ಬೆಂಗಳೂರು: ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿ ಅಂದರೆ ಅದು ಯಶ್ ಮತ್ತು ರಾಧಿಕಾ ಪಂಡಿತ್. ಅದರಲ್ಲೂ, ಈ ಜೋಡಿ ನಟನೆಯ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾ ಬಿಡುಗಡೆಯಾದಾಗ ರಾಮಾಚಾರಿ ಮತ್ತು ದಿವ್ಯಾ ಪಾತ್ರಗಳು ಯುವಮನಸ್ಸುಗಳನ್ನು ಹುಚ್ಚೆದ್ದು ಕುಣಿಸಿದ್ದವು. ರಾಮಾಚಾರಿಯಂತಹ ಕೋಪಿಷ್ಟನಾದರೂ ಅಪ್ಪಟ ಪ್ರೀತಿ ಮಾಡುವ ಹುಡುಗ ಬೇಕು ಎಂದು ಹುಡುಗಿಯರು, ದಿವ್ಯಾಳಂತೆ ಜೊತೆಯಾಗಿ ನಿಲ್ಲುವ ಹುಡುಗಿ ಬೇಕು ಎಂದು ಹುಡುಗರು ಬಯಸುತ್ತಾರೆ. ಆದರೆ, ತೆರೆಯಮೇಲಷ್ಟೇ ಅಲ್ಲದೇ, ನಂದಗೋಕುಲದ ಈ ಜೋಡಿಯ ಕೆಮಿಸ್ಟ್ರಿ ನಿಜ ಜೀವನದಲ್ಲೂ ಮಧುರ್ಯವಾಗಿದೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ರಾಮಾಯಣ ಚಿತ್ರದ ಪ್ರಚಾರದ ವೇಳೆ ನಟ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಅವರ ಬಗ್ಗೆ ಆಡಿರುವ ಮಾತುಗಳೇ ಸಾಕ್ಷಿ. ಆ ಕುರಿತ ವರದಿ ಇಲ್ಲಿದೆ:
ಮನೆಯಲ್ಲಿ ನಾನು ಬರೀ ರಾಧಿಕಾಪತಿ
ಬೆಂಗಳೂರಿನಲ್ಲಿ ನಡೆದ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದ ಭವ್ಯ ಪ್ರಚಾರ ಕಾರ್ಯಕ್ರಮದಲ್ಲಿ ನಟ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಅವರ ಬಗ್ಗೆ ಆಡಿರುವ ಮಾತುಗಳು ದೇಶಾದ್ಯಂತ ಭಾರಿ ವೈರಲ್ ಆಗಿವೆ. ಚಿತ್ರದ ಸಹ-ನಿರ್ಮಾಪಕ ಹಾಗೂ ರಾವಣನ ಪಾತ್ರಧಾರಿಯಾಗಿ ವೇದಿಕೆಯ ಮೇಲೇರಿದ ಯಶ್, ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಪತ್ನಿ ರಾಧಿಕಾ ಅವರನ್ನು ನೋಡಿ ಅತ್ಯಂತ ಭಾವುಕರಾಗಿ ಮತ್ತು ಪ್ರೀತಿಯಿಂದ ಮಾತನಾಡಿದ್ದಾರೆ. ಈ ವೇಳೆ, "ನಾನು ಸಿನಿಮಾಗಳಲ್ಲಿ ರಾಯ ಆಗಲಿ, ರಾವಣನೇ ಆಗಲಿ ಅಥವಾ ರಾಜಾಹುಲಿಯೇ ಆಗಲಿ... ಮನೆಗೆ ಹೋದರೆ ಮಾತ್ರ ನಾನು ರಾಧಿಕಾಪತಿಯೇ!" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅದರಲ್ಲೂ, ಯಶ್ ಆಡಿರುವ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳ ಮನಗೆದ್ದಿವೆ.
ಮನೆಯಲ್ಲಿ ನಾನೊಬ್ಬ ಸಾಮಾನ್ಯ ವ್ಯಕ್ತಿ
ಮುಂದುವರೆದು ಮಾತಾನಾಡಿದ ರಾಕಿಭಾಯ್, "ಚಿತ್ರರಂಗದಲ್ಲಿ ನಾನು ಎಷ್ಟೇ ದೊಡ್ಡ ಸ್ಟಾರ್ ಇರಬಹುದು, ಎಂತಹದ್ದೇ ಶಕ್ತಿಶಾಲಿ ಪಾತ್ರಗಳನ್ನು ಮಾಡಬಹುದು. ಆದರೆ ನನ್ನ ಹೆಂಡತಿ ರಾಧಿಕಾ ಮುಂದೆ ಅವೆಲ್ಲವೂ ನಡೆಯಲ್ಲ. ಮನೆಗೆ ಹೋದ ತಕ್ಷಣ ನಾನೊಬ್ಬ ಸಾಮಾನ್ಯ ಪತಿ" ಎಂದು ನಗುತ್ತಾ ಹೇಳಿದ್ದಾರೆ. ಜೊತೆಗೆ, "ನನ್ನ ಲೈಫ್ನಲ್ಲಿ ರಾಧಿಕಾ ನನ್ನ ದೊಡ್ಡ ಶಕ್ತಿ. ಕಳೆದ ಕೆಲವು ವರ್ಷಗಳಿಂದ ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳು, ಬಿಡುವಿಲ್ಲದ ಕೆಲಸಗಳು ನಡೆದಿವೆ. ಆದರೆ ಅವಳು ಇಂದಿನವರೆಗೂ 'ಈ ಸಿನಿಮಾದಿಂದ ನಮಗೆಷ್ಟು ಲಾಭ ಸಿಗುತ್ತೆ? ನೀನು ಎಷ್ಟು ಹಣ ಮಾಡ್ತೀಯಾ?' ಎಂದು ಒಮ್ಮೆಯೂ ಕೇಳಿಲ್ಲ. ಅವಳು ಕೇಳುವುದು ಕೇವಲ ನನ್ನ ಸಮಯ ಮತ್ತು ಗಮನವನ್ನು ಮಾತ್ರ" ಎಂದು ತಿಳಿಸಿದ್ದಾರೆ.