45 Movie Review: ಮ್ಯೂಸಿಕ್ ಮಾಂತ್ರಿಕ ಅರ್ಜನ್ ಜನ್ಯ ಮ್ಯಾಜಿಕ್; ರಾಯಪ್ಪ-ಶಿವಪ್ಪಗೆ ಫುಲ್ ಮಾರ್ಕ್ಸ್; ಪಕ್ಕಾ ಪೈಸಾ ವಸೂಲ್!
45 cinema rating(4 / 5)
'45' ಚಿತ್ರದಲ್ಲಿ ಅರ್ಜುನ್ ಜನ್ಯ ಅವರ ನಿರ್ದೇಶನದ ಮೊದಲ ಪ್ರಯತ್ನ ಯಶಸ್ವಿಯಾಗಿದೆ. ಶಿವರಾಜ್‌ಕುಮಾರ್ ಮತ್ತು ಉಪೇಂದ್ರ ಅವರ ಅಭಿಮಾನಿಗಳಿಗೆ ರೋಮಾಂಚನ ನೀಡುವ ಈ ಚಿತ್ರವು ಗರುಡ ಪುರಾಣದ ತತ್ವಗಳನ್ನು ಆಧರಿಸಿ, ಕರ್ಮ ಮತ್ತು ಪಾಪ-ಪುಣ್ಯದ ಲೆಕ್ಕಾಚಾರವನ್ನು ತೋರಿಸುತ್ತದೆ. ರಾಯಪ್ಪ-ಶಿವಪ್ಪ ಪಾತ್ರಗಳು ಮನಸೂರೆಗೊಳ್ಳುತ್ತವೆ.
ಅರ್ಜುನ್ ಜನ್ಯ ನಿರ್ದೇಶನದ ಮೊಟ್ಟಮೊದಲ 45 ಸಿನಿಮಾ ತೆರೆಕಂಡಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಸಿನಿಮಾವನ್ನು ಅದ್ದೂರಿ ಬಜೆಟ್ ಹಾಗೂ ರಿಚ್ ಲುಕ್‌ನಲ್ಲಿ ಸಿನಿಮಾ ಮಾಡಿದ್ದಾರೆ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಮೋಘವಾಗಿ ನಟಿಸಿದ್ದಾರೆ. 45 ಸ್ಪಷ್ಟವಾಗಿ ಒಂದು ಫ್ಯಾಂಟಸಿಯಾಗಿದೆ, ಇದು ಮಾನವ ಮರಣ ಮತ್ತು ಗರುಡ ಪುರಾಣ, ಕರ್ಮ ಮತ್ತು ಸಾಮಾನ್ಯ ಜೀವನವು ಕಾಸ್ಮಿಕ್ ನ್ಯಾಯದೊಂದಿಗೆ ಹೇಗೆ ಘರ್ಷಣೆ ನಡೆಸುತ್ತದೆ ಎಂಬ ಬಗ್ಗೆ ಸಿನಿಮಾ ಕಥೆಯಿದೆ. ಮಲ್ಟಿ ಸ್ಟಾರರ್ ಹಾಗೂ ಬಿಗ್ ಬಜೆಟ್ ಸಿನಿಮಾದಲ್ಲಿ ಗ್ರಾಫಿಕ್ಸ್ ತುಸು ಹೆಚ್ಚಾಗಿಯೇ ಇದೆ.
ವಿನಯ್ (ರಾಜ್ ಬಿ ಶೆಟ್ಟಿ) ಓರ್ವ ಸಾಮಾನ್ಯ ಐಟಿ ಉದ್ಯೋಗಿ. ನಿತ್ಯ ಕಚೇರಿ ಹೋಗಿ ಬರುವ ಕಾಯಕ ಅವನದ್ದು. ತಾಯಿ ಹಾಗೂ ಪ್ರೀತಿಸಿದಾಕೆ ಆತನ ಪ್ರಪಂಚ. ಮದುವೆ, ಮಕ್ಕಳು ಆತನ ಕನಸು. ವಿನಯ್ ರೋಸಿ ಎಂಬ ನಾಯಿಗೆ ಡಿಕ್ಕಿ ಹೊಡೆದು ಉಂಟಾಗುವ ಅಪಘಾತವು ಜೀವನ ಮತ್ತು ಸಾವಿನ ನಡುವಿನ ರೇಖೆಯನ್ನು ಮಸುಕುಗೊಳಿಸುವ ಘಟನೆಗಳ ಸರಣಿ ಆರಂಭವಾಗುತ್ತದೆ. ವಿನಯ್ ಗೆ ಬೀಳುವ ಕೆಟ್ಟ ಕನಸಿನಿಂದ ಸಿನಿಮಾ ಆರಂಭವಾಗುತ್ತದೆ. ಈ ಪ್ರಪಂಚದ ಒಳಗೆ ರಾಯಪ್ಪ (ಉಪೇಂದ್ರ) ಹಾಗೂ ಶಿವಪ್ಪನ (ಶಿವರಾಜ್‌ಕುಮಾರ್) ಆಗಮನ ಆಗುತ್ತದೆ. ನಿಜ ಯಾವುದು-ಸುಳ್ಯಾವುದು ಎಂದು ಅರ್ಥೈಸಿಕೊಳ್ಳಲು ಆತ ವಿಫಲನಾಗುತ್ತಾನೆ. ಅಲ್ಲಿಂದ ಆತನ ಒದ್ದಾಟ ಶುರುವಾಗುತ್ತದೆ. 45 ದಿನಗಳ ಆಟ ಕೂಡ ಆರಂಭವಾಗುತ್ತದೆ. ಚಿತ್ರದಲ್ಲಿ ಗರುಡ ಪುರಾಣದ ಉಲ್ಲೇಖ ಇದೆ. ಕರ್ಮಫಲ, ಪಾಪ-ಪುಣ್ಯದ ಲೆಕ್ಕಾಚಾರ ಇದೆ. ತತ್ವ ಇದೆ, ಫಿಲಾಸಫಿ ಇದೆ, ಸಂದೇಶವೂ ಇದೆ. ಅಲ್ಲಿ ರಾಯಪ್ಪ-ಶಿವಪ್ಪ ಹೇಗೆ ಬರುತ್ತಾರೆ? ಏಕೆ ಬರುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕು.
45 ಚಿತ್ರದಲ್ಲಿ ಕೊಂಚ ಲೇಟ್ ಆಗಿ ಎಂಟ್ರಿಕೊಟ್ಟರೂ ಶಿವಣ್ಣನ ಪಾತ್ರ ಲೇಟೆಸ್ಟ್ ಆಗಿದೆ. 45 ಚಿತ್ರದಲ್ಲಿ ಶಿವಣ್ಣ ನಾನಾವತಾರ ತಾಳಿದ್ದಾರೆ. ಶಿವಣ್ಣನ ಅವತಾರಗಳಿಂದ ಅಭಿಮಾನಿಗಳಿಗೆ ರೋಮಾಂಚನ ಆಗುವುದು ಖಚಿತ. ಇನ್ನೂ ಉಪೇಂದ್ರ ಡಿಫರೆಂಟ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ನಾಯಕ ಎಷ್ಟು ಮುಖ್ಯನೋ? ಖಳ ನಾಯಕ ಕೂಡ ಅಷ್ಟೇ ಮುಖ್ಯ. ತನಗೆ ಕೊಟ್ಟಿರೋ ಪಾತ್ರಕ್ಕೆ 100 ಪರ್ಸೆಂಟ್ ಜೀವ ತುಂಬಿರೋದು ಉಪೇಂದ್ರ, ಉಪೇಂದ್ರ ಅವರ ಎಂಟ್ರಿ, ವೇಷ ಭೂಷಣ ಮತ್ತು ಆ್ಯಕ್ಟಿಂಗ್ ಥ್ರಿಲ್ಲಿಂಗ್ ಅನುಭವ ನೀಡಿದೆ. ಇನ್ನೂ ಉಪೇಂದ್ರ ಅವರು ಈ ಸಿನಿಮಾದಲ್ಲಿ ನಾಯಕನೋ ಖಳನಾಯಕನೋ ಅನ್ನೋದು ಅರ್ಥವಾಗೋದೇ ಕ್ಲೈಮಾಕ್ಸ್ನಲ್ಲಿ.
ಚಿತ್ರದಲ್ಲಿ ಪುರಾಣದ ಕೆಲವು ಅಂಶಗಳ ಜೊತೆಗೆ ಮಾಡರ್ನ್ ಟಚ್ ಇದೆ. ಸಾವಿನ ಭಯ ಹೊಂದಿರುವ ಅಮಾಯಕನಾಗಿ ರಾಜ್ ಬಿ ಶೆಟ್ಟಿ ನಟನೆ ಚೆನ್ನಾಗಿದೆ. ರಾಜ್ ಬಿ ಶೆಟ್ಟಿಯ ತಾಯಿಯ ಪಾತ್ರದಲ್ಲಿ ಮಾನಸಿ ಸುಧೀರ್ ನಟಿಸಿದ್ದಾರೆ. ಈವರೆಗೆ ಎಲ್ಲರೂ ಅರ್ಜುನ್ ಜನ್ಯ ಅವರನ್ನು ಮ್ಯೂಸಿಕ್ ಡೈರೆಕ್ಟರ್ ಆಗಿ ಮಾತ್ರ ನೋಡಿದ್ದಾರೆ. ಅದ್ಭುತ ಮೆಲೋಡಿ ಹಾಡುಗಳನ್ನು ಅವರು ಚಿತ್ರರಂಗಕ್ಕೆ ನೀಡಿದ್ದಾರೆ. ತಮ್ಮಲ್ಲೊಬ್ಬ ಒಳ್ಳೆಯ ನಿರ್ದೇಶಕ ಇದ್ದಾನೆ ಎಂಬುದನ್ನು ‘45’ ಸಿನಿಮಾ ಮೂಲಕ ತೋರಿಸಿದ್ದಾರೆ. ಶಿವಣ್ಣ ಹಾಗೂ ಉಪೇಂದ್ರ ಅಭಿಮಾನಿಯಾಗಿ, ಇಬ್ಬರ ಫ್ಯಾನ್ಸ್‌ಗೂ ಇಷ್ಟವಾಗುವಂತೆಯೇ ಚಿತ್ರ ಮಾಡಿದ್ದಾರೆ.
ಕಾನ್ಸೆಪ್ಟ್ ಮತ್ತು ಅದರ ಎಕ್ಸಿಕ್ಯೂಷನ್ ಹಾಗೂ ಎಲ್ಲಾ ಪಾತ್ರಗಳಿಗೂ ಅರ್ಜುನ್ ಜನ್ಯ ಒತ್ತು ಕೊಟ್ಟಿರೋದು ಎದ್ದು ಕಾಣುತ್ತದೆ. ಮೇಕಿಂಗ್ ಉತ್ತಮವಾಗಿ ಮೂಡಿಬಂದಿದೆ. ಸತ್ಯ ಹೆಗ್ಡೆ ಕ್ಯಾಮರಾ ವರ್ಕ್ ಮತ್ತು ಫ್ರೇಮಿಂಗ್ ಚೆನ್ನಾಗಿದೆ. ತಮ್ಮ ಬ್ಯಾಕ್‌ಗ್ರೌಂಡ್ ಸ್ಕೋರ್ ಮೂಲಕ ಇಡೀ ಚಿತ್ರಕ್ಕೆ ಅರ್ಜುನ್ ಜನ್ಯ ಒಂದು ಫೀಲ್ ತುಂಬಿದ್ದಾರೆ.
ಸಾವಿನ ಬಳಿಕ ಮುಂದೇನು? ಈ ರೀತಿಯ ಪ್ರಶ್ನೆ ಎಲ್ಲರಿಗೂ ಇರುತ್ತದೆ. ಇದಕ್ಕೆ ಅದರದ್ದೇ ಆದ ಉತ್ತರಗಳು ಸಿಗುತ್ತವೆ. ‘ಗರುಡ ಪುರಾಣ’ದ ಪ್ರತಿ ಪುಟ ತಿರುವು ಹಾಕಿದಾಗಲೂ ಹೊಸದೊಂದು ವಿಷಯ, ಜೀವನದ ಮತ್ತೊಂದು ರೂಪ ಗೊತ್ತಾಗುತ್ತದೆ. ಈ ವಿಷಯಗಳು ಸಿನಿಮಾದಲ್ಲೂ ಟ್ರಾವೆಲ್ ಆಗುತ್ತವೆ. ಗರುಡ ಪುರಾಣವನ್ನು ಸಿನಿಮಾ ಕಥೆಗೆ ಬ್ಲೆಂಡ್ ಮಾಡಿದ ಅರ್ಜುನ್ ಜನ್ಯ ಸ್ಟೈಲ್ ಇಷ್ಟ ಆಗುತ್ತದೆ. ಮಧ್ಯಮ ವರ್ಗದ ವ್ಯಕ್ತಿಯಾಗಿ ರಾಜ್ ಗಮನ ಸೆಳೆಯುತ್ತಾರೆ. ಮಧ್ಯಮ ವ್ಯಕ್ತಿಯ ತೊಳಲಾಟ, ಒದ್ದಾಟ ಇಷ್ಟ ಆಗುತ್ತದೆ. ಒಟ್ಟಿನಲ್ಲಿ 45 ಸಿನಿಮಾ ಎಲ್ಲರಿಗೂ ಇಷ್ಟವಾಗುವ ಸಿನಿಮಾವಾಗಿದೆ.

