ಅಂಕಣಗಳು

ನಾವು ಗಂಡಾಗಿ ಹುಟ್ಟಿದ್ದೇ ತಪ್ಪು!

Published On :

ಕೌಟುಂಬಿಕ ದೌರ್ಜನ್ಯ ಕೊನೆಯಾಗಬೇಕೆಂದರೆ...' ಶಾಲಿನಿ ರಜನೀಶ್‌ರ 'ಕನಸಿನ ತುತ್ತು' ಅಂಕಣ (ಕ.ಪ್ರ. 29.7.13) ತುಂಬ ಆಸೆಯಿಂದ ಆಮೂಲಾಗ್ರ ಓದಿದೆ. ನನ್ನಂಥ ಅತಿ ಶೋಷಣೆಗೀಡಾದವರಿಗೆ ಏನಾದ್ರೂ ನೆರಳು ಸಿಗಬಹುದು ಎಂಬ ಆಸೆಯಿತ್ತು. ಆದರೆ... ನಾವು ಗಂಡಾಗಿ ಹುಟ್ಟಿದ್ದೇ ತಪ್ಪು ನೋಡಿ! ಕೌಟುಂಬಿಕ ದೌರ್ಜನ್ಯ ಶೇ.100 ಪುರುಷರಿಂದಲೇ/ಸ್ತ್ರೀಯರ  ಮೇಲೇ ನಡೆಯುವಂಥದ್ದು ಎಂಬ ಪೂರ್ವಗ್ರಹಪೀಡಿತ, ಏಕಪಕ್ಷೀಯ, ಅತಿಯಾದ ಸ್ತ್ರೀ ಓಲೈಕೆಯ ಲೇಖನಗಳೇ (ಫೋಟೋ ಕೂಡ ಹಾಗೇ ಇದೆ!), ಭಾಷಣ-ಚರ್ಚೆಗಳೇ ಎಲ್ಲೆಡೆ ರಾರಾಜಿಸುತ್ತವೆ. ಈ ಲೇಖನವೂ ಅವುಗಳಿಗೊಂದು ಸೇರ್ಪಡೆ ಅಷ್ಟೇ! ನಮ್ಮ ಕಾಯಿದೆ, ಕಾನೂನು, ಸಮಾಜ, ಮಾಧ್ಯಮಗಳು, ಪೊಲೀಸ್, ಸ್ತ್ರೀ ಸಂಘಟನೆಗಳು ಎಲ್ಲವೂ ಸ್ತ್ರೀ ಪರವಾಗಿಯೇ ವಿಚಾರ ಮಾಡುತ್ತವೆ. ಹಾಗಾದರೆ, ಸ್ತ್ರೀಯರಿಂದ ಪುರುಷರ ಮೇಲೆ ದೌರ್ಜನ್ಯಗಳಾಗುವುದೇ ಇಲ್ಲವೆ? ಕೆಳವರ್ಗದ ಕುಟುಂಬಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಪ್ರಕರಣಗಳು ಸ್ತ್ರೀ ಶೋಷಣೆಯದ್ದಿರಬಹುದು. ಆದರೆ ಮೇಲ್ವರ್ಗದ, ಮುಂದುವರಿದ ಕುಟುಂಬಗಳಲ್ಲಿ ಬಹುಶಃ ಶೇ. 50ಕ್ಕಿಂತ ಹೆಚ್ಚು ಪ್ರಕರಣಗಳು ಸ್ತ್ರೀಯರಿಂದ ಪುರುಷರ, ಅತ್ತೆ-ಮಾವ-ಅತ್ತಿಗೆ-ಮೈದುನ-ಮಲ ಮಕ್ಕಳ ಮೇಲೇ ನಡೆಯುವಂಥದ್ದಾಗಿವೆ. ಶಾಲಿನಿ ರಜನೀಶ್‌ರು ಸಮಗ್ರ ದೃಷ್ಟಿಕೋನ ಸಮೇತ ಶೋಷಿತ ಪುರುಷರಿಗೆ ಸಲಹೆ ನೀಡುವ ಮತ್ತೊಂದು ಲೇಖನ ಬರೆಯಲಿ ಎಂಬುದು ನನ್ನ ಆಶಯ.
-ಇಳಿಮನೆ ಸುಭಾಶ್ಚಂದ್ರ ಹೆಗಡೆ, ಹುಬ್ಬಳ್ಳಿ, ಮೊ. 944 8860912

ಪತ್ರಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟವಾಗುವ ಹರಿಯವರ 'ಪಂಚ ಕಜ್ಜಾಯ'ವು ಪ್ರಚಲಿತ ವಿದ್ಯಮಾನದ ವಿಚಾರಗಳ ಸೃಜನಶೀಲ ವಿಮರ್ಶೆ ವಿಡಂಬನೆಯ ಬರಹಗಳ ಮೂಲಕ ರುಚಿಕರವಾಗಿದೆ. ಪ್ರತಿ ವಾರದಿಂದ ವಾರಕ್ಕೆ ಈ ರುಚಿಯು ಇಮ್ಮಡಿಸಿ ನೂರ್ಮಡಿಸುತ್ತಾ ಸಾಗಿದೆ. ಒಟ್ಟಾರೆಯಾಗಿ ಈ ಅಂಕಣ ಹರಿಯವರ ಸೃಜನಶೀಲ ಬರಹಕ್ಕೆ ಹಿಡಿದ ಕನ್ನಡಿಯಾಗಿದೆ. ಅಭಿರುಚಿ ಬಯಸುವ ಓದುಗರಿಗೆ ಇಂತಹ ಸದಭಿರುಚಿಯ ಅಂಕಣವನ್ನು ನೀಡಿರುವ ಕನ್ನಡಪ್ರಭ ಪತ್ರಿಕೆಗೆ ತುಂಬು ಹೃದಯದ ಅಭಿನಂದನೆಗಳು.
-ಆರ್.ಸಿ. ಪರಶುರಾಮ್, ಶಿಕಾರಿಪುರ

ಆಗಸ್ಟ್ 3ರ ಕನ್ನಡಪ್ರಭದ ಪುಟ 5ರಲ್ಲಿ ಎಸ್.ವಿ. ಪದ್ಮನಾಭ್ ಅವರು ಬರೆದ ವ್ಯಂಗ್ಯ ಚಿತ್ರವನ್ನು ಮುಖಪುಟದಲ್ಲೇ ಪ್ರಕಟಿಸಿದ್ದರೆ ಸರ್ಕಾರದ ಮುಖಕ್ಕೆ 'ಮಂಗಳಾರತಿ' ಎತ್ತಿದಂತಾಗುತ್ತಿತ್ತು. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ತರಬೇತಿ ಮತ್ತು ಅನುಕೂಲಗಳನ್ನು ಮಾಡಿಕೊಡುವುದನ್ನು ಬಿಟ್ಟು ಓಟಿನ ಆಸೆಗಾಗಿ ಸರ್ಕಾರ ಜಾರಿಗೆ ತಂದಿರುವ 'ಅನ್ನಭಾಗ್ಯ', ಕ್ಷೀರಭಾಗ್ಯ (ಮುಂದೆ ಮೊಟ್ಟೆ ಭಾಗ್ಯ-ಮಾಂಸಭಾಗ್ಯ ಯೋಜನೆಗಳು ಜಾರಿಗೆ ಬಂದರೂ ಅಚ್ಚರಿಪಡಬೇಕಿಲ್ಲ) ಯೋಜನೆಗಳನ್ನು ಪಾಲಿಸಲು ಸರ್ಕಾರಿ ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ಅಡುಗೆ ಮಾಡಿಕೊಂಡು -ಹಾಲು ಕಾಯಿಸುತ್ತಾ ಕುಳಿತರೆ ಮಕ್ಕಳಿಗೆ ಪಾಠ ಮಾಡುವವರು ಯಾರು? ಸರ್ಕಾರ ತೆಗೆದುಕೊಳ್ಳುವ ಇಂಥಾ ಅವಿವೇಕದ ನಿರ್ಧಾರಗಳ ಬಗ್ಗೆ ಕನ್ನಡಪ್ರಭ ಪತ್ರಿಕೆಯ ಹೆಮ್ಮೆಯ ವ್ಯಂಗ್ಯ ಚಿತ್ರ ಕಲಾವಿದರಾದ ಎಸ್.ವಿ. ಪದ್ಮನಾಭ್ ಅವರು ತಮ್ಮ ವ್ಯಂಗ್ಯ ಚಿತ್ರಗಳ ಮೂಲಕ ಸರ್ಕಾರಕ್ಕೆ ಚಾಟಿ ಬೀಸುತ್ತಿರಲಿ...!
-ಫ್ಯಾಷನ್ ಡಿಸೈನರ್ ಮಧು, ಹಾಸನ, 99457-37427

ಇಳಿವಯಸ್ಸಿನಲ್ಲಿ ನೆನಪಿನ ಶಕ್ತಿ ಕಡಿಮೆಯಾಗುತ್ತದೆಂಬುದು ಸಾಮಾನ್ಯ ವಿಚಾರ ಹಾಗೂ ಈ ವಯಸ್ಸು ಅರಳು-ಮರಳಿನ ವಯಸ್ಸು ಅಂತಲೂ ಹೇಳುವುದುಂಟು. ಆದರೆ ಆಗಸ್ಟ್ 7ರ ಕನ್ನಡಪ್ರಭದ ಮುಖಪುಟ ವರದಿ 'ಸಿದ್ರಾಮುಗೆಲ್ಲೋ ಭ್ರಾಂತಿ' ಓದಿದಾಗ ಈ ಮೇಲಿನ ಹೇಳಿಕೆಗೆ ಅಪವಾದಗಳೂ ಇರುತ್ತವೆಂಬುದು ಖಾತ್ರಿಯಾಯಿತು. ಅದಲ್ಲದಿದ್ದರೆ 20-25 ವರ್ಷಗಳ ಹಿಂದೆ ನಡೆದ ಹೆಚ್ಚಿನ ಪ್ರಸಂಗಗಳನ್ನು ಎಳೆಎಳೆಯಾಗಿ ಸಂದರ್ಭ, ಸನ್ನಿವೇಶ ಹಾಗೂ ಹೆಸರುಗಳೊಂದಿಗೆ ವಿಶ್ಲೇಷಿಸುವುದು ಮಾಜಿ ಪ್ರಧಾನಿ, 80ರ ಹರೆಯದ ದೇವೇಗೌಡರಿಗೆ ಸಾಧ್ಯವಾಗುತ್ತಿಲ್ಲವೆನ್ನಿ. ಇವಿಷ್ಟೇ ಆದರೆ ಸಂತೋಷಪಡಬಹುದಿತ್ತೇನೋ. ಆದರೆ ದೇವೇಗೌಡರ ರಾಜಕೀಯ ಚತುರತೆ, ಸಮಯವನ್ನು/ಸಂದರ್ಭವನ್ನು ತನ್ನ ಒಳಿತಿಗೆ ಬಳಸಿಕೊಳ್ಳುವ, ತಿರುಗಿಸಿಕೊಳ್ಳುವ ಚತುರತೆ ಗಮನಿಸಿದರೆ ಈ 'ರಾಜಕೀಯ' ಎನ್ನುವುದು ನಮ್ಮ-ನಿಮ್ಮಂಥವರಿಗೆ ದಕ್ಕುವ ತುತ್ತಲ್ಲ ಅಂಬುದೂ ಮನವರಿಕೆಯಾಯಿತು. ರಾಮಕೃಷ್ಣ ಹೆಗಡೆ ಹಾಗೂ ತಮ್ಮೊಳಗಿನ ಸಂಬಂಧದ ವಿಷಯವನ್ನು ಮುಚ್ಚು -ಮರೆಯಿಲ್ಲದೇ ಒಪ್ಪಿಕೊಂಡಿದ್ದಾರೆ!
-ಶಂಕರನಾರಾಯಣಭಟ್, ಮಾಡಗೇರಿ, ಹೊನ್ನಾವರ, ಮೊ. 9632 821920

ದಿನಾಂಕ 31 ಜುಲೈ ಮಹಾನ್ ಗಾಯಕ ಮೊಹಮದ್ ರಫಿಯವರ 34ನೇ ಪುಣ್ಯತಿಥಿ ನಮ್ಮ ನೆಚ್ಚಿನ ಕ.ಪ್ರ.ದಲ್ಲಿ ಅದರ ಬಗ್ಗೆ ಒಂದು ಲೇಖನವನ್ನು ನನ್ನಂತಹ ಸಾವಿರಾರು ಓದುಗರು ಎದುರು ನೋಡುತ್ತಿದ್ದರೆಂದು ಭಾವಿಸುತ್ತೇನೆ. ದಿನ ಬೆಳಗಾದರೆ ಪತ್ರಿಕೆಯಲ್ಲಿ ರಾಜಕೀಯ ನಾಯಕರ ಭ್ರಷ್ಟಾಚಾರ, ಅನಾಚಾರ, ದೇಶದ ವಿವಿಧೆಡೆ ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆಯಂತಹ ವಿಷಯಗಳನ್ನು ಓದಿ, ತಲೆ ಕೆಟ್ಟು ಹೋದಾಗ ರಫಿ ಕುರಿತ ಲೇಖನ ಮನಸ್ಸಿಗೆ ಮುದವನ್ನು ಕೊಡುತ್ತಿತ್ತು. ಬೈಟು ಕಾಫಿ ಪುರವಣಿಯಲ್ಲಿ ಪುಣ್ಯತಿಥಿ ಕಾಲಂನಲ್ಲಿ ನೀವು ಅವರನ್ನು ಸ್ಮರಿಸಿದ್ದು ಸಮಾಧಾನದ ಸಂಗತಿ.
-ಕುತ್ಪಾಡಿ ಜಯಪ್ರಕಾಶ ಹೆಗ್ಡೆ, ತೀರ್ಥಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.