ಪುನೀತ್ ಅಭಿಮಾನಿಗಳಿಗೆ ಕನೆಕ್ಟ್ ಆಗುವ ಮನೋಜ್ಞ ಕ್ಲೈಮ್ಯಾಕ್ಸ್: ಭಜರಂಗಿ2 ಚಿತ್ರವಿಮರ್ಶೆ

ನಮಗೆ ಗೊತ್ತಿಲ್ಲದ ಅದೆಷ್ಟೋ ಸಂಗತಿಗಳು ಈ ಭೂಮಿ ಮೇಲಿದೆ ಎನ್ನುವ ಅರ್ಥದ ಸಾಲುಗಳಿಂದ ತೆರೆದುಕೊಳ್ಳುವ ಎ. ಹರ್ಷ ನಿರ್ದೇಶನದ ಭಜರಂಗಿ2 ಸಿನಿಮಾ ನಾನಾ ವಿಧಗಳಲ್ಲಿ ಪುನೀತ್ ಅಭಿಮಾನಿಗಳಿಗೆ ಕನೆಕ್ಟ್ ಆಗುತ್ತಿದೆ. ಚಿತ್ರದ ಕಡೆಯಲ್ಲಿ ಬರುವ ಹಲವು ದೃಶ್ಯಗಳು, ಸಂಭಾಷಣೆಗಳು, ಪುನೀತ್ ಅಭಿಮಾನಿಗಳಿಗೆ ಸಾಂತ್ವನ ಹೇಳುವಂತಿರುವುದು ಕಾಕತಾಳೀಯ.
ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್

- ಹರ್ಷವರ್ಧನ್ ಸುಳ್ಯ

ಕರುನಾಡು ನಟ ಪುನೀತ್ ರಾಜಕುಮಾರ್ ಅಗಲಿಕೆಯಿಂದ ಶೋಕಸಾಗರದಲ್ಲಿ ಮುಳುಗಿದೆ. ಸಹೋದರ ಶಿವರಾಜ್ ಕುಮಾರ್ ಅವರ ಬಹುನಿರೀಕ್ಷಿತ ಭಜರಂಗಿ2 ಸಿನಿಮಾ ಬಿಡುಗಡೆಯ ದಿನದಂದೇ ನಮ್ಮೆಲ್ಲರ ಅಪ್ಪು ಇಹಲೋಕ ತ್ಯಜಿಸಿದ್ದು ವಿಪರ್ಯಾಸ. ಅಪ್ಪು ಆಸ್ಪತ್ರೆಗೆ ಹೋಗುವ ಕೆಲವೇ ಸಮಯಕ್ಕೆ ಮುಂಚೆ ಭಜರಂಗಿ2 ಸಿನಿಮಾ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿ ಟ್ವೀಟ್ ಮಾಡಿದ್ದರು. 

ನಮಗೆ ಗೊತ್ತಿಲ್ಲದ ಅದೆಷ್ಟೋ ಸಂಗತಿಗಳು ಈ ಭೂಮಿ ಮೇಲಿದೆ ಎನ್ನುವ ಅರ್ಥದ ಸಾಲುಗಳಿಂದ ತೆರೆದುಕೊಳ್ಳುವ ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ, ಎ. ಹರ್ಷ ನಿರ್ದೇಶನದ ಭಜರಂಗಿ2 ಸಿನಿಮಾ ನಾನಾ ವಿಧಗಳಲ್ಲಿ ಪುನೀತ್ ಅಭಿಮಾನಿಗಳಿಗೆ ಕನೆಕ್ಟ್ ಆಗುತ್ತಿದೆ. ಚಿತ್ರದಲ್ಲಿ ಬರುವ ಹಲವು ದೃಶ್ಯಗಳು, ಸಂಭಾಷಣೆಗಳು, ಪಾತ್ರಧಾರಿಗಳಲ್ಲಿ ಪುನೀತ್ ಅಭಿಮಾನಿಗಳು ಸಾಂತ್ವನ ಕಂಡುಕೊಳ್ಳುತ್ತಿದ್ದಾರೆ. 

ಫ್ಲ್ಯಾಷ್ ಬ್ಯಾಕ್ ನಲ್ಲಿ ನಿರೂಪಣೆ

ಒಂದೂರಿನಿಂದ ಇನ್ನೊಂದೂರಿಗೆ ಹೊರಟಿರುವ ಹಳ್ಳಿಗರ ಹಿಂಡು ಕತ್ತಲಾಗಿದ್ದರಿಂದ ಕಾಡೊಂದರ ದೇಗುಲದ ಆವರಣದಲ್ಲಿ ವಿಶ್ರಾಂತಿ ಪಡೆಯಲು ಮುಂದಾಗುತ್ತದೆ. ಈ ಸಮಯದಲ್ಲಿ ಆ ದೇಗುಲದ ಐತಿಹ್ಯದ ಬಗ್ಗೆ ಕುತೂಹಲ ವ್ಯಕ್ತಪಡಿಸುತ್ತಾರೆ. ಆಗ ಅಲ್ಲಿದ್ದ ವೃದ್ಧ ಸ್ವಾಮೀಜಿ ಆ ದೇಗುಲ ಮತ್ತು ಅದರ ನಿರ್ಮಾಣಕ್ಕೆ ಕಾರಣಕರ್ತನಾದ ಮಹಾಪುರುಷನ ಕಥೆ ಹೇಳಲು ಶುರುವಿಟ್ಟುಕೊಳ್ಳುತ್ತಾರೆ. ಇಡೀ ಸಿನಿಮಾದ ಕಥೆ ಫ್ಲ್ಯಾಷ್ ಬ್ಯಾಕಿನಲ್ಲಿ ಹೇಳಲಾಗಿದೆ.  

ತನ್ನ ಅಕ್ಕ ಅಲಮೇಲಮ್ಮನನ್ನು ನೋಡುವ ಉದ್ದೇಶದಿಂದ ಆಂಜಿ (ಶಿವರಾಜ್ ಕುಮಾರ್) ಮೊದಲ ಬಾರಿಗೆ ಊರಿಗೆ ಕಾಲಿಡುತ್ತಾರೆ. ತಮ್ಮ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳಿಗೆ ಪ್ರಾಮುಖ್ಯತೆ ನೀಡುವುದು ನಿರ್ದೇಶಕ ಹರ್ಷ ಅವರ ಶೈಲಿ. ಅದು ಈ ಸಿನಿಮಾದಲ್ಲೂ ಮುಂದುವರಿದಿದೆ. ಶ್ರುತಿಯಾಗಲಿ, ನಾಯಕಿ ಭಾವನಾ ಆಗಲಿ ಅವರು ತೆರೆ ಮೇಲೆ ಕಾಣಿಸಿಕೊಳ್ಳುವಷ್ಟೂ ಹೊತ್ತು ಗಮನವನ್ನು ಸೆಳೆಯುತ್ತಾರೆ. ಆದರೆ ಈ ಪಾತ್ರ ಪೋಷಣೆ ಕಥೆಯಲ್ಲಿ ಎಷ್ಟರ ಮಟ್ಟಿಗೆ ಪೂರಕವಾಗಿದೆ ಎಂದು ಕೇಳಿದರೆ ಉತ್ತರಿಸುವುದು ಕಷ್ಟ.  

ಆಯುರ್ವೇದ ಔಷಧ ಪದ್ಧತಿ

ಚಿತ್ರದ ಮೂಲಕ ಪಾರಂಪರಿಕ ಆಯುರ್ವೇದ ಔಷಧ ಪದ್ಧತಿ ಮನುಷ್ಯನ ಲೋಭ, ದುರಾಸೆಗಳಿಂದಾಗಿ ಯಾವ ರೀತಿ ನಲುಗುತ್ತಿದೆ ಎನ್ನುವುದನ್ನು ಮಾರ್ಮಿಕವಾಗಿ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಹರ್ಷ. ಮನುಷ್ಯನ ಮನಸ್ಸು ಮರ್ಕಟದಂತೆ, ಚಂಚಲವಾದದ್ದು. ಬಹಳ ಬೇಗ ಕರಪ್ಟ್ ಆಗಿಬಿಡುತ್ತದೆ. ಒಳ್ಲೆಯದನ್ನು ಉಳಿಸಿಕೊಳ್ಳಲು ಮನುಷ್ಯನಿಗೆ ಕಷ್ಟಸಾಧ್ಯ. ಆ ಪರಿಸ್ಥಿತಿಯಲ್ಲೂ ಕಥಾ ನಾಯಕ ಕೇಡಿಗರಾಗಿ ಬದಲಾದ ತನ್ನವರ ವಿರುದ್ಧವೇ ಮನುಕುಲದ ಒಳಿತಿಗಾಗಿ ಕಾದಾಡುತ್ತಾನೆ.

ಸಿನಿಮಾದಲ್ಲಿ ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಫ್ಲ್ಯಾಷ್ ಬ್ಯಾಕ್ ಮೂಲಕ ತೆರೆ ಮೇಲೆ ತೋರಿಸಲಾಗುತ್ತದೆ. ಈ ಎರಡು ಕಥೆಗಳಲ್ಲಿ ಭಜರಂಗಿ ಮತ್ತು ಆಂಜಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಿವರಾಜ್ ಕುಮಾರ್ ತಮ್ಮ ಅಭಿಮಾನಿಗಳ ಶಿಳ್ಳೆ ಗಿಟ್ಟಿಸುತ್ತಾರೆ.

ಸಂಗೀತ, ಗ್ರಾಫಿಕ್ಸ್ ಮತ್ತು ಸಂಭಾಷಣೆ

ಸಿನಿಮಾದ ಪ್ರೊಡಕ್ಷನ್ ಶ್ರೀಮಂತವಾಗಿದೆ. ಜೆ. ಸ್ವಾಮಿ ಅವರ ಸಿನಿಮೆಟೋಗ್ರಫಿ ಮತ್ತು ಚಿತ್ರದ ಗ್ರಾಫಿಕ್ಸ್ ಅಚ್ಚುಕಟ್ಟಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಹಾಡುಗಳು ಇಂಪಾಗಿಯೂ, ಹಿನ್ನೆಲೆ ಸಂಗೀತ ಪ್ರೇಕ್ಷಕನನ್ನು ಸೀಟ್ ಮೇಲೆ ಕುಳ್ಳಿರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ರಘು ನಿಡುವಳ್ಳಿ ಚಿತ್ರದ ಸಂಭಾಷಣೆಗೆ ರೋಮಾಂಚನಗೊಳಿಸುವ ಸಾಮರ್ಥ್ಯವಿದೆ. ಕೆಲವೆಡೆ ಅನವಶ್ಯಕ ವಿಜೃಂಭಣೆ ಎನ್ನಿಸಿದರೂ, ಪೈಶಾಚಿಕತೆ ಮೆರೆಯುವ ದೃಶ್ಯಗಳಲ್ಲಿಯೂ, ದೈವೀಕತೆ ಕೋರೈಸುವ ದೃಶ್ಯಗಳಲ್ಲಿಯೂ ಪ್ರೇಕ್ಷಕ ಮೈಮರೆಯುವಂತೆ ಮಾಡುವುದು ಸಂಗೀತ ಮತ್ತು ಸಂಭಾಷಣೆ. 

ಆಂಜಿ ಪಾತ್ರದಲ್ಲಿ ಶಿವರಾಜ್ ಕುಮಾರ್ ಉತ್ತಮವಾಗಿ ಅಭಿನಯ ತೋರಿದ್ದಾರೆ. ಸೌರವ್ ಲೋಕೇಶ್, ವಿಲನ್ ಆರಕನಾಗಿ ನಟಿಸಿರುವ ಚೆಲುವರಾಜ್, ಜಾಗ್ರವ ಪಾತ್ರದಲ್ಲಿ ನಟಿಸಿದ ಪ್ರಸನ್ನ ಅವರ ಅಭಿನಯ ಸಿನಿಮಾ ಮುಗಿದ ಮೇಲೂ ನೆನಪಲ್ಲುಳಿಯುತ್ತದೆ. ತೆರೆ ಮೇಲೆ ಕಾಣಿಸಿಕೊಳ್ಳುವ ಪಾತ್ರಗಳ ಪೋಷಣೆಯನ್ನು ಮತ್ತವರ ಹಿನ್ನೆಲೆಗಳನ್ನು ಕಾಣಿಸುವಲ್ಲಿ ಇನ್ನಷ್ಟು ಶ್ರಮ ವಹಿಸಬಹುದಿತ್ತು. 

ಒಂದು ದೃಶ್ಯದಲ್ಲಿ ಶಿವರಾಜ್ ಕುಮಾರ್ ಗಂಧದ ಗುಡಿ ರಾಜಕುಮಾರ್ ರಂತೆ ಕಂಡರೆ ಮತ್ತೊಂದೆಡೆ ಕೊಡಲಿ ಹಿಡಿದ ಸಂಪತ್ತಿಗೆ ಸವಾಲ್ ರಾಜಕುಮಾರ್ ಅವರನ್ನು ನೆನಪಿಸುತ್ತಾರೆ. ಸುಧೀಂದ್ರನ ಪಾತ್ರದಲ್ಲಿ ನಟಿಸಿರುವ ಸೌರವ್ ಲೋಕೇಶ್ ಅವರು ವೇಷಭೂಷಣದಲ್ಲಿ ಚಾಣಕ್ಯನನ್ನು ಹೋಲುತ್ತಾರೆ.

ಮೈ ಜುಮ್ಮೆನ್ನಿಸುವ ದೃಶ್ಯಾವಳಿ

ಈ ಸಿನಿಮಾ ಹಲವು ವಿಭಾಗಗಳಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆಯಾದರೂ, ಚಿತ್ರ ನೋಡಲು ಕೇವಲ ಒಂದೇ ಒಂದು ಕಾರಣ ನೀಡಬಹುದಾದರೆ ಅದು ಕ್ಲೈಮ್ಯಾಕ್ಸ್. ಎಲ್ಲವೂ ಮುಗಿದೇ ಹೋಯಿತು. ಒಳ್ಳೆಯತನಕ್ಕೆ ಸೋಲಾಯಿತು ಎನ್ನುವಂತಾದಾಗ ನಾಯಕನ ದೇಹದಿಂದ ಆತ್ಮ ದೂರವಾಗುವ ಹೊತ್ತಿನಲ್ಲಿ ತಪಸ್ ಶಕ್ತಿಯನ್ನು ಹೊಂದಿರುವ ದೈವಸಂಭೂತ ವ್ಯಕ್ತಿ ಸುಧೀಂದ್ರ, ಆ ದೇವರನ್ನೇ ಭೂಮಿಗೆ ಕರೆಸುತ್ತೇನೆ ಎಂದು ಉದ್ಘೋಷಿಸುತ್ತಾನೆ. ನಂತರ ನಡೆಯುವ ದೃಶ್ಯ ಎಂಥವರ ಮೈಯನ್ನೂ ಜುಮ್ಮೆನ್ನಿಸುತ್ತದೆ. ಪ್ರೇಕ್ಷಕರು ಈ ಸಂದರ್ಭದಲ್ಲಿ ಸೀಟಿನಿಂದ ಮೇಲೆದ್ದು ಭಾವಪರವಶತೆಯಿಂದ ಕೈಮುಗಿದರೂ ಅಚ್ಚರಿಯಿಲ್ಲ. 

ಇದೇ ಸಂದರ್ಭದಲ್ಲಿ ವ್ಯಕ್ತಿಗಿಂತ ಆತನ ವಿಚಾರಧಾರೆ ದೊಡ್ಡದು. ವ್ಯಕ್ತಿಗೆ ಸಾವಿದೆ ಆದರೆ ಆತನ ವಿಚಾರಧಾರೆಗೆ ಅಳಿವಿಲ್ಲ ಎನ್ನುವ ಸಂಭಾಷಣೆ ಕೇಳಿಬರುತ್ತದೆ. ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದ ದುಃಖಿತರಾಗಿರುವ ಕರ್ನಾಟಕ ಜನತೆಗೆ ಸದ್ಯ ಬೇಕಿರುವ ಸಾಂತ್ವನ ಈ ಮಾತಿನ ರೂಪದಲ್ಲಿ ಬಂದಂತಿದೆ. ಪುನೀತ್ ಅವರು ಇಂದು ದೈಹಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ತಮ್ಮ ವಿಚಾರಧಾರೆ, ಆದರ್ಶಗಳ ಮೂಲಕ ಶಾಶ್ವತವಾಗಿ ನಮ್ಮೆಲ್ಲರ ಹೃದಯಗಳಲ್ಲಿ ಮನಸ್ಸುಗಳಲ್ಲಿ ನೆಲೆಸಿದ್ದಾರೆ. ಆ ಮೂಲಕ ನಿಜಾರ್ಥದಲ್ಲಿ ಅವರು ಚಿರಂಜೀವಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com