

ಹಲವು ಸಿನಿಮಾ, ಧಾರಾವಾಹಿ ಹಾಗೂ ನಾಟಕಗಳಲ್ಲಿ ಅಭಿನಯಿಸಿ ಜನರ ಮನ ಗೆದ್ದಿದ್ದ ಹಿರಿಯ ಕಲಾವಿದೆ ಲಲಿತಮ್ಮ ಅವರು ಭಾನುವಾರ ನಿಧನರಾಗಿದ್ದಾರೆ.
ಕಳೆದ ಎರಡೂವರೆ ತಿಂಗಳಿನಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಲಲಿತಮ್ಮ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ಮತ್ತಷ್ಟು ಹದಗೆಟ್ಟಿತ್ತು.
ಅನಾರೋಗ್ಯದ ಸಂದರ್ಭದಲ್ಲಿ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಕಷ್ಟದ ಪರಿಸ್ಥಿತಿಯಲ್ಲಿದ್ದ ಅವರಿಗೆ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಯ ನೀಡಿತ್ತು. ಕಳೆದ ಹತ್ತು ದಿನಗಳಿಂದ ವೃದ್ಧಾಶ್ರಮದಲ್ಲೇ ಅವರಿಗೆ ಚಿಕಿತ್ಸೆ ಹಾಗೂ ಆರೈಕೆ ನೀಡಲಾಗುತ್ತಿತ್ತು.
ಲಲಿತಮ್ಮ ಅವರ ನಿಧನವನ್ನು ‘ಅಮ್ಮನ ಮಡಿಲು ಟ್ರಸ್ಟ್’ ಖಚಿತಪಡಿಸಿದೆ. ಟ್ರಸ್ಟ್‌ನ ಶಶಿಕಲಾ ಅವರು ವಿಡಿಯೋ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ, “ಲಲಿತಮ್ಮ ಅವರು 180ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದರು. ‘ರಂಗೋಲಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಇಂದು ಅವರು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸಂತಾಪ ಸೂಚಿಸಿದ್ದಾರೆ.
ನಟ ದರ್ಶನ್ ಅಭಿನಯದ ‘ಸುಂಟರಗಾಳಿ’ ಸಿನಿಮಾದಲ್ಲಿ ಲಲಿತಮ್ಮ ಅವರು ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಮೂಲಕ ಅವರಿಗೆ ಅಪಾರ ಜನಪ್ರಿಯತೆ ದೊರೆತಿತ್ತು. ಬಳಿಕ ‘ಜಂಗ್ಲಿ’, ‘ಲೈಫು ಇಷ್ಟೇನೆ’ ಸೇರಿದಂತೆ ಹಲವು ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದರು.
ರಂಗಭೂಮಿಯಲ್ಲೂ ಲಲಿತಮ್ಮ ಅವರಿಗೆ ಸುದೀರ್ಘ ಅನುಭವವಿತ್ತು. 180ಕ್ಕೂ ಅಧಿಕ ನಾಟಕಗಳಲ್ಲಿ ಅವರು ಅಭಿನಯಿಸಿದ್ದರು. ‘ರಂಗೋಲಿ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲೂ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದರು.