ಶೇ. 99 ಮಂದಿಯ ಸಿಟ್ಟಿನ ಬಗ್ಗೆ ಎಚ್ಚರ ಇರಲಿ...

Updated on: 

ದೇಶದ ಒಟ್ಟಾರೆ ಚಿತ್ರಣವು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯೇ ಹಲವಾರು ಸಂದೇಹಗಳನ್ನು ಹುಟ್ಟುಹಾಕುತ್ತದೆ. ಇಡೀ ಜಗತ್ತಿಗೇ ತಿಳಿದಿರುವಂತೆ, ಪ್ರಜಾಪ್ರಭುತ್ವವೆಂದರೆ ಸಾಮಾನ್ಯ ಜನರ ಆಡಳಿತ; ಎಲ್ಲ ಜನರ ಒಳಿತಿಗಾಗಿ, ನ್ಯಾಯಯುತವಾಗಿ ಚುನಾಯಿತರಾದ ಜನರು ನಡೆಸುವ ಆಡಳಿತ. ಸ್ವಾತಂತ್ರ್ಯದ ಮೊದಲ ಕೆಲ ವರ್ಷಗಳಲ್ಲಿ ಅಂಥ ಪ್ರಜಾಪ್ರಭುತ್ವವನ್ನು ನಾವು ಹೊಂದಿದ್ದೆವು. ಆದರೆ, ಇಂದು ನಾವು ಹೊಂದಿರುವುದು ಕುತಂತ್ರಿಗಳಿಗಾಗಿ ಕುತಂತ್ರಿಗಳು ನಡೆಸುವ ಸರ್ಕಾರ.
 ಪ್ರತಿ ಚುನಾವಣೆ ಬಂದಾಗಲೂ ಪರಿಸ್ಥಿತಿ ಸುಧಾರಿಸುವ ಬದಲು ಇನ್ನಷ್ಟು ಕೆಡುತ್ತಲೇ ಹೋಗುತ್ತದೆ. ಬೆಂಗಳೂರಿನ ಕ್ಷೇತ್ರವೊಂದರ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ಅವರ ಪ್ರಕರಣವನ್ನೊಮ್ಮೆ ಗಮನಿಸಿ. ಇತರ ಎಲ್ಲ ಕೆಲಸಗಳನ್ನು ಬದಿಗೊತ್ತಿ ತನ್ನ ನಾಮಪತ್ರವನ್ನು ತಕ್ಷಣ ಪರಿಶೀಲಿಸುವಂತೆ ಚುನಾವಣಾಧಿಕಾರಿಯ ಮೇಲೆ ಒತ್ತಡ ಹೇರಿದರು ಈ ನಾಯ್ಡು. ಅವರು ಆ ಅಧಿಕಾರಿಯನ್ನು ಬೆದರಿಸಿದ್ದು ಹೇಗೆ ನೋಡಿ- 'ಮುಂದೆ ಏನಾದರೂ ಸ್ಪಷ್ಟನೆ ಕೇಳುವುದಾದರೆ, ಮಲ್ಲೇಶ್ವರದಲ್ಲಿ ನಡೆದ ಬಾಂಬ್ ಸ್ಫೋಟವನ್ನು ನೆನಪಿಸಿಕೊಳ್ಳಬೇಕಾದೀತು'. ಈ ಮನುಷ್ಯನನ್ನು ಬಂಧಿಸಲಾಯಿತು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಇಂಥವರು ನಮ್ಮ ಚುನಾಯಿತ ಪ್ರತಿನಿಧಿಗಳಾಗಿಬಿಡುತ್ತಾರೆ!
 ಮಹಾರಾಷ್ಟ್ರದ ಚುನಾಯಿತ ಶಾಸಕರ ಪ್ರಕರಣ ಇನ್ನಷ್ಟು ವಿಚಿತ್ರವಾದುದು. ಅವರಲ್ಲಿ ಒಂದಷ್ಟು ಮಂದಿ ವಿಧಾನಸಭೆಯ ಒಳಗೇ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದರು. ಶಾಸಕರ ಸಮಿತಿಯೊಂದು ಅವರನ್ನು ಈಗ ಆರೋಪದಿಂದ ಮುಕ್ತಗೊಳಿಸಿದೆ. ಅಷ್ಟೇ ಅಲ್ಲದೆ, ಈಗಾಗಲೇ ಅಮಾನತಿನಲ್ಲಿರುವ ಪೊಲೀಸ್ ಅಧಿಕಾರಿಯ ವಿರುದ್ಧವೇ ಇಲಾಖಾ ತನಿಖೆಗೆ ಶಿಫಾರಸು ಮಾಡಿದೆ. ದಗಾಕೋರರು, ಘಾತುಕರ ಕೈಯಲ್ಲಿ ಪ್ರಜಾಪ್ರಭುತ್ವ ಎಂಬುದು ಪ್ರಹಸನವಾಗಿ ಪರಿವರ್ತಿತವಾಗುತ್ತಿದೆ. ಕಾನೂನು ಭಂಜಕರೇ ಆಡಳಿತ ನಡೆಸುತ್ತಾರೆ. ಕೊನೆಗೂ ಮೂರ್ಖರಾಗುವುದು ಮತದಾರರೇ.
 ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್‌ರಂಥವರು ನಮ್ಮ ಕಾಲದ ನೀತಿಭ್ರಷ್ಟ ಶಾಸಕಾಂಗ ಸಂಸ್ಕೃತಿಯನ್ನು ಪ್ರದರ್ಶಿಸುತ್ತಾರೆ. ಅವರ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಳ್ಳುವಂತೆ, ಪವಾರ್ ಕೆಲವೊಮ್ಮೆ ಒರಟು ಹಾದಿ ಹಿಡಿಯುತ್ತಾರೆ, ಅಸಂಬದ್ಧ ಜೋಕ್ ಹೇಳುತ್ತಾರೆ. ಅವರು ಒಮ್ಮೆ ಹೇಳಿದ್ದುಂಟು- 'ನೀವೊಬ್ಬ ದಗಾಕೋರ ಆಗಿರದೇ ಇದ್ದರೆ ರಾಜಕೀಯದಲ್ಲಿ ಏನೂ ನಡೆಯದು'.
 ರೈತರ ಸಂಕಷ್ಟಗಳ ಬಗ್ಗೆ 2011ರಲ್ಲಿ ಪತ್ರಿಕೆಗಳು ಪ್ರಕಟಿಸಿದ ವರದಿಗಳಿಂದ ಅಸಮಾಧಾನಗೊಂಡ ಅಜಿತ್ ಪವಾರ್ ಪತ್ರಕರ್ತರ ಜತೆ ಏನು ಹೇಳಿದ್ದರು ಗೊತ್ತೇ- 'ಮೊದಲು ನಿಮ್ಮ ಮೇಲೆ ನಿಷೇಧ ಹೇರಬೇಕು. ನಾಲ್ಕು ಬಾರಿಸಿದರಷ್ಟೇ ನಿಮಗೆ ಅರ್ಥವಾಗುವುದು'.
 ಅಜಿತ್ ಪವಾರ್ ಅವರ ಇತ್ತೀಚಿನ 'ದಿಟ್ಟ ಮಾತು'ಗಳು ಮೂತ್ರಕ್ಕೆ ಸಂಬಂಧಿಸಿದ್ದು. 'ಕುಡಿಯಲು ನೀರಿಲ್ಲದೇ ಹೋದರೆ ಮೂತ್ರ ಮಾಡಲು ಕೂಡಾ ಅಸಾಧ್ಯ' ಎಂದು ಅರ್ಥವಾದಾಗಲಷ್ಟೇ, ಅಣೆಕಟ್ಟುಗಳನ್ನು ಮೂತ್ರ ಮಾಡಿ ತುಂಬಿಸುವ ಹೇಳಿಕೆಯನ್ನು ಅವರು ಹಿಂತೆಗೆದುಕೊಂಡದ್ದು. ಹತ್ತು ವರ್ಷಗಳ ಕಾಲ ನೀರಾವರಿ ಸಚಿವರಾಗಿದ್ದವರು ಅವರು. 426 ಯೋಜನೆಗಳಿಗಾಗಿ 43,270 ಕೋಟಿ ರು. ವೆಚ್ಚದ ಉಸ್ತುವಾರಿ ವಹಿಸಿಕೊಂಡವರು, ನೀರಾವರಿ ಪ್ರದೇಶವನ್ನು ಕೇವಲ ಶೇ. 0.1ರಷ್ಟು ಮಾತ್ರ ಹೆಚ್ಚಿಸಿದವರು ಇದೇ ಅಜಿತ್ ಪವಾರ್. ಆದರೆ ಆ ಯೋಜನೆಗಳಲ್ಲಿ ಒಂದು ಕೂಡಾ ಪೂರ್ಣಗೊಂಡಿಲ್ಲ. ಹಾಗಾದರೆ, ಆ ಹಣವೆಲ್ಲ ಎಲ್ಲಿ ಹೋಯಿತು? ನೀರೆಲ್ಲ ಎಲ್ಲಿ ಹರಿದು ಹೋಯಿತು?
 'ಅರಾಜಕತೆ'ಯಂಥ ಪದವನ್ನು ಬಳಸಿ ಅಣಕಿಸಬಹುದಾದ ಹಂತವನ್ನು ನಮ್ಮ ಪ್ರಜಾಪ್ರಭುತ್ವ ಈಗಾಗಲೇ ದಾಟಿಹೋಗಿದೆ. ಈ ವಾಸ್ತವವನ್ನು ಅರಿತುಕೊಳ್ಳಬೇಕಿದ್ದರೆ ದೇಶದ ಪರಿಸ್ಥಿತಿಯನ್ನೊಮ್ಮೆ ಗಮನಿಸಿದರೆ ಸಾಕು. ಇಂದು ಎಲ್ಲೆಡೆ ನಾಚಿಕೆಗೇಡಿನ ಸಂಗತಿಗಳೇ ಗೋಚರಿಸುತ್ತಿವೆ. ಚುನಾಯಿತ ಪ್ರತಿನಿಧಿಗಳಲ್ಲಿ ತುಚ್ಛಜನಗಳೇ ತುಂಬಿದ್ದಾರೆ. ಅವರಲ್ಲಿ ಉತ್ತರ ಪ್ರದೇಶದ ಕೊಲೆಗಾರರಿದ್ದಾರೆ, ಬಿಹಾರದ ಬ್ಲ್ಯಾಕ್‌ಮೇಲರ್‌ಗಳಿದ್ದಾರೆ, ಹರ್ಯಾಣದ ಅಪಹರಣಕಾರರಿದ್ದಾರೆ, ಪಂಜಾಬ್‌ನ ರೇಪಿಸ್ಟ್‌ಗಳಿದ್ದಾರೆ. ಸದ್ಯದಲ್ಲೇ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿನ ಬೆಳವಣಿಗೆಗಳನ್ನು ಗಮನಿಸಿದರೂ ಸಾಕು, ಪರಿಸ್ಥಿತಿ ಸುಧಾರಿಸುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ.
 ತಾನು ಕಾನೂನಿಗಿಂತ ಮೇಲಿನವನು ಎಂದು ತಿಳಿದುಕೊಂಡ ಅಭ್ಯರ್ಥಿ ಮುನಿರತ್ನ ನಾಯ್ಡು ಒಬ್ಬರೇ ಅಲ್ಲ. ಯಡಿಯೂರಪ್ಪ ಪಕ್ಷವನ್ನು ಪ್ರತಿನಿಧಿಸುವ ವೆಂಕಟೇಶ ಗೌಡ ಕೂಡಾ ಚುನಾವಣಾಧಿಕಾರಿಯೊಬ್ಬರನ್ನು ಬೆದರಿಸಿದವರೇ. ಮೆರವಣಿಗೆ ಮತ್ತು ಪ್ರತಿಭಟನೆಗೆ ಅವಕಾಶ ನೀಡದೇ ಇದ್ದರೆ ಅಧಿಕಾರಿಗೆ ತಕ್ಕ ಪಾಠ ಕಲಿಸುವುದಾಗಿ ಬೆದರಿಕೆ ಒಡ್ಡಿದರು ಈ ಅಭ್ಯರ್ಥಿ. ಈ ಹಿಂದೆ ತನ್ನ ಕಚೇರಿಯ ಮೇಲೆ ದಾಳಿ ನಡೆಸಲು ಬಂದ ಅಧಿಕಾರಿಗಳ ಮೇಲೆಯೇ ಇವರು ಹಲ್ಲೆ ನಡೆಸಿದ್ದುಂಟು. ಇವರಂಥ ವ್ಯಕ್ತಿಗಳು ಸಚಿವರಾದರೆಂದರೆ, ಪ್ರಜಾಪ್ರಭುತ್ವ ಎಂಬುದು ಸತ್ತಂತೆಯೇ.
 ಬೆಂಗಳೂರಿನಲ್ಲಿ ಸ್ಫೋಟಗೊಂಡ 'ಭಯೋತ್ಪಾದಕ ಬಾಂಬ್‌' ಅನ್ನು ತಕ್ಷಣವೇ 'ರಾಜಕೀಯ ಬಾಂಬ್‌' ಆಗಿ ಪರಿವರ್ತಿಸಲಾಯಿತು. ಪಕ್ಷದ ಕಾರ್ಯಕರ್ತರೇ ಬಾಂಬ್‌ನ ಗುರಿಯಾಗಿತ್ತು ಎಂದಿತು ಬಿಜೆಪಿ. ಬಾಂಬ್‌ನಿಂದಾಗಿ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದಿತು ಕಾಂಗ್ರೆಸ್. ಈ ಮಾತಿನ ಅರ್ಥ ಏನು? ಒಂದು ವೇಳೆ, ಕಾಂಗ್ರೆಸ್ ಕಚೇರಿಯ ಬಳಿ ಬಾಂಬ್ ಸ್ಫೋಟವಾದರೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ಅರ್ಥವೇ?
 ಬಹುಶಃ ಹಣದ ಪ್ರಭಾವವು ಇಡೀ ಕಥೆಯನ್ನು ಹೇಳಬಲ್ಲದು. ಹಣವೇ ಅಧಿಕಾರ ನೀಡುತ್ತದೆ, ಹಾಗಾಗಿ ಹಣವೇ ಎಲ್ಲರ ಗುರಿ. ಕೇವಲ ಎರಡೇ ಎರಡು ದಿನಗಳಲ್ಲಿ 1.4 ಕೋಟಿ ರುಪಾಯಿ ಮೊತ್ತದ ನೋಟುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ, ಭಾರಿ ಪ್ರಮಾಣದ ಮದ್ಯವನ್ನೂ ವಶಪಡಿಸಿಕೊಂಡಿದ್ದಾರೆ. ಇನ್ನೊಂದೆಡೆ,ಅಭ್ಯರ್ಥಿಗಳು ಸಲ್ಲಿಸಿದ ಪ್ರಮಾಣಪತ್ರಗಳು ಇನ್ನೊಂದು ಚಿತ್ರಣವನ್ನು ಹೊರಗೆಡಹಿವೆ. ಕರ್ನಾಟಕ ಮುಖ್ಯಮಂತ್ರಿಯ ಆಸ್ತಿಯು ಕಳೆದ ಐದು ವರ್ಷಗಳಲ್ಲಿ ನಾಲ್ಕು ಪಟ್ಟಿಗಿಂತಲೂ ಹೆಚ್ಚಾಗಿದೆ. ಒಬ್ಬ ಉಪ ಮುಖ್ಯಮಂತ್ರಿಯ ಆಸ್ತಿಯು ಬಹುತೇಕ ಇಮ್ಮಡಿಯಾಗಿದೆ. ಇನ್ನೊಬ್ಬರ ಆಸ್ತಿಯು ಎರಡು ಕೋಟಿಯಷ್ಟು ಹೆಚ್ಚಾಗಿದೆ. ಕೆಲವರಿಗಾಗಿ, ಕೆಲವರಿಂದ, ಕೆಲವರ ಆಡಳಿತದ ಪ್ರಜಾಪ್ರಭುತ್ವ ವ್ಯವಸ್ಥೆಯು ಇಂದು ಬೆಳೆಯುತ್ತಿದೆ. ಇದನ್ನೆಲ್ಲ ಉಳಿದ ಶೇ.99 ಮಂದಿ ಗಮನಿಸುತ್ತಲೇ ಇದ್ದಾರೆ.


-ಟಿ.ಜೆ.ಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com