

ಬೆಂಗಳೂರು: ಬಹುರಾಷ್ಟ್ರೀಯ ಒಟಿಟಿ ಕಂಪನಿಗಳು, ಕನ್ನಡ ಚಿತ್ರಗಳನ್ನು ಕಡೆಗಣಿಸುತ್ತಿದ್ದು, ಕನ್ನಡ ಚಿತ್ರರಂಗದ ಉಳಿವಿಗಾಗಿ ರಾಜ್ಯ ಸರ್ಕಾರ ಸರ್ಕಾರಿ ಒಟಿಟಿ ಆರಂಭಿಸಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲ ಅವರ ನೇತೃತ್ವದಲ್ಲಿ ಮಂಗಳವಾರ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಇಂದು ಗೃಹ ಕಚೇರಿ ಕೃಷ್ಣದಲ್ಲಿ ಜಯಮಾಲ ಅವರ ನೇತೃತ್ವದಲ್ಲಿ, ಮಾಜಿ ಅಧ್ಯಕ್ಷರಾದ ಗಂಗರಾಜು, ಸಾ. ರಾ. ಗೋವಿಂದ್, ಗೌರವ ಕಾರ್ಯದರ್ಶಿ ರಮೇಶ್ ಬಾಬು, ಹಿರಿಯ ನಟ ಸುಂದರ್ ರಾಜ್ ಹಾಗೂ ಇತರರು ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಡಿಕೆ ಶಿವಕುಮಾರ್ ಅವರು, ಕನ್ನಡ ಚಿತ್ರರಂಗ ಉಳಿವಿಗೆ ಸರ್ಕಾರದ ನೆರವಿನ ಭರವಸೆ ನೀಡಿದರು.
ಕನ್ನಡ ಚಿತ್ರರಂಗ ಉಳಿವಿಗಾಗಿ ಸಮಗ್ರ ಹೊಸ ಚಲನಚಿತ್ರ ನೀತಿ ಸೇರಿದಂತೆ ಚಲನಚಿತ್ರ ಪ್ರಾಚ್ಯಾಗಾರ (ಆರ್ಕೈವ್) ಸಹಾಯಧನ ಹೆಚ್ಚಳ, ಸರ್ಕಾರದ ಓಟಿಟಿ ವೇದಿಕೆ, ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿ, ಏಕಪರದೆ ಚಿತ್ರಮಂದಿರಗಳ ನವೀಕರಣ, ಆಧುನೀಕರಣಕ್ಕೆ ವಿಶೇಷ ನೆರವು, ಚಿತ್ರರಂಗದವರಿಗೆ ಫ್ಲಾಟ್ ನಿರ್ಮಾಣಕ್ಕೆ ಬಿಡಿಎಯಿಂದ ಐದು ಎಕರೆ ಭೂಮಿ" ನೀಡುವಂತೆ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಮಾಡಿದೆ.
ಚಲನಚಿತ್ರ ವಾಣಿಜ್ಯ ಮಂಡಳಿಯವರ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಯವರು ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂದು ಆಲೋಚಿಸಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಒಟಿಟಿಗೆ ಆಗ್ರಹ
ಪ್ರಸ್ತುತ ಕನ್ನಡ ಸಿನಿಮಾಗಳಿಗೆ ಒಟಿಟಿ ವೇದಿಕೆಗಳಲ್ಲಿ ಸರಿಯಾದ ಬೇಡಿಕೆ ಸಿಗುತ್ತಿಲ್ಲ ಎಂಬ ಕಹಿ ಸತ್ಯವನ್ನು ನಿಯೋಗವು ಸಿಎಂ ಗಮನಕ್ಕೆ ತಂದಿದೆ. ರಾಜ್ಯದಲ್ಲಿ ಪ್ರತಿವರ್ಷ 250 ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಆದರೆ, ಪ್ರಮುಖ ಒಟಿಟಿ ವೇದಿಕೆಗಳು ಬಹುರಾಷ್ಟ್ರೀಯ ಕಂಪೆನಿಗಳಾಗಿರುವ ಕಾರಣ, ಅವು ಸಣ್ಣ ಬಜೆಟ್‌ನ ಕನ್ನಡ ಸಿನಿಮಾಗಳನ್ನು ಕಡೆಗಣಿಸುತ್ತಿವೆ. ಸಣ್ಣ ಮೊತ್ತದ ಸಿನಿಮಾಗಳು ಎಂಬ ಕಾರಣ ನೀಡಿ ಖರೀದಿಸಲು ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಸಣ್ಣ ನಿರ್ಮಾಪಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ, ಕನ್ನಡ ಚಿತ್ರರಂಗದ ರಕ್ಷಣೆಗಾಗಿ ಸರ್ಕಾರವೇ ಸ್ವಂತದಾದ ‘ಸರ್ಕಾರಿ ಒಟಿಟಿ ವೇದಿಕೆ’ಯನ್ನು ಪ್ರಾರಂಭಿಸಬೇಕು ಎಂದು ನಿಯೋಗವು ವಿಶೇಷವಾಗಿ ಒತ್ತಾಯಿಸಿದೆ.