ಅಪ್ರಾಪ್ತ ಹಿಮಗಿರಿಯ ಮೇಲೆ ಅತ್ಯಾಚಾರ!

ಕಣ್ಣೆದುರು ನಿಂತ ಆ ಪರ್ವತ ಸಾಲು ಅತ್ಯಂತ ಬಲಿಷ್ಠವಾಗಿರುವಂತೆ ತೋರುತ್ತದೆ. ಅದರ...
Updated on: 

-ಪ್ರವಾಹೋತ್ತರಕಾಂಡ ಭಾಗ 7

ಕಣ್ಣೆದುರು ನಿಂತ ಆ ಪರ್ವತ ಸಾಲು ಅತ್ಯಂತ ಬಲಿಷ್ಠವಾಗಿರುವಂತೆ ತೋರುತ್ತದೆ. ಅದರ ಅಗಾಧ ಎತ್ತರ, ಉದ್ದಕ್ಕೂ ಮೈಚಾಚಿ ನಿಂತ ಅದರ ವಿಶಾಲ ಹರವು. ಹಸಿರು ಹೊದ್ದು ಅದು ಮಲಗಿರುವ, ಕಣ್ಮನ ಸೆಳೆಯುವ ಅದರ ಸೌಂದರ್ಯ ಎಲ್ಲವೂ ಅದನ್ನು ಭಾರತದ ಹೆಗ್ಗುರುತಿನಂತೆಯೇ ಕಂಗೊಳಿಸುವಂತೆ ಮಾಡಿದೆ. ಅದು ನಿಜ ಸಹ. ಉಪಖಂಡಗಳಿಂದ ಬರಬಹುದಾದ ಮಾನವ ನಿರ್ಮಿತ ದಾಳಿ ಇರಬಹುದು ಅಥವಾ ನಿಸರ್ಗ ನಿರ್ಮಿತ ದಾಳಿಯೇ ಆಗಿರಬಹುದು ಅದನ್ನು ತಡೆಯಬಲ್ಲಷ್ಟು ಶಕ್ತಿಶಾಲಿ ಪರ್ವತಗಳ ಸಾಲು ಅದು ಎನ್ನವುದರಲ್ಲಿ ಅನುಮಾನವಿಲ್ಲ. ಹಿಮಾಲಯಶ್ರೇಣಿಗೆ ಅಂಥದ್ದೊಂದು ಹೆಗ್ಗಳಿಕೆ ಇರುವುದು ನಿಜ. ಹತ್ತು ಮಿಲಿಯನ್ ವರ್ಷಗಳಲ್ಲಿ ಕೆಳಗಿನ ಭೂಭಾಗ ಒತ್ತರಿಸಿ ಬಂದು ಹಿಮಾಲಯ ಇಂದಿನ ಸ್ಥಿತಿಯನ್ನು ಮುಟ್ಟಿದೆ ಎನ್ನುತ್ತಾರೆ ತಜ್ಞರು. ದಕ್ಷಿಣದ ಅರಾವಳಿಯು ಇದಕ್ಕಿಂತ ಒಂದು ಬಿಲಿಯನ್ ವರ್ಷಗಳಷ್ಟು ಹಳೆಯದು. ಆದರೆ ಇಂದಿಗೂ ಹಿಮಾಲಯದ ಬೆಳವಣಿಗೆ ನಿಂತಿಲ್ಲ. ಅದು ಇಂದಿಗೂ ಬೆಳೆಯುತ್ತಿರುವ ಹಂತದಲ್ಲೇ ಇದೆ ಎಂಬುದು ಗಮನಾರ್ಹ ಸಂಗತಿ. 'ಪ್ರತಿ ವರ್ಷ 5 ಸೆಂ.ಮೀ.ನಷ್ಟು ಟಿಬೆಟಿಯನ್ ಪ್ಲಾಟೊದೊಳಗೆ ಭೂಭಾಗ ಜರುಗುವುದರೊಂದಿಗೆ ಪರ್ವತವು 1.5 ಸೆಂ.ಮೀ.ನಷ್ಟು ಬೆಳೆಯುತ್ತಿದೆ' ಎನ್ನುತ್ತಾರೆ ಹಿಮಾಲಯದ ಭೂಗರ್ಭಶಾಸ್ತ್ರಜ್ಞ ಮತ್ತು ವಿಕೋಪ ವ್ಯವಸ್ಥಾಪನೆಯ ತರಬೇತುದಾರ ಅರುಣ್ ದೀಪ್ ಆಹ್ಲುವಾಲಿಯಾ. ಈ ದೃಷ್ಟಿಯಿಂದ ನೋಡಿದರೆ ಅದಿನ್ನೂ ನಾವಂದುಕೊಂಡಷ್ಟು ದೃಢವಾಗಿ ನಿಂತಿಲ್ಲ. ಇಂಥ ಬೆಳೆಯುವ ಕೂಸಿನ ಮೇಲೆ ನಾವು ಎಸಗುವ ದೌರ್ಜನ್ಯ ಪ್ರಶ್ನಾರ್ಹವಲ್ಲವೇ? ಇಂಥ ದೌರ್ಜನ್ಯಕ್ಕೆ ಅದು ನಲುಗಿದ ಪರಿಣಾಮವೇ ಉತ್ತರಾಖಂಡದ ಇತ್ತೀಚೆಗಿನ ದುರಂತಕ್ಕೆ ಕಾರಣವಾಗಿರಲೂಬಹುದಲ್ಲವೇ?
ಈ ಮಾತಿಗೆ ಸಾಕಷ್ಟು ಪುರಾವೆಗಳು ಹಿಮನೆಲದ ಪರಿಸರವಾದಿಗಳು, ತಜ್ಞರಿಂದ ಕೇಳಿಬರುತ್ತಿವೆ. ಆ ನೆಲದಲ್ಲೀಗ ಅಂಥದೇ ಅಳಲುಗಳ, ವಿಷಾದದ ಮಾತುಗಳು ಅನುರಣಿಸುತ್ತವೆ. ಹಿಮಾಲಯ ನೋಡಲು ಎತ್ತರೆತ್ತರಕ್ಕೆ, ಮುಗಿಲು ಚುಂಬಿಸುವಂತೆ ಕಂಡರೂ ಅದರ ಎತ್ತರಕ್ಕೆ ತಕ್ಕಂತೆ ಸ್ಥಿರತೆ ಇಲ್ಲ. ಜತೆಗೆ ಹಿಮಾಲಯವು ಮುಂಗಾರು ಮಾರುತಗಳನ್ನು ತಡೆದು ನಿಲ್ಲಿಸಿ ನಿರಂತರ ಮಳೆ ಸುರಿಸುವಂತೆ ಆದೇಶ ನೀಡುತ್ತಲೇ ಇರುತ್ತದೆ. ಹೀಗಾಗಿ ಪ್ರಪಂಚದೆಲ್ಲೆಡೆಗಿಂತ ಅಧಿಕ ಮಳೆ ಸುರಿಯುತ್ತಿರುತ್ತದೆ. ಮಾತ್ರವಲ್ಲ ಶಿಖರದ ಮೇಲಿನ ಭಾಗದಲ್ಲಿ ಹಿಮಪಾತವೂ ಸಂಭವಿಸುತ್ತಲೇ ಇರುತ್ತದೆ. ಇವೆರಡರ ಪರಿಣಾಮ ಕಣಿವೆಗುಂಟ ಪುಟ್ಟಪುಟ್ಟ ಝರಿಗಳು, ತೊರೆಗಳು ಅಸಂಖ್ಯ ಸೃಷ್ಟಿಯಾಗಿವೆ. ಇವೇ ಕಣಿವೆಯ ಪ್ರಮುಖ ನದಿಗಳನ್ನು ಮೈದುಂಬಿಸಿ ಒತ್ತಡವನ್ನು ತರುತ್ತವೆ. ಹೀಗಾಗಿ ಇಲ್ಲಿ ಮೃದುವಾದ ಚಲನೆಗಳೇ ಇಲ್ಲ. ಮೂರು ರಭಸದ ನದಿಗಳಾದ ಇಂಡಸ್, ಗಂಗಾ, ಯಾಂಗ್ ಟ್ಸೆ ಪರ್ವತದ ಒಡಲಲ್ಲೇ ಹುಟ್ಟುತ್ತವೆ. ಈ ದೃಷ್ಟಿಯಿಂದಲೂ ಇದು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಪುಟ್ಟ ಪುಟ್ಟ ಭೂಕಂಪನಗಳು ನಿಯಮಿತವಾಗಿ ಸಂಭವಿಸುತ್ತಲೇ ಇರುತ್ತವೆ. ಈ ನೈಸರ್ಗಿಕ ಚಟುವಟಿಕೆಗಳ ಜೊತೆಗೇ ಬೃಹತ್ ಜನಸಂಖ್ಯೆಯ ಒತ್ತಡ ಬೆಟ್ಟಗಳಲ್ಲಿ ಮತ್ತು ಗಿರಿಶ್ರೇಣಿಗಳಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಅದನ್ನು ತಾಳಿಕೊಳ್ಳುವ ಶಕ್ತಿ ಆಂತರಂಗಿಕವಾಗಿ ದುರ್ಬಲವಾಗಿರುವ ಪರ್ವತಕ್ಕೆ ಇಲ್ಲ.
'ಹಿಮಾಲಯವನ್ನು ಇತರೆ ಯಾವುದೇ ಭೂಭಾಗಕ್ಕಿಂತ ಪ್ರತ್ಯೇಕಿಸಿ ನೋಡಬೇಕಿದೆ' ಎನ್ನುತ್ತಾರೆ ದಿಲ್ಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರದ ನಿರ್ದೇಶಕಿ ಸುನಿತಾ ನಾರಾಯಣ್. ಹೌದು, ಹಿಮಾಲಯದ ಪ್ರದೇಶಕ್ಕೆ ಪ್ರತ್ಯೇಕ ನಿಯಮಗಳು ಬೇಕೇ ಬೇಕು. ಅದನ್ನು ದೇಶದ ಇತರೆಲ್ಲ ಭೂಭಾಗಗಳನ್ನು ನೋಡುವಂತೆ ನೋಡಲಿಕ್ಕಾಗುವದೇ ಇಲ್ಲ. ದುರದೃಷ್ಟವಶಾತ್ ಇದನ್ನು ನಾವು ಅರಿತಿಲ್ಲ. ದೇಶದೆಲ್ಲೆಡೆಯಲ್ಲಿನ ಭೂಭಾಗದಂತೆಯೇ ಹಿಮಾಲಯವನ್ನೂ ನಾವು ಪರಿಗಣಿಸುತ್ತೇವೆ. ಎಲ್ಲೆಡೆ ನಡೆಸುವ ದಾಳಿಯನ್ನೇ ನಾವು ಹಿಮಶಿಖರಗಳ ಮೇಲೂ ನಡೆಸುತ್ತೇವೆ. ಪಾಪ, ಹಸುಳೆ ಹಿಮಪರ್ವತ! ಅದನ್ನು ತಾಳಿಕೊಳ್ಳಬೇಕಾದರೂ ಹೇಗೆ?
ಇತ್ತೀಚಿನ ಮೇಘಸ್ಫೋಟ ಮತ್ತು ನೀರಲೆಗಳ ಹೊಡೆತದಂಥವು ಅಪರೂಪಕ್ಕೊಮ್ಮೆ ಸಂಭವಿಸಿದರೂ, ಹಿಮಾಲಯಕ್ಕೆ ತನ್ನದೇ ಆದ ನಿಯಮಿತವಾದ ಸಂಕಷ್ಟ ಎದುರಾಗುತ್ತಲೇ ಇದೆ. ಅದಕ್ಕಾಗಿ ದೇಶ, ದೇಶವಾಸಿಗಳು ಯಾವಾಗಲೂ ಸಿದ್ಧವಾಗಿರಬೇಕು, ಹೆಡ್‌ಲೈಡ್‌ಗೆ ಸಿಕ್ಕಿದ ಜಿಂಕೆಯಂತೆ ಹುಚ್ಚಾಪಟ್ಟೆ ವರ್ತನೆ ಖಂಡಿತಾ ಹಿಮಾಲಯದ ಮಟ್ಟಿಗೆ ಸರಿಯಲ್ಲ. ಇತ್ತೀಚಿನ ದಿನಗಳಲ್ಲಿ ಹಿಮಾಲಯ ಸಣ್ಣಪುಟ್ಟ ಮೇಘಸ್ಫೋಟಗಳನ್ನು ಕಂಡಿದೆ, ಇದರಿಂದುಂಟಾದ ಪ್ರವಾಹಗಳು ಲಡಾಖ್‌ನಂಥ ಪ್ರದೇಶದಲ್ಲಿ ಹಾವಳಿ ಎಬ್ಬಿಸಿವೆ. ಸಿಕ್ಕಿಮ್‌ನಲ್ಲಿ ಒಂದು ಭಾರಿ ಭೂಕಂಪವೂ ಸಂಭವಿಸಿದೆ. ಇವೆರಡೂ ಜೀವ ಮತ್ತು ಆಸ್ತಿಗೆ ಅಪಾರ ನಷ್ಟ ಉಂಟುಮಾಡಿವೆ.
ಹಿಮಾಲಯ ಪರಿಸರದ ಅಧ್ಯಯನ ನಡೆಸುತ್ತಿರುವ ಅನಿಲ್ ಜೋಶಿ ಅವರ ಪ್ರಕಾರ, 'ಈ ವರ್ಷ ಹಿಮಾಲಯದ ಶಿಖರಗಳಲ್ಲಿ ಭಾರಿ ಮಳೆ ಉಂಟಾಗುವ ಕುರಿತು ಮುನ್ಸೂಚನೆ ನೀಡಲಾಗಿತ್ತು.' ಅದರಿಂದ ಆ ಭಾಗ ಅಪಾಯಕ್ಕೆ ಸಿಲುಕಬಲ್ಲ ಸೂಚನೆಯೂ ಇತ್ತು. ಆದರೂ ಸರಕಾರ ಎಚ್ಚೆತ್ತಿಲ್ಲ ಏಕೆ ಎಂಬುದು ಪ್ರಶ್ನೆ. ಹಿಮಾಲಯದ ದೇವಾಲಯ ನಗರ ಕೇದಾರವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ 3 ಸಾವಿರಕ್ಕಿಂತ ಹೆಚ್ಚು ಯಾತ್ರಾರ್ಥಿಗಳನ್ನು ಹೊತ್ತು ನಿಲ್ಲುವ ಸಾಮರ್ಥ್ಯವನ್ನು ಅದು ಹೊಂದಿಲ್ಲ. ಹಾಗಿರುವಾಗ, ಅದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಜನಸಂಖ್ಯೆಯ ಪ್ರಮಾಣವನ್ನು ಅದು ಒಂದೇ ಸೀಸನ್‌ನಲ್ಲಿ ತಡೆಯುವುದಾದರೂ ಹೇಗೆ? ಕನಿಷ್ಠಪಕ್ಷ ಮಳೆಗಾಲದಲ್ಲಾದರೂ ಕೆಲವು ನಿಯಮಗಳನ್ನು ಹೇರುವ ಅಗತ್ಯವಿಲ್ಲವೇ?
ಸ್ವತಃ ಟೂರ್ ಪ್ಯಾಕೇಜ್ ಉದ್ಯಮವನ್ನು ನಡೆಸುತ್ತಿರುವ ಹೃಷಿಕೇಶದ ಕಮಲ್ ಪಟೇಲ್ ಹೇಳುವ ಪ್ರಕಾರ, ಈ ಭಾಗದ ಸಮಗ್ರ ಪ್ರವಾಸೋದ್ಯಮ (ಯಮುನೋತ್ರಿ, ಗಂಗೋತ್ರಿ, ಬದ್ರಿನಾಥ್, ಕೇದಾರನಾಥ್) ಖಾಸಗಿ ಟೂರ್ ಆಪರೇಟರ್‌ಗಳ ಹಿಡಿತದಲ್ಲಿದೆ. ಅವರದ್ದೊಂದು ಬೃಹತ್ ಲಾಬಿ. ಅವರು ಸೀಸನ್ ಮುಗಿಯುವ ಮೊದಲು ಸಾಧ್ಯವಾಗುವಷ್ಟು ಯಾತ್ರಾರ್ಥಿಗಳ ಗುಂಪುಗಳನ್ನು ಟಾರ್ಗೆಟ್ ಮಾಡುತ್ತಾರೆ. ಪಶ್ಚಿಮ ಮತ್ತು ದಕ್ಷಿಣ ಭಾರತದಿಂದ ದೂರದ ಯಾತ್ರಾರ್ಥಿಗಳು ಬರುತ್ತಾರೆ. ಇವರಿಗೆ ಟೂರ್ ಅಪರೇಟರ್‌ನ ನೆರವು ಬೇಕೇ ಬೇಕು.  ಹೀಗಾಗಿ ಸೀಸನ್‌ನಲ್ಲಿ ಯಾವುದೇ ಕಾರಣಕ್ಕೂ ಸರಕಾರ ಚಾರ್‌ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸದಂತೆ ಸರಕಾರದ ಮೇಲೆ ಒತ್ತಡ ತರುತ್ತಾರೆ. ಸರಕಾರವೂ ಅವರ ಕಪಿಮುಷ್ಟಿಯಲ್ಲಿದೆ. ಕಳೆದ ವರ್ಷ 7 ರಿಂದ 8 ದಶಲಕ್ಷ ಯಾತ್ರಾರ್ಥಿಗಳು ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆಂದು ಊಹಿಸಲಾಗಿದೆ. ಇವರಿಗೆ ತಕ್ಕಂತೆ ಹೆಚ್ಚೆಚ್ಚು ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ವಾಹನಗಳ ಓಡಾಟವೂ ತೀವ್ರ ಹೆಚ್ಚಿದೆ. ಜತೆಗೆ ಹಾಗೆ ಬರುವ ವಾಹನಗಳು ಪರ್ವತ ಸ್ಥಳದಲ್ಲಿ ಎಲ್ಲೆಂದರಲ್ಲಿ ಅಡಾದಿಡ್ಡಿ ಪಾರ್ಕ್ ಮಾಡಿ ಕೃತಕ ಒತ್ತಡವನ್ನು ನಿರ್ಮಿಸುತ್ತದೆ. ಇದನ್ನೆಲ್ಲ ಬಡಪಾಯಿ ಹಿಮಾಲಯ ಸಹಿಸುವುದೆಂತು?
ಸ್ಥಳೀಯರ ಪ್ರಕಾರ, ಗಾಂಧಿ ಸರೋವರದಿಂದ ನೀರಿನ ಹರಿವು ದುರಂತದ (ಜೂನ್16) ಮುನ್ನಿನ ಎರಡು ಮೂರು ದಿನಗಳಿಂದಲೂ ಹೆಚ್ಚುತ್ತಲೇ ಇತ್ತು. ಮಂದಾಕಿನಿಯಲ್ಲಿನ ನೀರಿನ ಮಟ್ಟ ಇದನ್ನು ಪ್ರತಿಫಲಿಸುತ್ತಲೇ ಇತ್ತು. ಜೊತೆಗೆ ಮಳೆಯ ಪ್ರಮಾಣವೂ ಹೆಚ್ಚುತ್ತಲಿತ್ತು. ಜೊತೆಗೆ ಹವಾಮಾನ ತಜ್ಞರು ಭಾರಿ ಮಳೆ ಹಾವಳಿಯ ಸೂಚನೆಯನ್ನೂ ನೀಡಿದ್ದರು. ಹೀಗಿದ್ದರೂ ಸರಕಾರ ಮುನ್ನೆಚ್ಚರಿಕೆ ಕೈಗೊಳ್ಳವ ಬಗ್ಗೆ ಯೋಚಿಸದಿದ್ದುದು ದುರಂತದ ಪ್ರಮಾಣ ಹೆಚ್ಚಳಕ್ಕೆ ಕಾರಣವಾಯಿತು. ಕೊನೆಪಕ್ಷ ವಾರದ ಮಟ್ಟಿಗಾದರೂ ಕೇದಾರ ಯಾತ್ರೆಯನ್ನು ಸ್ಥಗಿತಗೊಳಿಸುವ ಬಗ್ಗೆ ಯೋಚಿಸಬೇಕಾಗಿತ್ತು. ಇನ್ನು ಹಿಮಾಲಯ ಭಾಗದಲ್ಲಿ ಅಭಿವೃದ್ಧಿ (?) ಯೋಜನೆಗಳ ಚಟುವಟಿಗೆಗಳನ್ನೂ ನಿಲ್ಲಿಸುವ ಜಾಣ್ಮೆಯನ್ನು ಅವರು ಮೆರೆಯಬಹುದಿತ್ತು. ಬದಲಾಗಿ ಬೃಹತ್ ಒಡ್ಡುಗಳ ನಿರ್ಮಾಣಕ್ಕಾಗಿ ಪರ್ವತದ ಒಡಲಲ್ಲಿ ಸಿಡಿತಲೆಗಳ ಬಳಕೆ ನಿರಂತವಾಗಿ ಮುಂದುವರಿದೇ ಇತ್ತು.
ರುದ್ರಪ್ರಯಾಗದ ಬಳಿಯ ಶ್ರೀನಗರ ಮೂಲದ ಗುತ್ತಿಗೆದಾರ ಬಬ್ಬಾನ್ ಪುಂದೀರ್ ಹೇಳಿರುವುದನ್ನು ಕೇಳಿದರೆ ಆಕ್ರೋಶ ಕೆರಳುತ್ತದೆ. ಗಂಗೆಯ ಉದ್ದಕ್ಕೂ ಹಲವು ಒಡ್ಡುಗಳ ನಿರ್ಮಾಣಗಳಲ್ಲಿ ಮತ್ತು ಕೇದಾರ ಕಣಿವೆಯ ರಸ್ತೆಗಳ ನಿರ್ಮಾಣದಲ್ಲಿ ಅವರು ಕೆಲಸ ಮಾಡಿದ್ದಾರೆ. ಅವರ ಪ್ರಕಾರ, ಅಂಥ ನಿರ್ಮಾಣ ಕಾರ್ಯಗಳಲ್ಲಿ ಕಂಪನಿಗಳು ಹೆಚ್ಚೆಚ್ಚು ಹಣವನ್ನು ಪರಿಸರ ಸ್ನೇಹಿ ಉತ್ಪನ್ನಗಳನ್ನು ಸೇರಿಸುವಲ್ಲಿ, ಖರೀದಿಸುವಲ್ಲಿ ಒಲವು ತೋರಿಸುತ್ತಿಲ್ಲ. ಕೇದಾರನಾಥದ ಬಳಿಯ ಮಂದಾಕಿನಿ ನದಿಯ ಮೇಲಿರುವ ಡ್ಯಾಮ್‌ಗಾಗಿ ಅಲ್ಲಿಂದ ಪರ್ವತದವರೆಗೆ 9 ಕಿ.ಮೀ.ವರೆಗಿನ ಸುದೀರ್ಘ ಸುರಂಗ ತೋಡುವ ಅವಶ್ಯಕತೆ ಇತ್ತು. ಸುರಂಗ ಕೊರೆಯುವ ಮಷಿನ್ ಟಿವಿಎಂ- ಟನಲ್ ಬೋರಿಂಗ್ ಮಷಿನ್) ಅನ್ನು ಉಪಯೋಗಿಸುವ ಬದಲಾಗಿ ಕಂಪನಿಯು ಡೈನಾಮೈಟ್ ಸಿಡಿಸಿ ತನ್ನ ಕಾರ್ಯ ಸಾಧಿಸಿತು. ಟಿಬಿಎಂ ತುಂಬಾ ದುಬಾರಿ. ಆದರೆ ಡೈನಾಮೈಟ್ ಖರ್ಚಿಲ್ಲದ್ದು, ಇದರಿಂದಾಗಿ ಪರ್ವತದ ಮೇಲೆ ಅಡ್ಡ ಪರಿಣಾಮಗಳಾಗಿವೆ. 9 ಕಿ.ಮೀ. ಟನಲ್ ಕೊರೆಯಲು ಐದು ಟನ್‌ಗಳಷ್ಟು ಡೈನಾಮೈಟ್ ಅಗತ್ಯ. ಶ್ರೀನಗರದಲ್ಲಿನ ಜಿವಿಕೆ ಪ್ರಾಜೆಕ್ಟ್‌ಗೂ ಸಾಕಷ್ಟು ಡೈನಾಮೈಟ್ ಬೇಕಾಗಿತ್ತು, ಆದರೆ ಸ್ಥಳೀಯರು ವಿರೋಧಿಸಿದರು ಎಂದು ವಿವರಿಸುತ್ತಾರವರು. ಇಂಥ ಹೊಣೆಗೇಡಿ ಕೃತ್ಯಕ್ಕೆ ಲಕ್ಷಾಂತರ ಜೀವ ಬಲಿಯಾದದ್ದು ಸುಳ್ಳೆ?
ಇನ್ನು ಸಿಎಜೆ ಏಪ್ರಿಲ್‌ನಲ್ಲಿ ನೀಡಿರುವ ವರದಿಯಲ್ಲಿ, ಉತ್ತರಖಂಡದ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಅಥಾರಿಟಿಯು 2007ರಲ್ಲಿ ಸ್ಥಾಪನೆಯಾದಾಗಿನಿಂದ ಒಂದು ಬಾರಿಯೂ ಸಭೆ ಸೇರಿಲ್ಲ, ಇದು ನಿಯಮಗಳನ್ನು ರೂಪಿಸಲು ಮರೆತಿದೆ ಎಂದು ಆಕ್ಷೇಪಿಸಿದೆ. ಇದೇ ವರದಿಯಲ್ಲಿ, 'ಇಲ್ಲಿ ಮೊದಲೇ ಮುನ್ಸೂಚನೆ ಇತ್ತು ಮತ್ತು ಜಿಲ್ಲಾ ಮಟ್ಟದಲ್ಲಿನ ಸಿಬ್ಬಂದಿಗೆ ಅದನ್ನು ವರ್ಗಾಯಿಸಲಿಲ್ಲ ಎನ್ನಲಾಗಿದೆ. ವೀಕೋಪ ತಡೆಗೆ 44 ಕೋಟಿ ರು.ನೆರವಿನ ಫಂಡ್ ಬಿಡುಗಡೆಯಾಗಿದ್ದರೂ, ಅನರ್ಹ ಯೋಜನೆಗಳಿಗೆ ಇದನ್ನು ಬಳಸಲಾಗುತ್ತಿದೆ. ಈ ಹಿಂದೆ ಸಂಭವಿಸಿದ ಪ್ರವಾಹದಲ್ಲಿ (ಕಳೆದ ವರ್ಷ ಗಂಗೋತ್ರಿ ಬಳಿ) 80 ಹಳ್ಳಿಗಳ ಪುನರ್ವಸತೀಕರಣ ಮಾಡಲಾಗದ ಬಗ್ಗೆಯೂ ಸಿಎಜೆ ಆಕ್ಷೇಪಿಸಿದೆ.
ಕೆಲ ವರ್ಷಗಳ ಹಿಂದೆ, ಯೋಜನಾ ಆಯೋಗವು ಹಿಮಾಲಯ ಪರಿಸರ ವ್ಯವಸ್ಥೆಯ ಸ್ಥಿರತೆಯ ಕುರಿತು ರಾಷ್ಟ್ರೀಯ ಮಿಶನ್ ಒಂದನ್ನು ಉದ್ದೇಶಿಸಿತ್ತು. ಅದರಲ್ಲಿ ಹಿಮಾಲಯ ಪರಿಸರ ವ್ಯವಸ್ಥೆಯ ಪ್ರತಿಯೊಂದು ಅಂಶವನ್ನೂ ಒಳಗೊಂಡ ರೇಖಾಚಿತ್ರ ತಯಾರಿಸಲಾಗಿತ್ತು. ಅದರಲ್ಲಿ ಸಮರ್ಪಕ ನಗರೀಕರಣವೂ ಒಂದು. ಇದಕ್ಕಾಗಿ ನಿಯಮಾವಳಿಯನ್ನೂ ತಯಾರಿಸಲಾಗಿತ್ತು. ಇದರಲ್ಲಿ ಮುನ್ಸಿಪಲ್ ಬೈಲಾ ತಿದ್ದುಪಡಿ, ಕುಸಿತದ ಪ್ರದೇಶಗಳಲ್ಲಿ ಅಥವಾ ನೈಸರ್ಗಿಕವಾಗಿ ಅಪಾಯವಿರುವ ಸ್ಥಳಗಳಲ್ಲಿ ನಿರ್ಮಾಣಕಾರ್ಯ ನಿಷೇಧ, ಇಲ್ಲಿನ ಬಿಲ್ಡಿಂಗ್ ಕೋಡ್ ಬದಲಾವಣೆ, ಸ್ಥಳೀಯರು ಕಟ್ಟಡ ನಿರ್ಮಾಣಕ್ಕೆ ಬಳಸುವ ವಸ್ತುಗಳ ಬದಲಾವಣೆ, ಯಾತ್ರಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸುವುದು... ಮುಂತಾದ ಶಿಫಾರಸುಗಳಿದ್ದರೂ, ಅವುಗಳನ್ನು ಸರಕಾರ ಅನುಷ್ಠಾನಗೊಳಿಸಿಲ್ಲ.
ಇದಾವುದೂ ನಮ್ಮನ್ನಾಳುವವರಿಗೆ ಬೇಕಿಲ್ಲ. ದುರಂತದ ನಂತರವೂ ಅಲ್ಲಿ ನಡೆಯುತ್ತಿರುವುದು ರಾಜಕೀಯ ಮೇಲಾಟ. ಕಾಂಗ್ರೆಸ್- ಬಿಜೆಪಿಯ ಕಚ್ಚಾಟ. ಉಭಯ ಪಕ್ಷಗಳ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಕಮಿಟಿಯ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ್ ಧಾಸ್ಮಾನ್, ಮಾಜಿ ಮುಖ್ಯಮಂತ್ರಿ ಭಗತತ್ಸಿಂಗ್ ಕೋಶಿಯಾರಿ, ಗ್ರಾಮೀಣ ಅಭಿವೃದ್ಧಿಯ ಕೇಂದ್ರ ಮಂತ್ರಿ, ಜೈರಾಮ್ ರಮೇಶ್, ಕೇಂದ್ರ ಮಂತ್ರಿ ಮನೀಶ್ ತಿವಾರಿ ಮತ್ತು ಹಿರಿಯ ಬಿಜೆಪಿ ನಾಯಕ ಸುಷ್ಮ ಸ್ವರಾಜ್ ಅವರ ಹೇಳಿಕೆಯ ಸಮರವನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಹೀಗಾಗಿ ಅಲ್ಲಿ, ಮೊನ್ನೆಯ ದುರಂತದಲ್ಲಿ ಸತ್ತವರು, ಸಾಯುತ್ತಿರುವವರು ಕೇವಲ ಮಂದಿಯಲ್ಲ. ಇಡೀ ಹಿಮಾಲಯಕ್ಕೆ ಹಿಮಾಲಯವೇ ಸಾಯುತ್ತಿದೆ. ಅದಕ್ಕೀಗ ಬದುಕುವ ಮಾರ್ಗವೇ ಇಲ್ಲ.


ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com