ಸಮಂತಾ ಬಾಳಲ್ಲಿ 'ದೇವ್' ಆಗಮನ: ನಿಡಿಮೋರು ದಂಪತಿಗೆ ಗಂಡು ಮಗು ಜನನ

ಮಗುವಿನ ಆಗಮನದ ಸುದ್ದಿಯನ್ನು ಮುದ್ದಾದ ಫೋಟೊ ಮೂಲಕ ಸಮಂತಾ ಪ್ರಕಟಿಸಿದ್ದಾರೆ. ಫೋಟೊದಲ್ಲಿ ಪೋಷಕರು ತಮ್ಮ ಪುಟ್ಟ ಮಗುವಿನ ಕೈಬೆರಳುಗಳನ್ನು ಪ್ರೀತಿಯಿಂದ ಹಿಡಿದುಕೊಂಡಿರುವ ದೃಶ್ಯವಿದೆ. ಇದು ಕುಟುಂಬವಾಗಿ ಅವರ ಹೊಸ ಜೀವನದ ಸುಂದರ ಕ್ಷಣವನ್ನು ತೆರೆದಿಟ್ಟಿದೆ.
Baby boy to Samantha Ruth Prabhu
ಸಮಂತಾ ರುತ್ ಪ್ರಭು-ರಾಜ್ ನಿಡುಮೋರು ದಂಪತಿಗೆ ಗಂಡು ಮಗು ಜನನ
Updated on: 

ನಟಿ ಸಮಂತಾ ರುತ್ ಪ್ರಭು ಮತ್ತು ಚಿತ್ರ ನಿರ್ದೇಶಕ ರಾಜ್ ನಿಡಿಮೋರು ದಂಪತಿಗೆ ಗಂಡು ಮಗು ಜನಿಸಿದೆ. ಈ ಖುಷಿಯ ವಿಚಾರವನ್ನು ಇಂದು ಶುಕ್ರವಾರ ಸಮಂತಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನವಜಾತ ಶಿಶುವಿನ ಮೊದಲ ಫೋಟೊವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಮಗುವಿನ ಆಗಮನದ ಸುದ್ದಿಯನ್ನು ಮುದ್ದಾದ ಫೋಟೊ ಮೂಲಕ ಸಮಂತಾ ಪ್ರಕಟಿಸಿದ್ದಾರೆ. ಫೋಟೊದಲ್ಲಿ ಪೋಷಕರು ತಮ್ಮ ಪುಟ್ಟ ಮಗುವಿನ ಕೈಬೆರಳುಗಳನ್ನು ಪ್ರೀತಿಯಿಂದ ಹಿಡಿದುಕೊಂಡಿರುವ ದೃಶ್ಯವಿದೆ. ಇದು ಕುಟುಂಬವಾಗಿ ಅವರ ಹೊಸ ಜೀವನದ ಸುಂದರ ಕ್ಷಣವನ್ನು ತೆರೆದಿಟ್ಟಿದೆ.

ಮಗು ಹುಟ್ಟಿದ ದಿನವೇ ಹೆಸರನ್ನೂ ಇಟ್ಟಿದ್ದಾರೆ. ನಮ್ಮ ಮುದ್ದಾದ ಗಂಡು ಮಗು ದೇವ್ ನಿಡಿಮೋರು. 19.11.2026. ನಮ್ಮ ಹೃದಯಗಳು ಹಿಂದೆಂದೂ ಇಷ್ಟು ಸಂತೋಷದಿಂದಿರಲಿಲ್ಲ. ಸಮಂತಾ ಮತ್ತು ರಾಜ್" ಎಂದು ಫೋಟೊಗೆ ಶೀರ್ಷಿಕೆ ನೀಡಿದ್ದಾರೆ.

ಸಿನಿಮಾ ರಂಗದ ಗಣ್ಯರಿಂದ, ಅಭಿಮಾನಿಗಳಿಂದ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಟರಾದ ವರುಣ್ ಧವನ್, ತಮನ್ನಾ ಭಾಟಿಯಾ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿ, ಮಗುವಿಗೆ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಸಮಂತಾ ಮತ್ತು ರಾಜ್ ತಮ್ಮ ಮನೆಯಲ್ಲಿ ಪೂಜಾ ಕಾರ್ಯಕ್ರಮ ಆಯೋಜಿಸಿದ್ದರು. ಆಪ್ತ ಕುಟುಂಬ ಸದಸ್ಯರು ಈ ಖಾಸಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದ ಕೆಲವು ಫೋಟೊಗಳನ್ನು ಸಮಂತಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಕಳೆದ ಜೂನ್‌ನಲ್ಲಿ ತಮ್ಮ ನಿರ್ಮಾಣದ ಚಿತ್ರ ಮಾ ಇಂಟಿ ಬಂಗಾರಂ ಯಶಸ್ಸಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಮಂತಾ ತಾನು ಗರ್ಭವತಿ ಎಂಬ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದರು. ಈ ಚಿತ್ರ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿತ್ತು.

Baby boy to Samantha Ruth Prabhu
ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಮಂತಾ ರುತ್ ಪ್ರಭು-ರಾಜ್ ನಿಡಿಮೋರು; ಪೂಜೆ ಸಲ್ಲಿಸಿದ ಸ್ಟಾರ್ ದಂಪತಿ!

ಸಮಂತಾ ಮತ್ತು ರಾಜ್ ನಿಡಿಮೋರು ಪ್ರೇಮಕಥೆ

ಸಮಂತಾ ಮತ್ತು ರಾಜ್ ಅವರ ಸಂಬಂಧ ವೃತ್ತಿಪರ ಒಡನಾಟದಿಂದ ಆರಂಭವಾಗಿತ್ತು. 2021ರಲ್ಲಿ ಬಿಡುಗಡೆಯಾದ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯಲ್ಲಿ ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸರಣಿಯಲ್ಲಿ ಸಮಂತಾ ರಜ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ವರುಣ್ ಧವನ್ ಅಭಿನಯದ ಸಿಟಾಡೆಲ್: ಹನಿ ಬನ್ನಿ ಸರಣಿಯಲ್ಲೂ ಇಬ್ಬರೂ ಮತ್ತೆ ಒಟ್ಟಿಗೆ ಕೆಲಸ ಮಾಡಿದ್ದರು.

2024ರಲ್ಲಿ ಇಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂಬ ವದಂತಿಗಳು ಹರಿದಾಡಲಾರಂಭಿಸಿದವು. ಈ ವೇಳೆ ಇಬ್ಬರೂ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ತಮ್ಮ ಪ್ರವಾಸ ಮತ್ತು ಭೇಟಿಗಳ ಫೋಟೊಗಳನ್ನೂ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. 2025ರ ಮೇ ತಿಂಗಳಲ್ಲಿ ವಿಮಾನ ಪ್ರಯಾಣದ ವೇಳೆ ಸಮಂತಾ ರಾಜ್ ಅವರ ಭುಜದ ಮೇಲೆ ತಲೆಯಿಟ್ಟು ವಿಶ್ರಾಂತಿ ಪಡೆಯುತ್ತಿದ್ದ ಫೋಟೊ ಅಭಿಮಾನಿಗಳ ಗಮನ ಸೆಳೆದಿತ್ತು.

ಅಮೆರಿಕದ ಡೆಟ್ರಾಯಿಟ್‌ನಲ್ಲಿ ನಡೆದ ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕಾ (TANA) ಕಾರ್ಯಕ್ರಮದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಮೇಲೆ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.

ಸಮಂತಾ ಅವರ ಮೊದಲ ನಿರ್ಮಾಣದ ಚಿತ್ರ ಶುಭಂನಲ್ಲೂ ರಾಜ್ ಸೃಜನಶೀಲ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದರು.

ಕಳೆದ ವರ್ಷ ಡಿಸೆಂಬರ್ 1ರಂದು ರಾಜ್ ನಿಡಿಮೋರು ಅವರನ್ನು ಸಮಂತಾ ವಿವಾಹವಾದರು. ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ ಆಪ್ತರ ಸಮ್ಮುಖದಲ್ಲಿ ಖಾಸಗಿ ಸಮಾರಂಭದಲ್ಲಿ ಇವರ ವಿವಾಹ ನೆರವೇರಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X