ಅಂಕಣಗಳು

ಉಗುಳುಭಟರಿಗೆ ಅಂಕೆ

Published On :

ಸಾರ್ವಜನಿಕ ಸ್ಥಳಗಲ್ಲಿ ಉಗಿಯುವುದಕ್ಕೆ ನಿಷೇಧ ಶಾಸನವಾಗಿ ರೂಪಿಸಲು ಮುಂದಾಗಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರವು ಕರ್ನಾಟಕ ಪೌರ ನಿಗಮಗಳ (ತಿದ್ದುಪಡಿ)ಮಸೂದೆ-2013ನ್ನು ಕರ್ನಾಟಕ ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ದೊರೆತಿದೆ.
ತಾಂಬೂಲ ಮೆಲ್ಲುವ ಅಭ್ಯಾಸ ಒಳ್ಳೆಯದೋ-ಕೆಟ್ಟದ್ದೋ, ಆದರೆ ಅದನ್ನು ಜಗಿದು ಕಂಡ ಕಂಡಲ್ಲಿ ಉಗುಳುವ ಕ್ರಮ ಸಹ್ಯವಲ್ಲ. ಯಾವುದೇ ಶುಭ ಸಮಾರಂಭದಲ್ಲಿ ಊಟಕ್ಕೆ ಆಹ್ವಾನಿಸಿದರೆ, ಅಲ್ಲಿ ಊಟ ಮುಗಿದ ಕೂಡಲೇ ತಾಂಬೂಲದ ಮರ್ಯಾದೆ ಇದ್ದೇ ಇರುತ್ತದೆ. ಆದರೆ ತಾಂಬೂಲ ಜಗಿದ ಮಂದಿ ಅದನ್ನು ಉಗುಳುವಲ್ಲಿ ಮಾತ್ರ ಶಿಸ್ತನ್ನು ರೂಢಿಸಿಕೊಳ್ಳದೇ ಇರುವುದು ವಿಷಾದಕರ.
ಈ ಉಗುಳು ಸಂಸ್ಕೃತಿ ಇತ್ತೀಚೆಗೆ ತುಂಬಾ ಹೆಚ್ಚಾಗಿರುವುದು ಗಮನಾರ್ಹ. ಬಸ್ ನಿಲ್ದಾಣಗಳಲ್ಲಿ, ರೈಲು ನಿಲ್ದಾಣಗಳಲ್ಲಿ, ಎಲ್ಲೆಂದರಲ್ಲಿ ಈ ಉಗುಳುಭಟರದೇ ಕಾರುಭಾರು! ರಸ್ತೆಯಲ್ಲಿ ಅಲ್ಲಲ್ಲಿ ಈ ಕೆಂಪು ಬಣ್ಣ ಅಸಹ್ಯ ಹುಟ್ಟಿಸುತ್ತದೆ. ಉಗುಳುವವರು ಕನಿಷ್ಠ ಪಕ್ಷ ರಸ್ತೆ ಪಕ್ಕದಲ್ಲಿರುವ ಚರಂಡಿಯ (ಯಾ ಕಸದ ಪೆಟ್ಟಿಗೆ) ತನಕ ಹೋಗುವಲ್ಲೂ ಉದಾಸೀನ ತೋರುತ್ತಿರುವುದು ಬೇಸರದ ಸಂಗತಿ. ಇದು ದೇವಸ್ಥಾನದ ರಥಬೀದಿಗಳಿಗೂ ಹೊರತಾಗಿಲ್ಲ. ದೇವರ ರಥ ಸಾಗುವ ಪವಿತ್ರ ಬೀದಿ ಎಂಬ ಪ್ರಜ್ಞೆಯೂ ಇಲ್ಲದಿರುವ ಮಂದಿಯ ಬಗ್ಗೆ ಏನೆನ್ನೋಣ?
ತಾಂಬೂಲಕ್ಕಿರುವ ಮರ್ಯಾದೆಯನ್ನು ಅದನ್ನು ಮೆಲ್ಲುವ ಮಂದಿ ತೆಗೆಯುತ್ತಿರುವುದು ಖೇದಕರ. ಒಂದು ದಿನ ಸಭೆಯೊಂದರಲ್ಲಿ ಭಾಗವಹಿಸಿದ್ದೆ. ಸಭೆ ಮುಗಿದ ನಂತರ ವಾಶ್ ಬೇಸಿನ್ ಕಡೆ ಹೋದರೆ ಅಲ್ಲಿ ಬಿಳಿ ಬೇಸಿನ್‌ನಲ್ಲಿ ಕೆಂಪು ತುಂಬಿದ ತಾಂಬೂಲದ ಉಗುಳು ಎದ್ದು ತೋರುತ್ತಿತ್ತು. ಬೇಸಿನ್ ಪೂರ್ತಿ ಉಗುಳಿದ ಮಂದಿಗೆ ನೀರು ಹಾಕುವ ಕನಿಷ್ಠ ಪ್ರಜ್ಞೆಯೂ ಇರಲಿಲ್ಲ.
ಒಮ್ಮೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ.  ಹಿಂದುಗಡೆ ಸೀಟಿನಲ್ಲಿದ್ದಾತ ಎದುರಿನ ಸೀಟಿನಲ್ಲಿದ್ದವನೊಂದಿಗೆ ಜಗಳ ಆರಂಭಿಸಿದ್ದ. ಆತನನ್ನು ನೋಡಿದರೆ ಆತನ ಅಂಗಿಯ ಮೇಲೆ ಕೆಂಪು ಬಣ್ಣ ರಾಚಿದೆ. ಓಡುತ್ತಿರುವ ಬಸ್ಸಿನಲ್ಲಿ ಎದುರಿನ ಸೀಟಿನಲ್ಲಿ ಕುಳಿತ ಮಹಾನುಭಾವ ಕಿಟಿಕಿಯ ಹೊರಗೆ ಪಿಚಕ್ಕನೆ ಉಗುಳಿದ್ದ. ಆತನ ಉಗುಳು ಹಿಂಬದಿಯಲ್ಲಿ ಕುಳಿತವನ ಮೈಮೇಲೆ ಸ್ಪ್ರೇ ಮಾಡಿತ್ತು. ಆತ ಸಮಾರಂಭವೊಂದಕ್ಕೆ ಹೋಗುವುದಾಗಿದ್ದಲ್ಲಿ ಪುನಃ ಮನೆಗೆ ಹೋಗಿ ಬಟ್ಟೆ ಬದಲಾಯಿಸಲೇ ಬೇಕಾದ ಅನಿವಾರ್ಯತೆ! ಇಂದಿಗೂ ಬಹಳ ಮಂದಿ ಬಸ್ಸು ಓಡುತ್ತಿರುವಾಗಲೇ ಉಗುಳುವುದಿದೆ.  ಈ ಉಗುಳು ಕೆಳಗೆ ನೆಲದಲ್ಲಿ ನಡೆದಾಡುವ ಮಂದಿಯ ಮೇಲೆ, ದ್ವಿಚಕ್ರ ವಾಹನ ಚಾಲಕರ ಮೇಲೆ ಬೀಳುತ್ತಿರುವುದು, ಅವರು ಅಸಹಾಯಕರಾಗಿ ಹಿಡಿಶಾಪ ಹಾಕುತ್ತಿರುವುದು ನಡೆಯುತ್ತಲೇ ಬಂದಿದೆ.
ಅತಿಯಾದ ಉಗುಳುವ ಕ್ರಮ ಅನಾರೋಗ್ಯಕ್ಕೆ ದಾರಿಯಾಗುತ್ತದೆ. ಅದಕ್ಕಾಗಿಯೇ ಬೊಗಳಿ ಬೊಗಳಿ ರಾಗ, ಉಗುಳಿ ಉಗುಳಿ ರೋಗ ಎಂಬ ನುಡಿ ಹುಟ್ಟಿಕೊಂಡಿದೆ. ಪದೇ ಪದೆ ಉಗುಳುವುದರಿಂದ ನಮ್ಮ ಜೊಲ್ಲು(ಲಾಲಾರಸ) ನಷ್ಟವಾಗುತ್ತದೆ. ಪಚನ ಕ್ರಿಯೆಗೆ ಸಹಕಾರಿಯಾಗುವ ಈ ಲಾಲಾರಸ ನಷ್ಟದಿಂದಾಗಿ ಪಚನ ಕ್ರಿಯೆಯ ಮೇಲೆ ದುಷ್ಪರಿಣಾಮವುಂಟಾಗಬಹುದು. ಆ ದೃಷ್ಟಿಯಲ್ಲಿಯೂ ಅತಿಯಾಗಿ ಉಗುಳುವ ಅಭ್ಯಾಸ ಒಳಿತಲ್ಲವೆಂಬುದು ನೆನಪಿನಲ್ಲಿರಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕಾನೂನು ರೀತ್ಯಾ ನಿಷೇಧಿಸಿದರೂ ಜನಜಾಗೃತಿಯಾಗದಿದ್ದಲ್ಲಿ ಅದರ ಪರಿಣಾಮಕಾರಿ ಅನುಷ್ಠಾನ ಕಷ್ಟಸಾಧ್ಯ.  ಆದ್ದರಿಂದ ಜನ ಎಚ್ಚೆತ್ತುಕೊಂಡರೆ ಇದರ ನಿವಾರಣೆ ಸಾಧ್ಯ.  ತಾಂಬೂಲ ಮೆಲ್ಲುವ ಮಂದಿ ತಮ್ಮಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕು. ಬಸ್ಸು, ರೈಲು, ರಸ್ತೆಗಳಲ್ಲಿ ಉಗುಳುವವರನ್ನು ಕಂಡರೆ ಇತರ ಪ್ರಾಜ್ಞ ನಾಗರಿಕರು ಸ್ಥಳದಲ್ಲಿಯೇ ಅಂಥವರನ್ನು ಆಕ್ಷೇಪಿಸಿ ಪ್ರತಿಭಟಿಸಬೇಕು. ಉಗುಳು ನಿಷೇಧದ ಬಗ್ಗೆ ಸೂಕ್ತ ನಾಮಫಲಕಗಳನ್ನು ಹಾಕಬೇಕು.
ಇದೀಗ ಅಧಿನಿಯಮಕ್ಕೆ ಅನುಮೋದನೆ ದೊರೆತಿರುವುದರಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಕಾನೂನಿನ ರೀತ್ಯ ಬಲ ಬಂತಾಗಿದೆ. ಆದರೆ ಸದ್ಯ ಈ ನಿಯಮವು ಪಾಲಿಕೆ-ನಗರಸಭಾ ವ್ಯಾಪ್ತಿಯಲ್ಲಷ್ಟೇ ಬರುವುದರಿಂದ ಆಯಾ ಪುರಸಭೆಗಳು ಕೂಡ ಸಾರ್ವಜನಿಕ ಹಿತದೃಷ್ಟಿಯಿಂದ ತಮ್ಮಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು, ಉಗಿಯುವುದು, ಮಲ-ಮೂತ್ರ ವಿಸರ್ಜನೆ ಮಾಡುವುದು, ಮನೆಗಳ ಮುಂದೆ ಕಸ ಸುರಿಯುವುದನ್ನು ನಿಷೇಧಿಸುವ ನಿಯಮ ರೂಪಿಸುವುದು ಸೂಕ್ತ.  ಈ ಬಗ್ಗೆ ಒಂದಷ್ಟು ಜನಜಾಗೃತಿ ಆಗಬೇಕಾದುದು ಅಗತ್ಯ.  ಅಲ್ಲಲ್ಲಿ ಇರುವ ನಾಗರಿಕ ಸಮಿತಿಗಳು ಈ ಬಗ್ಗೆ ಎಚ್ಚರಗೊಳ್ಳಬೇಕಿದೆ.  

- ಎನ್.ರಾಮ ಭಟ್, ಉಡುಪಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.