ಚೀನಾದ ವಿ.ವಿ.ಗಳ ಜತೆ ಕೈ ಜೋಡಿಸಬೇಕೆ?
ಏಪ್ರಿಲ್ 4, 2013 ರಂದು 'ದಿ ಹಿಂದು' ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದನ್ನು ಓದಿದೆ- 'ಚೀನಾದ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಶ್ರಮಿಸುತ್ತಿರುವ 'ಬೀಜಿಂಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)' ಏಪ್ರಿಲ್ 3ರಂದು ಕರ್ನಾಟಕದ ಮಣಿಪಾಲ್ ವಿಶ್ವವಿದ್ಯಾಲಯದೊಡನೆ ಒಪ್ಪಂದ ಪತ್ರವೊಂದಕ್ಕೆ ಸಹಿ ಹಾಕಿದೆ. ಎರಡೂ ವಿಶ್ವವಿದ್ಯಾಲಯಗಳು ಮುಂದಿನ ದಿನಗಳಲ್ಲಿ ಜಂಟಿ ಸಂಶೋಧನೆಯಲ್ಲಿ ತೊಡಗಲು ಈ ಒಪ್ಪಂದ ಸಹಾಯಕವಾಗಲಿದೆ. ಇನ್ನು ಮಣಿಪಾಲ್ ವಿಶ್ವವಿದ್ಯಾಲಯ ಏಪ್ರಿಲ್ 5 ರಂದು ಬಿಐಟಿಯ ಸಹೋದರ ವಿಶ್ವವಿದ್ಯಾಲಯವಾದ ನನ್ಜಿಂಗ್ ಯುನಿವರ್ಸಿಟಿ ಆಫ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ನೊಂದಿಗೂ ಒಪ್ಪಂದ ಪತ್ರಕ್ಕೆ ಸಹಿ ಹಾಕಲಿದೆ. ಈ ಎರಡೂ ವಿಶ್ವವಿದ್ಯಾಲಯಗಳು ಚೀನಾದ ಬಾಹಾಕ್ಯಾಶ ಸಂಶೋಧನೆಯಲ್ಲಿ ತೊಡಗಿಸಿಕೊಂಡಿವೆ. ಅಲ್ಲದೆ, ಆ ದೇಶದ ರಕ್ಷಣಾ ಯೋಜನೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಯಲ್ಲೂ ಅವು ಪ್ರಮುಖ ಪಾತ್ರ ವಹಿಸುತ್ತಿವೆ' ಎನ್ನುತ್ತದೆ ಆ ವರದಿ.
ಈಗ ವಿಷಯಕ್ಕೆ ಬರೋಣ. 'ಸಂಶೋಧನೆ' ಮತ್ತು 'ಬೇಹುಗಾರಿಕೆ'ಗಳನ್ನು ಸಮಾನಾರ್ಥಕ ಪದಗಳು ಎಂದೇ ಚೀನಾ ಭಾವಿಸಿದೆ. ಚೀನಾದ ವಿ.ವಿ.ಗಳು, ಪರಮಾಣು ಮತ್ತು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಮೊದಲಿನಿಂದಲೂ ದೇಶದ ಇಂಟೆಲಿಜೆನ್ಸ್ ಆಫೀಸರುಗಳಿಗೆ ಶೈಕ್ಷಣಿಕ ಪರದೆ ಹಾಕಿ ಬಚ್ಚಿಡುವ ಕೆಲಸದಲ್ಲಿ ತೊಡಗಿಸಿಕೊಂಡಿವೆ. ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)ಗೆ ವಿದೇಶಿ ಸೈಬರ್ ಜಾಲಗಳನ್ನು ಭೇದಿಸುವಂತಹ ಕ್ಷಮತೆ ನೀಡಲು ಸ್ಥಾಪಿಸಲಾದ ಸೈಬರ್ ಇಂಟೆಲಿಜೆನ್ಸ್ ಎನ್ನುವ ಸಂಸ್ಥೆಯೊಂದಿಗೆ ಶಾಂಘಾಯ್ನ ಪ್ರಖ್ಯಾತ ವಿಶ್ವವಿದ್ಯಾಲಯವೊಂದು ಕೈಜೋಡಿಸಿದೆ ಎನ್ನುವ ಆರೋಪ ಮೊದಲಿನಿಂದಲೂ ಇದೆ.
ಹಾಗಾಗೆ ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳು ಮತ್ತು ಅದರಲ್ಲೂ ಅಮೆರಿಕದ ಗುಪ್ತಚರ ತಂಡಕ್ಕೆ ಚೀನಾದ ಬೇಹುಗಾರಿಕಾ ಕ್ಷಮತೆಯನ್ನು ಕುಂದಿಸುವುದೇ ಪ್ರಮುಖ ಗುರಿಯಾಗಿ ಬದಲಾಗಿದೆ. ಕ್ಲಿಂಟನ್ ಅವರ ಅಧಿಕಾರಾವಧಿಯಲ್ಲಿ ಅಮೆರಿಕದ ಪರಮಾಣು ಮತ್ತು ಬಾಹ್ಯಾಕಾಶ ಸಂಬಂಧಿ ದಾಖಲೆಗಳನ್ನು ಕೈವಶ ಮಾಡಿಕೊಳ್ಳುವ ಚೀನಾದ ಕುತಂತ್ರ ಮೊದಲ ಬಾರಿಗೆ ಜಾಹೀರಾಗಿತ್ತು. ಅಂದಿನಿಂದ ಅಮೆರಿಕ ಚೀನಾ ವಿರುದ್ಧದ ತನ್ನ ಪ್ರತಿ ಗುಪ್ತಚರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಕೆಲಸದಲ್ಲಿ ನಿರತವಾಗಿದೆ. ಇದೇ ಕಾರಣಕ್ಕಾಗಿಯೇ ಅಮೆರಿಕ ಚೀನಾದ ಶೈಕ್ಷಣಿಕ ವಲಯಗಳೊಂದಿಗೆ ಕೈ ಜೋಡಿಸುವಾಗ ಹೆಚ್ಚು ಜಾಗೃತಿ ವಹಿಸುತ್ತದೆ.
ಚೀನಾ ವಿರುದ್ಧದ ನಮ್ಮ ಗುಪ್ತಚರ ಸಾಮರ್ಥ್ಯ ನಿಜಕ್ಕೂ ಬಲಹೀನವಾಗಿದೆ. 1962ರ ಯುದ್ಧದ ನಂತರ ನಮಗೆ ತಿಳಿದದ್ದೇನೆಂದರೆ, 'ನಮಗೆ ಚೀನಾದ ಬಗ್ಗೆ ಗೊತ್ತಿರುವುದಕ್ಕಿಂತ ನಮ್ಮ ಬಗ್ಗೆ ಚೀನಾಕ್ಕೆ ಚೆನ್ನಾಗಿ ಗೊತ್ತಿದೆ' ಎಂಬುದು. ಆ ಯುದ್ಧದ ನಂತರ ನಮ್ಮ ಗುಪ್ತಚರ ಸಂಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸಗಳಾಗಿವೆಯಾದರೂ, ಈ ವಿಷಯದಲ್ಲಿ ಅವರಿಗೆ ನಾವು ಎಂದಿಗೂ ಸರಿಸಾಟಿಯಾಗಿಲ್ಲ. ಬೆಂಗಳೂರು ಮತ್ತದರ ಸುತ್ತಮುತ್ತ ಹಾಗೂ ಪೂರ್ವಕರಾವಳಿ ಭಾಗದಲ್ಲಿರುವ Space launchin ಸ್ಥಳಗಳ ಬಗ್ಗೆ ಮಾಹಿತಿ ಕಲೆಹಾಕುವುದು ಚೀನಾದ ಗುಪ್ತಚರ ಸಂಸ್ಥೆಗಳ ಮೊದಲ ಆದ್ಯತೆ. ಇನ್ನು ಇಂಡೋ-ರಷಿಯನ್ ಬ್ರಹ್ಮೋ ಯೋಜನೆಯ ಗುಪ್ತ ಮಾಹಿತಿಗಳನ್ನೆಲ್ಲ ತಮ್ಮ ಕೈವಶ ಮಾಡಿಕೊಳ್ಳಬೇಕು ಎಂದೂ ಅವು ಬಹುದಿನದಿಂದ ಕಾದಿವೆ.
ಶೈಕ್ಷಣಿಕ ವಿನಿಮಯ ಕಾರ್ಯಕ್ರಮದ ಹೊದಿಕೆಯಲ್ಲಿ ಚೀನಾದ ಬಾಹ್ಯಾಕಾಶ ಪರಿಣತರು ಮಣಿಪಾಲಕ್ಕೆ ಬಂದು ಕುಳಿತರೆ ನಮ್ಮ ದೇಶದ ಅತಿ ಮುಖ್ಯ ದಾಖಲೆಗಳನ್ನೆಲ್ಲ ಕೈವಶ ಮಾಡಿಕೊಳ್ಳಲು ಚೀನಿಯರಿಗೆ ಸುಲಭ ದಾರಿಯೊಂದು ಸಿಕ್ಕಂತಾಗುವುದು. ಈ ಕಾರ್ಯಕ್ರಮದ ಭದ್ರತೆಯ ಅಂಶಗಳ ಬಗ್ಗೆ ಕೇಳಿದಾಗ, ಮಣಿಪಾಲ ವಿಶ್ವವಿದ್ಯಾಲಯದ ಜಿಯೋಪಾಲಿಟಿಕ್ಸ್ ಇಲಾಖೆಯ ಗೌರವ ನಿರ್ದೇಶಕರಾದ ಎಮ್ಡಿ ನಳಪತ್ ಅವರು ಹೇಳುವುದು ಹೀಗೆ: 'ಎಲ್ಲಾ ದೇಶಗಳೂ ಈಗ ಚೀನಾದೊಂದಿಗೆ ಶೈಕ್ಷಣಿಕ ವಲಯದಲ್ಲಿ ಕೈ ಜೋಡಿಸುತ್ತಿವೆ. ಹಾಗೆ ನೋಡಿದರೆ, ಅಮೆರಿಕ ಮತ್ತು ಯುರೋಪ್ನ ವಿಶ್ವವಿದ್ಯಾಲಯಗಳು ನಾವು ಮಾಡಿಕೊಂಡಿರುವ ಒಪ್ಪಂದಕ್ಕಿಂತ ಹೆಚ್ಚಿನ ಬಾಂಧವ್ಯವನ್ನು ಚೀನಾದ ವಿ.ವಿ.ಗಳೊಂದಿಗೆ ಹೊಂದಿವೆ'
ಚೀನಿಯರೊಂದಿಗೆ ಇಂಧನ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ವಿಪತ್ತು ನಿರ್ವಹಣೆ ಮುಂತಾದ ವಿಷಯದಲ್ಲಿ ಒಪ್ಪಂದ/ ಮಾಹಿತಿ ವಿನಿಮಯ ಮಾಡಿಕೊಳ್ಳುವುದನ್ನು ಯಾರೂ ವಿರೋಧಿಸಬಾರದು. ಆದರೆ ಪರಮಾಣು ಮತ್ತು ಬಾಹ್ಯಾಕಾಶ ಸಂಶೋಧನೆಯಂತಹ ಅತಿ ಸೂಕ್ಷ್ಮ ಕ್ಷೇತ್ರಗಳ ವಿಷಯದಲ್ಲಿ ನಾವು ಚೀನಾದ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಹೊರಟಾಗ, ಆ ದೇಶ ಈ ನಡೆಯನ್ನು ದುರುಪಯೋಗ ಮಾಡಿಕೊಳ್ಳಬಹುದು. ಆ ಕಾರಣಕ್ಕಾಗಿಯೇ ನಾವು ನಮ್ಮ ಗುಪ್ತಚರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಇರಾನ್ನಲ್ಲಿ ಏನಾಯಿತು ಎನ್ನುವುದನ್ನು ನಾವು ಅದಾಗಲೇ ನೋಡಿದ್ದೇವೆ. ಮಣಿಪಾಲ್ ವಿಶ್ವವಿದ್ಯಾಲಯದ ಈ ನಡೆಗೆ ನಮ್ಮ ಗುಪ್ತಚರ ಸಮುದಾಯ ಅಸ್ತು ಅನ್ನುವುದಕ್ಕಿಂತ ಮೊದಲು ಪ್ರತಿಗುಪ್ತಚರ ಕೋನದಿಂದ ಈ ವಿಷಯವನ್ನು ಎಚ್ಚರಿಕೆಯಿಂದ ನೋಡಲೇಬೇಕಾಗಿದೆ.
- ಬಿ.ರಾಮನ್
'ರಾ' ಮಾಜಿ ಮುಖ್ಯಸ್ಥರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

