

ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ಅಭಿಮಾನಿಗಳು ಅವರ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ .
ಈ ನಡುವೆ ಸಿನಿಮಾದ ಟೀಸರ್ ನಲ್ಲಿರುವ ಹಸಿಬಿಸಿ ದೃಶ್ಯಗಳ ಸಂಬಂಧ ವಿವಾದ ಉಂಟಾಗಿತ್ತು. ಇಂತಹ ದೃಶ್ಯಗಳ ಬಗ್ಗೆ ಪತ್ನಿ ರಾಧಿಕಾ ಪಂಡಿತ್ ಏನು ಹೇಳಿದರು ಎಂಬ ಬಗ್ಗೆ ಯಶ್ ಮನ ಬಿಚ್ಚಿ ಮಾತನಾಡಿದ್ದಾರೆ. ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಜೊತೆ ಮಾತನಾಡಿದ ಯಶ್, ಇತರ ಯಾವುದೇ ಸಂಗಾತಿಯಂತೆ ತನ್ನ ಪತ್ನಿಯೂ ಸಹ ಅನ್‌ಕಫರ್ಟ್ ಆಗಿದ್ದರು ಎಂದು ಹೇಳಿದ್ದಾರೆ.
ಇಂತಹ ವಿಚಾರದಲ್ಲಿ ಪ್ರತಿಯೊಬ್ಬ ಸಂಗಾತಿಗೂ ಅಸಮಾಧಾನವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಸುಳ್ಳು ಹೇಳಲು ನನಗೆ ಇಷ್ಟವಿಲ್ಲ. ಎಲ್ಲ ಸಂಗಾತಿಗಳಿಗೂ ಹಾಗೆಯೇ ಅನಿಸುತ್ತದೆ. ಆದರೆ, ಅಂತಿಮವಾಗಿ ಇದು ಒಂದು ಕಲೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಇದರ ಮೂಲಕ ಸಾಧಿಸಲು ಪ್ರಯತ್ನಿಸುತ್ತಿರುವುದು ವಿಭಿನ್ನವಾದ ವಿಚಾರ ಎಂದು ಹೇಳಿದ್ದಾರೆ.
ಕೆಲವು ಕೆಲಸಗಳನ್ನು ಜನರು ತಮ್ಮ ನಂಬಿಕೆಗಾಗಿ ಮಾಡುತ್ತಾರೆ. ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಮಾಡುತ್ತಾರೆ. ಇನ್ನು ಕೆಲವು ಕೆಲಸಗಳನ್ನು ಮುಂದಿನ ಪೀಳಿಗೆಯೂ ನೋಡುತ್ತದೆ, ಅದರಿಂದ ಕಲಿಯುತ್ತದೆ ಎಂಬ ಕಾರಣಕ್ಕೆ ದಾಖಲಿಸಲಾಗುತ್ತದೆ. ಹಾಗಾಗಿ ಕೆಲವು ವಿಚಾರಗಳನ್ನು ದಾಖಲಿಸುವುದು ಅಗತ್ಯ. ಈ ಕಥೆ ಕೂಡ ಮಹತ್ವದ್ದಾಗಿದೆ ಎಂದು ನನಗೆ ಅನಿಸುತ್ತದೆ ಎಂದಿದ್ದಾರೆ.
ಈ ಚಿತ್ರಕ್ಕಾಗಿ ತಾವು ತಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರಬರಬೇಕಾಯಿತು. ಇಂತಹ ದೃಶ್ಯಗಳಲ್ಲಿ ನಟಿಸುವುದು ನನಗೂ ಸುಲಭವಲ್ಲ. ಆದರೆ ಕಥೆಗೆ ಅದು ಅಗತ್ಯವಾಗಿತ್ತು ಮತ್ತು ಚಿತ್ರದ ಪ್ರಮುಖ ಭಾಗವಾಗಿದೆ. ಸಹಜವಾಗಿಯೇ ರಾಧಿಕಾಗೆ ಇದು ಇಷ್ಟವಾಗುವುದಿಲ್ಲ. ಆದರೆ ಅದಕ್ಕಾಗಿ ಅವಳು ನನ್ನ ಮೇಲೆ ಬೇಸರಗೊಂಡಿದ್ದಾಳೆ ಎಂದರ್ಥವಲ್ಲ. ಆಕೆ ನನ್ನನ್ನು ನಂಬುತ್ತಾಳೆ ಎಂದು ತಿಳಿಸಿದ್ದಾರೆ.
ಮುಖ್ಯವಾಗಿ, ಆಕೆಯೂ ಒಬ್ಬ ನಟಿ. ಇದು ನಮ್ಮ ವೃತ್ತಿಯ ಭಾಗ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾಳೆ. ನಾನು ನಟಿಸುತ್ತಿರುವಾಗ, ಅಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಿರುವ ಒಬ್ಬ ನಟ ಇರುತ್ತಾನೆ. ಅದು ಆಕೆಯ ಪತಿ ಅಲ್ಲ ಎಂದು ಯಶ್ ಹೇಳಿದ್ದಾರೆ.