
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ: ಚಾಪ್ಟರ್ 1 ಚಿತ್ರತಂಡ ಚಿತ್ರದ ಪ್ರಚಾರಕ್ಕಾಗಿ ಭಾರತದ ಮಹಾನಗರಗಳಲ್ಲಿ ಪ್ರವಾಸ ಮಾಡುತ್ತಿದೆ. ಚಿತ್ರವು ಅಕ್ಟೋಬರ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಕೊಚ್ಚಿ ಮತ್ತು ಹೈದರಾಬಾದ್‌ನಲ್ಲಿ ಪ್ರಚಾರ ಚಟುವಟಿಕೆಗಳನ್ನು ಪೂರ್ಣಗೊಳಿಸಿದ ನಂತರ, ತಮ್ಮ ಪ್ರಚಾರ ಪ್ರವಾಸದ ಭಾಗವಾಗಿ ಚೆನ್ನೈಗೆ ಭೇಟಿ ನೀಡಬೇಕಿತ್ತು. ಆದರೆ, ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್, ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ.
ಇತ್ತೀಚೆಗೆ ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಸಾವಿಗೀಡಾದ ಕಾರಣ, ನಿರ್ಮಾಪಕರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, 'ಇತ್ತೀಚಿನ ದುರದೃಷ್ಟಕರ ಘಟನೆಯಿಂದಾಗಿ, ನಾಳೆ (ಮಂಗಳವಾರ) ಚೆನ್ನೈನಲ್ಲಿ ನಡೆಯಬೇಕಿದ್ದ ಕಾಂತಾರ: ಚಾಪ್ಟರ್ 1 ಪ್ರಚಾರ ಕಾರ್ಯಕ್ರಮವನ್ನು ನಾವು ರದ್ದುಗೊಳಿಸುತ್ತಿದ್ದೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಬಾಧಿತರೊಂದಿಗೆ ಇವೆ. ನಿಮ್ಮ ತಿಳುವಳಿಕೆಗೆ ಧನ್ಯವಾದಗಳು; ಸೂಕ್ತವಾದ ಸಮಯದಲ್ಲಿ ತಮಿಳುನಾಡಿನ ನಮ್ಮ ಪ್ರೇಕ್ಷಕರನ್ನು ಭೇಟಿ ಮಾಡಲು ನಾವು ಎದುರು ನೋಡುತ್ತಿದ್ದೇವೆ' ಎಂದು ಬರೆದಿದ್ದಾರೆ.
ಕರೂರಿನಲ್ಲಿ ನಡೆದ ನಟ-ರಾಜಕಾರಣಿ ವಿಜಯ್ ಅವರ ರಾಜಕೀಯ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಸಾವಿಗೀಡಾಗಿದ್ದು, ಸುಮಾರು 150 ಜನರು ಗಾಯಗೊಂಡಿದ್ದಾರೆ ಮತ್ತು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
2022ರ ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಆಗಿರುವ 'ಕಾಂತಾರ: ಚಾಪ್ಟರ್ 1' ಚಿತ್ರದಲ್ಲಿ ರಿಷಭ್ ಕಾಡುಬೆಟ್ಟು ಶಿವ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಮೋದ್ ಶೆಟ್ಟಿ, ರಾಕೇಶ್ ಪೂಜಾರಿ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ, ಹರಿಪ್ರಶಾಂತ್ ಎಂಜಿ, ಶನೀಲ್ ಗೌತಮ್ ಮತ್ತು ನವೀನ್ ಬೊಂಡೆಲ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಸುರೇಶ್ ಮಲ್ಲಯ್ಯ ಸಂಕಲನ ಮತ್ತು ಅರವಿಂದ್ ಕಶ್ಯಪ್ ಕ್ಯಾಮೆರಾ ವರ್ಕ್ ಇದೆ.
Advertisement