

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಗೌಡ ನಡುವಿನ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವಿವಾದ ಇದೀಗ ಮುನ್ನೆಲೆಗೆ ಬಂದಿದೆ. ವಿಜಯಲಕ್ಷ್ಮೀ ಹಾಗೂ ಧನ್ವೀರ್ ಸಾಮಾಜಿಕ ಜಾಲತಾಣದಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದರು. ಇಬ್ಬರ ನಡುವಿನ ಮುಸುಕಿನ ಗುದ್ದಾಟ ಈಗ ಬಹಿರಂಗಗೊಂಡಿದೆ. ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ಜಗಳದ ಅಸಲಿ ಸತ್ಯವನ್ನು ದರ್ಶನ್ ಆಪ್ತ ವೇಲು ನಾಯ್ಕರ್ ಬಿಚ್ಚಿಟ್ಟಿದ್ದಾರೆ.
ಇದು ಒಂದೆರೆಡು ವರ್ಷದ ಹಿಂದಿನ ಹಣಕಾಸಿನ ವಿಚಾರ. ವಿಜಯಲಕ್ಷ್ಮಿ ಹಣ ವಾಪಸ್ ಕೊಡುವಂತೆ ಧನ್ವೀರ್ ಗೆ ಕೇಳಿದ್ದರು. ಆ ನಂತರ ವಿಜಯಲಕ್ಷ್ಮಿ ಕರೆ ಮಾಡಿದರೂ ಧನ್ವೀರ್ ಕಾಲ್ ಪಿಕ್ ಮಾಡ್ತಿಲ್ಲ. ಅಷ್ಟೇ ಅಲ್ಲದೆ ಅಂತರ ಕಾಯ್ದುಕೊಳ್ಳುತ್ತಿದ್ದರು. ಹೀಗಾಗಿ ವಿಜಯಲಕ್ಷ್ಮೀ ನನಗೆ ಧನ್ವೀರ್ ಜೊತೆ ಮಾಡುವಂತೆ ಹೇಳಿದ್ದರು. ನಾನು ಧನ್ವೀರ್ ತಂದೆಯ ಜೊತೆ ಸಹ ಮಾತನಾಡಿದ್ದೆ. ಅವರು ಮಗನಿಗೆ ಹೇಳುವುದಾಗಿ ಹೇಳಿದ್ದರು.
ಈ ವಿಷಯ ದರ್ಶನ್‌ಗೂ ಗೊತ್ತಾಯ್ತು. ಹೀಗಾಗಿ ಧನ್ವೀರ್, ವಿಜಯಲಕ್ಷ್ಮೀ ಮತ್ತು ನಾನು ಮೂವರು ಜೈಲಿನಲ್ಲಿ ದರ್ಶನ್ ನ ಭೇಟಿಯಾದೆವು. ಮಾತುಕತೆಯ ಸಂದರ್ಭದಲ್ಲಿ ಹಣವನ್ನು ಏಕೆ ವಾಪಸ್ ಕೊಡಲಿಲ್ಲ ಎಂದು ದರ್ಶನ್ ಪ್ರಶ್ನಿಸಿದ್ದು ಇದಕ್ಕೆ ಧನ್ವೀರ್ ಮರುದಿನವೇ ಹಣ ನೀಡುವುದಾಗಿ ಹೇಳಿದ್ದರು. ಅಲ್ಲದೆ ಹಣವನ್ನು ವೇಲು ನಾಯ್ಕರ್ ಮೂಲಕ ನೀಡುವಂತೆ ದರ್ಶನ್ ಸೂಚಿಸಿದ್ದರು.
ಮತ್ತೆ ಹಣ ಕೇಳಿದಾಗ ಧನ್ವೀರ್ ಈ ವಿಷಯದಲ್ಲಿ ಯಾರೂ ಮಧ್ಯಪ್ರವೇಶಿಸಬಾರದು ಎಂದು ಹೇಳಿದ್ದರು. ಹಣವನ್ನು ವಾಪಸ್ ಕೇಳಿದಾಗ ಕೋಪದಿಂದ ಮಾತನಾಡಿದ್ದು ಏಕವಚನದಲ್ಲಿ ನಿಂದಿಸಿದರು ಎಂದು ವೇಲು ನಾಯ್ಕರ್ ಆರೋಪಿಸಿದ್ದಾರೆ.