ಕೇದಾರದ ದಾರಿಯಲ್ಲಿ ಕಂಡ ರುದ್ರಪ್ರಯಾಸ

ಸರಿಯಾಗಿ ಆರು ನಿಮಿಷಗಳಿಗೊಮ್ಮೆ ಮೇಲಿನಿಂದ ಬಂಡೆಗಳು ಉರುಳಿ...
Updated on: 

ಪ್ರವಾಹೋತ್ತರಕಾಂಡ, ಭಾಗ -9

ಸರಿಯಾಗಿ ಆರು ನಿಮಿಷಗಳಿಗೊಮ್ಮೆ ಮೇಲಿನಿಂದ ಬಂಡೆಗಳು ಉರುಳಿ ಬರುತ್ತಿದ್ದವು. ಕರಾರುವಕ್ಕಾಗಿ ಸಮಯ ನಿಗದಿಪಡಿಸಿ, ಒನ್-ಟು- ತ್ರೀ ರೆಡಿ, ಸ್ಟಡಿ, ಗೋ ಎಂದು ರೇಸಿಗೆ ಬಿಡುತ್ತಾರಲ್ಲಾ ಪಕ್ಕಾ ಅದೇ ರೀತಿ ಅಚ್ಚರಿ ಹುಟ್ಟಿಸುವಂತೆ ಅವು ಉರುಳಿ ಬರುತ್ತಿದ್ದವು. ಬಹುಶಃ ಬೆಟ್ಟದ ನೆತ್ತಿಯಿಂದ ಉರುಳಿ ಬರಲು ಅಷ್ಟು ಸಮಯ ಹಿಡಿಯುತ್ತಿತ್ತೇನೋ? ಮುಂಚಿನ ದಿನ ಬೆಳಗ್ಗೆ 11 ಗಂಟೆಗೆ ಕೇದಾರ ಸಮೀಪದ ಗುಪ್ತಕಾಶಿಯಿಂದ ಎರಡು ಕಿ.ಮೀ. ಹಿಂದಿನ ಬೆಟ್ಟ ಕುಸಿಯಲು ಆರಂಭಿಸಿತ್ತು. ಅದಕ್ಕೂ ಹಿಮದಿನ ದಿನ ರಾತ್ರಿ ಭಾರಿ ಮಳೆ ಬೆಟ್ಟದ ಮೇಲ್ಭಾಗ ಸುರಿದಿತ್ತು. ಅದರ ಫಲವೇ ಈ ನಿರಂತರ ಭೂ ಕುಸಿತ. ಸತತ ಇಪ್ಪತ್ತು ತಾಸುಗಳಿಂದ ಇದು ಮುಂದುವರಿದಿತ್ತು. ಬೆಟ್ಟದಂಚಿನ ರಸ್ತೆಯ ಕೆಳಭಾಗ ಆಗಲೇ ನೂರು ಮೀಟರ್ ಆಳದ ಪ್ರಪಾತ ಸೇರಿ ಬಹು ಹೊತ್ತಾಗಿತ್ತು. ರಸ್ತೆಯ ಮೇಲ್ಭಾಗದಲ್ಲಿ ಸುಮಾರು ಇನ್ನೂರು ಮೀಟರ್‌ನಷ್ಟು ಮೇಲಿನಿಂದ ಬಂಡೆಗಳು ಬಂದು ಬೀಳುತ್ತಿದ್ದವು. ಚಿಕ್ಕಚಿಕ್ಕ ಬೆಣಚು ಕಲ್ಲಿನ ಗಾತ್ರದಿಂದ ಹಿಡಿದು ಒಂದಾಳು ಗಾತ್ರದ ಅಥವಾ ಅದಕ್ಕಿಂಥ ಬೃಹತ್ ಬಂಡೆಗಳೂ ಭಾರಿ ಶಬ್ದ ಮಾಡುತ್ತಾ ಓಡೋಡಿ ಬಂದು ಪ್ರಪಾತ ಸೇರುತ್ತಿದ್ದವು. ಮಧ್ಯದಲ್ಲಿ ಒಂದಕ್ಕೊಂದು ಢಿಕ್ಕಿ ಹೊಡೆದುಕೊಳ್ಳುತ್ತಾ ಕಿಡಿಗಳನ್ನು ಹೊಮ್ಮಿಸುವಾಗ ಭೂಕಂಪನದ ಅನುಭವ.
----
ಗುಪ್ತಕಾಶಿ ಮೂಲಕ ರುದ್ರ ಪ್ರಯಾಗದಿಂದ ಕೇದಾರ ಸಂಪರ್ಕಿಸಲು ಇರುವುದು ಅದೊಂದೇ ಮಾರ್ಗ. ಅದು ಕಡಿದುಹೋದರೆ ಮುಂದಿನ 27 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲ ಹಳ್ಳಿಗಳೂ ದ್ವೀಪ. ಕೇದಾರಕ್ಕಿದ್ದ ರಾಜಮಾರ್ಗ ಜೂನ್ 16ರ ಪ್ರವಾಹದಲ್ಲಿ ಸಂಪೂರ್ಣ ನಾಶವಾಗಿ ಹೋಗಿದೆ. ಈ ಪರ್ಯಾಯ ರಸ್ತೆ ಬಳಕೆಯಾಗುವುದು ಇಂಥ ಸಂದರ್ಭದಲ್ಲಿ ಮಾತ್ರವೇ! ಹೀಗಾಗಿ ನಿರ್ವಹಣೆ ಅನ್ನುವುದೇ ಇಲ್ಲ. ಕೆಲವೆಡೆ ಅದನ್ನು ರಸ್ತೆ ಎಂದು ಹೇಳಿದರೆ ಮಾತ್ರ ಗೊತ್ತಾಗಬೇಕು. ಮಲೆನಾಡಿನಲ್ಲಿ ಅರಣ್ಯವನ್ನು ಸಂಪರ್ಕಿಸಲು ಹಳ್ಳಿಗರು ಮಾಡಿಕೊಳ್ಳುವ ಎತ್ತಿನ ಬಂಡಿಯ ಹಾದಿಗಳಿರುತ್ತವಲ್ಲಾ ಅಂಥದ್ದೇ ಸ್ಥಿತಿಯಲ್ಲಿದೆ. ಮಯಾಲಿಯಿಂದ ಗುಪ್ತ ಕಾಶಿವರೆಗಿನ 85 ಕಿ.ಮೀ. ಮಾರ್ಗದಲ್ಲಿ ಬಹುಪಾಲು ಹೀಗೆಯೇ. ನಿರಂತರ ಸುರಿಯುವ ಮಳೆಗೆ ಅಲ್ಲಿಲ್ಲಿ ಕೊಚ್ಚಿ ಹೋಗಿದೆ. ಕೆಲವೆಡೆ ಮಂಡಿಯವರೆಗೆ ಕಾಲು ಹುಗಿಯುವಷ್ಟು ಕೆಸರು ನಿಂತಿದೆ. ಮತ್ತೆ ಕೆಲವೆಡೆ ಭೂ ಕುಸಿತದಿಂದ ರಸ್ತೆಯ ಮೇಲೇ ಆಳೆತ್ತರದ ಮಣ್ಣಿನ ರಾಶಿ. ಇನ್ನು ಕೆಲವೆಡೆ ಗುಡ್ಡದಿಂದ ಇಳಿದು ಬರುವ ಝರಿಗಳ ನಡುವೆಯೇ ಹಾದುಹೋಗಬೇಕು. ಗುಡ್ಡವನ್ನು ಬಗೆದು ರಸ್ತೆ ಮಾಡಿದ್ದೂ ಇದೆ. ಅಷ್ಟಕ್ಕೂ ಈ ರಸ್ತೆ ಇರುವುದು ಸಮುದ್ರ ಮಟ್ಟದಿಂದ ಎರಡು, ಎರಡೂವರೆ ಸಾವಿರ ಕಿ.ಮೀ. ಎತ್ತರದಲ್ಲಿ. ಕೇವಲ ಒಂದು ಮಿನಿ ಬಸ್ ಹೋಗುವಷ್ಟೇ ಅಗಲದ ಸಡನ್ ತಿರುವುಗಳುಳ್ಳ ಈ ರಸ್ತೆಯಲ್ಲಿ ಒಂದೇ ಒಂದು ಕ್ಷಣ ಎಚ್ಚರ ತಪ್ಪಿದರೂ ನೂರಾರು ಮೀಟರ್ ಕೆಳಗಿನ ನದಿಯ ಒಡಲು ಸೇರಿ, ಎಲುಬೂ ಸಿಗದಂತೆ ಕಣ್ಮರೆಯಾಗುವುದನ್ನು ತಪ್ಪಿಸಲು ಆ ಭಗವಂತನಿಂದಲೂ ಸಾಧ್ಯವಿಲ್ಲ.
ಅಲ್ಲೀಗ ಬಿಡುವಿಲ್ಲದ ವಾಹನಗಳ ಭರಾಟೆ. ಸಂತ್ರಸ್ತರಿಗೆ ಮಣಗಟ್ಟಲೆ ಪರಿಹಾರ ಸಾಮಗ್ರಿಗಳನ್ನು ಹೊತ್ತು ತರುವ ಮಿನಿ ಲಾರಿಗಳು, ಇಂಧನ ತುಂಬಿಕೊಂಡು ಬರುವ ಮಿನಿಟ್ಯಾಂಕರ್‌ಗಳು, ಕಳೆದುಕೊಂಡವರನ್ನು ಹುಡುಕುತ್ತಾ ಬರುವವರ ವಾಹನಗಳು, ಹಳ್ಳಿಗಳನ್ನು ಸಂಪರ್ಕಿಸಲು ಓಡಾಡುವ ಮಹಿಂದ್ರಾ ಮಿನಿ ಬಸ್ ಎಲ್ಲವೂ ಇಲ್ಲೇ ಓಡಾಡುತ್ತಿವೆ; ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ. ಇಂಥ ವಾಹನ ಸವಾರರ ತಾಳ್ಮೆ ಪರೀಕ್ಷಿಸುವ, ಗಂಡುಗೆಯ ಗಟ್ಟಿತನವನ್ನು ಸವಾಲಿಗೊಡ್ಡುವ ಭೂಕುಸಿತಗಳು. ನೀವಲ್ಲಿ ಸಾಗುತ್ತಿದ್ದರೆ ಯಾವ ಕ್ಷಣದಲ್ಲಾದರೂ ತಲೆಯ ಮೇಲಿನ ಗುಡ್ಡ ಕುಸಿದು ನಿಮ್ಮ ಸಮಾಧಿ ಆಗಬಹುದು. ಇಲ್ಲವೇ ರಸ್ತೆಯೇ ಮಗುಚಿಕೊಂಡು ಪ್ರಪಾತ ಸೇರಬಹುದು. ಏನಾದರಾಗಲಿ ಕೇದಾರದ ನೆಲವನ್ನೊಮ್ಮೆ ನೋಡಿಯೇ ಬಂದು ಬಿಡಬೇಕೆಂಬ ಹಠಕ್ಕೆ ಬಿದ್ದು ಹೊರಟಿದ್ದ ನನಗೆ ಉಳಿದದ್ದು ಆ ರಸ್ತೆಯಲ್ಲಿ ಸಾಗುವುದೊಂದೇ ಆಯ್ಕೆಯಾಗಿತ್ತು.
-----
ಬೆಂಗಳೂರಿನಿಂದ ಹೊರಟು ಹೃಷಿಕೇಶ ಸೇರಿದ ದಿನ ಗಂಗಾ ಸಂಸತ್ ಸಭೆ, ಗಂಗಾ ತಪಸ್ಸಿಗೆ ಕುಳಿತಿರುವ ಸಾನಂದ ಸ್ವಾಮೀಜಿಯವರ ಭೇಟಿಯಲ್ಲಿ ಕಳೆದುಹೋಗಿತ್ತು. ಮರುದಿನ ಉದ್ದಕ್ಕೂ ಗಂಗೆಯ ದೃಶ್ಯ ವೈಭವ, ಹಸಿರು ಹೊದ್ದ ಶೃಂಗಗಳನ್ನು ನೋಡುತ್ತಾ ರುದ್ರಪ್ರಯಾಗಕ್ಕೆ ಬರುವಾಗ ಗಮನಸೆಳೆದದ್ದು ಧಾರೀದೇವಿ, ಶ್ರೀನಗರ ಮಾತ್ರ. ಬೆಂಗಳೂರಿನ ಪ್ರಮುಖ ಬಡಾವಣೆಯಂತಿರುವ ಶ್ರೀನಗರ ಸಾಕಷ್ಟು ನಲುಗಿತ್ತು. ಪೇಟೆಯೊಳಗೇ ಪ್ರವಾಹ ನುಗ್ಗಿ ಎಬ್ಬಿಸಿದ ಅವಾಂತರದಿಂದ ಇನ್ನೂ ಜನಕ್ಕೆ ಸುಧಾರಿಸಿಕೊಳ್ಳಲಾಗಿರಲಿಲ್ಲ. ರಸ್ತೆ ಪಕ್ಕದ ಮನೆಯೊಳಗೆ ಇನ್ನೂ ಒಂದೆರಡು ಅಡಿಗಳಷ್ಟು ಕೆಸರು ತುಂಬಿ ನಿಂತಿರುವುದು, ಅದನ್ನು ಹೊರಹಾಕಲು ನಿವಾಸಿಗಳು ಶ್ರಮಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಅದು ಬಿಟ್ಟರೆ ಪ್ರವಾಹದ ಅಬ್ಬರಕ್ಕೆ ಹೆಚ್ಚೇನೂ ಸಾಕ್ಷಿಗಳಿರಲಿಲ್ಲ. ನದಿ ಮಾತ್ರ ಕಣಿವೆಯುದ್ದಕ್ಕೂ ಮೈದುಂಬಿ ಹರಿಯುತ್ತಿದ್ದಳು. ಕೇದಾರದ ಮೇಲಿನ ಘರವಾಲ್ ಮೂಲದ ಟ್ಯಾಕ್ಸಿ ಡ್ರೈವರ್ ಮುಗ್ಧ ಸತ್ಯೇಂದರ್ ಆಡುವ ಪ್ರತಿ ಮಾತನ್ನೂ ಹಿಂದಿಯಿಂದ ನನಗೆ ತಿಳಿದಷ್ಟು ಹಿಂದಿಗೆ ಭಾಷಾಂತರಿಸಿಕೊಳ್ಳುತ್ತಾ, ನಂತರ ಅದನ್ನು ಕನ್ನಡದಲ್ಲಿ ಅರ್ಥೈಸಿಕೊಳ್ಳುತ್ತಾ ರುದ್ರಪ್ರಯಾಗಕ್ಕೆ ಸಂಜೆ ಬಂದು ತಲುಪಿದಾಗಿತ್ತು. ಸತ್ಯೇಂದರ್‌ಗೆ ಉಗ್ಗು ಸಮಸ್ಯೆ. ಬಹುಶಃ ಅದನ್ನು ಮುಚ್ಚಿಟ್ಟುಕೊಳ್ಳಲೋ ಏನೋ ಮತ್ತಷ್ಟು ಮಾತಾಡುತ್ತಿದ್ದ. ಮಾತಿಗೆ ಶುರುವಿಡುವಾಗಲೇ ಧುತ್ತನೆ ಪ್ರತ್ಯಕ್ಷವಾಗುತ್ತಿದ್ದ ಉಗ್ಗು ಅದನ್ನು ಮೀರಿ ಮಾತನಾಡಬೇಕೆಂಬ ಹಂಬಲ ಎರಡೂ ಸೇರಿ ವಿಚಿತ್ರವಾದೊಂದು 'ಅಮ್.. ಆ.. ಅಮ್ ಆ..' ಎಂಬ ರಾಗ ಹೊಮ್ಮಿಸುತ್ತಿದ್ದ. ಕೊನೆಕೊನೆಗೆ ಪ್ರವಾಸ ಮುಗಿಯುವ ದಿನದ ಹೊತ್ತಿಗೆ ಅವನೇನು ಹೇಳಲು ಹೊರಟಿದ್ದಾನೆಂಬುದನ್ನು ನಾನೇ ಊಹಿಸಿಕೊಂಡು ಅವನಿಗಿಂತ ಮೊದಲು ನಾನೇ ಹೇಳಿಬಿಡುವಷ್ಟು ಪರಿಣತನಾಗಿಬಿಟ್ಟೆ. ಉತ್ತರಾಖಂಡದ ಅದರಲ್ಲೂ ಕೇದಾರ ಸುತ್ತಮುತ್ತಲಿನ ಪ್ರತಿಯೊಂದು ಸಣ್ಣ ಸಂಗತಿಗಳ ಬಗ್ಗೆಯೂ ಸ್ಪಷ್ಟ ಅರಿವಿರುವ ಆಸಾಮಿ. ಬಹುಶಃ ಅವನೊಬ್ಬನಿಲ್ಲದಿದ್ದರೆ ನಾನು ಕೇದಾರದಿಂದ ಮರಳುವುದು ಖಂಡಿತಾ ಇನ್ನಷ್ಟು ಕಷ್ಟವಿರುತ್ತಿತ್ತು.
ಏನಾದರಾಗಲಿ ನಾಳೆ ಸಂಜೆಯೊಳಗೆ ನಿಮ್ಮನ್ನು ಕೇದಾರಕ್ಕೆ ತಲುಪಿಸಿಯೇ ತಲುಪಿಸುತ್ತೇನೆ ಎಂಬ ಭರವಸೆಯನ್ನು ಉಗ್ಗುತ್ತಲೇ ಕೊಟ್ಟಿದ್ದ. ನನ್ನ ದೃಷ್ಟಿಯಲ್ಲಿ ಎರಡು ದಿನದ ಪ್ರಯಾಣದಷ್ಟೇ ಸುಲಭ ಕೇದಾರ ಸೇರುವುದು ಎಂಬುದಾಗಿತ್ತು. ಅದಕ್ಕೆ ಸರಿಯಾಗಿ ಅಲ್ಲಲ್ಲಿ ಕೆಲ ಹಳ್ಳಿಗರು ರಸ್ತೆ ಸರಿಪಡಿಸಿದ್ದಾರಂತೆ, ರುದ್ರ ಪ್ರಯಾಗದಿಂದ ಹೆಲಕಾಪ್ಟರ್‌ಗಳು ಸಿಗುತ್ತವಂತೆ, ಗೌಚರ್‌ಗೆ ಹೋಗಿಬಿಟ್ಟರೆ ಅಲ್ಲಿ ಮಿಲಿಟರಿ ಚಾಪರ್ ಸಿಗುತ್ತವೆ ಎಂಬಿತ್ಯಾದಿ ಹೇಳಿ ಆಸೆ ಚಿಗುರಿಸಿದ್ದರು. ಅವನ್ನೆಲ್ಲಾ ಮಾಹಿತಿ ಸಂಗ್ರಹಿಸಿ ಬಂದು ಹೇಳುತ್ತಾ, ದಾರಿಯುದ್ದಕ್ಕೂ ಅವನ ಉಗ್ಗು ಮನರಂಜನೆ ಕೊಡುತ್ತಲೇ ಇತ್ತು. ಕೆಲವೊಮ್ಮೆ ತಾಳ್ಮೆಯನ್ನೂ ಪರೀಕ್ಷಿಸುತ್ತಿತ್ತು. ಕೇದಾರದ ಪುಳಕದೊಂದಿಗೆ ರುದ್ರಪ್ರಯಾಗದಲ್ಲಿ ರಾತ್ರಿ ಕಳೆದದ್ದು ಗೊತ್ತಾಗಲಿಲ್ಲ. ಬೆಳಗ್ಗೆ ಬೇಗ ಹೊರಡಬೇಕು, ಕತ್ತಲಾದ ಮೇಲೆ ಈ ಭಾಗದಲ್ಲಿ ಪ್ರಯಾಣ ಸಾಧ್ಯವೇ ಇಲ್ಲ ಎಂದು ಸತ್ಯ ಭಾಯಿ ರಾತ್ರಿಯೇ ಎಚ್ಚರಿಸಿದ್ದರಿಂದ ಬೆಳಗ್ಗೆ 5ಕ್ಕೇ ಎದ್ದು 6ಕ್ಕೆಲ್ಲಾ ರೂಂ ಖಾಲಿ ಮಾಡಿ ಟ್ಯಾಕ್ಸಿ ಬಳಿ ಬಂದೆ. ಸತ್ಯ ಭಾಯಿ ಮುಖದಲ್ಲಿನ ಹತಾಶೆ ನೋಡಿ ಪ್ರಶ್ನಾರ್ಥಕ ನೋಟ ಬೀರಿದೆ. 'ಆಪ್ ಕೆ ಲಿಯೆ ಕೇದಾರ್ ಸಂದರ್ಶನ್ ನಹಿ ಹೋ ಸಕ್ತಾ ಹೈ ಸಾಬ್. ಕಲ್ ರಾತ್ ಊಪರ್ ಬಹುತ್ ಬಾರಿಷ್ ಥಾ. ಅಗಲಿ ರಾಸ್ತಾ ಬೀ ಠೂಟ್ ಗಯಾ. ಯೆ ತೊ ಅಸಂಭವ್‌' ಅಂದಾಗ ಎತ್ತಿ ಹೊಂಡಕ್ಕೆ ಬಿಸಾಡಿದ ಅನುಭವ. ಸುತ್ತ ಯಾರನ್ನು ಕೇಳಿದರೂ ವಿಚಿತ್ರವಾದೊಂದು ವ್ಯಂಗ್ಯದ ನಗುವೇ ಉತ್ತರವಾಗಿರುತ್ತಿತ್ತು. ಜೋಶಿ ಮಠದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕನ್ನಡಿಗ ಯೋಧ ಚಂದುನಾಯಕ್ ನೆನಪಾದ. ಆತನಿಗೆ ಪೋನಾಯಿಸಿದೆ. ಒಂದಷ್ಟು ಮಾತುಕತೆಯ ಬಳಿಕ 'ಬದರಿಗೆ ಮೊದಲು ಹೋಗಿಬಿಡಿ. ಗೌಚರ್‌ಗೆ ಬಂದರೆ ಅಲ್ಲಿ ಹೆಲಿಪ್ಯಾಡ್ ಬಳಿಯೇ ಮಿಲಿಟರಿ ಕ್ಯಾಂಪ್ ಇದೆ. ಅಲ್ಲಿಂದ ಕೇದಾರಕ್ಕೆ ಸೇನೆಯ ಚಾಪರ್ ಓಡಾಡುತ್ತಲೇ ಇರುತ್ತದೆ. ಆದಷ್ಟು ಬೇಗ ಅಲ್ಲಿಗೆ ತಲುಪಿ' ಎಂಬ ಸಲಹೆ ಬಂತು ಆತನಿಂದ. ಸರಿ ಟ್ಯಾಕ್ಸಿಯನ್ನು ಗೌಚರ್‌ನತ್ತ ಓಡಿಸಿದೆವು. ಒಂದೂವರೆ ಗಂಟೆಯೊಳಗೆ ಗೌಚರ್ ಹೆಲಿಪ್ಯಾಡ್‌ನಲ್ಲಿದ್ದೆವು. ಆದರೆ ಅಲ್ಲಿ ಚಾಪರ್ ಇರಲಿಲ್ಲ. ಕ್ಯಾಂಪ್‌ನಲ್ಲಿ ಒಂದಷ್ಟು ಯೋಧರು ಕೇರಂ ಆಡುತ್ತಾ ಕುಳಿತಿದ್ದರು. ನನ್ನನ್ನು ಪರಿಚಯಿಸಿಕೊಂಡೆ. ಉದ್ದೇಶ ತಿಳಿಸಿದೆ. ಅವರಲ್ಲೊಬ್ಬ ಒಳಗೆ ಕ್ಯಾ. ಲೋಕೇಶ್ ಬಳಿ ಕರೆದೊಯ್ದ. ಮತ್ತದೇ ಪ್ರವರ ಸಲ್ಲಿಕೆ. ಪ್ರಯೋಜನ ಮಾತ್ರ ಆಗಲಿಲ್ಲ. ಆಗಲೇ ಅಲ್ಲಿಂದ ಹೆಲಿಕಾಪ್ಟರ್ ಹಿಂದಕ್ಕೆ ಕರೆಸಿಕೊಂಡು ಮೂರು ದಿನಗಳಾಗಿತ್ತು. ಜೋಶಿಮಠದ ಕ್ಯಾಂಪ್‌ನಲ್ಲಿ ಒಂದು ಚಾಪರ್ ಇದೆ ಅಲ್ಲಿ ಪ್ರಯತ್ನಿಸಿ ಎಂದರವರು. ಜೋಶಿಮಠ ಅಲ್ಲಿಂದ ಮೂರುತಾಸಿನ ಪಯಣ. ಪ್ರಯತ್ನಕ್ಕೇನು ಎಂಬುದಕ್ಕಿಂತ ಸದ್ಯಕ್ಕೆ ಬೇರೆ ಆಯ್ಕೆಯಿಲ್ಲ. 'ಚಲಿಯೇ ಸಾಬ್‌' ಎಂದು ಸೊಂಟಕ್ಕೆ ಟ್ಯಾಕ್ಸಿ ಸೀಟ್ ಬೆಲ್ಟ್ ಸಿಕ್ಕಿಸಿದ ಸತ್ಯ ಭಾಯಿ. ಅಲ್ಲಿ ಚಂದು ನಾಯಕ ಹೇಗೂ ಇದ್ದಾನೆ, ಏನಾದರೂ ಆದೀತು ಎಂಬ ಆಶಾಭಾವ ಬೇರೆ. ಚಮೋಲಿ, ಪಿಪಲ್ಕೋಟಿ ದಾಟಿ ಜೋಶಿ ಮಠಕ್ಕೆ ಬರುವಷ್ಟರಲ್ಲಿ ಮಧ್ಯಾಹ್ನ ದಾಟಿತ್ತು. ಉರಿಯುವ ಹೊಟ್ಟೆಯನ್ನೂ ಅದುಮಿಟ್ಟುಕೊಂಡು ಮಿಲಿಟರಿ ಕ್ಯಾಂಪ್‌ಗೆ ಹೋದರೆ ಅಲ್ಲಿ ಚಂದುನಾಯಕ್ ಹಾಗೂ ಚಾಪರ್ ಎರಡೂ ಇರಲಿಲ್ಲ. ಬೆಳಗ್ಗೆ ಫೋನ್ ಮಾಡಿದಾಗ ಆತನನ್ನು 'ನೀನೆಲ್ಲಿದ್ದೀ?' ಎಂದು ಕೇಳಲು ಮರೆತಿದ್ದೆ. ಇಲ್ಲಿಗೆ ಬಂದ ಮೇಲೆಯೇ ಗೊತ್ತಾದದ್ದು ಆತ ಪರಿಹಾರ ಕಾರ್ಯದಲ್ಲಿ ಬೇರೆಲ್ಲಿಗೋ ತೆರಳಿಬಿಟ್ಟಿದ್ದ. ಇಲ್ಲಿದ್ದ ಹೆಲಿಕಾಪ್ಟರ್ ಅನ್ನೂ ಡೆಹ್ರಾಡೂನ್‌ಗೆ ಮರಳಿ ಕಳುಹಿಸಲಾಗಿತ್ತು. ಹಸಿವು, ನಿರಾಸೆ, ಹತಾಶೆ, ಆಯಾಸ ಎಲ್ಲವೂ ಒಟ್ಟೊಟ್ಟಿಗೇ ಆಯಿತು. ತಾಳ್ಮೆ ಉಳಿಯಲಿಲ್ಲ. ಮೌನವಾಗಿಯೇ ಹೋಟೆಲ್ ಒಂದಕ್ಕೆ ನುಗ್ಗಿ ರೋಟಿ, ದಾಲ್ ತಿಂದು ಮುಗಿಸಿದ್ದೆವು. ನನ್ನ ಪಯಣವೇಕೋ ಸತ್ಯ ಬಾಯಿಯಂತೆಯೇ ಉಗ್ಗುತ್ತಿತ್ತು. ಅವನೂ ಏನೇನೋ ಹೇಳುತ್ತಲೇ ಇದ್ದ. ಹೊಟ್ಟೆ ತುಂಬಿದ ಕ್ಷಣದಲ್ಲಿ ಕೇಳಿಸಿದ್ದು ಒಂದೇ 'ಚಿಂತಾ ಮತ್ ಕರೋ ಸಾಬ್. ಮೈ ಹೂಂ ನಾ?' ಮೊದಲ ಬಾರಿಗೆ ಅವನ ಉಗ್ಗು ಕಂಡು ಕೋಪ ಬಂದಿತ್ತು. ಇವನಿದ್ದು ಏನು ಕಿಸೀತಾನೆ ಎನ್ನಿಸಿದರೂ ಸುಮ್ಮನೆ ಟ್ಯಾಕ್ಸಿ ಹತ್ತಿ ಕುಳಿತೆ. ಮತ್ತೆ ರುದ್ರ ಪ್ರಯಾಗದತ್ತ ಗಾಡಿ ಓಡುತ್ತಿತ್ತು. ಸಂಜೆ ನಾಲ್ಕರ ಸುಮಾರಿಗೆ ಬೆಳಗ್ಗೆ ಇದ್ದ ಸ್ಥಳಕ್ಕೇ ಬಂದು ನಿಂತಿದ್ದೆವು. ಅಲ್ಲಿಂದ ಗಾಡಿಯನ್ನು ಬಲಕ್ಕೆ ತಿರುಗಿಸಿದ ಸತ್ಯೇಂದರ್ ಮುಂದಿನ ಒಂದು ತಾಸಿನಲ್ಲಿ ಪುಟ್ಟ ಪಟ್ಟಣವೊಂದರ ಬಳಿಗೆ ತಂದು ನಿಲ್ಲಿಸಿದ್ದ.
ಅಲಕೆಯ ಭೋರ್ಗರೆತ ಇನ್ನೂ ಹೆಚ್ಚಿದ್ದಂತೆ ಕಂಡುಬಂತು. ವಿಸ್ತಾರಕ್ಕೆ ಹರಿಯುತ್ತಿದ್ದಳು. ಅದರ ದಂಡೆಗೇ ಮನೆ, ಕಟ್ಟಡಗಳು ನಿಂತಿದ್ದವು. 'ವಹೀತಕ್ ತಿಲ್ವಾಡಾ ಗಾಂವ್ ಥಾ. ಆಜ್ ದೇಖೋ' ಎಂದಾಗ ಸತ್ಯ ಬೊಟ್ಟು ಮಾಡಿದ್ದ ನೇರಕ್ಕೆ ನೋಡಿದೆ. ಅವನು ನದಿಯ ಮಧ್ಯಭಾಗ ತೋರಿಸುತ್ತಿದ್ದ. ಮೈಯೆಲ್ಲಾ ಸಣ್ಣಗೆ ಕಂಪಿಸಿತು. ಮೂರು ದಿನದಲ್ಲಿ ಮೊದಲ ಬಾರಿಗೆ ಪ್ರವಾಹದ ನೈಜ ಪ್ರಮಾಣದ ಅರಿವು ಅಗಿತ್ತು. ತುಂಡರಿಸಿ ಬಿದ್ದಿದ್ದ ದೇಹದಂತೆ ಕಾಣುತ್ತಿತ್ತು ತಿಲ್ವಾಡಾ. ಕೇದಾರದ ಕನಸನ್ನು ಬಿಟ್ಟು ಪ್ರವಾಹಕ್ಕೆ ತುತ್ತಾಗಿದ್ದ ಹಳ್ಳಿ, ಹಳ್ಳಿಗಳನ್ನು ತಿರುಗಲೇಬೇಕೆಂಬ ನಿರ್ಧಾರಕ್ಕೆ ಬಂದದ್ದು ಆ ಕ್ಷಣದಲ್ಲೇ. ಕುಸಿಯುವ ಬಂಡೆಗಳ ನಡುವೆ ಜೀವ ಹಿಡಿದು ನಾಳೆ ಪಯಣಿಸಬೇಕು ಎಂಬ ಕಲ್ಪನೆಯೂ ಆಗ ನನ್ನಲ್ಲಿರಲಿಲ್ಲ. ಹಾಗೊಂದು ಹುಚ್ಚು ಸಾಸಹಸಕ್ಕೆ ತೆರೆದುಕೊಳ್ಳುವ ನಿರೀಕ್ಷೆ, ಧೈರ್ಯವೂ ನನ್ನದಾಗಿರಲಿಲ್ಲ. ಅದರೆ ಮರುದಿನ ಅದದ್ದು.... ಅಬ್ಬಾ, ನೆನೆದರೆ ಮೈಯಲ್ಲಿ ಚಳಿಯ ಗುಳ್ಳೆಗಳೇಳುತ್ತವೆ!

- ರಾಧಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಈ ವಿಭಾಗದ ಇತರ ಸುದ್ದಿ

No stories found.

X
Kannada Prabha
www.kannadaprabha.com