ಅಂಕಣಗಳು

ಕಾಟ್ಜು ಅವರಿಗೆ ಕೆಲವು ಪ್ರಶ್ನೆಗಳು

Published On :

ನಿಜ ಹೇಳಬೇಕೆಂದರೆ, ನಿಮ್ಮ ನಿಲುವು ಮತ್ತದನ್ನು ಸಮರ್ಥಿಸಿಕೊಳ್ಳುವ ನಿಮ್ಮ ವಾದ ಜಿಗುಪ್ಸೆ ಹುಟ್ಟಿಸುವಂತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ?

ನಲ್ಮೆಯ ಕಾಟ್ಜು ಅವರೇ,
ಕಳೆದ ಕೆಲವು ಸಮಯದಿಂದ ನಾವು ನಿಮ್ಮ ಧರ್ಮೋಪದೇಶ ಮತ್ತು ಆಡಂಬರದ ಮಾತುಗಳನ್ನು ಕೇಳುತ್ತಲೇ ಬಂದಿದ್ದೇವೆ. ಇನ್ನು ನಿಮ್ಮಂತೆಯೇ ಆಗಾಗ ಏನೇನೋ ಬಡಬಡಾಯಿಸುವ ಧರ್ಮಗುರು ಆಸಾರಾಂ ಬಾಪು  ಅವರ ಬೋಧನೆಗಳನ್ನೂ ಸಹಿಸಿಕೊಂಡಿದ್ದೇವೆ.
ನಿಮ್ಮ ಈ ವೈಜ್ಞಾನಿಕ ಮಿದುಳಿಗೆ ಕೆಲವು ಪ್ರಶ್ನೆಗಳನ್ನು ಕೇಳಬಯಸುತ್ತೇನೆ. ನಿಮ್ಮ ಹಿನ್ನೆಲೆ ಮತ್ತು ಸದ್ಯದ ಸ್ಥಾನವನ್ನು ನೋಡಿದರೆ ಈ ಪ್ರಶ್ನೆಗಳಿಗೆ ಉತ್ತರಿಸುವುದು ನಿಮಗೆ ನೀರು ಕುಡಿದಷ್ಟೇ ಸುಲಭವಿರಬಹುದೇನೋ?
ಕೆಲವು ಸಮಸ್ಯೆಗಳು ನಮ್ಮನ್ನು ಬಹುಕಾಲದಿಂದ ಕಾಡುತ್ತಿವೆ. ಹಾಗಂತ ಇವು ಅಪೌಷ್ಠಿಕತೆ, ಕಾಂಗ್ರೆಸ್ ಅಥವಾ ಜಾತ್ಯತೀತತೆಗೆ ಸಂಬಂಧಿಸಿದ ವಿಷಯಗಳಂತೂ ಅಲ್ಲ. ನೀವು ಕೈಯಾಡಿಸಿದ ಪ್ರೆಸ್ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೇ ಮಾತನಾಡೋಣವಂತೆ.
ಮೊದಲನೆಯದಾಗಿ ನಿಮ್ಮಂತಹ ಕೆಚ್ಚೆದೆಯ ವ್ಯಕಿ ಮತದಾನದ ಕುರಿತು ನೀಡಿದ ಅಳುಬುರುಕ ಹೇಳಿಕೆ ನಮಗೆಲ್ಲ ಆಶ್ಚರ್ಯ ಮೂಡಿಸಿದೆ. 'ನನ್ನ ಮತಕ್ಕೆ ಅರ್ಥವಿಲ್ಲವಾದ್ದರಿಂದ ನಾನು ಇನ್ನು ಮುಂದೆ ಮತದಾನ ಮಾಡುವುದಿಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಇಂದು ಮತದಾನ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಈ ರೀತಿ ನಡೆಯುವುದಿಲ್ಲ. ಕುರಿಯ ಹಿಂಡಿನಲ್ಲಿ ಸೇರಿಕೊಳ್ಳಲು ನಾನೇಕೆ ಸಮಯ ವ್ಯರ್ಥ ಮಾಡಲಿ' ಎಂಬ ಧಾಟಿಯಲ್ಲಿ ಮಾತನಾಡಿದ್ದೀರಿ.
ನಿಜ ಹೇಳಬೇಕೆಂದರೆ, ನಿಮ್ಮ ನಿಲುವು ಮತ್ತದನ್ನು ಸಮರ್ಥಿಸಿಕೊಳ್ಳುವ ನಿಮ್ಮ ವಾದ ಜಿಗುಪ್ಸೆ ಹುಟ್ಟಿಸುವಂತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ನೀವು. ಹಾಗಾಗೇ ದೇಶದ ನಾಗರಿಕರಿಗೆ ಜವಾಬ್ದಾರಿಯುತವಾಗಿ ಮತದಾನ ಮಾಡುವಂತಹ ಮಾಹಿತಿಯನ್ನು ತಲುಪಿಸುವ ಪ್ರಯತ್ನ ಮಾಡಬೇಕಲ್ಲವೇ? ಉದಾಹರಣೆಗೆ, ದೇಶದಲ್ಲಿ ಸುಮಾರು 9 ಕೋಟಿ ಜನರ ಬಳಿ ಮೊಬೈಲ್ ಫೋನ್‌ಗಳಿವೆ. ಒಂದು ಸಂದೇಶ ಕಳುಹಿಸುವ ಮೂಲಕ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಯ ಹಿನ್ನೆಲೆಯ ಬಗ್ಗೆ ಅವರು ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಇದರ ಬಗ್ಗೆ ನಿಮಗೆ ಗೊತ್ತಿದೆಯೇ? ಒಂದು ಸಾರಿ ಟ್ರೈ ಮಾಡಿ ನೋಡಿ- ಭವಿಷ್ಯದಲ್ಲಿ ಮತ್ತೆ ಮತಪೆಟ್ಟಿಗೆಯತ್ತ ಸಾಗಲು ನಿಮಗೆ ಪ್ರೇರಣೆಯಾದರೂ ಸಿಗಬಹುದು! ಇಂತಹ ಸುಲಭ ಎಸ್‌ಎಮ್‌ಎಸ್ ಅಸ್ತ್ರವನ್ನು ಬಳಸಿಕೊಳ್ಳುವ ಬಗ್ಗೆ ಜನಜಾಗೃತಿ ಮೂಡಿಸಲು 'ನಿಮ್ಮ ಮಾಧ್ಯಮಗಳನ್ನು' ಒಂದು ಬಾರಿ ಕೇಳಿಕೊಳ್ಳುವಿರಾ?
ಮತದಾನ ಮಾಡುವುದರಲ್ಲಿ ಅರ್ಥವಿಲ್ಲ ಎನ್ನುವ ಬದಲು, ನಿಮ್ಮ ಪತ್ರಿಕಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಬಳಸಿಕೊಂಡು 'ನಮ್ಮಂಥ ಕುರಿಗಳಿಗೆ' ಅಭ್ಯರ್ಥಿಗಳ ಮಾಹಿತಿಯನ್ನು ಒದಗಿಸಿ ನಮ್ಮನ್ನೆಲ್ಲ ಮತಪೆಟ್ಟಿಗೆಗಳತ್ತ ಕರೆದೊಯ್ಯುವ ಕೆಲಸವನ್ನು ನೀವು ಸುಲಭವಾಗಿ ಮಾಡಬಹುದು.
ಎರಡು. 'ನಮ್ಮ ಪ್ರಜಾಪ್ರಭುತ್ವದ ಗರ್ಭಗುಡಿಯ ಕಗ್ಗತ್ತಲೊಳಗೆ ಕ್ರಿಮಿನಲ್‌ಗಳು ವಾಸವಾಗಿದ್ದಾರೆ' ಎಂದು ನೀವು ಹೇಳಿದ್ದೀರಿ.
ಹೌದು ಇದರಲ್ಲಿ ಸಂದೇಹವೇ ಇಲ್ಲ. ಹಾಗಿದ್ದರೆ ನೀವು ನ್ಯಾಯಾಂಗ ವ್ಯವಸ್ಥೆಯ ಅತಿಮುಖ್ಯ ಸ್ಥಾನದಲ್ಲಿ ಆಸೀನರಾಗಿದ್ದಾಗ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನ ಪಟ್ಟಿರಾ? ಈ ಹುಳುಕನ್ನು ಹೇಗೆ ಸರಿಪಡಿಸಬೇಕು ಎನ್ನುವುದರ ಬಗ್ಗೆ ಎಂದಾದರೂ ವಿಶ್ಲೇಷಣೆ ಮಾಡಿದ್ದೀರಾ? ಎಂದಾ ದರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದೀರಾ? ಇದು ಹೋಗಲಿ ಎಂದಾದರೂ ವೋಹ್ರಾ ಸಮಿತಿ, ಗುಪ್ತಾ ಸಮಿತಿ, ಗೋಸ್ವಾಮಿ ಸಮಿತಿ ಈ ಕುರಿತು ಏನು ಹೇಳಿವೆ ಎನ್ನುವುದನ್ನಾದರೂ ಓದಿದ್ದೀರಾ? Representation of People Actನ ಸೆಕ್ಷನ್ 8(4)ಏನು ಹೇಳುತ್ತದೆ ಎನ್ನುವುದು ನಿಮಗೆ ಗೊತ್ತಿಲ್ಲವೇ? ದೆಹಲಿಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟಿನಲ್ಲಿ ಇಂತಹ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿವೆ, ಇವೆಲ್ಲ ಯಾವುದರ ಕುರಿತಾಗಿವೆ ಎನ್ನುವ ಬಗ್ಗೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳ ಮೂಲಕ ಜನತೆಗೆ ತಿಳಿಸುಕೊಡುವ ಪ್ರಯತ್ನ ಮಾಡುವಿರಾ?
ಮೂರು. ಯಾಕೆ ಮತದಾನ ಯಂತ್ರಗಳಿಂದ None Of The Above ಎಂಬ ಆಯ್ಕೆಯನ್ನು ಸರ್ಕಾರ ಕಿತ್ತೆಸೆದಿದೆ? 'ಕಾನೂನು ಜ್ಞಾನನಿಧಿ'ಗಳಾದಂತಹ ತಾವು, ಜನರ ಈ ಹಕ್ಕಿಗಾಗಿ ಹೋರಾಡಲೇಬೇಕಲ್ಲವೇ?
ನಾಲ್ಕು. ಸುಳ್ಳು ದಾಖಲೆ ನೀಡುವ ರಾಜಕಾರಣಿಗಳ ಬಗ್ಗೆ. ಚುನಾಯಿತ ನಾಯಕರು ಸುಳ್ಳು ದಾಖಲೆಗಳನ್ನು ನೀಡಿದಾಗ ನ್ಯಾಯಾಂಗ ವ್ಯವಸ್ಥೆ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತದೆ? ಅದು ಎಂದಾದರೂ ಚುನಾವಣಾ ಅಯೋಗದೊಂದಿಗೆ ಸೇರಿ ಸುಳ್ಳು ದಾಖಲೆಗಳನ್ನು ನೀಡುವ ನಾಯಕರನ್ನು ದಂಡಿಸಿದೆಯೇ?
ಐದು. ದೇಶದ ನ್ಯಾಯಾಂಗದ ವ್ಯವಸ್ಥೆಗೆ ಹಿಡಿದಿರುವ ಅವಸ್ಥೆ. ಭಾರತದಲ್ಲಿ ಪ್ರತಿ 10 ಲಕ್ಷ ಜನತೆಗೆ ಕೇವಲ 13.5 ನ್ಯಾಯಾಧೀಶರಿದ್ದಾರೆ ಎನ್ನುವುದು ಸುಳ್ಳೇ? ಹಾಗೆ ನೋಡಿದರೆ ಜಾಗತಿಕ ಪ್ರಮಾಣ 70 ರಷ್ಟಿದೆ. ಪ್ರತಿ 10 ಲಕ್ಷ ಜನರಿಗೆ ಕನಿಷ್ಠ 50 ನ್ಯಾಯಾಧೀಶರಾದರೂ ಇರಬೇಕು ಎಂದು ಸುಪ್ರೀಂ ಕೋರ್ಟ್ ಎಂದಾದರೂ ಹೇಳಿದೆಯೇ? ಈ ಕೆಲಸ ಮಾಡಲು ನ್ಯಾಯಾಂಗ ವ್ಯವಸ್ಥೆ ಮತ್ತು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನಮಗೆ ಮಾಹಿತಿ ನೀಡುತ್ತೀರಾ? ಕಾಟ್ಜು ಸರ್, ದೇಶಕ್ಕೆ ನಿಮ್ಮ ಪ್ರಮಾಣಿಕತೆ ಮತ್ತು ಗುರಿಯ ಅವಶ್ಯಕತೆ ಇದೆ,  ನಿಮ್ಮ ಅರ್ಥಹೀನ ಹೇಳಿಕೆಗಳದ್ದಲ್ಲ!
ಆರು. ನೀವು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರು. ಹಿಂದೆ ಅನೇಕ ಬಾರಿ ನಮ್ಮ ಮಾಧ್ಯಮಗಳು ಕ್ಷುದ್ರ ಹಾಗೂ ಬಾಲಿಷ ವಿಚಾರಗಳನ್ನು ಹಿಡಿದುಕೊಂಡು ನಲಿದಾಡುವುದನ್ನು ತೀಕ್ಷ್ಣವಾಗಿ ಖಂಡಿಸಿದ್ದೀರಿ. ಆ ವಿಷಯದಲ್ಲಿ ನಮ್ಮ ತಕರಾರಿಲ್ಲ. ಆದರೆ ರಾಡಿಯಾಗೇಟ್‌ನಂತಹ Paid news ಗಳೂ ನಮ್ಮಲ್ಲಿ ಘಟಿಸಿವೆ. ನಮ್ಮ ವಿಷಯ ಬಿಡಿ ನಾವಲ್ಲ ಸಾಮಾನ್ಯ ಜನತೆ. ಆದರೆ ಪರಮೋಚ್ಛ ಸ್ಥಾನದಲ್ಲಿರುವ ನೀವು ಇಂತಹ ಘಟನೆಗಳನ್ನು ತಡೆಯಲು ಏನಾದರೂ ಮಾಡಿಯೇ ಇರುತ್ತೀರಿ ಅಲ್ಲವೇ?  ಹಾಗಾಗೆ ಅತಿ ವಿನಮ್ರತೆಯಿಂದ ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ- ಅಂತಹ ಕ್ಷುದ್ರ ವ್ಯವಹಾರಗಳನ್ನು ತಡೆಯಲು ನೀವು ರಚಿಸಿರುವ(?) ಸಮಿತಿಯ ಹೆಸರನ್ನು ಹೇಳುವಿರಾ? ಆ ಸಮಿತಿಯ ಸದಸ್ಯರು ಯಾರು? ಈ ಕುರಿತು ನಿಮ್ಮಿಂದ ಶಿಫಾರಸುಗಳ ಮತ್ತು ಮಾರ್ಗದರ್ಶನಗಳ ಪಟ್ಟಿ ಯಾವಾಗ ಹೊರಬರಲಿದೆ?
ಏಳು. 'ಕಾರಾಗೃಹ' ಮತ್ತು 'ಸುಧಾರಣೆ' ಎನ್ನುವ ಎರಡು ಪದಗಳು, ನ್ಯಾಯಾಂಗ ವ್ಯವಸ್ಥೆಯ ಅಂತಿಮ ಕೊಂಡಿಗಳು ಎನ್ನುವುದು ನಮಗೆ ಗೊತ್ತು. ಸಂಜಯ್ ದತ್‌ಗೆ ಕ್ಷಮೆ ನೀಡಬೇಕು ಎಂದು ನಿಮ್ಮ ಹೃದಯ ಮಿಡಿದದ್ದನ್ನೂ ನಾವು ನೋಡಿದ್ದೇವೆ(ಇನ್ನು ಸಂಜಯ್‌ಗಷ್ಟೇ ಕ್ಷಮೆ ಏಕೆ ಎಂದು ಜನ ನಿಮ್ಮನ್ನು ಹಿಗ್ಗಾಮುಗ್ಗಾ ಜಾಡಿಸಿದ ತಕ್ಷಣ ಜೈಬುನ್ನೀಸಾ ಕಾಜಿಗೂ ಕ್ಷಮೆ ನೀಡಿ ಎಂದು ನೀವು ವರಸೆ ಬದಲಿಸಿದ್ದನ್ನು ವಿಶೇಷವಾಗಿ ಹೇಳುವ ಅಗತ್ಯವಿಲ್ಲ). ಹೋಗಲಿ ಬಿಡಿ, ವಿಚಾರಣಾಧೀನ ಕೈದಿಗಳು ನಮ್ಮ ದೇಶದ ಜೈಲುಗಳಲ್ಲಿ ಅನುಭವಿಸುವ ಯಾತನೆಯನ್ನು ತಡೆಗಟ್ಟಲು ನಿಮ್ಮ ಬಳಿ ಪರಿಹಾರ ಸೂತ್ರಗಳು ಇರಲೇಬೇಕಲ್ಲವೇ? ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದಾಗ ಈ ಸಮಸ್ಯೆಯ ಬಗ್ಗೆ ನೀವು ಎಂದಾದರೂ, ಯಾರ ಬಳಿಯಾದರೂ ಚರ್ಚಿಸಿದ್ದೀರಾ?
ಎಲ್ಲಾ ವಿಷಯಗಳ ಬಗ್ಗೆಯೂ ನಿಮ್ಮದೊಂದು ಅಭಿಪ್ರಾಯ ಇದ್ದೇ ಇರುತ್ತದೆ; ಆದರೆ ನಾವು ಮೇಲೆ ತಿಳಿಸಿದ ವಿಷಯಗಳ ಬಗ್ಗೆ ಮಾತ್ರ ಅದೇಕೋ ನೀವು ಇದುವರೆಗೂ ತುಟಿಬಿಚ್ಚಿಲ್ಲ. ಹೀಗೇಕೆ ಕಾಟ್ಜು ಅವರೇ?!

Shining.path.notperu@gmail.com
(ಫಸ್ಟ್‌ಪೋಸ್ಟ್ ಜಾಲತಾಣಕ್ಕೆ ಓದುಗನೊಬ್ಬ ಬರೆದ ಪತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.