

ಬಿಗ್‌ಬಾಸ್ ಖ್ಯಾತಿಯ ನಟ ರಾಕೇಶ್ ಅಡಿಗ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕುಟುಂಬದ ಹಿರಿಯರು ಹಾಗೂ ಆಪ್ತರ ಸಮ್ಮುಖದಲ್ಲಿ ತಮ್ಮ ಬಹುಕಾಲದ ನಿರೀಕ್ಷೆಗೆ ತೆರೆ ಎಳೆದಿರುವ ಅವರು, ಮಾಧುರಿ ಸಿಂಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಸಂಭ್ರಮದ ಕ್ಷಣಗಳ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಇತ್ತೀಚೆಗೆ ತಮ್ಮ ಮದುವೆ ಹಾಗೂ ಜೀವನ ಸಂಗಾತಿಯ ಕುರಿತ ನಿರೀಕ್ಷೆಗಳ ಬಗ್ಗೆ ರಾಕೇಶ್ ಅಡಿಗ ಮಾತನಾಡಿದ್ದರು. ತಮ್ಮ ಮನಸ್ಸಿಗೆ ಇಷ್ಟವಾಗುವ ಹುಡುಗಿ ಸಿಕ್ಕಿದ್ದಾರೆ ಎನ್ನುವುದಕ್ಕಿಂತ, ಬದುಕಿನಲ್ಲಿ ತಮಗೆ ಅಗತ್ಯವಿರುವ ವ್ಯಕ್ತಿ ದೊರೆತಿದ್ದಾರೆ ಎಂದು ಹೇಳಿಕೊಂಡಿದ್ದರು.
ನನಗೆ ಬೇಕಾದಂತಹ ಹುಡುಗಿ ಸಿಕ್ಕಿದ್ದಾರೆ ಎನ್ನುವುದಕ್ಕಿಂತ, ನನ್ನ ಜೀವನಕ್ಕೆ ಅವಶ್ಯಕವಾಗಿರುವ ವ್ಯಕ್ತಿ ಸಿಕ್ಕಿದ್ದಾರೆ. ನಾನು ಉತ್ತಮ ವ್ಯಕ್ತಿಯಾಗಲು ಯಾವ ರೀತಿಯ ಸಂಗಾತಿ ಬೇಕೋ, ಅಂತಹ ಹುಡುಗಿ ಸಿಕ್ಕಿದ್ದಾರೆ” ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅವರ ಈ ಮಾತುಗಳ ಬೆನ್ನಲ್ಲೇ ಮದುವೆ ವಿಚಾರ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ರಾಕೇಶ್ ಅಡಿಗ ಹಾಗೂ ಮಾಧುರಿ ಸಿಂಗ್ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ಇಬ್ಬರೂ ಪರಸ್ಪರ ಉಂಗುರ ಬದಲಿಸಿಕೊಂಡಿದ್ದು, ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಕಪ್ಪು ಬಣ್ಣದ ಶೆರ್ವಾನಿಯಲ್ಲಿ ರಾಕೇಶ್ ಮಿಂಚುತ್ತಿದ್ದು, ಕ್ರೀಮ್ ಬಣ್ಣದ ಲೆಹೆಂಗಾ ಧರಿಸಿದ್ದ ಮಾಧುರಿ ಅವರಿಗೆ ಉಂಗುರ ತೊಡಿಸಿದ್ದಾರೆ. ಅಷ್ಟೇ ಅಲ್ಲದೆ, ಮೊಣಕಾಲೂರಿ ಪ್ರೇಮ ನಿವೇದನೆ ಮಾಡಿರುವ ಕ್ಷಣವೂ ಫೋಟೋಗಳಲ್ಲಿ ಸೆರೆಯಾಗಿದೆ.
ನಿಶ್ಚಿತಾರ್ಥದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಮಾಧುರಿ ಸಿಂಗ್ ಅವರ ವೈಯಕ್ತಿಕ ಹಿನ್ನೆಲೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ರಾಕೇಶ್ ಅಡಿಗ ಅವರು 2009ರಲ್ಲಿ ತೆರೆಕಂಡ 'ಜೋಶ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಬಳಿಕ 'ಮನಸಾಲಜಿ', 'ಪರಿ', 'ಯಾರೇ ಕೂಗಾಡಲಿ', 'ನಂದ ಗೋಕುಲ', 'ಮಂದಹಾಸ', 'ಕರ್ನಾಟಕ ಅಯೋಧ್ಯಪುರಂ', 'ಕೋಟಿಗೊಬ್ಬ ಲವ್ ಸ್ಟೋರಿ', 'ಪ್ರೀತಿಯಿಂದ', 'ಮಂಡ್ಯ ಟು ಮುಂಬೈ', 'ನಟೋರಿಯಸ್', 'ಡವ್' ಹಾಗೂ 'ನೈಟ್ ಔಟ್' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಲೂಸ್ ಮಾದ ಯೋಗಿ ಅಭಿನಯದ 'ಅಲೆಮಾರಿ' ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸುವ ಮೂಲಕ ತಮ್ಮ ನಟನಾ ಸಾಮರ್ಥ್ಯದ ಮತ್ತೊಂದು ಆಯಾಮವನ್ನು ಪರಿಚಯಿಸಿದ್ದರು.
ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್'ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಇತ್ತೀಚೆಗೆ 'ನಾನು ಮತ್ತು ಗುಂಡ 2' ಚಿತ್ರದಲ್ಲೂ ಕಾಣಿಸಿಕೊಂಡಿರುವ ರಾಕೇಶ್ ಅಡಿಗ, ಸಿನಿಮಾ ಬದುಕಿನ ಜೊತೆಗೆ ಇದೀಗ ವೈಯಕ್ತಿಕ ಜೀವನದಲ್ಲೂ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ.