ವೊಯೇಜರ್-1: ಕಲ್ಪನೆಗೂ ಮೀರಿದ ಬಾಹ್ಯಾಕಾಶ ಪಯಣ (ಜಾಗತಿಕ ಜಗಲಿ)

1977ರಲ್ಲಿ ಉಡಾವಣೆಗೊಂಡ ವೊಯೇಜರ್‌ 1, ಭೂಮಿಯಿಂದ ಇಂದಿನ ತನಕ ಯಾವುದೇ ಮಾನವ ನಿರ್ಮಿತ ವಸ್ತು ಸಾಗಿರದಷ್ಟು ದೂರಕ್ಕೆ ಚಲಿಸಿದೆ.
ವೊಯೇಜರ್-1: ಕಲ್ಪನೆಗೂ ಮೀರಿದ ಬಾಹ್ಯಾಕಾಶ ಪಯಣ (ಜಾಗತಿಕ ಜಗಲಿ)
Updated on: 

ಬಾಹ್ಯಾಕಾಶಕ್ಕೆ ಯಂತ್ರವೊಂದನ್ನು ಕಳುಹಿಸಿ, ಅದಾದ ಸುದೀರ್ಘ 50 ವರ್ಷಗಳ ಬಳಿಕವೂ ಅದರಿಂದ ಸಂದೇಶಗಳನ್ನು ಸ್ವೀಕರಿಸುವುದನ್ನು ಒಮ್ಮೆ ಊಹಿಸಿಕೊಳ್ಳಿ. ಇದು ಕೇವಲ ಕಲ್ಪನೆಯ ಕಥೆಯಲ್ಲ! ನಾಸಾದ ವೊಯೇಜರ್‌ 1 ಬಾಹ್ಯಾಕಾಶ ನೌಕೆಯ ಅಸಾಧಾರಣ ನೈಜ ಕಥೆ. 1977ರಲ್ಲಿ ಉಡಾವಣೆಗೊಂಡ ವೊಯೇಜರ್‌ 1, ಭೂಮಿಯಿಂದ ಇಂದಿನ ತನಕ ಯಾವುದೇ ಮಾನವ ನಿರ್ಮಿತ ವಸ್ತು ಸಾಗಿರದಷ್ಟು ದೂರಕ್ಕೆ ಚಲಿಸಿದೆ. ಪ್ರಸ್ತುತ ಈ ಬಾಹ್ಯಾಕಾಶ ನೌಕೆ ನಮ್ಮ ಭೂಮಿಯಿಂದ ಒಂದು ಬೆಳಕಿನ ದೂರವನ್ನು ಕ್ರಮಿಸಿ, ಹೊಸ ಇತಿಹಾಸ ಬರೆಯುವ ಹಾದಿಯಲ್ಲಿದೆ!

ನಾಸಾ ನೀಡಿರುವ ಮಾಹಿತಿಗಳ ಪ್ರಕಾರ, ವೊಯೇಜರ್‌ 1 ನವೆಂಬರ್‌ 18, 2026ರ ಬುಧವಾರದಂದು, ಮಧ್ಯಾಹ್ನ ಭಾರತೀಯ ಕಾಲಮಾನದಲ್ಲಿ ಅಂದಾಜು 3:46ರ ಸುಮಾರಿಗೆ ಈ ಅಂತರವನ್ನು ತಲುಪಲಿದೆ. ಆ ವೇಳೆಗೆ, ಬಾಹ್ಯಾಕಾಶ ನೌಕೆ ಭೂಮಿಯಿಂದ ಅಂದಾಜು 16 ಬಿಲಿಯನ್‌ ಮೈಲಿ, ಅಥವಾ ಬಹುತೇಕ 26 ಬಿಲಿಯನ್‌ ಕಿಲೋಮೀಟರ್‌ ದೂರದಲ್ಲಿರಲಿದೆ.

ಅಷ್ಟಕ್ಕೂ, ಒಂದು ಬೆಳಕಿನ ದಿನ ಎಂದರೇನು? ಸರಳವಾಗಿ ಹೇಳುವುದಾದರೆ, ಒಂದು ಬೆಳಕಿನ ದಿನ ಎಂದರೆ ಒಂದು ಪೂರ್ತಿ ದಿನದಲ್ಲಿ ಬೆಳಕು ಸಾಗಬಹುದಾದ ಅಂತರ. ಬೆಳಕು ಪ್ರತಿ ಸೆಕೆಂಡಿಗೆ 3,00,000 ಕಿಲೋಮೀಟರ್‌ ವೇಗದಲ್ಲಿ ಸಾಗುತ್ತದೆ. ಅಂದರೆ, ಈ ವೇಗದಲ್ಲಿ ಬೆಳಕು ಒಂದೇ ಸೆಕೆಂಡಿನಲ್ಲಿ ಭೂಮಿಗೆ ಏಳಕ್ಕೂ ಹೆಚ್ಚು ಬಾರಿ ಪರಿಭ್ರಮಣೆ ನಡೆಸಬಲ್ಲದು. ಇದು ಪ್ರತಿ ಸೆಕೆಂಡಿಗೆ 1,86,000 ಮೈಲಿ, ಅಥವಾ ಗಂಟೆಗೆ 1.08 ಬಿಲಿಯನ್‌ ಕಿಲೋಮೀಟರ್‌ಗೆ ಸಮನಾಗಿರುತ್ತದೆ.

ಇಂತಹ ಅಸಾಮಾನ್ಯ ವೇಗದಲ್ಲಿ ಸಾಗಿದರೂ, ಭೂಮಿಯಿಂದ ಹೊರಟ ಬೆಳಕು ವೊಯೇಜರ್‌ 1 ನೌಕೆಯನ್ನು ತಲುಪಲು ಒಂದು ಸಂಪೂರ್ಣ ದಿನ ಪ್ರಯಾಣ ನಡೆಸಬೇಕಾಗುತ್ತದೆ!

ಈ ಅಗಾಧವಾದ ಅಂತರವನ್ನು ಅರ್ಥ ಮಾಡಿಕೊಳ್ಳಲು ಸೂರ್ಯನ ಬೆಳಕನ್ನು ಉದಾಹರಣೆಯಾಗಿ ಪರಿಗಣಿಸೋಣ. ಸೂರ್ಯನಿಂದ ಹೊರಟ ಬೆಳಕು, 150 ಮಿಲಿಯನ್‌ ಕಿಲೋಮೀಟರ್‌ ಅಂತರವನ್ನು ಕ್ರಮಿಸಿ, ಭೂಮಿಯನ್ನು ತಲುಪಲು ಕೇವಲ 8 ನಿಮಿಷ 20 ಸೆಕೆಂಡು ತೆಗೆದುಕೊಳ್ಳುತ್ತದೆ. ಬೆಳಕು ಭೂಮಿ ಮತ್ತು ನಮ್ಮ ಸೌರ ಮಂಡಲದ ಅತ್ಯಂತ ದೂರದ ಗ್ರಹವಾದ ನೆಪ್ಚೂನ್‌ ನಡುವೆ ಚಲಿಸಲು ಅಂದಾಜು 4 ಗಂಟೆ 10 ನಿಮಿಷ ತೆಗೆದುಕೊಳ್ಳುತ್ತದೆ. ಆದರೆ, ಗ್ರಹಗಳು ನಿರಂತರವಾಗಿ ಚಲಿಸುತ್ತಿರುವುದರಿಂದ, ಈ ಸಮಯ ಬದಲಾಗುತ್ತದೆ.

ವೊಯೇಜರ್‌ 1 ಬಾಹ್ಯಾಕಾಶ ನೌಕೆ ಈ ಅಂತರವನ್ನು ಕ್ರಮಿಸಲು 49 ವರ್ಷ, 2 ತಿಂಗಳು, ಮತ್ತು 11 ದಿನಗಳ ಕಾಲ ಪ್ರಯಾಣಿಸಿದೆ. ಬೆಳಕಿನ ದಿನ ಎನ್ನುವುದು ಅಂತರವನ್ನು ಅಳೆಯುತ್ತದೆಯೇ ಹೊರತು, ಬಾಹ್ಯಾಕಾಶ ನೌಕೆ ಪ್ರಯಾಣಿಸಲು ತೆಗೆದುಕೊಳ್ಳುವ ಸಮಯವನ್ನಲ್ಲ ಎಂದು ನಾಸಾ ವಿವರಿಸಿದೆ. ವೊಯೇಜರ್‌ 1 ಸ್ವತಃ ಪ್ರತಿ ಗಂಟೆಗೆ 61,000 ಕಿಲೋಮೀಟರ್‌ ಅಥವಾ 38,000 ಮೈಲಿಯಷ್ಟು ವೇಗದಲ್ಲಿ ಸಾಗುತ್ತದೆ.

ವೊಯೇಜರ್-1: ಕಲ್ಪನೆಗೂ ಮೀರಿದ ಬಾಹ್ಯಾಕಾಶ ಪಯಣ (ಜಾಗತಿಕ ಜಗಲಿ)
ಊಹಿಸಲಾಗದ ಪಥ, ನಿಖರ ದಾಳಿ: ಸೇನೆ ಸೇರಲು ಸಜ್ಜಾದ 'ಪ್ರಳಯ'!

ವೊಯೇಜರ್‌ 1 ಒಂದು ಅವಳಿ ಬಾಹ್ಯಾಕಾಶ ನೌಕೆಯಾದ ವೊಯೇಜರ್‌ 2 ಅನ್ನೂ ಹೊಂದಿದೆ. ಉಭಯ ಬಾಹ್ಯಾಕಾಶ ನೌಕೆಗಳೂ 1977ರಲ್ಲಿ ಉಡಾವಣೆಗೊಂಡಿದ್ದು, ಕೇವಲ ಐದು ವರ್ಷಗಳ ಕಾಲ ಕಾರ್ಯಾಚರಿಸುವ ನಿರೀಕ್ಷೆ ಹೊಂದಿದ್ದವು. ಅಚ್ಚರಿಯ ಅಂಶವೆಂದರೆ, ವೊಯೇಜರ್‌ 2 ಮೊದಲು ಭೂಮಿಯಿಂದ ಉಡಾವಣೆಗೊಂಡಿದ್ದರೂ, ಬಳಿಕ ಹೊರಟ ವೊಯೇಜರ್‌ 1 ಹೆಚ್ಚು ವೇಗದ ಪಥವನ್ನು ಅನುಸರಿಸಿ, ಕ್ರಮೇಣ ಹೆಚ್ಚು ದೂರಕ್ಕೆ ಸಾಗಿತು.

ಎರಡೂ ಬಾಹ್ಯಾಕಾಶ ನೌಕೆಗಳು ಬೇರೆ ಬೇರೆ ದಿಕ್ಕುಗಳಲ್ಲಿ ಸಾಗಿದ್ದವು. ವೊಯೇಜರ್‌ 1 ಬಹುತೇಕ ಗ್ರಹಗಳು ಸೂರ್ಯನ ಸುತ್ತ ಚಲಿಸುವ ಪಥದ ಉತ್ತರ ದಿಕ್ಕಿಗೆ ಸಾಗಿದರೆ, ವೊಯೇಜರ್‌ 2 ದಕ್ಷಿಣಕ್ಕೆ ಸಾಗಿತ್ತು. ವೊಯೇಜರ್‌ 2 ಹೆಚ್ಚು ದೀರ್ಘವಾದ ಪಥದಲ್ಲಿ ಸಾಗಿ, ಯುರೇನಸ್‌ ಮತ್ತು ನೆಪ್ಚೂನ್‌ ಗ್ರಹಗಳನ್ನು ಅನ್ವೇಷಣೆ ನಡೆಸಿತ್ತು. ವೊಯೇಜರ್‌ 2 ನೌಕೆ ನವೆಂಬರ್‌ 2035ರಲ್ಲಿ ಭೂಮಿಯಿಂದ ಒಂದು ಬೆಳಕಿನ ದೂರವನ್ನು ತಲುಪಬಹುದು ಎಂದು ನಾಸಾ ಅಂದಾಜಿಸಿದೆ.

ವೊಯೇಜರ್‌ 1 ತನ್ನ ಮೂಲ ಯೋಜನೆಯಾದ ಗ್ರಹಗಳ ಅಧ್ಯಯನವನ್ನು 1980ರಲ್ಲಿ ಶನಿ ಗ್ರಹವನ್ನು ಬಳಸಿ ಸಾಗಿದಾಗಲೇ ಪೂರ್ಣಗೊಳಿಸಿತ್ತು. ಆದರೆ, ಅಲ್ಲಿಗೇ ಅದರ ಪ್ರಯಾಣ ಅಂತ್ಯಗೊಳ್ಳಲಿಲ್ಲ. ವೊಯೇಜರ್‌ 1 ನಮ್ಮ ಸೌರಮಂಡಲದ ದೂರ ದೂರದ ಸ್ಥಳಗಳಿಗೆ ತನ್ನ ಪ್ರಯಾಣವನ್ನು ಮುಂದುವರಿಸಿತು.

2004ರಲ್ಲಿ, ವೊಯೇಜರ್‌ 1 ಸೌರ ಮಾರುತಗಳು ಕಡಿಮೆಯಾಗುವ ಒಂದು ಪ್ರದೇಶವನ್ನು ಪ್ರವೇಶಿಸಿತು. ಸೌರ ಮಾರುತಗಳು ಎಂದರೆ ಸೂರ್ಯನಿಂದ ಬಿಡುಗಡೆಯಾಗುವ ಸಣ್ಣ ಕಣಗಳ ಪ್ರವಾಹವಾಗಿದೆ. ಈ ಕಣಗಳು ಇಲೆಕ್ಟ್ರಿಕ್‌ ಚಾರ್ಜನ್ನು ಹೊಂದಿದ್ದು, ಪ್ರತಿ ಗಂಟೆಗೆ 1.6 ಮಿಲಿಯನ್‌ ಕಿಲೋಮೀಟರ್‌ ಸಾಗಬಲ್ಲವು. ಸೂರ್ಯನಿಂದ ದೂರ ಸಾಗಿದಂತೆ, ಇವು ಬಾಹ್ಯಾಕಾಶದಲ್ಲಿರುವ ಇತರ ವಸ್ತುಗಳಿಗೆ ಎದುರಾಗಿ, ಕ್ರಮೇಣ ತಮ್ಮ ವೇಗ ಕಳೆದುಕೊಳ್ಳುತ್ತವೆ.

ವೊಯೇಜರ್-1: ಕಲ್ಪನೆಗೂ ಮೀರಿದ ಬಾಹ್ಯಾಕಾಶ ಪಯಣ (ಜಾಗತಿಕ ಜಗಲಿ)
ಭಾರತದ 'NavIC' ಜಾಗತಿಕ ಶಕ್ತಿಯಾಗಬಲ್ಲದೇ?

ವಿಜ್ಞಾನಿಗಳು ಈ ಬದಲಾವಣೆಗಳನ್ನು ಗಮನಿಸುತ್ತಾ, ವೊಯೇಜರ್‌ 1 ಯಾವಾಗ ಹೀಲಿಯೋಪಾಸ್‌ ತಲುಪಬಹುದು ಎಂದು ಅಂದಾಜಿಸಲು ಪ್ರಯತ್ನಿಸಿದ್ದಾರೆ. ಹೀಲಿಯೋಪಾಸ್‌ ಎನ್ನುವುದು ಒಂದು ಗಡಿಯಾಗಿದ್ದು, ಇಲ್ಲಿ ಸೌರ ಮಾರುತಗಳು ನಕ್ಷತ್ರಗಳ ನಡುವಿನ ವಸ್ತುಗಳನ್ನು ಎದುರಾಗುತ್ತವೆ. ಈ ಗಡಿಯಾಚೆಗೆ ಅಂತರಾತಾರಾ (ಇಂಟರ್‌ಸ್ಟೆಲ್ಲಾರ್) ಬಾಹ್ಯಾಕಾಶವಿದೆ. ಹಾಗೆಂದರೆ ನಕ್ಷತ್ರಗಳ ನಡುವೆ ಇರುವ ಅಗಾಧವಾದ ಪ್ರದೇಶ.

ಈ ಗಡಿಯನ್ನು ದಾಟಲು ವೊಯೇಜರ್ 1 ಇನ್ನೂ ಹಲವಾರು ವರ್ಷಗಳನ್ನೇ ತೆಗೆದುಕೊಳ್ಳಬಹುದು ಎಂದು ವಿಜ್ಞಾನಿಗಳು ಆರಂಭದಲ್ಲಿ ಭಾವಿಸಿದ್ದರು. ಆದರೆ, ಅನಂತರದ ಲೆಕ್ಕಾಚಾರಗಳು ವೊಯೇಜರ್‌ 1 ನೌಕೆ ಆಗಸ್ಟ್‌ 2012ರಲ್ಲೇ ಅಂತರತಾರಾ ಬಾಹ್ಯಾಕಾಶವನ್ನು ಪ್ರವೇಶಿಸಿರುವುದನ್ನು ಖಾತ್ರಿಪಡಿಸಿದವು. ವೊಯೇಜರ್‌ 2 ಇದೇ ಗಡಿಯನ್ನು ನವೆಂಬರ್‌ 2018ರಲ್ಲಿ ದಾಟಿತು.

ವೊಯೇಜರ್‌ 1 ಯಾವುದೇ ಗಗನಯಾತ್ರಿಯನ್ನು ಹೊಂದಿಲ್ಲದ ಕಾರಣ ಅದನ್ನು ಸ್ಪೇಸ್‌ ಪ್ರೋಬ್‌ ಎಂದು ಕರೆಯಲಾಗುತ್ತದೆ. ಸ್ಪೇಸ್‌ ಪ್ರೋಬ್‌ ಎನ್ನುವುದು ಬಾಹ್ಯಾಕಾಶದ ಅನ್ವೇಷಣೆ ನಡೆಸಿ, ವೈಜ್ಞಾನಿಕ ಮಾಹಿತಿಗಳನ್ನು ಕಲೆಹಾಕಲು ಬಳಸುವ ಯಂತ್ರವಾಗಿದೆ. ಇದರ ಉಪಕರಣಗಳು ಕಾಂತಕ್ಷೇತ್ರ, ಸಣ್ಣಪುಟ್ಟ ಧೂಳಿನ ಕಣಗಳು ಮತ್ತು ಗ್ಯಾಲಾಕ್ಟಿಕ್‌ ಕಾಸ್ಮಿಕ್‌ ಕಿರಣಗಳನ್ನು ಅಳೆಯುತ್ತವೆ. ಇವು ನಮ್ಮ ಸೌರಮಂಡಲದ ಆಚೆಯಿಂದಲೂ ಬರುವ ಶಕ್ತಿಶಾಲಿ ಕಣಗಳಾಗಿವೆ.

ಎರಡೂ ವೊಯೇಜರ್‌ ನೌಕೆಗಳು ರೇಡಿಯೋ ಆಕ್ಟಿವ್‌ ಪ್ಲುಟೋನಿಯಂನಿಂದ ಬಿಡುಗಡೆಯಾಗುವ ಉಷ್ಣದಿಂದ ತಮ್ಮ ಶಕ್ತಿ ಪಡೆದುಕೊಳ್ಳುತ್ತವೆ. ಈ ವಿಶೇಷ ಇಂಧನ ವ್ಯವಸ್ಥೆ ಅವುಗಳ ವಿದ್ಯುತ್‌ ಪೂರೈಕೆ ಕ್ರಮೇಣ ಇಳಿಮುಖಗೊಂಡಿದ್ದರೂ ದಶಕಗಳ ಕಾಲ ಅವು ಕಾರ್ಯಾಚರಿಸುವಂತೆ ಮಾಡಿದೆ.

ವೊಯೇಜರ್‌ 1 ಈಗ ಗ್ಲೀಸ್‌ 445 ಅಥವಾ ಎಸಿ +79 3888 ಎನ್ನುವ, ಭೂಮಿಯಿಂದ 17 ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರದತ್ತ ಸಾಗುತ್ತಿದೆ. ಇದು ಉರ್ಸಾ ಮೈನರ್‌ ನಕ್ಷತ್ರಪುಂಜದಲ್ಲಿದೆ. ಒಂದು ಬೆಳಕಿನ ವರ್ಷ ಎಂದರೆ, ಒಂದು ವರ್ಷದ ಅವಧಿಯಲ್ಲಿ ಬೆಳಕು ಸಾಗುವ ಅಂತರವಾಗಿದೆ.

ವೊಯೇಜರ್-1: ಕಲ್ಪನೆಗೂ ಮೀರಿದ ಬಾಹ್ಯಾಕಾಶ ಪಯಣ (ಜಾಗತಿಕ ಜಗಲಿ)
ಹೊಸ ಅವತಾರದಲ್ಲಿ ಗರ್ಜಿಸಲು ಸಜ್ಜಾದ ಬ್ರಹ್ಮೋಸ್ ಕ್ಷಿಪಣಿ

ಅಂದಾಜು 40,000 ವರ್ಷಗಳಲ್ಲಿ, ವೊಯೇಜರ್‌ 1 ಈ ನಕ್ಷತ್ರದಿಂದ 1.7 ಬೆಳಕಿನ ವರ್ಷ ದೂರದಲ್ಲಿ ಹಾದುಹೋಗಬಹುದು. ಆ ಬಾಕಿ ಉಳಿವ ಅಂತರವನ್ನು ಕ್ರಮಿಸಲು ಬೆಳಕಿಗೂ 1.7 ವರ್ಷ ಬೇಕಾಗಬಹುದು. ಈಗಿನ ವೇಗದಲ್ಲಿ, ಕೇವಲ ಒಂದು ಬೆಳಕಿನ ವರ್ಷವನ್ನು ಕ್ರಮಿಸಲೂ ಬಾಹ್ಯಾಕಾಶ ನೌಕೆಗೆ ಅಂದಾಜು 18,000 ವರ್ಷಗಳು ಬೇಕಾಗುತ್ತವೆ.

ನಮ್ಮ ಮುಂದಿರುವ ಬಹುದೊಡ್ಡ ಸಾಧನೆ ಎಂದರೆ ವೊಯೇಜರ್‌ 1 ಕ್ರಮಿಸಿರುವ ಅಂತರವಲ್ಲ. ಬದಲಿಗೆ, ಬಹುತೇಕ ಅರ್ಧ ಶತಮಾನದ ಹಿಂದೆ ನಿರ್ಮಿಸಿರುವ ಒಂದು ಯಂತ್ರ ಇಂದಿಗೂ ಯಾವ ಮನುಷ್ಯರೂ ಭೇಟಿ ನೀಡಿರದ ದೂರದಿಂದ ಮಹತ್ವದ ಮಾಹಿತಿಗಳನ್ನು ರವಾನಿಸುತ್ತಿರುವುದಾಗಿದೆ!

ಈ ಅಸಾಧಾರಣ ಪಯಣದ ಹಿಂದೆ ಯೋಜನೆಯನ್ನು ಜೀವಂತವಾಗಿಡಲು ನಿರಂತರ ಪರಿಶ್ರಮಿಸಿದ ತಲೆಮಾರುಗಳ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ಕಠಿಣ ಪರಿಶ್ರಮವಿದೆ. ವೊಯೇಜರ್‌ 1 ನಮಗೆ ಮಾನವರ ಕುತೂಹಲಕ್ಕೆ ಯಾವ ಗಡಿಯೂ ಇಲ್ಲ ಎನ್ನುವುದನ್ನು ನೆನಪಿಸುತ್ತದೆ. ಇದರ ಉಪಕರಣಗಳು ಕಾರ್ಯಾಚರಿಸುವುದನ್ನು ಸ್ಥಗಿತಗೊಳಿಸಿದ ಬಳಿಕವೂ, ಬಾಹ್ಯಾಕಾಶ ನೌಕೆ ಬಾಹ್ಯಾಕಾಶದ ಮೂಲಕ ಚಲಿಸುವುದನ್ನು ಮುಂದುವರಿಸಲಿದೆ. ಆ ಮೂಲಕ ಅರಿಯದ ಬಾಹ್ಯಾಕಾಶವನ್ನು ಅರಿಯಬೇಕೆನ್ನುವ ಮಾನವ ಜನಾಂಗದ ಕನಸನ್ನು ಹೊತ್ತು ಸಾಗಲಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X