

ಮಾಜಿ ಕಿಕ್‌ಬಾಕ್ಸರ್ ಹಾಗೂ ನಟಿ ರಿತಿಕಾ ಸಿಂಗ್ ಅವರು ತಮ್ಮ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ನಕಲಿ ಫೇಸ್‌ಬುಕ್ ಪುಟವೊಂದರ ಬಗ್ಗೆ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಪುಟವು 'ಪೇಯ್ಡ್ ಸಬ್‌ಸ್ಕ್ರಿಪ್‌ಷನ್'(ಹಣ ಪಾವತಿಸುವ ಚಂದಾದಾರಿಕೆ) ಮಾದರಿಯ ಮೂಲಕ ಹಣ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದ ನಟಿ, ಗ್ಲಾಮರಸ್ ವಿಡಿಯೋಗಳಿಗಾಗಿ ತಿಂಗಳಿಗೆ 400 ರೂಪಾಯಿ ಪಡೆಯುತ್ತಿದ್ದಾರೆ. ಜನರು ಸಹ ಯೋಚಿಸದೆ ಹಣ ಪಾವತಿಸುತ್ತಿರುವುದನ್ನು ಕಂಡು ನಟಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ರಿತಿಕಾ ಸಿಂಗ್, "ಪ್ರಸ್ತುತ ಬ್ಲೂ ಟಿಕ್ (Blue Tick) ಹೊಂದಿರುವ ಈ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಮಾತ್ರ ನನ್ನ ಏಕೈಕ ಅಧಿಕೃತ ಖಾತೆಯಾಗಿದೆ ಎಂದು ಹೇಳಿದ್ದಾರೆ.
ಇಲ್ಲಿ ಹಂಚಿಕೊಳ್ಳಲಾಗುವ ಪ್ರತಿಯೊಂದು ಪೋಸ್ಟ್ ಅನ್ನು ನಾನೇ ಖುದ್ದಾಗಿ ಶೇರ್ ಮಾಡುತ್ತೇನೆ. ಇದನ್ನು ಹೊರತುಪಡಿಸಿ ಫೇಸ್‌ಬುಕ್‌ನಲ್ಲಿ ಅಥವಾ ಇತರ ಯಾವುದೇ ವೇದಿಕೆಯಲ್ಲಿ ಸಕ್ರಿಯವಾಗಿರುವ ನಕಲಿ ಖಾತೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ" ಎಂದು ನಟಿ ಸ್ಪಷ್ಟಪಡಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ಸಬ್‌ಸ್ಕ್ರಿಪ್ಷನ್ ದಂಧೆಯ ಬಗ್ಗೆ ವಿವರಣೆ ನೀಡಿದ ನಟಿ, "ನನ್ನ ಹೆಸರಿನಲ್ಲೇ ಫೇಸ್‌ಬುಕ್‌ನಲ್ಲಿ ಪೇಜ್‌ವೊಂದನ್ನು ಆರಂಭಿಸಲಾಗಿದ್ದು, ಅಲ್ಲಿ ತಿಂಗಳಿಗೆ 400 ರೂಪಾಯಿಗಳ ಸಬ್‌ಸ್ಕ್ರಿಪ್ಷನ್ ಮಾಡೆಲ್ ನಡೆಸಲಾಗುತ್ತಿದೆ. ದುರಂತವೆಂದರೆ ಜನರು ಅದಕ್ಕಾಗಿ ಹಣ ನೀಡುತ್ತಿದ್ದಾರೆ! ಅದು ವೆರಿಫೈಡ್ ಪೇಜ್ ಕೂಡ ಅಲ್ಲ, ಬದಲಾಗಿ ನನ್ನ ಹೆಸರನ್ನೇ ತಪ್ಪಾಗಿ ಬರೆಯಲಾಗಿದೆ. ಇಂತಹ ನಕಲಿ ಖಾತೆಗಳಿಗೆ ಹಣ ಪಾವತಿಸುವವರು ದಯವಿಟ್ಟು ತಮ್ಮ ಹಣದ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಿ ಎಂದು ಅಭಿಮಾನಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.