ಯಶ್ ನಟನೆಯ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವು ಬಹುತಾರಾಗಣವನ್ನು ಹೊಂದಿದ್ದು, ಪಾತ್ರಗಳ ಫಸ್ಟ್ ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗುತ್ತಿದೆ. ಇಂದು ನಟಿ ರುಕ್ಮಿಣಿ ವಸಂತ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಮೆಲ್ಲಿಸಾ ಆಗಿ ಕಾಣಿಸಿಕೊಂಡಿದ್ದಾರೆ.
ಗೀತು ಮೋಹನ್‌ದಾಸ್ ನಿರ್ದೇಶನದ ಚಿತ್ರದಲ್ಲಿ ಯಶ್ ಜೊತೆಗೆ ರುಕ್ಮಿಣಿ ವಸಂತ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಇದ್ದಾರೆ.
ನಾಡಿಯಾ ಪಾತ್ರದಲ್ಲಿ ಕಿಯಾರಾ ಅಡ್ವಾಣಿ, ಎಲಿಜಬೆತ್ ಪಾತ್ರದಲ್ಲಿ ಹುಮಾ ಖುರೇಷಿ, ಗಂಗಾ ಪಾತ್ರದಲ್ಲಿ ನಯನತಾರಾ ಮತ್ತು ರೆಬೆಕ್ಕಾ ಪಾತ್ರದಲ್ಲಿ ತಾರಾ ಸುತಾರಿಯಾ ಕಾಣಿಸಿಕೊಂಡಿರುವ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾದ ನಂತರ, ರುಕ್ಮಿಣಿ ವಸಂತ್ ಅವರ ಮೆಲ್ಲಿಸಾ ಪಾತ್ರವನ್ನು ಪರಿಚಯಿಸಲಾಗಿದೆ.
ರುಕ್ಮಿಣಿ ಜೊತೆ ಕೆಲಸ ಮಾಡುವ ಬಗ್ಗೆ ಮಾತನಾಡುತ್ತಾ ನಿರ್ದೇಶಕಿ ಗೀತು ಮೋಹನ್‌ದಾಸ್, 'ರುಕ್ಮಿಣಿ ಬಗ್ಗೆ ನನಗೆ ಹೆಚ್ಚು ಮೆಚ್ಚುಗೆಯಾಗುವ ವಿಷಯವೆಂದರೆ ನಟಿಯಾಗಿ ಅವರ ಬುದ್ಧಿವಂತಿಕೆ. ಅವರು ಕೇವಲ ಅಭಿನಯ ಮಾಡುವುದಿಲ್ಲ. ಅದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುತ್ತಾರೆ. ಅದು ಸಂದೇಹದಿಂದಲ್ಲ, ಬದಲಿಗೆ ಕುತೂಹಲದಿಂದ. ಇದು ಆಗಾಗ್ಗೆ ಆಳವಾಗಿ ಯೋಚಿಸಲು ಮತ್ತು ಕೆಲವೊಮ್ಮೆ ನಿರ್ದೇಶಕಿಯಾಗಿ ನನ್ನ ಆಯ್ಕೆಗಳನ್ನು ಮರುಪರಿಶೀಲಿಸಲು ಪ್ರೇರೇಪಿಸುತ್ತದೆ' ಎನ್ನುತ್ತಾರೆ.
'ಅವರ ನಟನೆಯು ಜೋರಾದ ಸಂಭಾಷಣೆ ಅಥವಾ ಸ್ಪಷ್ಟ ಅಭಿವ್ಯಕ್ತಿಗಳ ಮೂಲಕವಲ್ಲ, ಬದಲಾಗಿ ಸೂಕ್ಷ್ಮತೆಗಳಾದ ವಿರಾಮ ಮತ್ತು ಮೌನದಲ್ಲಿಯೂ ಏನು ಹೇಳಬೇಕೋ ಅದನ್ನು ಹೇಳುವ ಬುದ್ಧಿವಂತಿಕೆಯನ್ನು ತೋರಿಸುತ್ತದೆ. ಶಾಟ್‌ಗಳ ನಡುವೆ, ಅವರು ಸದ್ದಿಲ್ಲದೆ ತನ್ನ ದಿನಚರಿಯಲ್ಲಿ ಬರೆಯುವುದನ್ನು ಮತ್ತು ಸೆಟ್‌ನಲ್ಲಿನ ಸಣ್ಣ ವಿಚಾರಗಳನ್ನು ಗಮನಿಸುವುದನ್ನು ನಾನು ನೋಡಿದ್ದೇನೆ. ಇದು ಅವರ ಬಗ್ಗೆ ಬಹಳಷ್ಟು ಹೇಳುತ್ತದೆ. ಅವರು ನಿರಂತರವಾಗಿ ತಮ್ಮ ಪಾತ್ರಕ್ಕಾಗಿ ಆಂತರಿಕ ಪ್ರಪಂಚವೊಂದನ್ನು ನಿರ್ಮಿಸುತ್ತಿರುತ್ತಾರೆ' ಎಂದರು.
ಟಾಕ್ಸಿಕ್ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಭಾಷೆಗಳಲ್ಲಿ ಡಬ್ ಮಾಡಲಾದ ಆವೃತ್ತಿಗಳನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ. ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ರಾಜೀವ್ ರವಿ, ಸಂಗೀತ ಸಂಯೋಜಕ ರವಿ ಬಸ್ರೂರ್, ಸಂಕಲನಕಾರರಾಗಿ ಉಜ್ವಲ್ ಕುಲಕರ್ಣಿ ಮತ್ತು ನಿರ್ಮಾಣ ವಿನ್ಯಾಸಕರಾಗಿ ಟಿಪಿ ಅಬಿದ್ ಸೇರಿದಂತೆ ಬಲವಾದ ತಾಂತ್ರಿಕ ತಂಡವಿದೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ನಿರ್ಮಿಸಿರುವ ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Advertisement