ವಾಲ್ಮೀಕಿ ರಾಮಾಯಣದ ಮೂಲ ಕಥೆ ತಿರುಚಿದ ಆರೋಪ: ರಣಬೀರ್, ಯಶ್ ನಟನೆಯ ಸಿನಿಮಾ ಬ್ಯಾನ್‌ಗೆ VHP ಪಟ್ಟು

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ರಾಮಾಯಣ ಚಿತ್ರದಲ್ಲಿ ರಾವಣನನ್ನು ವೈಭವೀಕರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಗಂಭೀರ ಆರೋಪ ಮಾಡಿದ್ದು, ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನು ರದ್ದುಗೊಳಿಸಿ ತಕ್ಷಣವೇ ಪ್ರದರ್ಶನವನ್ನು ನಿಲ್ಲಿಸುವಂತೆ ಆಗ್ರಹಿಸಿದೆ. ಆ ಕುರಿತ ವರದಿ ಇಲ್ಲಿದೆ:
Ramayana Part 1
ರಾಮಾಯಣOnline Desk
Updated on: 

ನವದೆಹಲಿ: ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’ ಸಿನಿಮಾಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ. ಚಿತ್ರದಲ್ಲಿ ಮೂಲ ಕಥೆಯನ್ನು ತಿರುಚಲಾಗಿದೆ ಮತ್ತು ರಾವಣನ ಪಾತ್ರವನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್ (VHP), ಈ ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನು ರದ್ದುಗೊಳಿಸಿ, ತಕ್ಷಣವೇ ಪ್ರದರ್ಶನವನ್ನು ನಿಷೇಧಿಸಬೇಕು ಎಂದು ಪಟ್ಟು ಹಿಡಿದಿದೆ. ಮಹರ್ಷಿ ವಾಲ್ಮೀಕಿ ರಾಮಾಯಣದ ಪ್ರಮುಖ ಘಟನೆಗಳನ್ನು ಕೈಬಿಟ್ಟು, ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂಬುದು ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಬಜರಂಗ್ ಲಾಲ್ ಬಾಗ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ವಿಎಚ್‌ಪಿ ಮಾಡಿರುವ ಪ್ರಮುಖ ಆರೋಪಗಳೇನು?

  • ರಾವಣನಿಗೆ ನಾಯಕನ ಪಟ್ಟ: ಅಹಂಕಾರದಿಂದ ಎಲ್ಲಾ ಜೀವಿಗಳನ್ನು ಪೀಡಿಸುತ್ತಿದ್ದ ಅಧಾರ್ಮಿಕ ರಾವಣನನ್ನು ಚಿತ್ರದಲ್ಲಿ "ಶೋಷಿತರ ವಿಮೋಚಕ" ಎಂಬಂತೆ ವೈಭವೀಕರಿಸಿ ರಾಜಕೀಯ ನಿರೂಪಣೆ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ ಎಂದು ಬಾಗ್ರಾ ಆರೋಪಿಸಿದ್ದಾರೆ.

  • ಮೂಲ ಕಥೆಯ ತಿರುಚುವಿಕೆ ಮತ್ತು ಕಾಲ್ಪನಿಕ ಘಟನೆಗಳು: ಮಹರ್ಷಿ ವಾಲ್ಮೀಕಿ ರಚಿಸಿದ ಮೂಲ ರಾಮಾಯಣದ ಅನೇಕ ಸತ್ಯಾಂಶಗಳನ್ನು ವಿಕೃತಗೊಳಿಸಲಾಗಿದೆ, ಕಪೋಲಕಲ್ಪಿತ ದೃಶ್ಯಗಳನ್ನು ಸೇರಿಸಲಾಗಿದೆ ಹಾಗೂ ಮೂಲ ಕಥೆಯ ಹಲವು ಪ್ರಮುಖ ಪಾತ್ರಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ದೂರಿದ್ದಾರೆ.

  • ಶ್ರೀರಾಮನ ಪಯಣದ ಚಿತ್ರಣಕ್ಕೆ ಆಕ್ಷೇಪ: ಧರ್ಮ ಸ್ಥಾಪನೆಯ ಶ್ರೀರಾಮನ ಮಹಾನ್ ಪಯಣವನ್ನು ಕೇವಲ ವೈಯಕ್ತಿಕ ಸೇಡಿನ ಕಥೆಯಂತೆ ಬದಲಾಯಿಸಲಾಗಿದೆ ಮತ್ತು ಇದು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟುಮಾಡಿದೆ ಎಂದು ವಿಎಚ್‌ಪಿ ಕಿಡಿಕಾರಿದೆ.

Ramayana Part 1
ಸ್ಟಾರ್​ಗಳಿಲ್ಲ, ಬಿಗ್​ ಬಜೆಟ್ ಅಂತೂ ಇಲ್ವೇ ಇಲ್ಲ; ಪ್ರೇಕ್ಷಕರೇ ಸಾಥ್: ರಾಮಾಯಣಗೆ 'ಹನುಮಾನ್ ಅಂಶ್' ನಿರ್ದೇಶಕ ಟಾಂಗ್?

ಮುಂದುವರೆದು, ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಈ ಚಿತ್ರಕ್ಕೆ ನೀಡಿರುವ ಸೆನ್ಸಾರ್ ಪ್ರಮಾಣಪತ್ರವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ ಬಜರಂಗ್ ಲಾಲ್ ಬಾಗ್ರಾ, ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕುವವರೆಗೂ ದೇಶಾದ್ಯಂತ ಚಿತ್ರದ ಪ್ರದರ್ಶನವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

VHP general secretary Bajrang Lal Bagra
ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಬಜರಂಗ್ ಲಾಲ್ ಬಾಗ್ರಾ Facebook

ಏತನ್ಮಧ್ಯೆ, ವಿಎಚ್‌ಪಿಗೂ ಮುನ್ನ ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಇತರ ಸಂಘಟನೆಗಳು ಸಹ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಚಿತ್ರದಲ್ಲಿ ರಾವಣನನ್ನು ಬಡವರಿಗೆ ಚಿನ್ನದ ಮನೆಗಳನ್ನು ನೀಡುವ ರಕ್ಷಕನಂತೆ ತೋರಿಸಲಾಗಿದೆ ಮತ್ತು ಲಕ್ಷ್ಮಣನ ಪಾತ್ರವನ್ನು ಸೂಕ್ತವಾಗಿ ಕಟ್ಟಿಕೊಟ್ಟಿಲ್ಲ ಎಂದು ಆರೋಪಿಸಿ ಚಿತ್ರ ಬಹಿಷ್ಕರಿಸುವಂತೆ ಕರೆ ನೀಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X