ಅಂಕಣಗಳು

ಫ್ರಿಜ್‌ಗಳನ್ನೇ ಅಸ್ತ್ರವಾಗಿಸಿದ ಸೈಬರ್ ಅಪರಾಧಿಗಳು! (ಜಾಗತಿಕ ಜಗಲಿ)

ಸೂಪರ್ ಮಾರ್ಕೆಟ್ ಫ್ರಿಜ್‌ಗಳು ಈಗ ಕೇವಲ ವಿದ್ಯುತ್ ಪೂರೈಕೆಗೆ ಸಂಪರ್ಕ ಹೊಂದಿರುವ ತಂಪಾಗಿಸುವ ಯಂತ್ರವಾಗಿ ಮಾತ್ರ ಉಳಿದಿಲ್ಲ. ಬೃಹತ್ ರೀಟೇಲ್ ಮಳಿಗೆಗಳ ಜಾಲ ಅತ್ಯಾಧುನಿಕ ರೆಫ್ರಿಜಿರೇಟರ್ ವ್ಯವಸ್ಥೆಯನ್ನು ಬಳಸುತ್ತಿದ್ದು...

ಫ್ರಿಜ್‌ಗಳನ್ನೇ ಅಸ್ತ್ರವಾಗಿಸಿದ ಸೈಬರ್ ಅಪರಾಧಿಗಳು! (ಜಾಗತಿಕ ಜಗಲಿ)
ಸಾಂಕೇತಿಕ ಚಿತ್ರ — online desk
Published On :

ಒಂದು ಮುಂಜಾನೆ ಅಗತ್ಯ ವಸ್ತುಗಳನ್ನು ಖರೀದಿಸಲು ಸೂಪರ್ ಮಾರ್ಕೆಟ್‌ಗೆ ತೆರಳುತ್ತೀರಿ. ಆದರೆ, ಅಲ್ಲಿ ಆಹಾರ ಮತ್ತು ಇತರ ವಸ್ತುಗಳನ್ನು ರಕ್ಷಿಸುವ ಸಲುವಾಗಿ ಇರಿಸಿರುವ ಫ್ರಿಜ್‌ಗಳು ತಮ್ಮ ಕೆಲಸ ಮಾಡಲು ವಿಫಲವಾಗಿರುವುದನ್ನು ಕಲ್ಪಿಸಿಕೊಳ್ಳಿ. ಹಾಲು ಹಾಳಾಗಿರುತ್ತದೆ, ರೆಫ್ರಿಜಿರೇಟ್ ಮಾಡಿ ಇರಿಸಿರುವ ತರಕಾರಿ - ಕಾಳುಗಳು ಹಳಸಿರುತ್ತವೆ, ಫ್ರಿಜ್ ಕಾರ್ಯಾಚರಿಸದ್ದರಿಂದ ಚೀಸ್ ಸೇವನೆಗೆ ಯೋಗ್ಯವಾಗಿರುವುದಿಲ್ಲ, ಮತ್ತು ಫ್ರಿಜ್‌ನಿಂದ ಇಳಿದ ನೀರು ನೆಲದಲ್ಲೆಲ್ಲ ಹರಿದಿರುತ್ತದೆ. ಸೂಪರ್ ಮಾರ್ಕೆಟ್ ಪಾಲಿಗೆ ಇನ್ನೊಂದು ಸಾಮಾನ್ಯ ವ್ಯಾಪಾರದ ದಿನವಾಗಬೇಕಿದ್ದ ದಿನ ಇದ್ದಕ್ಕಿದ್ದಂತೆ ಆರ್ಥಿಕ ಹಾನಿಯಾಗಿ ಪರಿಣಮಿಸಿರುತ್ತದೆ.

ಹಾಗೆಂದು ಇದು ಕೇವಲ ಕಾಲ್ಪನಿಕ ಘಟನೆಯಲ್ಲ. ಫ್ರಾನ್ಸ್ ದೇಶದಾದ್ಯಂತ ನಡೆದಿರುವ ಬೆಳವಣಿಗೆ ಇದಾಗಿದೆ. ಸೈಬರ್ ಅಪರಾಧಿಗಳು ಸೂಪರ್ ಮಾರ್ಕೆಟ್ ರೆಫ್ರಿಜಿರೇಶನ್ ವ್ಯವಸ್ಥೆಯನ್ನು ನಿರ್ವಹಿಸುವ ಕಂಪ್ಯೂಟರ್ ವ್ಯವಸ್ಥೆಯನ್ನು ಮಾರ್ಪಡಿಸಿದ್ದರಿಂದ ಈ ಬೆಳವಣಿಗೆ ಉಂಟಾಗಿದೆ. ಸಾಮಾನ್ಯ ಸೈಬರ್ ದಾಳಿಗಳು ಪಾಸ್‌ವರ್ಡ್‌ಗಳು ಅಥವಾ ಬ್ಯಾಂಕಿಂಗ್ ಮಾಹಿತಿಗಳನ್ನು ಕದ್ದರೆ, ಈ ಕಾರ್ಯಾಚರಣೆ ಆಹಾರ ವಸ್ತುಗಳನ್ನು ಸುರಕ್ಷಿತ ತಾಪಮಾನದಲ್ಲಿಡುವ ಮೂಲಭೂತ ವ್ಯವಸ್ಥೆಯಾದ ಫ್ರಿಜ್ ಅನ್ನೇ ಗುರಿಯಾಗಿಸಿತ್ತು.

ವರದಿಗಳ ಪ್ರಕಾರ, 700ಕ್ಕೂ ಹೆಚ್ಚು ಫ್ರೆಂಚ್ ಸೂಪರ್ ಮಾರ್ಕೆಟ್‌ಗಳು ಈ ದಾಳಿಗೆ ತುತ್ತಾಗಿದ್ದು, ಇದರ ಪರಿಣಾಮವಾಗಿ ಹತ್ತಾರು ಮಿಲಿಯನ್ ಯೂರೋ ನಷ್ಟವಾಗಿದೆ. ಕಾರೆಫೋರ್ ಸೂಪರ್ ಮಾರ್ಕೆಟ್ ಸರಣಿ ತನ್ನ ಅಂದಾಜು 80 ಮಳಿಗೆಗಳಲ್ಲಿ ಸಮಸ್ಯೆ ಎದುರಿಸಿದ್ದರೆ, ಇನ್ನೊಂದು ಪ್ರಮುಖ ಸೂಪರ್ ಮಾರ್ಕೆಟ್ ಸರಣಿಯಾದ ಇಂಟರ್‌ಮಾರ್ಚ್ ಬಹುತೇಕ 180 ಮಳಿಗೆಗಳು ಈ ದಾಳಿಗೆ ಸಿಲುಕಿವೆ.

ಪ್ರಸ್ತುತ ಘಟನೆ ಒಂದು ಕಾಡುವ ಪ್ರಶ್ನೆಯನ್ನು ಮೂಡಿಸಿದೆ. ಒಂದು ವೇಳೆ ಸೈಬರ್ ಅಪರಾಧಿಗಳು ಫ್ರಿಜ್‌ಗಳನ್ನೂ ಗುರಿಯಾಗಿಸಿ ದಾಳಿ ನಡೆಸುತ್ತಾರೆಂದರೆ, ಇನ್ನಿತರ ಅವಶ್ಯಕ ಸೇವೆಗಳನ್ನು ಗುರಿಯಾಗಿಸುವುದಿಲ್ಲ ಎನ್ನಲು ಏನು ಗ್ಯಾರಂಟಿ?

ಇದರ ಅಪಾಯವನ್ನು ಅರ್ಥ ಮಾಡಿಕೊಳ್ಳಲು, ಆಧುನಿಕ ಸೂಪರ್ ಮಾರುಕಟ್ಟೆಗಳು ಆಹಾರವನ್ನು ಹೇಗೆ ರಕ್ಷಿಸುತ್ತವೆ ಎನ್ನುವುದನ್ನು ಗಮನಿಸೋಣ.

ಸೂಪರ್ ಮಾರ್ಕೆಟ್ ಫ್ರಿಜ್‌ಗಳು ಈಗ ಕೇವಲ ವಿದ್ಯುತ್ ಪೂರೈಕೆಗೆ ಸಂಪರ್ಕ ಹೊಂದಿರುವ ತಂಪಾಗಿಸುವ ಯಂತ್ರವಾಗಿ ಮಾತ್ರ ಉಳಿದಿಲ್ಲ. ಬೃಹತ್ ರೀಟೇಲ್ ಮಳಿಗೆಗಳ ಜಾಲ ಅತ್ಯಾಧುನಿಕ ರೆಫ್ರಿಜಿರೇಟರ್ ವ್ಯವಸ್ಥೆಯನ್ನು ಬಳಸುತ್ತಿದ್ದು, ಬೇರೆ ಬೇರೆ ತಾಪಮಾನವನ್ನು ನಿಯಂತ್ರಿಸಲು ಬೇರೆ ವಿಭಾಗಗಳನ್ನು ಒಳಗೊಂಡಿರುತ್ತವೆ. ಶೀತಲೀಕರಿಸಿದ ವಸ್ತುಗಳಿಗೆ ಅತ್ಯಂತ ತಣ್ಣಗಿನ ತಾಪಮಾನದ ಅವಶ್ಯಕತೆಯಿದೆ. ಅವುಗಳಿಗೆ ಹೋಲಿಸಿದರೆ ಹಾಲು, ಚೀಸ್ ಮತ್ತು ತಾಜಾ ತರಕಾರಿಗಳಿಗೆ ಕೊಂಚ ಸಾಮಾನ್ಯ ತಂಪುಗೊಳಿಸುವಿಕೆ ಸಾಕಾಗುತ್ತದೆ.

ಈ ಶೀತಲೀಕರಣ ವ್ಯವಸ್ಥೆಗಳು ಆಗಾಗ್ಗೆ ಡಿಫ್ರಾಸ್ಟಿಂಗ್ ಎನ್ನುವ ಪ್ರಕ್ರಿಯೆಯ ಮೂಲಕ ಸಂಗ್ರಹಿತವಾದ ಮಂಜುಗಡ್ಡೆಗಳನ್ನು ತೆಗೆದು ಹಾಕುತ್ತವೆ. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ, ಉದ್ಯೋಗಿಗಳೇ ಈ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಾರೆ. ಆದರೆ ಇಂದು, ಈ ಫ್ರಿಜ್ ವ್ಯವಸ್ಥೆಗಳಿಗೆ ಅಳವಡಿಸಿರುವ ಸಣ್ಣ ಕಂಪ್ಯೂಟರ್‌ಗಳು ಸ್ವಯಂಚಾಲಿತವಾಗಿಯೇ ಇದನ್ನು ನಡೆಸುತ್ತವೆ.

ಬಹಳಷ್ಟು ಆಧುನಿಕ ರೆಫ್ರಿಜಿರೇಟರ್‌ಗಳು ಅಂತರ್ಜಾಲ ಸಂಪರ್ಕಿತ ವ್ಯವಸ್ಥೆಗಳನ್ನು ಹೊಂದಿದ್ದು, ತಂತ್ರಜ್ಞರು ಇದರ ಮೂಲಕವೇ ಫ್ರಿಜ್‌ಗಳನ್ನು ಪರಿಶೀಲಿಸಲು ಸಾದ್ಯ. ನೂರಾರು ಕಿಲೋಮೀಟರ್ ದೂರದಲ್ಲಿ ಕುಳಿತಿರುವ ನಿರ್ವಹಣಾ ಇಂಜಿನಿಯರ್ ತಾಪಮಾನವನ್ನು ಪರಿಶೀಲಿಸಿ, ಲೋಪದೋಷಗಳನ್ನು ಗುರುತಿಸಿ, ಸೂಪರ್ ಮಾರುಕಟ್ಟೆಗೆ ತೆರಳದೆಯೇ ಆಪರೇಟಿಂಗ್ ಸಿಸ್ಟಮ್‌ಗಳನ್ನು ಸರಿಪಡಿಸಬಹುದು.

ಈ ಅನುಕೂಲತೆ ಸಾಕಷ್ಟು ಸಮಯ ಉಳಿಸುತ್ತದೆ, ನಿರ್ವಹಣಾ ವೆಚ್ಚವನ್ನು ಕಡಿಮೆಗೊಳಿಸುತ್ತದೆ, ಮತ್ತು ಅನವಶ್ಯಕ ಆಹಾರ ವಸ್ತುಗಳು ಪೋಲಾಗದಂತೆ ತಡೆಯುತ್ತದೆ. ಆದರೆ, ರಿಮೋಟ್ ಸಂಪರ್ಕ ವ್ಯವಸ್ಥೆಗಳು ಸುರಕ್ಷಿತವಾಗಿರದಿದ್ದರೆ, ಸೈಬರ್ ಅಪರಾಧಿಗಳಿಗೆ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ.

ರೆಫ್ರಿಜರೇಟರ್ ಅನ್ನು ನಿಯಂತ್ರಿಸುವ ಕಂಪ್ಯೂಟರ್ ವ್ಯವಸ್ಥೆಯನ್ನು ಅನಧಿಕೃತವಾಗಿ ನಿಯಂತ್ರಿಸುವ ಹ್ಯಾಕರ್, ಅದರ ಸೆಟ್ಟಿಂಗ್‌ಗಳನ್ನು ಬದಲಾಯಿಸಬಲ್ಲ. ಆಹಾರವನ್ನು ತಂಪಾಗಿಡುವ ಬದಲು, ತಾಪಮಾನವನ್ನು ಹೆಚ್ಚಿಸುವಂತೆ ಅಥವಾ ಮಂಜುಗಡ್ಡೆ ಕರಗಿಸುವ ಪ್ರಕ್ರಿಯೆಯನ್ನೇ ದೀರ್ಘಕಾಲ ಮುಂದುವರಿಸುವಂತೆ ಮಾಡಬಹುದು.

ಫ್ರಾನ್ಸ್‌ನಲ್ಲಿ ನಡೆದಿವೆ ಎಂದು ವರದಿಯಾಗಿರುವ ಘಟನೆಗಳಲ್ಲಿ ತಾಪಮಾನವು ಸುಮಾರು 50 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿತ್ತು ಎನ್ನಲಾಗಿದೆ. ಇಂತಹ ತೀವ್ರ ಉಷ್ಣತೆಯು ಬೇಗನೆ ಕೆಡುವ ಆಹಾರ ಪದಾರ್ಥಗಳನ್ನು ಅತಿ ಕಡಿಮೆ ಸಮಯದಲ್ಲೇ ಹಾಳುಗೆಡವಬಲ್ಲದು.

ಮರುದಿನ ಬೆಳಿಗ್ಗೆ ಸಿಬ್ಬಂದಿ ಕೆಲಸಕ್ಕೆ ಮರಳಿದಾಗ ಕರಗಿದ ಮಂಜುಗಡ್ಡೆ, ನೆಲದ ಮೇಲೆ ಸಂಗ್ರಹವಾಗಿದ್ದ ನೀರು ಮತ್ತು ಮಾರಾಟ ಮಾಡಲು ಯೋಗ್ಯವಲ್ಲದ ಶೀತಲೀಕೃತ ಆಹಾರ ಪದಾರ್ಥಗಳು ಕಂಡುಬಂದವು ಎಂದು ವರದಿಯಾಗಿದೆ. ಹೀಗಾಗಿ, ಶೀತಲೀಕರಣ ವ್ಯವಸ್ಥೆಯ ವಿಭಾಗಗಳಲ್ಲಿದ್ದ ಎಲ್ಲ ಆಹಾರ ಪದಾರ್ಥಗಳನ್ನು ತೆರವುಗೊಳಿಸಬೇಕಾಯಿತು.

ಈ ನಷ್ಟದ ಹಿಂದೆ ನೈಜ ಬದುಕಿನ ಮೇಲೆ ಪರಿಣಾಮ ಬೀರುವ ಹಲವು ಸಮಸ್ಯೆಗಳಿದ್ದವು. ಅಂಗಡಿ ಮಾಲೀಕರು ಅನಿರೀಕ್ಷಿತ ವೆಚ್ಚಗಳನ್ನು ಎದುರಿಸಬೇಕಾಯಿತು, ಸಿಬ್ಬಂದಿ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಲು ಹರಸಾಹಸಪಟ್ಟರು ಮತ್ತು ಆಹಾರವನ್ನು ಸುರಕ್ಷಿತವಾಗಿಡಬೇಕಿದ್ದ ಯಂತ್ರಗಳ ಮೇಲಿನ ಸೈಬರ್ ದಾಳಿಯಿಂದ ಬಳಕೆಗೆ ಯೋಗ್ಯವಾಗಿದ್ದ ಆಹಾರವೂ ವ್ಯರ್ಥವಾಯಿತು.

ವರದಿಗಳ ಪ್ರಕಾರ, ಈ ಹಾನಿ ಫ್ರಾನ್ಸ್‌ಗೆ ಮಾತ್ರ ಸೀಮಿತವಾಗಿರಲಿಲ್ಲ. ಸ್ವೀಡನ್, ಐರ್ಲೆಂಡ್ ಮತ್ತು ನೆದರ್‌ಲ್ಯಾಂಡ್ಸ್ ಸೇರಿದಂತೆ ಯುರೋಪಿನ ಇತರ ಏಳು ದೇಶಗಳಲ್ಲಿಯೂ ಇದೇ ರೀತಿಯ ಶೈತ್ಯೀಕರಣ ವ್ಯವಸ್ಥೆಗಳಿಗೆ ತೊಂದರೆಗಳು ವರದಿಯಾಗಿವೆ. ಇದರಿಂದಾಗಿ ಲಕ್ಷಾಂತರ ಯೂರೋ ಮೌಲ್ಯದ ಆಹಾರ ಪದಾರ್ಥಗಳು ನಾಶವಾದವು ಎನ್ನಲಾಗಿದೆ.

ಇನ್ನೂ ಗಂಭೀರವಾಗಿ ಹೇಳುವುದಾದರೆ, ಈ ಘಟನೆ ಈಗ ಅಂತರರಾಷ್ಟ್ರೀಯ ಭದ್ರತೆಯ ಆಯಾಮವನ್ನೂ ಪಡೆದುಕೊಂಡಿದೆ.

ಇರಾನ್ ಸರ್ಕಾರದೊಂದಿಗೆ ನಿಕಟ ಸಂಬಂಧ ಹೊಂದಿರುವ ಪ್ರಬಲ ಸೇನಾ ಸಂಘಟನೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಈ ದಾಳಿಗೆ ಹೊಣೆ ಎಂದು ಫ್ರಾನ್ಸ್ ಅಧಿಕಾರಿಗಳು ಆರೋಪಿಸಿದ್ದಾರೆ ಎನ್ನಲಾಗಿದೆ. ಆದರೆ ಇರಾನ್ ಈ ಆರೋಪವನ್ನು ತಿರಸ್ಕರಿಸಿದೆ.

ಆದಾಗ್ಯೂ, ವರದಿಯಾಗಿರುವ ಈ ದಾಳಿಗಳ ನಿಖರ ಹೊಣೆಗಾರಿಕೆ, ವ್ಯಾಪ್ತಿ ಮತ್ತು ಸನ್ನಿವೇಶಗಳನ್ನು ಸ್ವತಂತ್ರವಾಗಿ ಪರಿಶೀಲಿಸುವ ಅಗತ್ಯವಿದೆ. ಸೂಕ್ತ ತಾಂತ್ರಿಕ ಸಾಕ್ಷ್ಯಗಳಿಲ್ಲದೆ, ಯಾವುದೇ ದೇಶದ ಸರ್ಕಾರದ ಪಾತ್ರದ ಕುರಿತಾದ ಆರೋಪಗಳನ್ನು ವಾಸ್ತವ ಸತ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ.

ಈ ಕಾರ್ಯಾಚರಣೆಯನ್ನು ನಡೆಸಿದವರು ಯಾರು ಎಂಬುದನ್ನು ಬದಿಗಿಟ್ಟರೂ, ಇದರಿಂದ ದೊರೆಯುವ ಭದ್ರತೆಯ ಪಾಠ ಅತ್ಯಂತ ಮಹತ್ವದ್ದಾಗಿದೆ.

ಸೈಬರ್ ಯುದ್ಧವು ಇನ್ನು ಮುಂದೆ ಸೇನಾ ಕಂಪ್ಯೂಟರ್‌ಗಳು, ಗುಪ್ತಚರ ಜಾಲಗಳು ಅಥವಾ ಸರ್ಕಾರಿ ವೆಬ್‌ಸೈಟ್‌ಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಿದ್ಯುತ್, ನೀರು ಸರಬರಾಜು, ಸಾರಿಗೆ, ಆಸ್ಪತ್ರೆಗಳು ಮತ್ತು ಆಹಾರ ಸಂಗ್ರಹಣೆಯಂತ ಸೇವೆಗಳನ್ನು ನಿಯಂತ್ರಿಸುವ ಸಂಪರ್ಕಿತ ವ್ಯವಸ್ಥೆಗಳ ಮೇಲೆ ಆಧುನಿಕ ಸಮಾಜ ಹೆಚ್ಚು ಅವಲಂಬಿತವಾಗಿದೆ.

ಇಂತಹ ವ್ಯವಸ್ಥೆಗಳ ಮೇಲೆ ನಡೆಯುವ ಡಿಜಿಟಲ್ ದಾಳಿಗಳು ಗಂಭೀರ ಪರಿಣಾಮಗಳನ್ನು ಉಂಟುಮಾಡಬಲ್ಲವು. ಹ್ಯಾಕ್ ಆದ ಕಂಪ್ಯೂಟರ್‌ನಿಂದ ಕೇವಲ ಮಾಹಿತಿ ನಷ್ಟವಾಗುವುದಷ್ಟೇ ಅಲ್ಲ; ಯಂತ್ರೋಪಕರಣಗಳಿಗೆ ಹಾನಿಯಾಗಬಹುದು, ಅಗತ್ಯ ಸೇವೆಗಳಿಗೆ ಅಡ್ಡಿಯಾಗಬಹುದು ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯ ಎದುರಾಗಬಹುದು.

ಭಾರತವೂ ಈ ಬೆಳವಣಿಗೆಯ ಪರಿಣಾಮಗಳ ಕುರಿತು ವಿಶೇಷ ಗಮನ ಹರಿಸುವುದು ಅಗತ್ಯ. ನಮ್ಮಲ್ಲಿ ವಿಸ್ತರಿಸುತ್ತಿರುವ ಸೂಪರ್‌ಮಾರ್ಕೆಟ್ ಜಾಲಗಳು, ಶೀತಲ ಸಂಗ್ರಹಣಾ ಗೋದಾಮುಗಳು, ಔಷಧ ವಿತರಣಾ ವ್ಯವಸ್ಥೆಗಳು ಮತ್ತು ಕೃಷಿ ಪೂರೈಕೆ ಸರಪಳಿಗಳು ಇಲೆಕ್ಟ್ರಾನಿಕ್ ಮೇಲ್ವಿಚಾರಣಾ ಕ್ರಮಗಳನ್ನೇ ಹೆಚ್ಚಾಗಿ ಅವಲಂಬಿಸಿವೆ.

ಔಷಧಗಳು, ಲಸಿಕೆಗಳು ಅಥವಾ ಕಟಾವು ಮಾಡಿದ ತರಕಾರಿಗಳನ್ನು ಸಂಗ್ರಹಿಸಿಡುವ ಶೀತಲ ಗೋದಾಮುಗಳಲ್ಲಿನ ತಾಪಮಾನ ನಿಯಂತ್ರಣ ವ್ಯವಸ್ಥೆಗಳು ಏಕಾಏಕಿ ಸ್ಥಗಿತಗೊಂಡರೆ ಏನಾಗಬಹುದು ಎಂದು ಕಲ್ಪಿಸಿಕೊಳ್ಳಿ. ಇದರ ಪರಿಣಾಮ ವಾಣಿಜ್ಯ ನಷ್ಟಕ್ಕೆ ಮಾತ್ರ ಸೀಮಿತವಾಗದೆ, ಸಾರ್ವಜನಿಕ ಆರೋಗ್ಯದ ಸಮಸ್ಯೆಗಳಿಗೆ ಮತ್ತು ರೈತರ ಜೀವನೋಪಾಯಕ್ಕೆ ಅಡ್ಡಿಯಾಗುವ ಅಪಾಯವೂ ಇದೆ.

ಹೀಗಾಗಿ, ಇಂತಹ ವ್ಯವಸ್ಥೆಗಳ ರಕ್ಷಣೆಗೆ ಕೇವಲ ಆಂಟಿವೈರಸ್ ತಂತ್ರಾಂಶ ಅಳವಡಿಸುವುದಷ್ಟೇ ಸಾಕಾಗುವುದಿಲ್ಲ. ನಿರ್ವಾಹಕರು ಯಂತ್ರೋಪಕರಣಗಳ ತಂತ್ರಾಂಶವನ್ನು ನಿಯಮಿತವಾಗಿ ನವೀಕರಿಸಬೇಕು, ಬಲವಾದ ಪಾಸ್‌ವರ್ಡ್‌ಗಳನ್ನು ಬಳಸಬೇಕು, ದೂರದಿಂದಲೇ ಇವುಗಳನ್ನು ನಿಯಂತ್ರಿಸುವುದನ್ನು ನಿರ್ಬಂಧಿಸಬೇಕು. ಸಾಧ್ಯವಾದಷ್ಟೂ ಪ್ರಮುಖ ಯಂತ್ರೋಪಕರಣ ವ್ಯವಸ್ಥೆಗಳ ನಿಯಂತ್ರಣವನ್ನು ಪ್ರತ್ಯೇಕ ಕಂಪ್ಯೂಟರ್ ಜಾಲಗಳಲ್ಲಿ ಇರಿಸಬೇಕು.

ಸ್ವತಂತ್ರ ತಾಪಮಾನ ಎಚ್ಚರಿಕೆ ಅಲಾರಂಗಳು ಮತ್ತು ಮಾನವರೇ ನಿರ್ವಹಿಸಲು ಸಾದ್ಯವಾಗುವ ತುರ್ತು ನಿಯಂತ್ರಣ ವ್ಯವಸ್ಥೆಗಳೂ ಅಷ್ಟೇ ಮುಖ್ಯ. ಡಿಜಿಟಲ್ ವ್ಯವಸ್ಥೆ ವಿಫಲವಾದಾಗ ಅಥವಾ ಸೈಬರ್ ದಾಳಿಗೆ ಒಳಗಾದಾಗಲೂ ಅಪಾಯಕಾರಿ ಪರಿಸ್ಥಿತಿಗಳನ್ನು ಪತ್ತೆಹಚ್ಚಿ ತ್ವರಿತವಾಗಿ ಪ್ರತಿಕ್ರಿಯಿಸಲು ಸಿಬ್ಬಂದಿಗೆ ಸಾಧ್ಯವಾಗಬೇಕು.

ತಂತ್ರಜ್ಞಾನ ನಮ್ಮ ದೈನಂದಿನ ಬದುಕನ್ನು ಹೆಚ್ಚು ಸುಲಭ ಮತ್ತು ಪರಿಣಾಮಕಾರಿಯನ್ನಾಗಿಸಿರುವುದು ಸತ್ಯವೇ. ಆದರೆ ಸೂಕ್ತ ಭದ್ರತೆಯಿಲ್ಲದ ತಂತ್ರಜ್ಞಾನ ಕಾರ್ಯಗಳಿಂದ ಉಂಟಾಗಬಲ್ಲ ಸಮಸ್ಯೆಗಳು ಅವು ವಾಸ್ತವವಾಗಿ ಉಂಟಾಗುವ ತನಕ ನಮ್ಮ ಗಮನಕ್ಕೆ ಬರದಿರಬಹುದು.

ಫ್ರಾನ್ಸ್‌ನ ಸೂಪರ್‌ಮಾರ್ಕೆಟ್‌ಗಳಲ್ಲಿ ನಡೆದಿರುವ ಈ ಘಟನೆಗಳು ಭಾರತ ಸೇರಿದಂತೆ ಇತರ ರಾಷ್ಟ್ರಗಳಿಗೂ ಎಚ್ಚರಿಕೆ ನೀಡುತ್ತವೆ. ಜಗತ್ತು ಇಂದು ಹೆಚ್ಚು ಹೆಚ್ಚು ಸಂಪರ್ಕಿತವಾಗಿದ್ದು, ಇಲ್ಲಿ ರಾಷ್ಟ್ರೀಯ ಭದ್ರತೆ ಕೇವಲ ಸೇನಾ ನೆಲೆಗಳು ಮತ್ತು ಗಡಿಗಳಲ್ಲಿ ಮಾತ್ರವೇ ಆರಂಭಗೊಳ್ಳುವುದಿಲ್ಲ. ಬದಲಿಗೆ, ನಮ್ಮ ಆಹಾರ, ಔಷಧಗಳು ಮತ್ತು ದೈನಂದಿನ ಬದುಕನ್ನು ಸುರಕ್ಷಿತವಾಗಿಡುವ ಸಾಮಾನ್ಯ ಯಂತ್ರಗಳ ಒಳಗೂ ರಾಷ್ಟ್ರೀಯ ಭದ್ರತೆ ಅಡಗಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.