ಜನಪ್ರಿಯತೆ-ಕಳಕಳಿಗಳ ಸಮತೂಕ ಅಸಾಧ್ಯವೇ?
ನಾಯಕ ನಟನ ಮುಖ ವಿವರ್ಣವಾಗಿದೆ. ಕೆಂಪು, ನೀಲಿ, ಹಳದಿ ಹೀಗೆ ಬಣ್ಣ ಬಣ್ಣದ ಬೆಳಕು ಮುಖದ ಮೇಲೆ ಹಾದು ಹೋದವು. ಅದರ ಜೊತೆಗೆ ಕರ್ಣಕಠೋರವಾದ ಹಿನ್ನೆಲೆ ಸಂಗೀತ ಆ ದೃಶ್ಯವನ್ನು ಇನ್ನೂಭೀಭತ್ಸಗೊಳಿಸಿದೆ. ವೀಕ್ಷಕರು ಉಸಿರುಗಟ್ಟಿ ಕುಳಿತುಕೊಂಡೇ ಮುಂದೇನಾಗುತ್ತದೋ ಎಂದು ಆತಂಕದಿಂದ ಕುಳಿತಿದ್ದಾರೆ. ಅಷ್ಟರಲ್ಲಿ ಬ್ರೇಕ್ ಬರುತ್ತದೆ. ಇದು ಸಿನೆಮಾ ಕತೆಯಲ್ಲ, ಟಿವಿ ಧಾರಾವಾಹಿಯೊಂದರ ದೃಶ್ಯ. ಈ ಧಾರಾವಾಹಿಗಳಲ್ಲಿ ಬೇಕಾದಂತೆ ಬಣ್ಣ ಬದಲಾಯಿಸುವ, ಗೋಸುಂಬೆಯಂತಹ ನಾಯಕರು. ಅತ್ತೆ-ಸೊಸೆ ಜಗಳ, ಅನೈತಿಕ ವಿವಾಹ ಸಂಬಂಧಗಳು, ದಾಯಾದಿ ಕಲಹ, ಸೇಡು, ದ್ವೇಷ ಇವುಗಳೇ ತುಂಬಿರುತ್ತವೆ.
ಬಹುತೇಕ ಟಿವಿ ವಾಹಿನಿಗಳು 'ನಾವು ಬಿತ್ತರಿಸುವ ಕಾರ್ಯಕ್ರಮಗಳು ಕೆಟ್ಟದಾಗಿ ಕಂಡರೂ, ಒಳ್ಳೆಯ ಸಂದೇಶವನ್ನು ಕೊಡುತ್ತಿದ್ದೇವೆ' ಎಂದು ಹೇಳಿಕೊಳ್ಳುತ್ತವೆ. ಸುದ್ದಿವಾಹಿನಿಗಳು ಬ್ರೇಕಿಂಗ್ ನ್ಯೂಸ್ ಎಂದು ಇಡೀ ದಿನ ಗಂಡ-ಹೆಂಡತಿ ಜಗಳವನ್ನು ತೋರಿಸುತ್ತಾರೆ? ಇದರಲ್ಲಿ ಯಾವ ಒಳ್ಳೆಯ ಸಂದೇಶವಿದೆ? ಇದನ್ನು ನೋಡಿದ ಬೇರೆ ದಂಪತಿಗಳು ಕೂಡಾ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡುವ ಸಾಧ್ಯತೆಗಳಿವೆ. ಅದರ ಬದಲು ಒಳ್ಳೆಯ ಕೆಲಸ ಮಾಡಿದವರನ್ನು ತೋರಿಸಿ, ಅವರಿಗೆ ಪ್ರಚಾರ ಕೊಡುವುದರಿಂದ ಉಳಿದವರಿಗೂ ಒಳ್ಳೆಯ ಕೆಲಸ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ.
ಒಳ್ಳೆಯ ಕಾರ್ಯಕ್ರಮಗಳಿಗೆ ಟಿಆರ್ಪಿ ಇಲ್ಲ, ಕೆಟ್ಟ ಕಾರ್ಯಕ್ರಮಗಳಿಗೆ ವೀಕ್ಷಕರೂ ಹೆಚ್ಚು ಹಾಗೂ ಟಿಆರ್ಪಿಯೂ ಬರುತ್ತದೆ ಎಂಬ ಭಾವನೆ ವಾಹಿನಿಗಳಿಗಿದೆ. ಟಿಆರ್ಪಿ ಇಲ್ಲದಿದ್ದರೆ ಜಾಹೀರಾತು ಸಿಗೋದಿಲ್ಲ, ಜಾಹೀರಾತು ಸಿಗದಿದ್ದರೆ ಲಾಭವಿಲ್ಲ, ಇವೆರಡು ಒಂದಕ್ಕೊಂದು ಪೂರಕ ಎಂಬುದು ಇವರ ಗೋಳು ಮತ್ತು ವಾಸ್ತವ ಕೂಡಾ. ಇದೇ ರೀತಿ ಹಿಂದಿ ವಾಹಿನಿಗಳಲ್ಲಿ ಕೂಡಾ ಧಾರಾವಾಹಿಗಳು ಬಿತ್ತರವಾಗುತ್ತವೆ. ಕನ್ನಡ ಮತ್ತು ಇತರ ಭಾಷೆಯ ವಾಹಿನಿಗಳು ಇವುಗಳನ್ನು ನಕಲು ಮಾಡಿ ಅಂತಹುದೇ ಕತೆಯನ್ನು ಹೆಣೆಯುತ್ತಾರೆ. ಆದರೂ ಕನ್ನಡದಲ್ಲಿ 'ಮುಕ್ತ ಮುಕ್ತ', 'ಮಾಯಾಮೃಗ'ದಂತಹ ಕೆಲವು ಧಾರಾವಾಹಿಗಳು ನಿತ್ಯ ಜೀವನದ ಪಾತ್ರಗಳೊಂದಿಗೆ ಒಳ್ಳೆಯ ಸಂದೇಶವನ್ನು ಕೊಟ್ಟವು. ಈ ಧಾರಾವಾಹಿಗಳು ಒಳ್ಳೆಯ ಜನಪ್ರಿಯತೆಯನ್ನು ಹೊಂದಿದ್ದಲ್ಲದೆ ಸಾಮಾಜಿಕ ಕಳಕಳಿಯಿಂದಲೂ ಕೂಡಿದ್ದವು.
ಸ್ಟಾರ್ಪ್ಲಸ್ ವಾಹಿನಿಯಲ್ಲಿ ಬರುತ್ತಿರುವ ಒಂದು ಹಿಂದಿ ಧಾರಾವಾಹಿಯ ಬಗ್ಗೆ ಉಲ್ಲೇಖಿಸಬೇಕು. ಒಳ್ಳೆಯದನ್ನು ನೋಡುವುದಕ್ಕೆ ವೀಕ್ಷಕರಿದ್ದಾರೆ ಎನ್ನುವುದಕ್ಕೆ ಈ ಧಾರಾವಾಹಿಯೂ ಒಂದು ಸಾಕ್ಷಿ. ಈ ಧಾರಾವಾಹಿ ಉತ್ತಮ ಟಿಆರ್ಪಿಯನ್ನೂ ಹೊಂದಿದೆ. 'ಯೆ ರಿಶ್ತಾ ಕ್ಯಾ ಕೆಹಲತಾ ಹೈ' (ಈ ಸಂಬಂಧ ಏನನ್ನು ಹೇಳಿಸುತ್ತಿದೆ) ಎಂಬ ಈ ಧಾರಾವಾಹಿ ಎರಡು ಅವಿಭಕ್ತ ಕುಟುಂಬಗಳ ನಡುವಿನ ದಿನನಿತ್ಯದ ಆಗುಹೋಗುಗಳ ಸುಂದರ ಕತೆ. ಈ ಧಾರಾವಾಹಿಯಲ್ಲಿ ಗಮನ ಸೆಳೆಯುವ ಇನ್ನೊಂದು ಅಂಶವೆಂದರೆ, ಇದರಲ್ಲಿ ಪ್ರತಿಯೊಂದು ಮಾನವ ಸಂಬಂಧವನ್ನು ಗೌರವದಿಂದ ಕಾಣಲಾಗುತ್ತದೆ. ಅಣ್ಣ, ತಂಗಿ, ಅತ್ತೆ, ಮಾವ, ಗಂಡ, ಹೆಂಡತಿ ಹೀಗೆ ಎಲ್ಲಾ ಸಂಬಂಧಗಳು ತಮ್ಮ ಪಾತ್ರಗಳನ್ನು ಸುಂದರವಾಗಿ ನಿಭಾಯಿಸುತ್ತಾ ಆಪ್ತವಾಗಿ ಬಿಡುತ್ತವೆ. ಇಂತಹ ಅವಿಭಕ್ತ ಕುಟುಂಬಗಳು ಈಗ ವಿರಳ ಅಂತ ಅನ್ನಿಸಿದರೂ, ಇದರ ಹಿಂದಿರುವ ಸಂದೇಶವನ್ನು ಗಮನಿಸಬೇಕು. ಉದಾಹರಣೆಗೆ, ಈ ಧಾರಾವಾಹಿಯಲ್ಲಿ ಪುಟ್ಟ ಮಗುವೊಂದು ಮನೆಯಲ್ಲಿ ನಾಯಿಮರಿ ಇಟ್ಟುಕೊಳ್ಳಬೇಕೆಂದು ಹಠ ಮಾಡುತ್ತದೆ. ಆದರೆ ಮನೆಯವರಿಗ್ಯಾರಿಗೂ ಇದು ಇಷ್ಟವಿರುವುದಿಲ್ಲ. ಮಗುವಿನ ಅಮ್ಮ ಹೇಳುತ್ತಾಳೆ- 'ಪುಟ್ಟಾ, ಪ್ರಾಣಿಗಳೆಂದರೆ ಮನುಷ್ಯರ ಹಾಗೆಯೇ. ಅವುಗಳಿಗೂ ಪ್ರೀತಿ, ಕಾಳಜಿ ಬೇಕು. ನನಗೆ ಅವರ ಬಗ್ಗೆ ಸಮಯ ಕೊಡಲು ಕಷ್ಟವಾಗಬಹುದು. ಇದರಿಂದ ಆ ಮುಗ್ಧ ಪ್ರಾಣಿಗೆ ಅನ್ಯಾಯವಾದಂತಾಗುತ್ತದೆ, ನನಗೂ ಮನಸ್ಸಿನಲ್ಲಿ ತಪ್ಪಿತಸ್ಥ ಭಾವನೆ ಮೂಡುತ್ತದೆ.' ನಂತರ ಎಲ್ಲರೂ ಯೋಚಿಸಿ ಮನೆಗೊಂದು ಪುಟ್ಟ ಅಕ್ವೇರಿಯಂ ತರುತ್ತಾರೆ. ಮಗು ಮತ್ತು ಅಜ್ಜಿ ಜೊತೆ ಸೇರಿ ಮೀನಿಗೆ ಹೆಸರಿಡುತ್ತಾರೆ. ಅಜ್ಜಿ ಹೇಳುತ್ತಾರೆ- 'ಮಗೂ, ಎಲ್ಲಾ ಜೀವಿಗಳಲ್ಲಿ ದೇವರಿದ್ದಾನೆ. ಪ್ರತಿಯೊಂದು ಜೀವಿಯೂ ಈಶ್ವರನ ಪ್ರತಿರೂಪ.' ಆ ಮಗುವಿನ ಮುಗ್ಧ ಮನಸ್ಸಿಗೆ ಎಷ್ಟು ಒಳ್ಳೆಯ ಪಾಠ? ಇಲ್ಲಿ ಎಲ್ಲ ಜೀವಿಗಳನ್ನು ಪ್ರೀತಿಸಬೇಕು, ಸಮಾನವಾಗಿ ಕಾಣಬೇಕು ಎಂಬ ಮಾನವತೆಯ ಸಂದೇಶವಿದೆ. ಈಗಿನ ರಿಯಾಲಿಟಿ ಷೋಗಳು, ಸೆಲೆಬ್ರಿಟಿಗಳ ವೈಯಕ್ತಿಕ ಸಮಸ್ಯೆಗಳ ಚರ್ಚೆಗಳು ಆ ಸೆಲೆಬ್ರಿಟಿಗಳ ಕೆಟ್ಟ ಮುಖವನ್ನು ತೋರಿಸುತ್ತವೆ. ಇದರಿಂದ ಅವರ ಒಳ್ಳೆಯ ಅಭಿಮಾನಿ ಬಳಗವನ್ನು ಅವರು ಕಳೆದುಕೊಳ್ಳಬಹುದು. ಕುರುಡು ಅಭಿಮಾನಿಗಳು ಅವರನ್ನು ಸಮರ್ಥಿಸುತ್ತಾ ತಾವೂ ಕೂಡ ಅದೇ ರೀತಿ ವರ್ತಿಸಲು ಪ್ರಯತ್ನಿಸಬಹುದು. ಮಾಧ್ಯಮಗಳಿಗೆ ಅವರ ಲಾಭಾಂಶದ ಜೊತೆಗೆ ಸಾಮಾಜಿಕ ಕಳಕಳಿಯೂ ಇರಲಿ. ಮೂಢನಂಬಿಕೆ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ವೈಭವೀಕರಿಸುವ ಕಾರ್ಯಕ್ರಮಗಳು ಯಾವ ಉತ್ತಮ ಸಂದೇಶವನ್ನೂ ಕೊಡುವುದಿಲ್ಲ. ವೀಕ್ಷಕರು ಕೂಡಾ ಮನೆಮುರುಕ ಧಾರಾವಾಹಿಗಳನ್ನು, ಕಾರ್ಯಕ್ರಮಗಳನ್ನು ನೋಡುವುದನ್ನು ಬಿಟ್ಟು ಉತ್ತಮ ಹವ್ಯಾಸಗಳತ್ತ ಮುಖ ಮಾಡಬೇಕಿದೆ.
- ವೀಣಾ ಅನಂತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

