

ಸೂಪರ್ ಸ್ಟಾರ್ ರಜನಿಕಾಂತ್ 'ಜೈಲರ್' 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷಮ್ ಮಾಡುತ್ತಿದ್ದು, ಕಳೆದ 18 ದಿನಗಳಲ್ಲಿ ವಿಶ್ವಾದ್ಯಂತ 807.25 ಕೋಟಿ ರೂಪಾಯಿ ಒಟ್ಟು ಗಳಿಕೆ(gross collection) ದಾಖಲಿಸುವ ಮೂಲಕ 800 ಕೋಟಿ ರೂಪಾಯಿ ಕ್ಲಬ್‌ಗೆ ಸೇರ್ಪಡೆಗೊಂಡಿದೆ.
ವ್ಯಾಪಾರ ಟ್ರ್ಯಾಕರ್ 'ಸ್ಯಾಕ್ನಿಲ್ಕ್' (Sacnilk) ಪ್ರಕಾರ, 'ಜೈಲರ್ 2' (Jailer 2) 18ನೇ ದಿನದಂದು ಒಟ್ಟು 8,906 ಪ್ರದರ್ಶನಗಳ ಮೂಲಕ 11.20 ಕೋಟಿ ರೂಪಾಯಿಗಳ ನಿವ್ವಳ ಗಳಿಕೆಯನ್ನು (net collection) ಕಂಡಿದೆ. ಇದರಲ್ಲಿ ತಮಿಳು ಆವೃತ್ತಿಯು 4,287 ಪ್ರದರ್ಶನಗಳಿಂದ 8.00 ಕೋಟಿ ರೂ., ಹಿಂದಿ ಆವೃತ್ತಿಯು 3,592 ಪ್ರದರ್ಶನಗಳಿಂದ 1.75 ಕೋಟಿ ರೂ., ತೆಲುಗು ಆವೃತ್ತಿಯು 777 ಪ್ರದರ್ಶನಗಳಿಂದ 1.00 ಕೋಟಿ ರೂ. ಮತ್ತು ಕನ್ನಡ ಆವೃತ್ತಿಯು 250 ಪ್ರದರ್ಶನಗಳಿಂದ 45 ಲಕ್ಷ ರೂ. ಗಳಿಸಿದೆ. ಇದರೊಂದಿಗೆ, ಭಾರತದಲ್ಲಿ ಈ ಚಿತ್ರದ ಒಟ್ಟು ಗಳಿಕೆ (gross) 533.75 ಕೋಟಿ ರೂ. ಆಗಿದ್ದು, ಒಟ್ಟು ನಿವ್ವಳ ಗಳಿಕೆ (net) 456.30 ಕೋಟಿ ರೂ.ಗೆ ತಲುಪಿದೆ.
ವಿದೇಶಗಳಲ್ಲಿ, ಈ ಚಿತ್ರವು 18ನೇ ದಿನದಂದು 3.00 ಕೋಟಿ ರೂ. ಗಳಿಸಿದ್ದು, ಅಲ್ಲಿನ ಒಟ್ಟು ಗಳಿಕೆ 273.50 ಕೋಟಿ ರೂ.ಗೆ ಏರಿಕೆಯಾಗಿದೆ. ಹೀಗಾಗಿ, ಚಿತ್ರದ ಜಾಗತಿಕ ಒಟ್ಟು ಗಳಿಕೆಯು 807.25 ಕೋಟಿ ರೂಪಾಯಿಗಳನ್ನು ತಲುಪಿದೆ' ಎಂದು 'ಸ್ಯಾಕ್ನಿಲ್ಕ್' ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
'ಧುರಂಧರ್ 2' (Dhurandhar 2) ನಂತರ, ಅತಿ ಹೆಚ್ಚು ಗಳಿಕೆ ಕಂಡ ಎರಡನೇ ಭಾರತೀಯ ಚಲನಚಿತ್ರವಾಗಿ 'ಜೈಲರ್ 2' ಹೊರಹೊಮ್ಮಿದೆ.
ಸನ್ ಪಿಕ್ಚರ್ಸ್ ನಿರ್ಮಿಸಿರುವ ಮತ್ತು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿರುವ ಈ 'ಜೈಲರ್ 2' ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ಸೂರಜ್ ವೆಂಜರಮೂಡು, ರಮ್ಯಾ ಕೃಷ್ಣನ್ ಮತ್ತು ವಿದ್ಯಾ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದಲ್ಲದೆ, ಮೋಹನ್‌ಲಾಲ್, ಶಿವರಾಜ್‌ಕುಮಾರ್, ಜಾಕಿ ಶ್ರಾಫ್ ಮತ್ತು ಹೃತಿಕ್ ರೋಷನ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರಗಳಲ್ಲಿ (special appearances) ಕಾಣಿಸಿಕೊಂಡಿದ್ದಾರೆ.