

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಚಿತಾ ರಾಮ್ ಇತ್ತೀಚಿಗೆ ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್ ನ ಹಿಂಬದಿಯಲ್ಲಿ ಕುಳಿತು ಸಂಚರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ನಟಿ ರಚಿತಾ ರಾಮ್, ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ನ ಹಿಂಬದಿಯಲ್ಲಿ ಕುಳಿತುಕೊಂಡಿದ್ದಾರೆ. ಬೈಕ್ ಓಡಿಸುತ್ತಿರುವ ಯುವತಿಯೂ ಸಹ ಹೆಲ್ಮೆಟ್ ಧರಿಸಿಲ್ಲ. ಬೈಕ್ ಓಡಿಸುತ್ತಿರುವ ಯುವತಿಯ ವಯಸ್ಸಿನ ಬಗ್ಗೆಯೂ ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಆ ಯುವತಿ ಅಪ್ರಾಪ್ತ ವಯಸ್ಕಳೇ ಅಥವಾ ಪರವಾನಗಿ ಹೊಂದಿದ್ದಾರೆಯೇ ಎಂಬ ಬಗ್ಗೆ ವಿಡಿಯೋದಲ್ಲಿ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಹೆಲ್ಮೆಟ್ ಧರಿಸದಿರುವುದು ಸ್ಪಷ್ಟವಾಗಿ ಸಂಚಾರ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲ್ಪಟ್ಟಿದೆ.
ವೈರಲ್ ವಿಡಿಯೋ ಯಾವ ದಿನಾಂಕದಂದು ಚಿತ್ರೀಕರಣಗೊಂಡಿದೆ ಎಂಬ ಬಗ್ಗೆ ನಟಿ ಅಥವಾ ಸಂಬಂಧಪಟ್ಟವರು ಅಧಿಕೃತ ಮಾಹಿತಿ ನೀಡಿಲ್ಲ .ಇಲ್ಲಿಯವರೆಗೆ ನಟಿ ರಚಿತಾ ರಾಮ್ ಈ ವಿಡಿಯೋ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದು ಯಾವುದಾದರೂ ಚಿತ್ರದ ಪ್ರಚಾರದ ಭಾಗವೋ ಅಥವಾ ವೈಯಕ್ತಿಕ ಸಂಚಾರವೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಇದು ಸ್ಪಷ್ಟ ಸಂಚಾರ ನಿಯಮ ಉಲ್ಲಂಘನೆಯಾಗಿದ್ದು, ಬೆಂಗಳೂರು ಸಂಚಾರ ನಿಯಮಗಳ ಪ್ರಕಾರ, ದ್ವಿಚಕ್ರ ವಾಹನ ಸವಾರ ಅಥವಾ ಹಿಂಬದಿ ಸವಾರ ಹೆಲ್ಮೆಟ್ ಧರಿಸದಿದ್ದರೆ ಕನಿಷ್ಠ 500 ರೂಪಾಯಿ ದಂಡ ವಿಧಿಸುವ ಅವಕಾಶವಿದೆ. ಪ್ರಭಾವಿ ವ್ಯಕ್ತಿಗಳು ಅಥವಾ ಜನಪ್ರಿಯ ನಟ-ನಟಿಯರು ನಿಯಮಗಳನ್ನು ಪಾಲಿಸಿದಾಗ ಅದು ಸಮಾಜದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement