ಅಂಕಣಗಳು

ಪೂರಕ ವ್ಯವಸ್ಥೆಯೂ ಬೇಕು

Published On :

ಎಗ್ಗಿಲ್ಲದೆ ಬೆಳೆಯುತ್ತಿರುವ ನಗರಗಳು ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗ್ರಾಮೀಣ ಪ್ರದೇಶಗಳು ಇವೆರಡರಲ್ಲೂ ಶುಚಿತ್ವದ ಕೊರತೆಯ ಸಮಸ್ಯೆ ಬಹುವಾಗಿಯೇ ಕಾಡುತ್ತಿದೆ. ಹೆಚ್ಚುತ್ತಿರುವ ಕಸ ಸಮಸ್ಯೆ, ಹದಗೆಟ್ಟ ನೈರ್ಮಲ್ಯ, ವಿರೂಪಗೊಳ್ಳುತ್ತಿರುವ ಸಾರ್ವಜನಿಕ ಪ್ರದೇಶಗಳು ಮುಂತಾದವುಗಳನ್ನು ಹತೋಟಿಯಲ್ಲಿಡಲು ಸರ್ಕಾರವು ಕರ್ನಾಟಕ ಪೌರ ನಿಗಮಗಳ ತಿದ್ದುಪಡಿ ವಿಧೇಯಕ 2013 ನ್ನು ಅಂಗೀಕರಿಸಿದೆ. ಈ ಮಸೂದೆಯ ನಿಯಮಗಳ ಪ್ರಕಾರ ಕಸ, ಸಂಗ್ರಹಣೆ,  ಮಲ-ಮೂತ್ರ ವಿಸರ್ಜನೆ, ಉಗುಳುವಿಕೆ, ಮುಂತಾದ ನೈರ್ಮಲ್ಯಕ್ಕೆ ಧಕ್ಕೆ ತರುವ ಪ್ರಕ್ರಿಯೆಗಳಲ್ಲಿ ಭಾಗಿಯಾಗುವವರಿಗೆ ದಂಡ- ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಇದು ಸ್ವಾಗತಾರ್ಹವೇ. ಸಾರ್ವಜನಿಕ ಪ್ರದೇಶಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜನರಲ್ಲಿರುವ ಬೇಜವಾಬ್ದಾರಿ ಮನೋಭಾವ ಢಾಳಾಗಿಯೇ ಇರುವುದರಿಂದ ಕಾನೂನಿನ ಭಯ ಅವಶ್ಯವೇ. ಆದರೆ ಇಲ್ಲೊಂದು ಪ್ರಶ್ನೆ ಏಳುತ್ತದೆ.  ಸ್ವಯಂ ಕಾಳಜಿಯಿಂದಲೋ ಅಥವಾ ಕಾನೂನಿನ ಭಯಕ್ಕೊ ಸಾರ್ವಜನಿಕರು ಇದನ್ನು ಪಾಲಿಸಲು ಹೊರಟರೆ ಅದಕ್ಕೆ ಅಗತ್ಯವಾದ ಸೌಲಭ್ಯಗಳು ನಮ್ಮ ವ್ಯವಸ್ಥೆಯಲ್ಲಿ ಇವೆಯೇ? ಇರುವ ವ್ಯವಸ್ಥೆಗಳ ನಿರ್ವಹಣೆ ಸುಸೂತ್ರವಾಗಿದೆಯೇ?
ಹಾಗೆ ಒಮ್ಮೆ ನೀವೆ ಯೋಚಿಸಿ, ಕಸ ಸಂಗ್ರಹಣೆಗೆಂದು ಆಯಕಟ್ಟಿನ ಸ್ಥಳಗಳಲ್ಲಿ ಇಡುವ ತೊಟ್ಟಿಗಳ ಸನಿಹಕ್ಕೆ ಹೋಗಿ ಕಸ ಸುರಿಯುವಷ್ಟು ಅವುಗಳು ಸಹ್ಯವಾಗಿವೆಯೇ? ಸುತ್ತಲೂ ಕೆಸರು, ಕೊಳಚೆ, ದುರ್ನಾತ ಅವುಗಳ ಕಳಪೆ ನಿರ್ವಹಣೆಯನ್ನು ಎತ್ತಿ ತೋರಿಸುತ್ತವೆ. ಅದೆಷ್ಟೋ ಪ್ರಮುಖ ನಗರಗಳ ಒಳಚರಂಡಿ ವ್ಯವಸ್ಥೆ ಗಬ್ಬೆದ್ದು ಹೋಗಿವೆ. ಇನ್ನು ಅಂತಹ ಚರಂಡಿಗಳ ಮೇಲು ಹೊದಿಕೆಯೇ ಇಲ್ಲದಿರುವುದರಿಂದ ಅವುಗಳ ದುರ್ವಾಸನೆ, ಹರಡುವ ರೋಗಗಳು, ಅದರಿಂದಾಗುವ ಪರಿಣಾಮಗಳಿಗೆ ಹೊಣೆ ಯಾರು? ಇನ್ನು ಶೌಚಾಲಯಗಳ ಕಥೆಯ ವ್ಯಥೆಯಂತೂ ಹೇಳ ತೀರದು. ಉದಾಹರಣೆಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಶೌಚಾಲಯದಲ್ಲಿನ ಮೂತ್ರವಿಸರ್ಜನೆಯ ಸರದಿಯ ಪಡಿಪಾಟಲು ಅನುಭವಿಸಿದವರಿಗೇ ಗೊತ್ತು! ಹಾಗೆಂದ ಮೇಲೆ ಮಲ ವಿಸರ್ಜನೆಯ ಸಂಕಟ ಹೇಳಬೇಕಾಗಿಲ್ಲ ತಾನೆ? ನಿರಂತರ ಜನದಟ್ಟಣೆಯ ಸ್ಥಳಗಳಲ್ಲಿನ ಸೀಮಿತ ಸಂಖ್ಯೆಗಳ ಶೌಚಾಲಯಗಳು ಜನರ ಅಗತ್ಯತೆಗಳನ್ನು ಸಮರ್ಥವಾಗಿ ನಿಭಾಯಿಸದು. ಇನ್ನು ಕೆಲ ಶೌಚಾಲಯಗಳ ನೈರ್ಮಲ್ಯದ ಮಟ್ಟ ವಾಕರಿಕೆ ತರಿಸುತ್ತವೆ. ಹಾಗಾಗಿಯೇ ಸಾರ್ವಜನಿಕರು ಅಂತಹ ಶೌಚಾಲಯಗಳನ್ನು ಬಳಸದೆ, ಸಂದಿ ಗೊಂದಿಯ ಅಡ್ಡದಾರಿ ಹಿಡಿಯುತ್ತಾರೆ. ಇನ್ನು ಮಹಿಳೆಯರು ವಯಸ್ಕರ ಪಾಡಂತೂ ಅಯೋವುಯ.  
ಸಂಗ್ರಹಿಸಿದ ಕಸದ ಸಮರ್ಪಕ ನಿರ್ವಹಣೆ, ಕಸ ವಿಂಗಡಣೆಯ ಪರಿಣಾಮಕಾರಿ ಅನುಷ್ಟಾನ, ತೊಟ್ಟಿಗಳ ಶುಚಿತ್ವ ಮತ್ತು ನಿರ್ವಹಣೆ, ತಂತ್ರಜ್ಞಾನಗಳ ಅಗತ್ಯ ಬಳಕೆ ಮುಂತಾದ ಅಗತ್ಯ ಸೌಕರ್ಯಗಳ ಅಳವಡಿಕೆಗೆ ಸರ್ಕಾರ ಮುಂದಾಗಬೇಕು. ನಗರ ಪ್ರದೇಶಗಳಲ್ಲಿ, ಪ್ರವಾಸಿ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳು ಹಾಗೂ ಹೆದ್ದಾರಿಗಳ ಇಕ್ಕೆಲಗಳಲ್ಲಿ ನಿರ್ದಿಷ್ಟ ಅಂತರದಲ್ಲಿ ನೈರ್ಮಲ್ಯದಿಂದ ಕೂಡಿರುವ ಸರಳ ಶೌಚಾಲಯಗಳು ಅಧಿಕ ಸಂಖ್ಯೆಯಲ್ಲಿ ರಚನೆಯಾದರೆ ಸಾಕು. ಅವುಗಳಿಗೆ ದುಬಾರಿ ಗ್ರಾನೈಟ್ ಮಾರ್ಬಲ್‌ಗಳ ಜೋಡಣೆ ಅಗತ್ಯವಿಲ್ಲ. ಶೌಚಾಲಯಗಳ ಬಳಕೆಯ ಬಗೆಗಿನ ಸರ್ಕಾರದ ಕಾರ್ಯತಂತ್ರಗಳು ಗ್ರಾಮೀಣ ಭಾಗಗಳೆಡೆಗಂತೂ ಸಮರೋಪಾದಿಯಲ್ಲಿ ಸಾಗಬೇಕಾಗಿದೆ. ನಗರಗಳ ಸೌಂದರ್ಯ ಕೆಡಿಸುವ ಬ್ಯಾನರ್, ಬಂಟಿಂಗ್ಸ್, ಗೋಡೆ ಬರಹಗಳು, ಸಿನಿಮಾ ಪೋಸ್ಟರ್, ಎಲ್ಲೆಂದರಲ್ಲಿ ರಾರಾಜಿಸುವ ಕಟೌಟ್‌ಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿರುವುದು ಕೂಡಾ ಅತ್ಯಂತ ಅವಶ್ಯಕವಲ್ಲವೇ? ಕಟ್ಟಡ ತ್ಯಾಜ್ಯಗಳ ಸುಸೂತ್ರ ವಿಲೇವಾರಿಯ ಬಿಸಿಯನ್ನು ಮೊದಲು ಪ್ರಭಾವಿ ಬಿಲ್ಡರ್‌ಗಳಿಗೆ ಮುಟ್ಟಿಸಬೇಕಾಗಿದೆ. ಆ ದಿಶೆಯಲ್ಲಿ ಸರ್ಕಾರ, ಆಡಳಿತವರ್ಗ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲುದೇ? ನಗರಗಳ ಮೂಲ ಸೌಕರ್ಯಗಳ ಈಡೇರಿಕೆಗೆ ಇನ್ನೂ ಹಲವು ಆಯಾಮಗಳಲ್ಲಿ, ಹೊಸತನದ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಪ್ರತಿನಿಧಿಗಳು ವಿದೇಶ ಭೇಟಿಯ ನಂತರ ಅಲ್ಲಿಯ ಸೌಂದರ್ಯ ಹೊಗಳಿದರೆ ಸಾಲದು ಅವರು ಒದಗಿಸಿರುವ ಸೌಕರ್ಯಗಳೆಡೆಗೂ ಗಮನಹರಿಸಬೇಕು.
ಸಮಗ್ರ ಸಿದ್ಧತೆಗಳ ನಂತರವೇ ವಿಧೇಯಕ ಯಶಸ್ವಿಯಾಗಬಲ್ಲದು. ಈ ಬಗೆಯ ಅಭಿಪ್ರಾಯಗಳೇ ಎಲ್ಲೆಡೆಯೂ ಮಾರ್ದನಿಸುತ್ತಿರುವುದು. ಇಲ್ಲವಾದಲ್ಲಿ ಜನ ಅಸಹಾಯಕರಾಗಿ ನಿಯಮ ಉಲ್ಲಂಘನೆಗೆ ವಾಮ ಮಾರ್ಗಗಳ ಮೊರೆ ಹೋದಾರು. ಅದು ಕ್ರಮೇಣ ಇಲಾಖೆ ಹಾಗೂ ಸಾರ್ವಜನಿಕರ ನಡುವಿನ ತಿಕ್ಕಾಟಕ್ಕೂ ಕಾರಣವಾಗಬಹುದು. ಅಗತ್ಯವಿರುವ ಎಲ್ಲಾ ಸೌಲಭ್ಯ ಹಾಗೂ ಯುಕ್ತ ಸೌಕರ್ಯಗಳನ್ನು ಒದಗಿಸಿ ಅದರ ಆಧಾರದಲ್ಲಿ ಪರಿಣಾಮಕಾರಿ ಅನುಸರಣೆಗೆ ಅನುಕೂಲಕರವಾಗುವ ನಿಯಮಗಳು ವಿಧೇಯಕದ ರೂಪು ಪಡೆದುಕೊಂಡು ಅಸ್ತಿತ್ವಕ್ಕೆ ಬಂದರೆ ಅರ್ಥಪೂರ್ಣವಾಗಿರುತ್ತದೆ. ಇಲ್ಲವಾದಲ್ಲಿ ಕಡತಗಳಿಗಷ್ಟೇ ಸೀಮಿತವಾಗಿರುವ ಸದ್ಯ ಅಸ್ತಿತ್ವದಲ್ಲಿರುವ ಹಲವು ವಿಧೇಯಕಗಳ ಪಟ್ಟಿಗೆ ಇದು ಹೊಸ ಸೇರ್ಪಡೆಯಾಗಬಲ್ಲುದಷ್ಟೆ.

- ಸಂದೇಶ್.ಎಚ್.ನಾಯ್ಕ
ಹಕ್ಲಾಡಿ, ಕುಂದಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.