OTT ಕಂಟೆಂಟ್ ಮೇಲೆ ಕೇಂದ್ರದ ಕಣ್ಣು; ಅಶ್ಲೀಲತೆ, ಹಿಂಸಾಚಾರಕ್ಕೆ ಬ್ರೇಕ್ ಹಾಕಲು ಶೀಘ್ರದಲ್ಲೇ ಬರಲಿದೆ ಕಠಿಣ ಕಾನೂನು!

ಒಟಿಟಿ ಕಂಟೆಂಟ್ ಮೇಲೆ ಸರ್ಕಾರದ ಕಣ್ಣು, ಡಿಜಿಟಲ್ ವೇದಿಕೆಗಳಲ್ಲಿ ಹಾನಿಕಾರಕ ವಿಷಯಕ್ಕೆ ಬ್ರೇಕ್ ಹಾಕಲು ಕಠಿಣ ನಿಯಮಾವಳಿ ಜಾರಿಗೆ ಶೀಘ್ರವೇ ಕೇಂದ್ರದ ಕ್ರಮ; ಏಜ್ ವೆರಿಫಿಕೇಶನ್ ಮತ್ತು ದಂಡ ವಿಧಿಸಲು ಸರ್ಕಾರದ ಮಾಸ್ಟರ್ ಪ್ಲಾನ್.
OTT APPS
ಒಟಿಟಿ
Updated on

ನವದೆಹಲಿ: OTT ಪ್ಲಾಟ್‌ಫಾರ್ಮ್‌ಗಳು ಇಂದು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ. ಆದರೆ ಇದೇ ವೇಳೆಯಲ್ಲಿ ಅವುಗಳಲ್ಲಿ ಪ್ರಸಾರವಾಗುವ ವಿಷಯಗಳ ಕುರಿತು ಹಲವು ಕಳವಳಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳಿಗೆ ಇರುವ ಕಟ್-ಆಫ್ ಒಟಿಟಿ ಪ್ಲಾಟ್‌ಫಾರ್ಮ್‌ಗಲ್ಲಿನ ವಿಷಯಗಳಿಗೆ ಇರುವುದಿಲ್ಲ. ಹಾಗಾಗಿ, ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಕಠಿಣ ನಿಯಮಾವಳಿಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಹೌದು, ಒಟಿಟಿಯಲ್ಲಿ ಅತಿಯಾದ ಹಿಂಸಾಚಾರ, ಅಶ್ಲೀಲತೆ ಹಾಗೂ ಅಪರಾಧವನ್ನು ಪ್ರಚೋದಿಸುವ ವಿಷಯಗಳನ್ನು ತಡೆಯಲು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಶಾಸನಬದ್ಧ ಚೌಕಟ್ಟನ್ನು ರೂಪಿಸಲು ಗಂಭೀರ ಚಿಂತನೆ ನಡೆಸಿದೆ. ಸಂಸತ್ತಿನ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿ ನೀಡಿದ ವರದಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಪ್ರಸ್ತುತ ಜಾರಿಯಲ್ಲಿರುವ ಸ್ವಯಂ ನಿಯಂತ್ರಣ ವ್ಯವಸ್ಥೆಯು ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ ಎಂಬ ಕಾರಣಕ್ಕೆ ಈ ಹೊಸ ಹೆಜ್ಜೆ ಇಡಲಾಗುತ್ತಿದೆ.

ಹೊಸ ಕಾನೂನಿನಲ್ಲಿ ಏನಿರಲಿದೆ?

ಪ್ರಸ್ತುತ ಚಾಲ್ತಿಯಲ್ಲಿರುವ ಐಟಿ ನಿಯಮಗಳು ಕೇವಲ ಪ್ಲಾಟ್‌ಫಾರ್ಮ್‌ಗಳ ಸ್ವಯಂ-ವರ್ಗೀಕರಣದ ಮೇಲೆ ಅವಲಂಬಿತವಾಗಿವೆ. ಆದರೆ ಹೊಸ ಚೌಕಟ್ಟಿನಡಿ ಸರ್ಕಾರವೇ ಕಠಿಣ ನಿಯಮಗಳನ್ನು ರೂಪಿಸಲಿದೆ. ಅದರಂತೆ, ಒಟಿಟಿಯಲ್ಲಿ ಸರಣಿ ಅಥವಾ ಸಿನಿಮಾ ಬಿಡುಗಡೆಯಾದ ನಂತರ, ಸಾರ್ವಜನಿಕರಿಂದ ದೂರು ಬಂದಲ್ಲಿ ಅದನ್ನು ಪರಿಶೀಲಿಸಲು ಸ್ವತಂತ್ರ ತಜ್ಞರ ಸಮಿತಿಯೊಂದನ್ನು ರಚಿಸಲು ಶಿಫಾರಸು ಮಾಡಲಾಗಿದೆ. ಈ ಸಮಿತಿಯಲ್ಲಿ ಮಕ್ಕಳ ಅಭಿವೃದ್ಧಿ, ಶಿಕ್ಷಣ, ಕಾನೂನು ಮತ್ತು ಸಮಾಜ ವಿಜ್ಞಾನ ಕ್ಷೇತ್ರದ ತಜ್ಞರು ಇರಲಿದ್ದಾರೆ.

OTT APPS
'ಕಣ್ಣುಗಳ ಬದಲಿಗೆ ಜನರು ನನ್ನ ಮುಖದ ಮೊಡವೆಗಳನ್ನಷ್ಟೇ ನೋಡ್ತಾರೆ: 'ಸೀತೆ' ವಿವಾದದ ನಡುವೆ ಸಾಯಿ ಪಲ್ಲವಿ ಮಾತು ವೈರಲ್!

ಇದರೊಂದಿಗೆ, ಅಪ್ರಾಪ್ತ ವಯಸ್ಕರು ವಯಸ್ಸಿಗೆ ಮೀರಿದ (Adult / 18+) ಮತ್ತು ಅಪರಾಧ ಪ್ರಚೋದಕ ಕಂಟೆಂಟ್‌ಗಳನ್ನು ವೀಕ್ಷಿಸದಂತೆ ತಡೆಯಲು ತಂತ್ರಜ್ಞಾನ ಆಧಾರಿತ ಬಲವಾದ ಏಜ್ ವೆರಿಫಿಕೇಶನ್ ಹಾಗೂಪೇರೆಂಟಲ್ ಕಂಟ್ರೊಲ್ಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತದೆ ಎನ್ನಲಾಗಿದೆ.

ಏತನ್ಮಧ್ಯೆ, ನಿಯಮಗಳನ್ನು ಉಲ್ಲಂಘಿಸುವ, ಸಮಾಜದ ನೈತಿಕತೆಗೆ ಧಕ್ಕೆ ತರುವ ಅಥವಾ ಅಪರಾಧ ಜಗತ್ತನ್ನು ವೈಭವೀಕರಿಸುವ ವಿಷಯಗಳನ್ನು ಪ್ರಸಾರ ಮಾಡುವ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಮತ್ತು ದಂಡ ವಿಧಿಸುವ ಯೋಜನೆಯು ಪ್ರಸ್ತಾವನೆಯಲ್ಲಿ ಇದೆ ಎನ್ನಲಾಗಿದೆ.

ಯಾಕೆ ಈ ಹೊಸ ಯೋಜನೆ?

ಕೇಂದ್ರ ಸರ್ಕಾರವು ಈ ಹಿಂದೆ ಗ್ಯಾಂಗ್‌ಸ್ಟರ್‌ಗಳು ಮತ್ತು ಅಪರಾಧಿಗಳನ್ನು ವೈಭವೀಕರಿಸುವ ಬಯೋಪಿಕ್ ಹಾಗೂ ವೆಬ್ ಸರಣಿಗಳ ವಿರುದ್ಧ ಎಚ್ಚರಿಕೆ ನೀಡಿತ್ತು. ಅಲ್ಲದೆ, ಅಶ್ಲೀಲ ಮತ್ತು ನಿಯಮಬಾಹಿರ ಕಂಟೆಂಟ್ ಹೊಂದಿದ್ದ ಸುಮಾರು 50ಕ್ಕೂ ಹೆಚ್ಚು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಸರ್ಕಾರ ಈಗಾಗಲೇ ನಿಷೇಧಿಸಿದೆ. ಇದರ ಮುಂದುವರೆದ ಭಾಗವಾಗಿ, ಕೇಂದ್ರ ಸರ್ಕಾರ ಹೊಸ ಯೋಜನೆ ಅಥವಾ ಹಾಲಿ ಇರುವ ಐಟಿ ನಿಯಮದಲ್ಲೇ ಭಾರಿ ಬದಲಾವಣೆ ಮಾಡುವ ಸಾಧ್ಯೆತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com