

ಹೈದರಾಬಾದ್: ಬಹುಭಾಷಾ ನಟಿ ಸಾಮಂತಾ ರುತ್ ಪ್ರಭು (Samantha Ruth Prabhu) ಕೊನೆಗೂ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ನಟಿ, ಗರ್ಭಿಣಿಯಾಗಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ತಮ್ಮ ಇತ್ತೀಚಿನ ‘ಮಾ ಇಂಟಿ ಬಂಗಾರಂ’ ಚಿತ್ರದ ಯಶಸ್ಸಿನ ಸಮಾರಂಭದಲ್ಲಿ ಮಾತನಾಡಿರುವ ಸಮಂತಾ ಅವರು, ನನ್ನ ಸದ್ಯದ ದೈಹಿಕ ಪರಿಸ್ಥಿತಿಯಿಂದಾಗಿ 'ಮಾ ಇಂಟಿ ಬಂಗಾರಂ' ಸಿನಿಮಾ ಬಳಿಕ ನಾನು ಚಿತ್ರರಂಗದಿಂದ ಸಣ್ಣ ವಿರಾಮ ತೆಗೆದುಕೊಳ್ಳಲಿದ್ದೇನೆ. ನಾನು ಹೆರಿಗೆ ರಜೆ (Maternity Leave) ಪಡೆಯುತ್ತಿದ್ದು, ಆ ನಂತರ ನನ್ನ ಪ್ರೀತಿಯ ಅಭಿಮಾನಿಗಳಿಗಾಗಿ ಮತ್ತೆ ಹೊಸ ಸಿನಿಮಾದೊಂದಿಗೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ.
ಸಮಂತಾ ಈ ಘೋಷಣೆ ಮಾಡುತ್ತಿದ್ದ ವೇಳೆ ಅವರ ಪತಿ ರಾಜ್ ನಿಡಿಮೋರು ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದು, ಪಕ್ಕದಲ್ಲೇ ಕುಳಿತು ನಗುತ್ತಾ ಸಂತಸ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಇದ್ದವರು ಸಮಂತಾಗೆ ಶುಭಾಶಯ ತಿಳಿಸಿದ್ದು, ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ನಟಿ ಧನ್ಯವಾದ ಅರ್ಪಿಸಿದರು.
ಇತ್ತೀಚೆಗೆ ‘ಮಾ ಇಂಟಿ ಬಂಗಾರಂ’ ಯಶಸ್ಸಿನ ಸಂಭ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅದರಲ್ಲಿ ಸಮಂತಾ ಬೇಬಿ ಬಂಪ್‌ನೊಂದಿಗೆ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಫೋಟೋ ಹಾಗೂ ವೀಡಿಯೋಗಳು ವೈರಲ್ ಆಗಿದ್ದವು. ಇದೀಗ ಸ್ವತಃ ಸಮಂತಾ ಅವರೇ ಗರ್ಭಧಾರಣೆ ವಿಚಾರವನ್ನು ಖಚಿತಪಡಿಸಿರುವುದರಿಂದ ಊಹಾಪೋಹಗಳಿಗೆ ತೆರೆಬಿದ್ದಿದೆ.
ಸಮಂತಾ ಪ್ರಸ್ತುತ ಮೊದಲ ತ್ರೈಮಾಸಿಕದಲ್ಲಿದ್ದು, ಈ ವರ್ಷದ ಡಿಸೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮುನ್ನ ‘ಮಾ ಇಂಟಿ ಬಂಗಾರಂ’ ಚಿತ್ರದ ನಿರ್ದೇಶಕಿ ನಂದಿನಿ ರೆಡ್ಡಿ ಕೂಡ ಸಮಂತಾ ಗರ್ಭಧಾರಣೆ ಕುರಿತು ಪ್ರತಿಕ್ರಿಯಿಸಿ, “ನಮ್ಮ ಸಿನಿಮಾ ಯಶಸ್ವಿಯಾಗಿರುವ ಈ ಸಮಯದಲ್ಲಿ ಸಮಂತಾ ಗರ್ಭಧಾರಣೆ ಕೂಡ ಒಂದು ಸುಂದರ ಕ್ಷಣ” ಎಂದು ಹೇಳಿದ್ದರು.
ವೈಯಕ್ತಿಕ ಬದುಕಿನ ವಿಚಾರಕ್ಕೆ ಬಂದರೆ, ಸಮಂತಾ 2017ರಲ್ಲಿ ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು. ಆದರೆ, ಕೆಲ ವರ್ಷಗಳ ಬಳಿಕ 2021ರಲ್ಲಿ ಇಬ್ಬರೂ ಬೇರ್ಪಟ್ಟಿದ್ದರು. ಬಳಿಕ ಸಮಂತಾ ಮತ್ತು ರಾಜ್ ನಿಡಿಮೋರು ನಡುವೆ ಸ್ನೇಹ ಬೆಳೆದು, ‘ದಿ ಫ್ಯಾಮಿಲಿ ಮ್ಯಾನ್ 2’ ಮತ್ತು ‘ಸಿಟಾಡೆಲ್: ಹನಿ ಬನ್ನಿ’ ಪ್ರಾಜೆಕ್ಟ್‌ಗಳ ವೇಳೆ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು.
ಕಳೆದ ವರ್ಷದಿಂದ ರಾಜ್ ಜೊತೆಗಿನ ಫೋಟೋಗಳನ್ನು ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಆರಂಭಿಸಿದ್ದರು. ನಂತರ 2025 ಡಿಸೆಂಬರ್ 1ರಂದು ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ಇಬ್ಬರೂ ವಿವಾಹವಾಗಿದ್ದರು.
ಇದೀಗ ‘ಮಾ ಇಂಟಿ ಬಂಗಾರಂ’ ಚಿತ್ರದ ಯಶಸ್ಸಿನ ಖುಷಿಯ ಜೊತೆಗೆ, ಮೊದಲ ಮಗುವಿನ ನಿರೀಕ್ಷೆಯ ಸಂತೋಷವೂ ಸಮಂತಾ-ರಾಜ್ ದಂಪತಿಯ ಬದುಕಿನಲ್ಲಿ ಡಬಲ್ ಸಂಭ್ರಮ ತಂದಿದೆ.