ಕುಡಿತದ ಕತೆಗೆ ಅಂತ್ಯ ಹಾಡುವುದೆಂತು?
ಕೆಲವು ದಿನಗಳ ಹಿಂದೆಯಷ್ಟೇ ಬ್ಯಾಂಕ್ ಒಂದಕ್ಕೆ ಹೋಗಿದ್ದೆ. ಅಲ್ಲಿ ಬೆಳಗ್ಗೆಯೇ ಓರ್ವ ಕ್ಯಾಷ್ ಕೌಂಟರಿಗೆ ಬಂದು 'ಸ್ವಾಮಿ, ನನ್ನ ಅಕೌಂಟಲ್ಲಿ ಬ್ಯಾಲೆನ್ಸ್ ಎಷ್ಟಿದೆ ನೋಡಿ ಹೇಳಿ' ಎಂದು ವಿನಂತಿಸಿದ. ಆತನ ಕೈ ನಡುಗುತ್ತಿತ್ತು. ದೇಹ ವಾಲುತ್ತಿತ್ತು. ಕ್ಯಾಷಿಯರ್ ಆತನ ಪಾಸ್ ಪುಸ್ತಕ ನೋಡಿ 865 ರುಪಾಯಿ ಇದೆ ಎಂದರು. ಸಹಿ ಮಾಡಿ ಕೊಟ್ಟ ಆತ ಐನೂರು ರುಪಾಯಿ ಪಡೆದುಕೊಂಡು ವಾಲುತ್ತಲೇ ಹೊರನಡೆದ.
'ಏನು ಸ್ವಾಮಿ ಬೆಳಿಗ್ಗೆಯೇ ಆತ ಇಷ್ಟೊಂದು ಕುಡಿದು ಬಂದಿದ್ದಾನಲ್ಲಾ?' ಎಂದು ಕ್ಯಾಷಿಯರ್ಗೆ ಕೇಳಿದೆ. ಆತನ ಉತ್ತರ ಆಶ್ಚರ್ಯ ತಂದಿತು. 'ಆತ ಸರ್ಕಾರಿ ಕಚೇರಿಯೊಂದರಲ್ಲಿ ಉದ್ಯೋಗಿ. ಒಳ್ಳೆಯ ಸಂಬಳವಿದೆ. ಅವನಿಗೆ ದುಡ್ಡು ಕೊಡಬೇಡಿ ಎಂದು ಆತನ ಸಹೋದ್ಯೋಗಿಗಳು ಹೇಳುತ್ತಾರೆ. ಆದರೆ ಆತನ ಖಾತೆಯಲ್ಲಿ ಹಣ ಇರುವಾಗ ನಾವು ಕೊಡದೇ ಇರಲು ಸಾಧ್ಯವೇ? ಎಲ್ಲಾ ಆತನ ಹಣೆಬರಹ' ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.
ಕೆಲವು ನೌಕರರು ಇದೇ ರೀತಿ ಕುಡಿತಕ್ಕೇ ಶರಣಾಗಿ ಯಾವಾಗಲೂ ಕಚೇರಿಗೆ ಗೈರು ಹಾಜರಾಗುತ್ತಾ, ಕೈಯಲ್ಲಿ ಹಣ ಪೂರ್ತಿ ಖಾಲಿಯಾದಾಗಲಷ್ಟೇ ಕಚೇರಿಗೆ ಹಾಜರಾಗುವ ಮಂದಿಯನ್ನೂ ನೋಡಿದ್ದೇವೆ. ಸಹೋದ್ಯೋಗಿಗಳಲ್ಲಿ ಸಾಲ ಮಾಡುತ್ತಾ ತಿಂಗಳ ಕೊನೆಗೆ ಏನೂ ಉಳಿಸಲಾಗದೆ ಮನೆಗೆ ಬರಿಗೈಯಲ್ಲೇ ಹೋಗುವುದಿದೆ. ಕುಡಿತದ ಕಬಂಧ ಬಾಹು ಈ ರೀತಿ ಎಷ್ಟು ಮಂದಿಯನ್ನು ಅಪ್ಪಿ ಮುದ್ದಿಸಿ ನಾಶ ಮಾಡುತ್ತಿದೆಯೋ?
ಇತ್ತೀಚೆಗೆ ಮಂಗಳೂರಿನಲ್ಲಿ ಓರ್ವ ಯುವತಿ ಮಾದಕ ದ್ರವ್ಯ ಲಭಿಸಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ತದನಂತರ ಆ ಸುದ್ದಿ ಅಲ್ಲಿಗೇ ತಣ್ಣಗಾಯಿತು. ಪತ್ರಿಕೆಗಳೂ ಕೂಡ ಆ ಸುದ್ದಿಯನ್ನು ಪ್ರಕಟಿಸುವುದಕ್ಕೆ ಸೀಮಿತವಾದವೇ ಹೊರತು ಪರಿಹಾರ ಮಾರ್ಗಗಳನ್ನು ಮಾತ್ರ ಪ್ರಕಟಿಸಲಿಲ್ಲ.
ಮಾದಕ ದ್ರವ್ಯದ ಮಾಯಾಲೋಕ ವ್ಯಕ್ತಿಯ ಸರ್ವನಾಶಕ್ಕೆ ನಾಂದಿ ಹಾಡುತ್ತದೆ. ಈ ನಿಟ್ಟಿನಲ್ಲಿ ಮದ್ಯ ಮುಕ್ತಿಗೆ ನಾವು ಕೆಲವು ಹೆಜ್ಜೆಗಳನ್ನಿಡುವುದು ಅತ್ಯಗತ್ಯ. ಇತ್ತೀಚೆಗೆ ಉಡುಪಿಯಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಸಂಯಮ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಬಗ್ಗೆ ಕೆಲವು ಅನಿಸಿಕೆಗಳನ್ನು ಓದುಗರ ಮುಂದೆ ಹಂಚಿಕೊಳ್ಳುವ ಪ್ರಯತ್ನ ಈ ಲೇಖನದ್ದು.
ಪ್ರಶಸ್ತಿಯನ್ನು ಉಡುಪಿಯ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ನಿರ್ದೇಶಕ, ಮನೋವೈದ್ಯ ಡಾ.ಪಿ.ವಿ. ಭಂಡಾರಿಯವರಿಗೆ ನೀಡಲಾಯಿತು. ಅವರು ಮನೋವೈದ್ಯಕೀಯ ಸೇವೆಗಿಂತಲೂ ಮದ್ಯ ವರ್ಜನ ಶಿಬಿರ ನಡೆಸುವ ಮೂಲಕ ವ್ಯಸನಿಗಳನ್ನು ಅದರಿಂದ ಮುಕ್ತಗೊಳಿಸುವಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರೂ ತಪ್ಪಾಗಲಾರದು.
'ಈ ವ್ಯಸನಕ್ಕೆ ಯಾಕೆ ಜನ ಮರುಳಾಗುತ್ತಾರೆ?' ಎಂದು ಅವರಲ್ಲಿ ಕೇಳಿದರೆ ಹಲವು ಕಾರಣಗಳನ್ನು ಪಟ್ಟಿ ಮಾಡುತ್ತಾರೆ. 'ದುಃಖ ಮರೆಯಲು, ಮಾನಸಿಕ ಒತ್ತಡ ಕಡಿಮೆ ಮಾಡಲು, ಸಂತೋಷಕ್ಕಾಗಿ, ಗೆಳೆಯರ ಸಹವಾಸ, ಸಿಟ್ಟು, ಸೇಡಿನ ಮನೋಭಾವ ಹೀಗೆ ಹಲವಾರು ಕಾರಣಗಳು. ಇನ್ನು ಕೆಲವರಿಗೆ ಪ್ರತಿಷ್ಠಿತನೆಂದು ಗುರುತಿಸಿಕೊಳ್ಳುವ ಆಸೆ, ಸಿನಿಮಾದ ಹೀರೋಗಳಂತಾಗಬೇಕು ಎಂಬ ಭಾವನೆಯಿಂದ ಇಂದಿನ ಯುವ ಜನತೆ ಇದಕ್ಕೆ ಬಲಿಯಾಗುತ್ತಿದ್ದಾರೆ. ಅನ್ಯ ದೇಶದಲ್ಲಿ ಕುಡಿತ ಕಡಿಮೆಯಾಗುತ್ತಿದ್ದರೆ ಭಾರತದಲ್ಲಿ ಹೆಚ್ಚುತ್ತಿದೆ' ಎಂದು ವಿಷಾದ ವ್ಯಕ್ತಪಡಿಸಿದರು.
ಮದ್ಯಪಾನ ಸಂಯಮ ಮಂಡಳಿಯ ಪ್ರಥಮ ಸಾಲಿನ ಪ್ರಶಸ್ತಿಯು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಸಂದಿರುವುದನ್ನು ಇಲ್ಲಿ ಸ್ಮರಿಸಬಹುದು. ಅವರು ಮಾತನಾಡುತ್ತ 'ಕುಡುಕರು ಪಾಪಿಗಳಲ್ಲ, ಅಪರಾಧಿಗಳಲ್ಲ, ಆದರೆ ಅಮಲು ಪದಾರ್ಥ ಹೊಟ್ಟೆ ಸೇರಿದ ನಂತರ ಏನು ಮಾಡುತ್ತಿದ್ದೇವೆ ಎಂಬ ಅರಿವು ಅವರಿಗಿರುವುದಿಲ್ಲ. ಈ ವ್ಯಸನದಿಂದ ದೂರವಾಗಲು ಸಂಯಮವೊಂದೇ ಮಾರ್ಗ' ಎಂದು ಸಲಹೆ ನೀಡಿದರು.
ಅಂತಾರಾಷ್ಟ್ರೀಯ ಖ್ಯಾತಿಯ ಅಂಕಣಕಾರ ಎಂ.ವಿ.ಕಾಮತ್ ಅವರು ಇಂದಿನ ಯುವ ಪೀಳಿಗೆ ಅದರಲ್ಲೂ ಇಂದಿನ ಹರೆಯದ ಹೆಣ್ಣು ಮಕ್ಕಳು ಕುಡಿಯುವ ಚಟ ಬೆಳೆಸಿಕೊಂಡಿರುವ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತಾರೆ. ಹೋಂಸ್ಟೇ ಪ್ರಕರಣದಲ್ಲಿ ಬರ್ತ್ಡೇ ಪಾರ್ಟಿಯ ನೆಪದಲ್ಲಿ ಕುಡಿತಕ್ಕಾಗಿ ಒಂದೆಡೆ ಸೇರುವುದು ಎಷ್ಟು ಸರಿ? ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಹಿರಿಯರೆದುರು, ಬಂಧುಗಳ ಸಮ್ಮುಖದಲ್ಲಿಯೇ ಆಚರಿಸುವುದನ್ನು ಬಿಟ್ಟು ಹೊರಗಡೆ ಹೋಂಸ್ಟೇಯೊಂದರಲ್ಲಿ ಯುವಕರ ಜೊತೆಗೂಡಿ ಮದ್ಯಪಾನದ ಮೂಲಕವೇ ಆಚರಿಸಬೇಕೇ ಎಂದು ಪ್ರಶ್ನಿಸುತ್ತಾರೆ.
ಈ ಸಂದರ್ಭದಲ್ಲಿ ನಾವಿಡಬೇಕಾದ ತ್ರಿವಿಕ್ರಮ ಹೆಜ್ಜೆಗಳು ಎಂಬ ಕಿರುಹೊತ್ತಿಗೆಯೊಂದನ್ನು ಬಿಡುಗಡೆಗೊಳಿಸಲಾಯಿತು. ಕಿರುಹೊತ್ತಿಗೆಯಲ್ಲಿ 'ಪ್ರಜಾಪ್ರಭುತ್ವವನ್ನು ಸೋಲಿನ ದವಡೆಯಿಂದ ಪಾರು ಮಾಡಬೇಕು ಎಂದಾದಲ್ಲಿ ಚುನಾವಣೆಯಲ್ಲಿ ಮದ್ಯದ ಪಾತ್ರ ಇರಲೇ ಕೂಡದು. ಚುನಾವಣೆಯಲ್ಲಿ ಮದ್ಯದ ಹಂಚಿಕೆಯನ್ನು ನಿಷೇಧಿಸಲಾಗಿದೆ ನಿಜ, ಆದರೆ ಅದು ಕಾಗದದ ಮೇಲಷ್ಟೇ ಉಳಿದುಕೊಂಡಿದೆ. ಅದು ನಮ್ಮ ರಾಷ್ಟ್ರ ಜೀವನದಲ್ಲಿ ಜಾರಿಗೆ ಬರಬೇಕು ಎಂದಾದಲ್ಲಿ ಮದ್ಯದ ವಿರುದ್ಧ ಬಹುದೊಡ್ಡ ರಚನಾತ್ಮಕ ಆಂದೋಲನ ನಡೆಯಬೇಕಿದೆ' ಎಂದು ಹೇಳಲಾಗಿದೆ. ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಈ ಕೈಪಿಡಿಯ ಸದುಪಯೋಗ ಅರ್ಥಪೂರ್ಣವಾಗಿ ಆಗಬೇಕಿದೆ.
ಕುಡಿತ ಶುರುವಾಗುವ ಬಹುಮುಖ್ಯವಾದ ದಿನವೆಂದರೆ ಡಿಸೆಂಬರ್ 31ರ ಮಧ್ಯರಾತ್ರಿ. ವಾಸ್ತವವಾಗಿ ಅದು ಕೇವಲ ಮಧ್ಯರಾತ್ರಿಯಲ್ಲ, ಮದ್ಯರಾತ್ರಿಯೂ ಹೌದು. ಹೊಸ ವರ್ಷವನ್ನು ಸ್ವಾಗತಿಸುವುದೆಂದರೆ ಕುಡಿತದ ಮೂಲಕವೇ ಸ್ವಾಗತಿಸಬೇಕೆಂಬ ಆಧುನಿಕ ಮೌಢ್ಯವೊಂದು ನಮ್ಮ ಯುವ ಜನಾಂಗದ ಮೆದುಳನ್ನು ಆವರಿಸಿಬಿಟ್ಟಿದೆ. ಅಂದು ಆರಂಭವಾಗುವ ಕುಡಿತ, ಮುಂದಿನ ದಿನಗಳಲ್ಲಿ 'ದಿನ ಆರಂಭವಾಗುವುದೇ ಕುಡಿತದ ಮೂಲಕ' ಎಂಬ ಸ್ಥಿತಿಯನ್ನು ತಲುಪಿಸುವುದು ವಿಷಾದಕರ. ಈ ನಿಟ್ಟಿನಲ್ಲಿ ಮದ್ಯಪಾನ ಸಂಯಮ ಮಂಡಳಿಯ ಪ್ರಯತ್ನದೊಂದಿಗೆ ನಾವೂ ಸಕ್ರಿಯವಾಗಿ ಕೈಜೋಡಿಸಿ ಕುಡಿತದ ಕತೆಗೆ ಅಂತ್ಯ ಹಾಡುವ ಮನಸ್ಸು ಮಾಡೋಣ.
- ಎನ್.ಸ್ವಾತಿ, ಉಡುಪಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

