲೇ ಕೊನೆಗೂ ಕ್ಷಮೆಯಾಚಿಸಿದ ಚಿತ್ರತಂಡ
ಇನ್ನು ಈ ವಿವಾದ ಸ್ಫೋಟ ಬೆನ್ನಲ್ಲೇ ಇದೀಗ ಚಿತ್ರತಂಡ ಕ್ಷಮೆ ಕೋರಿದೆ. ಪರಿಸ್ಥಿತಿಯ ಗಂಭೀರತೆ ಅರಿತ ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ ಕ್ಷಮೆ ಕೋರಿದೆ. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ನಿರ್ಮಾಣ ಸಂಸ್ಥೆ, ‘ನಮ್ಮ ನಿರ್ಮಾಣದ ‘ಲೋಕಾ: ಚಾಪ್ಟರ್ 1’ ಸಿನಿಮಾದ ಪಾತ್ರವೊಂದು ಹೇಳಿರುವ ಸಂಭಾಷಣೆ ಕರ್ನಾಟಕದ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬುದು ನಮ್ಮ ಅರಿವಿಗೆ ಬಂದಿದೆ.
ನಮ್ಮ ವೇಯ್ಫೇರ್ ಫಿಲಮ್ಸ್ನಲ್ಲಿ ನಾವು ಎಲ್ಲದಕ್ಕೂ ಮೊದಲ ಆದ್ಯತೆ ನೀಡುವುದು ಜನರಿಗೆ. ನಮ್ಮ ಕಣ್ತಪ್ಪಿನಿಂದ ಆಗಿರುವ ಈ ಪ್ರಮಾದಕ್ಕೆ ನಾವು ಬೇಷರತ್ ಕ್ಷಮೆ ಕೋರುತ್ತೇವೆ ಹಾಗೂ ಈ ಕೂಡಲೇ ಆ ನಿರ್ದಿಷ್ಟ ಸಂಭಾಷಣೆಯನ್ನು ತೆಗೆದು ಹಾಕುತ್ತೇವೆ ಅಥವಾ ಬದಲಾಯಿಸುತ್ತೇವೆ. ಆಗಿರುವ ಸಮಸ್ಯೆಗೆ ನಾವು ಕ್ಷಮೆ ಕೇಳುತ್ತೇವೆ ಮತ್ತು ನಮ್ಮ ಕ್ಷಮೆಯನ್ನು ಸ್ವೀಕರಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದಿದೆ.
ಅಂದಹಾಗೆ ನಟ ದುಲ್ಕರ್ ಸಲ್ಮಾನ್ ನಿರ್ಮಾಣದ ಲೋಕ ಚಾಪ್ಟರ್ 1 ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದು, ಕರ್ನಾಟಕದಲ್ಲಿ ನಟ ರಾಜ್ ಬಿ ಶೆಟ್ಟಿ ಈ ಸಿನಿಮಾ ವಿತರಣೆ ಮಾಡಿದ್ದಾರೆ.
Advertisement