

ನಿನ್ನೆ ಬಿಡುಗಡೆಯಾದ ರಣವೀರ್ ಸಿಂಗ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಧುರಂಧರ್: ದಿ ರಿವೆಂಜ್' ಸಿನಿಮಾ ಬಗ್ಗೆ ಈಗ ಎಲ್ಲೆಡೆ ಜೋರಾದ ಚರ್ಚೆ ನಡೆಯುತ್ತಿದೆ.
ಚಿತ್ರ ವೀಕ್ಷಿಸಿದ ತೆಲುಗಿನ ಖ್ಯಾತ ನಟರಾದ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ಪ್ರಭಾಸ್ ಸೇರಿದಂತೆ ಹಲವು ನಟರು ಸಿನಿಮಾದ ಮೇಕಿಂಗ್ ಹಾಗೂ ರಣವೀರ್ ಸಿಂಗ್ ನಟನೆಯನ್ನು ಕೊಂಡಾಡುತ್ತಿದ್ದರೆ ಇತ್ತ ಸ್ಯಾಂಡಲ್ ವುಡ್ ನ ರಮ್ಯಾ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರದಲ್ಲಿ ಹೇಗೆ ತಾಳ್ಮೆಯ ಪರೀಕ್ಷೆ ಮಾಡಬೇಕು ಎಂಬುದಕ್ಕೆ ಈ ಚಿತ್ರ ಉತ್ತಮ ಉದಾಹರಣೆ ಎಂದಿದ್ದಾರೆ.
ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಉತ್ತಮ ಗಳಿಕೆ ಕಂಡಿದ್ದು, ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ರಮ್ಯಾ ಈ ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಹೋಗಿ ಹಣ ಮತ್ತು ಸಮಯ ಎರಡನ್ನೂ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಸ್ಟ್ ಹಂಚಿಕೊಂಡಿದ್ದಾರೆ.
ಚಿತ್ರ ಹೇಗಿದೆ ಅಂದರೆ, ಆಸಕ್ತಿ ಇಲ್ಲದ ಪಠ್ಯಪುಸ್ತಕದ ಕೊನೆಯೇ ಇಲ್ಲದ ಅಧ್ಯಾಯಗಳನ್ನು ಓದಿದ ಹಾಗೆ ಅನಿಸುತ್ತದೆ. ಈ ಚಿತ್ರ ವೀಕ್ಷಿಸುವಾಗ ನಿಮ್ಮ ಮಿದುಳು ಕೆಲಸ ಮಾಡುವುದನ್ನು ನಿಲ್ಲಿಸಬಹುದು. ವೀಕ್ಷಕರು ಚಿತ್ರಮಂದಿರಕ್ಕೆ ಹೋಗಿ ಹಣ ವ್ಯರ್ಥ ಮಾಡಿಕೊಳ್ಳುವುದಕ್ಕಿಂತ ಸ್ವಲ್ಪ ದಿನ ಕಾದು OTT ಯಲ್ಲಿ ಚಿತ್ರ ವೀಕ್ಷಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಅಲ್ಲಿ ಅರ್ಧದಲ್ಲಿಯೇ ಎದ್ದು ಹೋಗುವ ಅವಕಾಶ ಇರುತ್ತದೆ ಎಂದಿದ್ದಾರೆ. ನಿರ್ದೇಶನ, ಸಂಭಾಷಣೆ, ಎಡಿಟಿಂಗ್, ಹಿನ್ನೆಲೆ ಸಂಗೀತ ಎಲ್ಲವೂ ಪರಿಪೂರ್ಣ ಆಗಿಲ್ಲ. ಆಗಿಲ್ಲ ಮಾರ್ಚ್ 19 ರಂದು ತರಾತುರಿಯಲ್ಲಿ ನಿರ್ದೇಶಕರು ಈ ಚಿತ್ರವನ್ನು ಬಿಡುಗಡೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಧುರಂಧರ್ ಮೊದಲ ಭಾಗದಲ್ಲಿ ಜನ ಶಿಳ್ಳೆ ಹೊಡೆದು , ಭಾರಿ ಹರ್ಘೋದ್ಘಾರಗಳಿಂದ ಸಂಭ್ರಮಿಸಿದ್ದರು. ಆದರೆ, ಈ ಚಿತ್ರದ ಬಗ್ಗೆ ಸಂಪೂರ್ಣವಾಗಿ ನಿರಾಸೆಗೊಂಡಿದ್ದಾರೆ. ಥಿಯೇಟರ್ ನಲ್ಲಿದ್ದ ಎಲ್ಲರಲ್ಲೂ ಬೇಸರು ಎದ್ದು ಕಾಣುತಿತ್ತು ಎಂದು ರಮ್ಯಾ ಬರೆದುಕೊಂಡಿದ್ದಾರೆ.
ಸಿನಿಮಾದಲ್ಲಿ ಹಿಂಸೆ ವಿಜೃಂಭಿಸಿದೆ. ಕೈಗೆ ಸಿಕ್ಕ ಪ್ರತಿಯೊಂದು ವಸ್ತುವನ್ನು ಹೇಗೆ ಮಾರಕಾಸ್ತ್ರವಾಗಿ ಬಳಸಿ ಹಿಂಸೆ ಮಾಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ. ನಿರ್ದೇಶಕರು ತಮ್ಮ ಜೊತೆಯೇ ಪೈಪೋಟಿಗಿಳಿದಂತಿದೆ. ಆ ದೃಶ್ಯಗಳನ್ನು ನೋಡಿ ಆಘಾತವಾಗುವ ಬದಲು ನಗು ಬರುತ್ತದೆ ಎಂದಿದ್ದಾರೆ.
Advertisement