'ಅಲ್ಲ ಕಣ್ಲಾ ಅಮಾಸೆ ಮೊನ್ನೆ ಬೆಂಗ್ಳೂರ್ಗಂಟ ವೋಗಿದ್ದೆ. ಮಗಂದು ಎಲ್ಲೂ ಮಳೆ ಇಲ್ಲ. ವಿಜಯನಗ್ರುಕ್ಕೆ ವೋಯ್ತಾಯಿದ್ದಂಗೆ ಅದೇನು ಮಳೆ ವುಯ್ತು ಅಂತೀನಿ. ತೊಯ್ದು ತೊಪ್ಪೆ ಆಬುಟ್ಟೆ ಕಲಾ. ನಮ್ ಮಂತ್ರಿ ಸೋಮಣ್ಣೋರು ಅದೆಂಥದೋ ಮಾಡ್ತರಲ್ಲೋ ಅದೇ ಮೋಡ ಬಿತ್ನೆ ಏನರ ಮಾಡುಸ್ಬುಟ್ರಾ ಹೆಂಗೆ ?' ಅಂತ ಮೈಲಾರಿ ಕೇಳ್ದ.
'ವಸಿ ಬಂದ್ ಮಾಡ್ತೀಯ ನಿನ್ ಹರ್ಕಥೇನಾ ? ಅದು ಮಳೆ ಅಲ್ಲ ಬುಡು' ಅಂದ ಅಮಾಸೆ. 'ವೂ ಕಣಲೇ ಅದು ಮಳೆನೇಯಾ. ನಂಗೆ ಗೊತ್ತಾಗಕಿಲ್ವಾ ?' ಅಂತಂದ ಮೈಲಾರಿ.
'ನಿಂಗೆ ಜನ್ರಲ್ ನಾಲೆಜ್ಜು ವಸಿ ಕಮ್ಮಿ ಅದೆ ಅನ್ಕಂಡಿದ್ದೆ. ಪೂರಾ ಇಲ್ಲ ಅಂತ ಈವಾಗ ಗೊತ್ತಾತು ಬುಡು. ಅದು ಹಂಗಲ್ಲ. ಕಾಯಿ ಪಕ್ಸುಕ್ಕೆ ವೋಗೋದಾ, ಕಮ್ಲ ಪಕ್ಸುದಾಗೆ ಇರೋದ ಅಂತೇಳಿ ತೀರ್ಮಾನ ಮಾಡಕ್ಕಾಗ್ದೆ ಸೋಮಣ್ಣೋರು ವಿಲವಿಲ್ಲ ವೊದ್ದಾಡ್ಬುಟ್ರಂತೆ'.
'ಅಮ್ಯಾಲೆ ಕಮ್ಲ ಪಕ್ಸದ ಜೇಮ್ಸ್ಬಾಂಡು, ಅದೇ ನಮ್ ಅನಂತು, ಸಾಮ್ರಾಟ್ ಅಸೋಕಪ್ನೂವೆ ಮನೆಗೋಗಿ ಸೋಮಣ್ಣ ಕಾಯಿ ಪಕ್ಸುಕ್ಕೆ ವೋದ್ರೆ ಕೊನೆಗೆ ನಿಂಗೆ ಸಿಗಾದು ಚಿಪ್ಪು, ಇಲ್ಲಾಂದ್ರೆ ಯಡೂರಪ್ನೋರು ಮನ್ಯಾಗೆ ಕಾಪಿ ಕಪ್ಪು. ಕಮ್ಲ ಪಕ್ಸುದಾಗೇ ಇರು. ಎಲೆಕ್ಸನ್ ಆದ್ಮೇಕೆ ಬ್ಯಾರೆ ಪಕ್ಸುಕ್ಕೆ ಜಂಪು ಮಾಡ್ಕಳಂತೆ. ಜಂಪ್ ಮಾಡೋದ್ನ ನಿಂಗೆ ಕಲ್ಸಕ್ಕೆ ಆಯ್ತದಾ ? ನೀನು ಆದ್ರಾಗೆ ಪೇಮಸ್ಸು ಅಂದ್ರಂತೆ'.
'ಪಾಪ ಅವಾಗ ಸೋಮಣ್ಣೋರ್ಗೆ ಯಡೂರಪ್ನೋರು ಗೆಪ್ತಿಗೆ ಬಂದು ಗೊಳೋ ಅಂತ ಅತ್ಬುಟ್ರಂತೆ ಕಣಣ್ಣಾ. ಅವ್ರು ಕಣ್ಣೀರು ಮಳೆಯಂಗೆ ಸುರ್ದೋಯ್ತಂತೆ. ರೋಡ್ಗೆ ನೀರು ನುಗ್ಗಿ, ಕಾರು, ಬಸ್ಸು ವೋಡಾಡ್ದಂಗೆ ಆಗೋಗಿ ಕೊನೆಗೆ ಅನಂತು, ಅಸೋಕು ದೋಣಿ ತರಿಸ್ಕಂಡು ಆದ್ರಾಗೇ ಮನೆಗೋದ್ರಂತೆ' ಅಂದ ಅಮಾಸೆ.
'ಹಂಗರೆ ವೊಂದ್ ಕೆಲ್ಸ ಮಾಡಾವ. ಹೆಂಗೂ ಪ್ರಚಾರುಕ್ಕೆ ಸೋಮಣ್ಣ ನಮ್ಮೂರ್ಗಂಟ ಬತ್ತರೆ. ಕೆರೆತವ ನಿಲ್ಬುಸ್ಬುಟ್ಟು ಗೊಳೋ ಅಂತ ಅಳಂಗೆ ಮಾಡಾವ. ಅವಾಗ ಕೆರೆ ತುಂಬೋಯ್ತದೆ ಕಣ್ಲ' ಅಂದ ಮೈಲಾರಿ. 'ವೋಗತ್ತಗೆ ಸುಮ್ಸುಮ್ಕೆ ಯಾರರ ಅಳ್ತರ ?' ಅಂದ ಅಮಾಸೆ. 'ಯಡೂರಪ್ನೋರು ಪಟ ತೋರುಸ್ಬುಡಾದು. ಆವಾಗ ಕಣ್ಣೀರು ಬಂದೇ ಬತ್ತದೆ ನೋಡ್ಲ. ನಮ್ಮೂರು ಕೆರೆ ಏನು ಸುತ್ತೂರ್ನಾಗಿರೋ ಏಳು ಕೆರೆನೋ ತುಂಬಿ ಕೋಡಿ ಹರ್ದೋಯ್ತದೆ' ಅಂದ ಮೈಲಾರಿ.
'ಪರ್ವಾಗಿಲ್ಲ ಕಣಣ್ಣ ನೀನೂವೆ. ಆವಾಗಾವಾಗ ವೊಳ್ಳೇ ಐಡಿಯಾ ಮಡುಗ್ತೀಯ. ಈ ಸರ್ಕಾರ್ದೋರು ಮೋಡ ಬಿತ್ನೆ ಅದೂ ಇದೂ ಅಂತ ಮಾಡಿ ಕಾಸು ಖರ್ಚು ಮಾಡೋಬದ್ಲು ಇದುನ್ನೇ ಮಾಡುದ್ರೆ ಸಂದಾಕಿರ್ತದೆ ಅಂತೇಳಿ ಅಮಾಸೆ, ಕಣ್ಣೀರ ಧಾರೆ ಇದೇಕೆ ಇದೇಕೆ' ಅಂತ ಹಾಡ್ಕಂಡು ಪೋಟಾಪುಟ್ಟ.
ಆಟೋತ್ಗೆ ಪಂಖಾ ಪಾರ್ಟಿ ಪ್ರೆಸ್ಡೆಂಟ್ರು ಸೀರಾಮ್ಲು ಸಾಹೇಬ್ರು, 'ಹೇ ಮುತ್ತಮ್ಮ, ಹೇ ಹೇ ಮುತ್ತಮ್ಮ' ಅಂತ ಹಾಡ್ಕಂಡು ಬಂದ್ರು.
'ಏನ್ ಸಿವಾ ಈ ಪಾಟಿ ಖುಸಿಯಾಗಿದ್ದೀರಿ. ರೆಡ್ಡಿಗಾರು ಜೈಲ್ನಿಂದ ವಾಪ್ಸು ಬಂದ್ಬುಟ್ರಾ ?' ಅಂತ ಮೈಲಾರಿ ಕೇಳ್ದ. 'ರೆಡ್ಡಿಗಾರು ಬಂದಿಲ್ಲ. ಮುತ್ತಮ್ಮ ಬಂದವ್ರೆ ನಮ್ ಪಾರ್ಟಿಗೆ' ಅಂದ್ರು ಸೀರಾಮ್ಲು.
'ವೋ, ಇದ್ಯಾವ್ದು ಮುತ್ತಮ್ಮ ?' ಅಂತ ಮೈಲಾರಿ ಕೇಳ್ದ. 'ಮುತ್ತಮ್ಮ ಅಂದ್ರೆ ಇಡೀ ಸ್ಟೇಟ್ಗೆ ಪೇಮಸ್ಸು. ನಿಂಗೆ ಗೊತ್ತಿಲ್ವಾ. ದಡ್ಬಡ್ಡಿ ಮಗ ಕಣ್ಲೇ ನೀನು. ಮುತ್ತಮ್ಮ ಅಂದ್ರೆ ಯಾರು. ನಮ್ ನರ್ಸ್ ಜಯಮ್ಮ ಕಣಲೇ. ಬಳ್ಳಾರಿ ಜಾಲಿ ಮುಳ್ನಾಗೆ ದಿನಾ ತಲೆ ತಿಕ್ಕು ಬುದ್ದಿ ಬತ್ತದೆ' ಅಂತಂದ್ರು ಸೀರಾಮ್ಲು.
'ಅಯ್ಯೋ ಮಾದೇಸ್ವರ, ಆವಮ್ಮ ಈಟೀವಿನಾಗೆ ಬರೋ ಬಿಗ್ಬಾಸ್ ಮನ್ಯಾಗಿತ್ತಲ್ಲ. ನಿಮ್ ಪಾರ್ಟಿಗಂಟ ಹೆಂಗ್ ಬಂತು ?' ಅಂತ ಮೈಲಾರಿ ಕೇಳ್ದ.
'ಅಲ್ಲಿ ಸೆಕೆ ತಡ್ಯಾಕೆ ಆಗ್ಲಿಲ್ವಂತೆ, ಮೇಕಪ್ಪು ವೊಂಟೋಯ್ತದೆ ಸೆಕೆ ಸೆಕೆ ಅಂತ ಕೂಗಾಡ್ಬುಟ್ರಂತೆ. ಆವಾಗ ಬಿಗ್ ಬಾಸು ಸುದೀಪು ಪಂಖಾ ಪಾರ್ಟಿಗೆ ವೋಬುಡ್ರಿ ಅಲ್ಲಿ ಗಾಳಿ ಸಂದಾಕಿ ಬತ್ತದೆ ಅಂದ್ರಂತೆ. ಹಿಂಗಾಗಿ ಮುತಮ್ಮ ಆಗಯಾ, ಹಮಾರ ಪಾರ್ಟಿಕೋ ಕಿಸ್ಮತ್ತು ಮಿಲ್ಗಯಾ. ನೋಡ್ಲಾ ಈವಾಗ ಆಯಮ್ಮ ತಂಗಾಳಿ ವೊಳ್ಗೆ ಹಂಗೇ ತೇಲ್ತಾ ಐತೆ' ಅಂದ್ರು ಸೀರಾಮ್ಲು.
'ಆವಮ್ಮ ಎಲೆಕ್ಸನ್ಗೂ ನಿಂತ್ಕತರಂತೆ. ವೋಟಾಕುದ್ರೆ ಏನು ಕೊಟ್ಟಾರು ?' ಅಂದ ಮೈಲಾರಿ. 'ಮುಚ್ಕಂಡು ವೋಗಲೇ...' ಅಂತ ಬೈದು ಸೀರಾಮ್ಲು ಪಂಕಾ ತಿರಿಗಿಸ್ಕಂಡು ವೊಂಟೇ ವೋದ್ರು.
-ಕೆ.ವಿ.ಪ್ರಭಾಕರ್
prabhukolar@yahoo.com