ಬ್ಲಾಕ್ ನಂ. 32, ತ್ರಿಲೋಕಪುರಿ. 1984ರ ನವೆಂಬರ್‌ನಲ್ಲಿ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಹೇಯ ಜನಾಂಗೀಯ ಹತ್ಯಾಕಾಂಡಕ್ಕೆ ದಿಲ್ಲಿ ಸಾಕ್ಷಿಯಾದರೆ ಯಮುನೆಯ ಆಚೆ ದಡದಲ್ಲಿ ನಿರ್ಮಾಣವಾಗಿದ್ದ ಈ ತ್ರಿಲೋಕಪುರಿ ಬಡಾವಣೆ ದ್ವೇಷದ ದಳ್ಳುರಿಯ ಗರ್ಭವಾಗಿತ್ತು. ಚಂಡಾಲರು ಸಿಖ್ಖರನ್ನು ಸಿಕ್ಕಸಿಕ್ಕಲ್ಲಿ ಹತ್ಯೆಗೈದು ಓಡಿ ಹೋದ ನಂತರ ಅಲ್ಲಿ ಕಂಡುಬಂದ ದೃಶ್ಯವನ್ನು ಖ್ಯಾತ ಲೇಖಕ ವಿಲಿಯಂ ಡ್ಯಾಲ್ರಿಂಪಲ್ ಹೀಗೆ ಬಣ್ಣಿಸುತ್ತಾರೆ. 'ಸುಟ್ಟು ಕರಕಲಾದ ಮಾನವನ ದೇಹಗಳ ರಾಶಿಯ ನಡುವೆಯೇ ಅಳಿದುಳಿದ ಮಾಂಸಕ್ಕಾಗಿ ನಾಯಿಗಳು ಕಚ್ಚಾಡುತ್ತಿದ್ದವು. ಗಲ್ಲಿಗಲ್ಲಿಯಲ್ಲಿ ಕಸದ ರಾಶಿ ಮೀರಿಸುವಂತೆ ಮಾನವ ದೇಹಗಳು ಬಿದ್ದಿದ್ದವು. ಹತ್ಯೆ ಮಾಡುವ ಸಿಖ್ಖರ ತಲೆಗೂದಲನ್ನು ತುಂಡರಿಸಲಾಗಿತ್ತು. ಮನೆ ಮನೆಯ ವರಾಂಡಗಳಲ್ಲಿ, ರಸ್ತೆಯ ಮೋರಿಗಳಲ್ಲಿ ಕೇಶರಾಶಿಯೇ ಇತ್ತು. ಕತ್ತರಿಸಲಾದ ಕೈ ಕಾಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಂದು ಗಟಾರದಲ್ಲಿ ಹರಿದಿದ್ದು ಕಲ್ಮಶ ನೀರಲ್ಲ, ದ್ವೇಷದ ಕೊಡಲಿಯಿಂದ ಚಿಮ್ಮಿದ ಮಾನವರ ರಕ್ತ'. ಆ ದಾರುಣ ಪರಿಸ್ಥಿತಿಯನ್ನು ಕೇವಲ ಶಬ್ದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ಇಂದಿರಾಗಾಂಧಿ ಹತ್ಯೆಗೆ ಪ್ರತೀಕರವಾಗಿ ಇಡೀ ದೇಶದಲ್ಲಿ ಸುಮಾರು 5 ಸಾವಿರ ಸಿಖ್ಖರು ಬಲಿಯಾದರೆ, ಅದರಲ್ಲಿ ಬಹುಪಾಲು, ಅಂದರೆ ಸುಮಾರು 3 ಸಾವಿರ ಮಂದಿ ದಿಲ್ಲಿಯೊಂದರಲ್ಲಿಯೇ ಹತರಾಗಿದ್ದರು.
ನಾನು ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ! ಸಿಖ್ಖರ ನರಮೇಧ ನಡೆದು 21 ವರ್ಷಗಳ ನಂತರ ಪ್ರಧಾನಿ ಮನಮೋಹನ್ ಸಿಂಗ್ ಸಂಸತ್ತಿನಲ್ಲಿ ಮಾತನಾಡುತ್ತ '1984ರಲ್ಲಿ ನಡೆದದ್ದು ಒಟ್ಟಾರೆ ರಾಷ್ಟ್ರದ ಕಲ್ಪನೆಯನ್ನೇ ಬುಡಮೇಲು ಮಾಡುವಂತಹ ಕೃತ್ಯ. ಸರ್ಕಾರದ ಪರವಾಗಿ, ದೇಶದ ಪರವಾಗಿ ಇಂಥ ಹೇಯ ಕೃತ್ಯಕ್ಕಾಗಿ ನಾಚಿಕೆಯಿಂದ ತಲೆಬಾಗುತ್ತೇನೆ' ಎಂದು ಹೇಳಿದರು.
ಇದಕ್ಕೆ ಕಾರಣ ನ್ಯಾಯಮೂರ್ತಿ ನಾನಾವತಿ ಆಯೋಗದ ವರದಿ. ಏಳೆಂಟು ತನಿಖಾ ಆಯೋಗಗಳು ಮಾಡದ ಕೆಲಸವನ್ನು ನಾನಾವತಿ ಆಯೋಗ ಮಾಡಿತ್ತು. ಈ ಮಾರಣಹೋಮದ ಹಿಂದೆ ಕಾಂಗ್ರೆಸ್ ಮುಖಂಡರಾದ ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ಅವರ ನೇರ ಕೈವಾಡವಿದೆ ಎಂದು ಹೇಳಿದ್ದಲ್ಲದೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಶಿಫಾರಸು ಮಾಡಿತ್ತು. ಆದರೆ ಕಾಂಗ್ರೆಸ್ ಪಕ್ಷ ಜಗದೀಶ್ ಟೈಟ್ಲರ್ ಅವರನ್ನ್ನು ಶಿಕ್ಷಿಸಿದ್ದಾದರೂ ಹೇಗೆ? ಕೇಂದ್ರ ಸಚಿವ ಸ್ಥಾನದಿಂದ ರಾಜೀನಾಮೆ ನೀಡುವಂತೆ ಹೇಳಿ ಕೈತೊಳೆದುಕೊಂಡಿತು. ಅಷ್ಟೇ ಅಲ್ಲ. ಸರ್ಕಾರದ ಅಡಿಯಾಳಾಗಿರುವ ಸಿಬಿಐ ಕೈಯಲ್ಲಿ ಪ್ರಕರಣಕ್ಕೆ ತೆರೆ ಎಳೆಯುವ Closure report ಅನ್ನು ಕೋರ್ಟಿಗೆ ಸಲ್ಲಿಸಿತು. ಆದರೆ ಕಾನೂನಿನ ಕೈ ತುಂಬ ಉದ್ದ.
ಇಡೀ ಪ್ರಕರಣವನ್ನು ಮತ್ತೆ ಕೂಲಂಕಷವಾಗಿ ವಿಚಾರಣೆ ನಡೆಸುವಂತೆ ಕೋರ್ಟು ಮತ್ತೆ ಸಿಬಿಐಗೆ ಆದೇಶಿಸಿದೆ. ಎಲ್ಲ ಸಾಕ್ಷಿಯನ್ನು ಕಲೆ ಹಾಕುವಂತೆ ಆಜ್ಞಾಪಿಸಿದೆ. ಜಗದೀಶ್ ಟೈಟ್ಲರ್ ಮತ್ತೆ ಬಡಬಡಾಯಿಸಿದ್ದಾರೆ. ತಾನು ನಿರ್ದೋಷಿ ಎಂದೂ, ಘಟನೆ ನಡೆದ ಸಂದರ್ಭದಲ್ಲಿ ಅಲ್ಲಿ ಇರಲೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಇದು ತಮ್ಮ ವಿರುದ್ಧದ ಸಂಚು ಎಂದು ಹಲುಬುತ್ತಿದ್ದಾರೆ. ಹಾಗಾದರೆ ಈ ಟೈಟ್ಲರ್‌ನ ಮಾತು ನಂಬಬೇಕೆ. ಈತ ಹೇಳುತ್ತಿರುವಂತೆ ಈತನ ವಿರುದ್ಧ ಸಾಕ್ಷಿ ಹೇಳಿದವರೆಲ್ಲರೂ ಸುಳ್ಳುಗಾರರೆ? ಪಿತೂರಿದಾದರರೆ?
ಸುರೀಂದರ್ ಸಿಂಗ್. 1984ರಲ್ಲಿ ಈ ಟೈಟ್ಲರ್ ಎಂಪಿ ಆಗಿದ್ದ ಪ್ರದೇಶದಲ್ಲಿರುವ ಪುಲ್‌ಬಂಗಶ್ ಗುರುದ್ವಾರದ ಮುಖ್ಯ ಗ್ರಂಥಿ (ಸಿಖ್ಖರ ಪವಿತ್ರ ಗ್ರಂಥವನ್ನು ಪಠಿಸುವವ) ನಾನಾವತಿ ಆಯೋಗದ ಮುಂದೆ ಸ್ವಪ್ರೇರಣೆಯಿಂದ ಹಾಜರಾದ ಸುರೀಂದರ್ ನೀಡಿದ ಸಾಕ್ಷ್ಯ ಹೀಗಿದೆ 'ನ.1 1984ರಂದು ಸುಮಾರು 500ರಿಂದ ಸಾವಿರ ಮಂದಿ ಇದ್ದ ದೊಡ್ಡ ಉದ್ರಿಕ್ತ ಗುಂಪೊಂದು ಕೈಯಲ್ಲಿ ಮರದ ಕಟ್ಟಿಗೆ, ಕಬ್ಬಿಣದ ರಾಡು, ಸೀಮೆಎಣ್ಣೆ ತುಂಬಿದ್ದ ಡಬ್ಬಗಳನ್ನು ಹಿಡಿದು ನಮ್ಮ ಗುರುದ್ವಾರದ ಸಮೀಪ ಜಮಾಯಿಸಿತು. ನೋಡ ನೋಡುತ್ತಿದ್ದಂತೆಯೇ ಈ ಗುಂಪು ಗುರುದ್ವಾರವನ್ನು ಸುತ್ತುವರಿಯಿತು. ಆಗ ನಮ್ಮ ಏರಿಯಾ ಎಂಪಿ ಆಗಿದ್ದ ಜಗದೀಶ್ ಟೈಟ್ಲರ್ ಈ ಗುಂಪಿನ ಮುಂದಾಳತ್ವ ವಹಿಸಿದ್ದರು. ಈ ವ್ಯಕ್ತಿ ಉದ್ರಿಕ್ತ ಗುಂಪನ್ನು ಶಮನಗೊಳಿಸಲು ಬಂದಿರಬೇಕು ಎಂದು ಭಾವಿಸಿದ್ದೆ. ಆದರೆ ವಾಸ್ತವದಲ್ಲಿ ಟೈಟ್ಲರ್ ಜನರನ್ನು ಎತ್ತಿಕಟ್ಟುತ್ತಿದ್ದರು.'ಹೀಗಾದರೆ ಸಾಧ್ಯವಿಲ್ಲ. ನಾವು ಸಿಖ್ಖರನ್ನು ಹತ್ಯೆಗೈಯಲೇಬೇಕು. ಇಲ್ಲವಾದರೆ ನಾನು ಪಕ್ಷದ ಮುಖಂಡರಿಗೆ ಹೇಗೆ ಮುಖ ತೋರಿಸಲಿ, ಹೋಗಿ ಅವರು (ಸಿಖ್ಖರು) ಕಂಡಲ್ಲೆಲ್ಲ ಅವರನ್ನು ಮುಗಿಸಿ' ಎಂದು ಹೇಳುತ್ತಿದ್ದರು. ಈ ಗುಂಪಿನಲ್ಲಿದ್ದ ಬಹುತೇಕರ ಕೈಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಇತ್ತು. 'ರಕ್ತಕ್ಕೆ (ಇಂದಿರಾಗಾಂಧಿ ಹತ್ಯೆ) ಪ್ರತೀಕಾರವಾಗಿ ರಕ್ತ ಚೆಲ್ಲಾಡುತ್ತೇವೆ. ಸಿಖ್ಖರು ದೇಶದ್ರೋಹಿಗಳು ಅವರನ್ನು ತುಂಡರಿಸಿ' ಎಂಬ ಘೋಷ ವಾಕ್ಯಗಳೊಂದಿಗೆ ಈ ಗುಂಪು ಗುರುದ್ವಾರಕ್ಕೆ ಬೆಂಕಿ ಇಟ್ಟಿತ್ತು. ಜನ ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದರು. ಆದರೆ ಎಷ್ಟೋ ಮಂದಿ ಈ ಗುಂಪಿನ ಆಕ್ರೋಶಕ್ಕೆ ಬಲಿಯಾದರು. ಹಾಗೆ ಬಲಿಯಾದವರಲ್ಲಿ ನಿವೃತ್ತ ಡಿವೈಎಸ್ಪಿ ಹಾಗೂ ಗುರುದ್ವಾರ ಪ್ರಬಂಧಕ (ನಿಯಂತ್ರಣ) ಸಮಿತಿ ಸದಸ್ಯ ಠಾಕೂರ್ ಸಿಂಗ್ ಸಹ ಒಬ್ಬರು. ಗುರುದ್ವಾರದ ಸೇವಾದಾರರಾಗಿದ್ದ ಬಾಗಲ್ ಸಿಂಗ್ ಅವರ ಕುತ್ತಿಗೆಗೆ ಟೈರ್ ಎಸೆದು ಅದಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಅವರನ್ನು ಜೀವಂತವಾಗಿ ಸುಡಲಾಯಿತು. ಅಂದು ಬೆಂಕಿಯ ಕೆನ್ನಾಲಗೆ ದೇಹವನ್ನು ವ್ಯಾಪಿಸುತ್ತಲೇ ನೆರವಿಗಾಗಿ, ಪ್ರಾಣಭಿಕ್ಷೆಗಾಗಿ ಬಾಗಲ್ ಸಿಂಗ್‌ರ ಚೀತ್ಕಾರ ಇವರ್ಯಾರ ಎದೆಯನ್ನೂ ಕರಗಿಸಲಿಲ್ಲ, ಕಿವಿಗೆ ತಾಗಲಿಲ್ಲ. ನಾನು ಅಸಹಾಯಕನಾಗಿ ಗುರುದ್ವಾರದ ಮೇಲ್ಮಹಡಿಯಿಂದ ಇದನ್ನೆಲ್ಲ ಕಣ್ಣಾರೆ ಕಂಡೆ. ಬೆಂಕಿ ಅಲ್ಲಿಯವರೆಗೆ ವ್ಯಾಪಿಸಲಿಲ್ಲ. ಹಾಗಾಗಿ ಇಂದು ನಿಮ್ಮ ಮುಂದೆ ಸತ್ಯ ಹೇಳಲು ನಿಂತಿದ್ದೇನೆ. ಇದಾದ 10 ದಿನಗಳ ಬಳಿಕ ಇದೇ ಜಗದೀಶ್ ಟೈಟ್ಲರ್ ನನ್ನ ಬಳಿ ಬಂದು ಎರಡು ಖಾಲಿ ಹಾಳೆ ಇಟ್ಟು ಅದರ ಮೇಲೆ ಸಹಿ ಮಾಡುವಂತೆ ಪೀಡಿಸಿದ್ದ 'ಈ ಸಾಕ್ಷ್ಯ ಜಗದೀಶ್ ಟೈಟ್ಲರ್‌ಗೆ ಉರುಳಾಗುವ, ಅವರ ಮೇಲಿನ ಆರೋಪ ಸಾಬೀತುಪಡಿಸುವ ಎಲ್ಲ ಸಾಧ್ಯತೆಗಳಿದ್ದವು. ಸರಿ ಈ ಕುರಿತಾಗಿ ಟೈಟ್ಲರ್ ಅವರ ವಾದ, ಸಮಜಾಯಿಷಿ ಆಲಿಸಲು ನಾನಾವತಿ ಆಯೋಗ ನಿರ್ಧರಿಸಿತು. 2003ರಲ್ಲಿ ಅವರನ್ನು ಆಯೋಗದ ಮುಂದೆ ಕರೆಸಲಾಯಿತು. ಅಂದು ನ್ಯಾಯಮೂರ್ತಿ ನಾನಾವತಿ ಅವರ ಮುಂದೆ ಹಾಜರಾದ ಈ ಟೈಟ್ಲರ್ ಆಗಸ್ಟ್ 5, 2002ರಂದು ಸುರೀಂದರ್ ಸಿಂಗ್ ಆಯೋಗದ ಮುಂದೆ ನೀಡಿರುವ ಎರಡನೇ ಪ್ರಮಾಣ ಪತ್ರವನ್ನು ಪರಿಶೀಲಿಸಬೇಕೆಂದು ಮನವಿ ಮಾಡಿಕೊಂಡ. ಆ ಪ್ರಮಾಣ ಪತ್ರದಲ್ಲಿ ತಾನು ಉದ್ರಿಕ್ತ ಗುಂಪನ್ನು ನೋಡಿದ್ದು ನಿಜ, ಆದರೆ ಅದರ ನಾಯಕತ್ವ ಟೈಟ್ಲರ್ ವಹಿಸಿದ್ದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಸುರೀಂದರ್ ಸಿಂಗ್ ಹೇಳಿದ್ದ. ಇದು ಇಡೀ ಪ್ರಕರಣವನ್ನು ಉಲ್ಟಾ ಹೊಡೆಸಿತ್ತು. ಅಂದು ಟೈಟ್ಲರ್ ನಗುನಗುತ್ತಲೇ ಆಯೋಗದ ಕಚೇರಿಯಿಂದ ಹೊರಬಂದಿದ್ದರು. ಆದರೆ ಇದಾದ ಕೆಲವೇ ದಿನಗಳಲ್ಲಿ ನಡೆದ ಘಟನೆಗಳು ಈ ಮನುಷ್ಯನ ಅಸಲಿಯತ್ತು ತೋರಿಸಿತು. ಆಗಸ್ಟ್ 5 ರಂದು ಎರಡನೇ ಪ್ರಮಾಣ ಪತ್ರ ಸಲ್ಲಿಸಿದ ಸುರೀಂದರ್ ಸಿಂಗ್, 15 ರಂದು ಒಂದು ವರ್ಷದ ರಜೆ ಮೇಲೆ ಕೆನಡಾಕ್ಕೆ ತೆರಳುತ್ತಾನೆ. ನೂರೈನೂರು ಪಗಾರದ ವ್ಯಕ್ತಿ ಏಕಾಏಕಿ ಕೆನಡಾಕ್ಕೆ ಹೊರಟು ನಿಲ್ಲುತ್ತಾನೆ. ಅದಕ್ಕೆ ಕೆಲವೇ ದಿನಗಳ ಮುಂಚೆ ಅಷ್ಟೇ ಆತ ರಜೆಗಾಗಿ ಅರ್ಜಿ ಗುಜರಾಯಿಸಿರುತ್ತಾನೆ. ಇದಾದ ಕೆಲ ತಿಂಗಳ ಬಳಿಕ ದಿಲ್ಲಿಗೆ ವಾಪಸ್ಸಾಗುವ ಸುರೀಂದರ್ ಸ್ವಂತ ಮನೆ ಕಟ್ಟಿಸುವ ಮಟ್ಟಿಗೆ ಶಕ್ತಿವಂತನಾಗುತ್ತಾನೆ. ಇದನ್ನು ಗಮನಿಸಿದ ಗುರುದ್ವಾರ ನಿಯಂತ್ರಣ ಸಮಿತಿ ಆತನಿಂದ ವಿವರಣೆ ಕೇಳಿದಾಗ ಆತ ಹೇಳುತ್ತಾನೆ. 'ನನಗೆ ಪ್ರಾಣದ ರಕ್ಷಣೆ ಖಾತ್ರಿ ಕೊಡುವುದಾದರೆ ಮಾತ್ರ ಸಾಕ್ಷಿ ಹೇಳುತ್ತೇನೆ' ಎಂದು. ಇದಾದ ಬಳಿಕ ಸಾಕಷ್ಟು ಒತ್ತಡ ಸಹಿಸಿಕೊಂಡು ಕೊನೆಗೂ ಸುರೀಂದರ್ ಬಾಯ್ಬಿಡುತ್ತಾನೆ. 'ನಾನು ಮೊದಲು ನೀಡಿದ ಪ್ರಮಾಣ ಪತ್ರದಲ್ಲಿ ಹೇಳಿದ್ದೆಲ್ಲವೂ ಸತ್ಯ. ಆದರೆ ಟೈಟ್ಲರ್ ಅವರು ನನ್ನ ಮೇಲೆ ಒತ್ತಡ ಹೇರಿ ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡು ಆಯೋಗದ ಮುಂದೆ ತಿರುಚಿದ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.' ಎಂದು ಸತ್ಯ ಹೇಳುತ್ತಾನೆ. ಇದೇ ವೇಳೆ ನಾನಾವತಿ ಆಯೋಗ ಸಹ ಟೈಟ್ಲರ್ ಆಕ್ಷೇಪಣೆ ತಿರಸ್ಕರಿಸಿ 'ಸುರೀಂದರ್ ಸಿಂಗ್ ನಮ್ಮ ಮುಂದೆ ಹೇಳಿದ್ದನ್ನು ಸುಳ್ಳು ಎಂದು ನಂಬಲು ಸಾಧ್ಯವಿಲ್ಲ. ಆಯೋಗದ ಪಾಟಿ ಸವಾಲಿಗೆ ಆತ ನೀಡಿದ ಉತ್ತರಗಳು ಪ್ರಬಲ ಸಾಕ್ಷಿಯಾಗಿ ನಿಲ್ಲುತ್ತವೆ. ಮೇಲಾಗಿ ಪ್ರಮಾಣ ಪತ್ರವನ್ನು ನಿಜವೆಂದು ಒಪ್ಪಲು ಸಾಧ್ಯವಿಲ್ಲ. ಅದನ್ನು ಒತ್ತಾಯಪೂರ್ವಕವಾಗಿ ಪಡೆದಿರುವ ಸಾಧ್ಯತೆಗಳನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಹೀಗಾಗಿ ಇಡೀ ಪ್ರಕರಣದಲ್ಲಿ ಟೈಟ್ಲರ್ ನೇರ ಕೈವಾಡವಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು' ಎಂದು ಹೇಳಿದೆ. ಆದರೆ ಈ ಕುರುಡು, ಕಿವುಡು, ಭಂಡ ಸರ್ಕಾರಕ್ಕೆ ಇಂಥ ವಿಷಯಗಳಲ್ಲಿ ಸೂಕ್ತ ಕ್ರಮ ಜರುಗಿಸುವ ಧೈರ್ಯವಾದರೂ ಎಲ್ಲಿಂದ ಬರಬೇಕು ಹೇಳಿ? ಈ ಟೈಟ್ಲರ್‌ನ ಉಪದ್ವಾ ್ಯಪ ಇಲ್ಲಿಗೆ ಕೊನೆಗೊಂಡಿಲ್ಲ. ಎಲ್ಲರೂ ತಿಳಿದಿರುವಂತೆ ಟೈಟ್ಲರ್ ಸಂಜಯ ಗಾಂಧಿ ಕೃಪಾಕಟಾಕ್ಷದಿಂದ ಕಾಂಗ್ರೆಸ್‌ಗೆ ಬಂದವರಲ್ಲ. ಬದಲಿಗೆ ಆಗಿನ್ನೂ ಪೈಲಟ್ ಆಗಿದ್ದ ರಾಜೀವ್‌ಗಾಂಧಿ ಬೋಟ್ ಕ್ಲಬ್‌ನಲ್ಲಿ ಪರಿಚಯವಾಗಿ ಅವರ ಮೂಲಕ ಕಾಂಗ್ರೆಸ್ ಕೈ ಹಿಡಿದವರು. ಇಷ್ಟೆಲ್ಲಾ ರಾದ್ಧಾಂತವಾದರೂ ಟೈಟ್ಲರ್ ಇಂದಿಗೂ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿಯಲ್ಲಿ ಸ್ಥಾನ ಪಡೆದಿರುವುದೂ ಇದೇ ಕಾರಣಕ್ಕೆ. ಸಾಲದ್ದಕ್ಕೆ ಒರಿಸ್ಸಾ ರಾಜ್ಯದ ಪಕ್ಷದ ಉಸ್ತುವಾರಿಯೂ ಆಗಿದ್ದ ಟೈಟ್ಲರ್ ಕಳೆದ ವರ್ಷ ಭುವನೇಶ್ವರದಲ್ಲಿ ಪಕ್ಷ ಏರ್ಪಡಿಸಿದ್ದ ರಸ್ತೆ ರೋಕೋ ಚಳವಳಿಯ ಸಂದರ್ಭದಲ್ಲಿ ಹೇಳಿದ ಮಾತುಗಳನ್ನು ಗಮನಿಸಿ 'ಆಗೇ ಬಡಾವೋ, ಹಲ್ಲಾ ಬೋಲ್, ಥೋಡ್ ದೋ ಥೋಡ್ ದೋ (ನುಗ್ಗಿ, ಮುನ್ನುಗ್ಗಿ, ಧಿಕ್ಕರಿಸಿ, ಹೊಡೆದು ಹಾಕಿ)' ಹಾಗೆ ಹೇಳಿದ್ದೇ ತಡ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೊಗೆದು ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು. ಅಷ್ಟೇ ಅಲ್ಲದೆ ಅಲ್ಲಿದ್ದ ಮಹಿಳಾ ಪೇದೆಯನ್ನು ಹಿಗ್ಗಾಮುಗ್ಗ ಥಳಿಸಿ ಆಕೆ ತಿಂಗಳುಗಟ್ಟಲೇ ಆಸ್ಪತ್ರೆ ಸೇರುವಂತಾಯಿತು. ಧೃತಿಗೆಡದ ಆ ಮಹಿಳೆ ಇಂದೂ ಸಹ ಟೈಟ್ಲರ್ ವಿರುದ್ಧ ಕಾನೂನಿನ ಹೋರಾಟ ಮುಂದುವರಿಸಿದ್ದಾಳೆ. ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಗುಜರಾತಿನ ಸಚಿವ ಅಮಿತ್ ಶಾರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ನೇಮಕ ಮಾಡಿದ್ದಕ್ಕೆ ಗುಲ್ಲೆಬ್ಬಿಸುವ ಕಾಂಗ್ರೆಸ್, ತನ್ನ ಕಾರ್ಯಕಾರಿಣಿಯಲ್ಲಿ ಟೈಟ್ಲರ್‌ನಂಥವರನ್ನು ಹೇಗೆ ಇರಿಸಿಕೊಂಡಿದೆ? ಟೈಟ್ಲರ್ ಮೇಲಿರುವುದು ಆರೋಪ ಮಾತ್ರ ಎಂದು ಹೇಳುವುದಾದರೆ ಅಮಿತ್ ಶಾ ಎದುರಿಸುತ್ತಿರುವುದೂ ಆರೋಪ ಎಂಬ ಸತ್ಯ ಇವರ ಅರಿವಿಗೆ ಬಾರದೆ? ಗೋಧ್ರೋತ್ತರ ಗಲಭೆಗಳಿಗಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು 'ಯಮರಾಜ' ಎಂದು ಜರಿಯುವ ನಾಲಗೆಗಳು ಟೈಟ್ಲರ್‌ಗೆ ಯಾವ ಟೈಟಲ್ ನೀಡುತ್ತವೆ. ಕಾಂಗ್ರೆಸ್ ಪಾಲಿಗೆ ಮೋದಿ 'ಮೌತ್ ಕಾ ಸೌದಾಗರ್' ಆಗಿ ಕಂಡರೆ ಈ ದೇಶದ ಜನರ ಪಾಲಿಗೆ ಟೈಟ್ಲರ್ ಏನು?
- ಕೆ.ಎಸ್.ಜಗನ್ನಾಥ್
jagannath.kudinoor@gmail.com