ಅವಳ ಅಂಧಕಾರದ ಬದುಕಿಗೆ ಅವನು ಕಣ್ಣಾದ...

ಟಿ.ವಿ. ನೋಡುವ ಅಭ್ಯಾಸ ಇದ್ದವರಿಗೆಲ್ಲ ಗಾಯಿತ್ರಿ ಪಾಟೀಲರ ಮಾತು ಮತ್ತು ಮುಖ...
Updated on: 

ಟಿ.ವಿ. ನೋಡುವ ಅಭ್ಯಾಸ ಇದ್ದವರಿಗೆಲ್ಲ ಗಾಯಿತ್ರಿ ಪಾಟೀಲರ ಮಾತು ಮತ್ತು ಮುಖ ಪರಿಚಯ ಖಂಡಿತ ಇರುತ್ತದೆ. ಡಿಗ್ರಿ ಮುಗಿಯುವವರೆಗೂ ಕಾಲೇಜು ಮತ್ತು ತಾನು ವಾಸವಿದ್ದ ಹುಬ್ಬಳ್ಳಿಯ ನವನಗರದಲ್ಲಿ ಮಾತ್ರ ಫೇಮಸ್ ಆಗಿದ್ದ ಗಾಯಿತ್ರಿ ಪಾಟೀಲ್, ಟಿ.ವಿ. ಕಾರ್ಯಕ್ರಮಗಳ ಮೂಲಕ ದಿಢೀರ್ ಜನಪ್ರಿಯತೆ ಗಳಿಸಿಕೊಂಡಿದ್ದು ಆಕಸ್ಮಿಕವೆಂದೇ ಹೇಳಬೇಕು. ಅದೆಲ್ಲಾ ಶುರುವಾಗಿದ್ದು ಹೀಗೆ: ಜನರಿಗೆ ಹತ್ತಿರಾಗಬೇಕು ಎಂಬ ಉದ್ದೇಶದಿಂದ ಚಾನೆಲ್‌ಗಳು ಲೈವ್ ಪ್ರೋಗ್ರಾಂಗಳನ್ನು ಕೊಡಲು ಶುರು ಮಾಡಿದವಲ್ಲ? ಅಂಥದೇ ಒಂದು ಕಾರ್ಯಕ್ರಮಕ್ಕೆ, ಆರು ವರ್ಷಗಳ ಹಿಂದೆ ತೀರಾ ಆಕಸ್ಮಿಕವಾಗಿ ಎಂಟ್ರಿಯಾದಾಕೆ ಗಾಯಿತ್ರಿ ಪಾಟೀಲ.
ಕಿರುತೆರೆಯಲ್ಲಿ ಗಾಯಿತ್ರಿ ಕಾಣಿಸಿಕೊಂಡ ಮೊದಲ ಕಾರ್ಯಕ್ರಮವೇ ಬಿಗ್ ಸಕ್ಸಸ್ ಎನ್ನಿಸಿಕೊಂಡಿತು. ಅದುವರೆಗೂ ಹಳೇ ಮೈಸೂರು ಸೀಮೆಯ ಭಾಷೆಯನ್ನು ಮಾತ್ರ ಕೇಳಿದ್ದವರಿಗೆ, ಸ್ಪಷ್ಟ ಮತ್ತು ಶುದ್ಧ ಉಚ್ಛಾರಣೆಯ ಉತ್ತರಕರ್ನಾಟಕದ ಮಾತುಗಳು ಮೋಡಿ ಮಾಡಿದ್ದವು. ಪರಿಣಾಮವಾಗಿ, ಒಂದು ಚಾನೆಲ್‌ನಲ್ಲಿ ಕಾರ್ಯಕ್ರಮ ಮುಗಿದ ಎರಡೇ ದಿನಕ್ಕೆ ಮತ್ತೊಂದು ಚಾನೆಲ್‌ನಿಂದ ಗಾಯಿತ್ರಿಗೆ ಕರೆ ಬಂದಿತ್ತು. ಕಾಲೇಜಿನಲ್ಲಿ ಭಾಷಣ, ಹಾಡುಗಾರಿಕೆಯಂಥ ಕಾರ್ಯಕ್ರಮಗಳಲ್ಲಿ ಮೇಲಿಂದ ಮೇಲೆ ಭಾಗವಹಿಸುತ್ತಲೇ ಇದ್ದುದರಿಂದ ಟಿ.ವಿ. ಕಾರ್ಯಕ್ರಮಗಳಲ್ಲಿ ಯಾವುದೇ ಹಿಂಜರಿಕೆಯೂ ಗಾಯಿತ್ರಿಯನ್ನು ಕಾಡಲಿಲ್ಲ. ಒಂದೆರಡು ಕಾರ್ಯಕ್ರಮಗಳಲ್ಲಿ ಆಕೆ ಫೈನಲ್ ರೌಂಡ್ ತಲುಪಿ ವಿಜೇತೆ ಅನ್ನಿಸಿಕೊಂಡಾಗಲಂತೂ ಉತ್ತರ ಕರ್ನಾಟಕದ ಜನತೆ ಥ್ರಿಲ್ಲಾಗಿ ಹೋಗಿದ್ದರು. ಈ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದಾಗ -'ಸಾಕ್ ಬಿಡೋ ಮಾರಾಯ. ನಮ್ ಹುಡ್ಗಿ ಟಿ.ವಿ.ಶೋದಾಗ ಪ್ರೈಜ್ ಹೊಡ್ಕೊಂಡು ಬಂದ್ಲಲಾ, ಅಷ್ಟ ಸಾಕ್...' ಎಂದು ಕೆಲವರು ಮಾತಾಡಿಕೊಂಡರೆ, ಮತ್ತೊಂದಷ್ಟು ಜನ-'ಹೋಗೋ ಇವನೌವ್ನ. ನಮ್ಮೂರ್ ಹುಡ್ಗಿ ಟಿವಿ ಶೋದಾಗ ಕಪ್ ಎತ್ತಿದ್ಲಪ್ಪಾ' ಎಂದು ಮೆಚ್ಚುಗೆಯ ಮಾತಾಡುತ್ತಿದ್ದರು.
ಜನಪ್ರಿಯತೆ ಹೆಚ್ಚಿತಲ್ಲ; ಅದೇ ಸಂದರ್ಭದಲ್ಲಿ ಒಂದೆರಡು ಚಾನೆಲ್‌ಗಳಿಂದ ಕಾರ್ಯಕ್ರಮ ನಿರೂಪಕಿಯ ಹುದ್ದೆಗೆ ಆಹ್ವಾನವೂ ಬಂತು. ದಿನಾಲೂ ಮೇಕಪ್ ಮಾಡಿಕೊಂಡು ರೆಡಿಮೇಡ್ ಭಾಷಣ ಹಿಡ್ಕೊಂಡು ಗಿಳಿಪಾಠ ಒಪ್ಪಿಸಬೇಕು. ಅಂಥ ಕೆಲ್ಸ ಮಾತ್ರ ನನ್ನಿಂದ ಸಾಧ್ಯವಿಲ್ಲ ಎಂದು ಬಿಟ್ಟಳು ಗಾಯಿತ್ರಿ. ಇದಾಗಿ ಕೆಲವೇ ದಿನಗಳಲ್ಲಿ ಸೀರಿಯಲ್ ಒಂದರಲ್ಲಿ ಅಭಿನಯಿಸುವಂತೆ ಕರೆ ಬಂತು. ಗಾಯಿತ್ರಿ ಅದಕ್ಕೂ ಮುಖ ತಿರುಗಿಸಿ ಕೂತು ಬಿಟ್ಟಳು. ಈ ಸಂದರ್ಭದಲ್ಲಿ ಗಾಯಿತ್ರಿಯ ಮನೆಯವರು ಸಹಜವಾಗಿಯೇ ಮಗಳ ಮದುವೆ ಮಾಡಲು ಯೋಚಿಸಿದರು. ಯಾವ ಚಿತ್ರನಟಿಗೂ ಕಡಿಮೆ ಇಲ್ಲದಂಥ ಸೌಂದರ್ಯದ ಗಾಯಿತ್ರಿ, ಯಾರ ಕೈ ಹಿಡಿಯಬಹುದು ಎಂಬ ವಿಷಯವಾಗಿ ಹುಬ್ಬಳ್ಳಿಯ ಕೆಲವು ಪಡ್ಡೆ ಹುಡುಗರ ಗುಂಪಲ್ಲಿ ಚರ್ಚೆಗಳೂ ನಡೆದವು.
ಎಲ್ಲರ ಲೆಕ್ಕಾಚಾರಗಳೂ ಉಲ್ಟಾ ಆಗುವಂತೆ, ಸೇನೆಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ಮಹಾಲಿಂಗ ಮೇತ್ರಿಯನ್ನು ಗಾಯಿತ್ರಿ ಕೈ ಹಿಡಿದಳು. ಆಕೆಗೆ ಮಹಾಲಿಂಗ ಮೇತ್ರಿಯ ಪರಿಚಯವಾದದ್ದೂ ಆಕಸ್ಮಿಕವೇ. ಅದೊಮ್ಮೆ ಈತ ರಜೆಗೆಂದು ಹುಬ್ಬಳ್ಳಿಗೆ ಬಂದಿದ್ದ. ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವೂ ಆ ಸಂದರ್ಭದಲ್ಲೇ ನಡೆಯಿತು. ಜಿಲ್ಲಾಡಳಿತದವರು, ಮಹಾಲಿಂಗನನ್ನು ಮುಖ್ಯ ಅತಿಥಿಯೆಂದು ಕರೆದರು. ಆ ಕಾರ್ಯಕ್ರಮದ ನಿರೂಪಕಿಯಾಗಿದ್ದ ಗಾಯಿತ್ರಿಯ ಮುದ್ದು ಮತ್ತು ಸ್ನಿಗ್ಧ ಚೆಲುವು ಮಹಾಲಿಂಗನನ್ನು ಮರುಳು ಮಾಡಿತು. ಆತ ಕಾರ್ಯಕ್ರಮ ಸಂಘಟಕರಿಂದ ಗಾಯಿತ್ರಿಯ ವಿಳಾಸ ಪಡೆದು ಹೆತ್ತವರನ್ನು ಜೊತೆಗಿಟ್ಟುಕೊಂಡೇ ಅವಳ ಮನೆಗೆ ಹೋದ. ಇನ್ನು ಮೂರು ವರ್ಷದ ನಂತರ ವಿ.ಆರ್.ಎಸ್. ತಗೋತೇನೆ. ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಎಂದು ಪ್ರಾರ್ಥಿಸಿದ. ಯೋಧನ ಹೆಂಡತಿಯಾಗಬೇಕು ಎಂಬ ಮಹದಾಸೆಯಿಂದ ಗಾಯಿತ್ರಿ ತಾನೇ ಮೊದಲು ಒಪ್ಪಿಗೆ ನೀಡಿ ಬಿಟ್ಟಳು.
ಹಾಂ ಹೂಂ ಅನ್ನುವುದರೊಳಗೆ ಮೂರು ವರ್ಷಗಳು ಕಳೆದು ಹೋದವು. ಮಿಲಿಟರಿ ಸೇವೆಯಿಂದ ವಿಆರ್‌ಎಸ್ ಪಡೆದುಕೊಂಡ ಮಹಾಲಿಂಗನಿಗೆ ಬ್ಯಾಂಕ್‌ನ ಎಟಿಎಂಗಳ ಉಸ್ತುವಾರಿ ಇನ್ಸ್‌ಪೆಕ್ಟರ್ ಹುದ್ದೆ ದೊರೆಯಿತು. ಆತ ದಿನವೂ ಹುಬ್ಬಳ್ಳಿಯ ನವನಗರದಿಂದ ಧಾರವಾಡಕ್ಕೆ ಹೋಗಿ ಬರುತ್ತಿದ್ದ. ಮದುವೆಯಾದ ನಂತರ ಗಾಯಿತ್ರಿಗೂ ಸಹಕಾರಿ ಬ್ಯಾಂಕೊಂದರಲ್ಲಿ ಕೆಲಸ ಸಿಕ್ಕಿ ಬಿಟ್ಟಿತು. ಮೊದಲ ತಿಂಗಳ ಸಂಬಳವನ್ನು ಗಂಡನ ಕೈಲಿಟ್ಟ ಗಾಯಿತ್ರಿ, ಸ್ಪಷ್ಟವಾಗಿ ಹೇಳಿ ಬಿಟ್ಟಳು: "ನೋಡ್ತಾ ಇದೀರಲ್ಲ; ನವನಗರದಲ್ಲಿ ಕೂಡ ಭೂಮಿಯ ಬೆಲೆ ವಿಪರೀತ ಜಾಸ್ತಿ ಆಗ್ತಾ ಇದೆ. ನಾವು ಸೈಟ್ ತಗೊಂಡು ಮನೆ ಕಟ್ಟಿಸುವುದಕ್ಕಂತೂ ಸಾಧ್ಯವಿಲ್ಲ. ಒಂದು ಫ್ಲಾಟ್ ತಗೊಳ್ಳೋಣ. ನಮ್ಮ ಬ್ಯಾಂಕ್‌ನಲ್ಲಿ ಸಾಲ ಸಿಗುತ್ತೆ. ನನ್ನ ಸಂಬಳವೆಲ್ಲ ಸಾಲ ತೀರಿಸಲು ಹೋಗಲಿ. ನಿಮ್ಮ ಸಂಬಳದಲ್ಲಿ ಸಂಸಾರ ನಡೆಸೋಣ...". ಹೆಂಡತಿಯ ಮಾತಿಗೆ ಮಹಾಲಿಂಗನೂ ಒಪ್ಪಿಕೊಂಡ. ಹದಿನೈದೇ ದಿನಗಳಲ್ಲಿ ಅವರು ಅದ್ಧೂರಿಯಾಗಿ ಗೃಹಪ್ರವೇಶವನ್ನೂ ನೆರವೇರಿಸಿದರು.
ಗಾಯಿತ್ರಿಯ ಬ್ಯಾಂಕ್ ಇದ್ದುದು ಹುಬ್ಬಳ್ಳಿಯಲ್ಲಿ. ಮಹಾಲಿಂಗನಿಗೆ ನೌಕರಿ ಇದ್ದುದು ಧಾರವಾಡದಲ್ಲಿ. ಇಬ್ಬರದೂ ವಿರುದ್ಧ ದಿಕ್ಕಿನ ಪ್ರಯಾಣ. ಆದರೂ, ಆಫೀಸಿಗೆ ಹೋಗುವ ಸಂದರ್ಭದಲ್ಲಿ ಅವರು ಅಮರಪ್ರೇಮಿಗಳಂತೆ ನಡೆದು ಬರುತ್ತಿದ್ದರು. ಅವರ ಮನೆಯಿಂದ ಬಸ್ ನಿಲ್ದಾಣಕ್ಕೆ ಒಂದೂವರೆ ಕಿಲೋಮೀಟರ್ ದೂರವಿತ್ತು. ಅವರಿಬ್ಬರೂ ಕೈ ಕೈ ಹಿಡಿದು ಸುಮ್ಮನೆ ನಗುತ್ತ, ಪರಸ್ಪರ ರೇಗಿಸುತ್ತ, ಬೇಕೆಂದೇ ಮುನಿಸಿಕೊಳ್ಳುತ್ತ, ಒಮ್ಮೊಮ್ಮೆ ಕಣ್ಣು ಹೊಡೆಯುತ್ತಾ ಹೆಜ್ಜೆ ಹಾಕುತ್ತಿದ್ದರೆ, ಹಾದಿಯುದ್ದಕ್ಕೂ ಎದುರಾಗುವ ಜನ ಗಾಯಿತ್ರಿಯನ್ನು ನುಂಗುವಂತೆ ನೋಡುತ್ತಿದ್ದರು. ಜನರ ವಕ್ರದೃಷ್ಟಿಯ ಬಗ್ಗೆ ಚೆನ್ನಾಗಿ ತಿಳಿದಿದ್ದ ಮಹಾಲಿಂಗ, ಅವರ ಬುದ್ಧೀನೇ ಅಷ್ಟು. ನೋಡಿಕೊಂಡು ಖುಷಿಪಡಲಿ. ನೀನು ಯೋಚಿಸಬೇಡ ಎಂದು ಹೆಂಡತಿಗೆ ಸಮಾಧಾನ ಹೇಳಿದ್ದ.
ಹೀಗೇ ಒಂದು ವರ್ಷ ಕಳೆಯಿತು. ಈ ಅವಧಿಯಲ್ಲಿ ಗಾಯಿತ್ರಿ-ಯಾಕೋ ದೃಷ್ಟಿ ಮಂಕಾದಂತೆ ಅನ್ನಿಸ್ತಿದೆ ಅಂದಳು. ಎದುರಿಗಿರುವ ವಸ್ತುಗಳು ಚೆನ್ನಾಗಿ ಕಾಣ್ತವೆ. ಆದರೆ ಪಕ್ಕದಲ್ಲಿರುವ ವಸ್ತುಗಳೇ ಕಾಣುವುದಿಲ್ಲ ಎಂದಳು. ಹೆಂಡತಿಯ ಮಾತು ಕೇಳಿ ಮಹಾಲಿಂಗ ಗಾಬರಿಯಾದ. ತರಾತುರಿಯಲ್ಲಿ ವೈದ್ಯರನ್ನು ಸಂಪರ್ಕಿಸಿದ. ಒಂದು ಶಸ್ತ್ರಚಿಕಿತ್ಸೆಯ ಅವಸರದಲ್ಲಿದ್ದ ವೈದ್ಯರು, ಗಾಯಿತ್ರಿಗೆ ಕೆಲವೊಂದು ಮಾತ್ರೆ ಬರೆದುಕೊಟ್ಟರು. ಒಂದು ವಾರದಲ್ಲಿ ಎಲ್ಲಾ ಸರಿಯಾಗುತ್ತೆ. ಹೋಗ್ಬನ್ನಿ ಎಂದರು.
ಒಂದೆರಡು ವಾರವಲ್ಲ, ಆರು ತಿಂಗಳು ಕಳೆದರೂ ಗಾಯಿತ್ರಿಯ ದೃಷ್ಟಿದೋಷ ಸರಿಯಾಗಲಿಲ್ಲ. ಇದರಿಂದ ಮತ್ತೂ ಗಾಬರಿಯಾದ ಮಹಾಲಿಂಗ, ಹೆಂಡತಿಯೊಂದಿಗೆ ಬೇರೊಂದು ಆಸ್ಪತ್ರೆಗೆ ಬಂದ. ಅಲ್ಲಿನ ವೈದ್ಯರು, ಗಾಯಿತ್ರಿಯನ್ನು ಕೂಲಂಕಷವಾಗಿ ಪರೀಕ್ಷಿಸಿ ಹೇಳಿದರು: ಗ್ಲಾಕೋಮಾ ತೊಂದರೆ ಕಾಣಿಸಿಕೊಂಡಿದೆ. ಗ್ಲಾಕೋಮಗೆ ಪರಿಹಾರವಿಲ್ಲ. ಕಳೆದುಕೊಂಡ ದೃಷ್ಟಿಯನ್ನು ಮತ್ತೆ ಪಡೆಯಲೂ ಸಾಧ್ಯವಿಲ್ಲ. ನೀವು ತುಂಬಾ ತಡವಾಗಿ ಬಂದಿದ್ದೀರ. ಹಾಗಾಗಿ ಏನೂ ಮಾಡಲು ಸಾಧ್ಯವಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗಿದೆ. ಇಂಥ ಸಂದರ್ಭದಲ್ಲಿ ವೈದ್ಯರೂ ಕೂಡ ಅಸಹಾಯಕರೇ. ದಯವಿಟ್ಟು ಕ್ಷಮಿಸಿ. ಅಂಧತ್ವದ ಜೊತೆಯಲ್ಲಿಯೇ ಬದುಕುವುದಕ್ಕೆ ಮಾನಸಿಕವಾಗಿ ಸಿದ್ಧರಾಗಿ...'
ವಿಷಯ ಗೊತ್ತಾಗುತ್ತಿದ್ದಂತೆಯೇ ಎರಡೂ ಕುಟುಂಬದ ಸದಸ್ಯರು ಶಾಕ್‌ಗೆ ಒಳಗಾದರು. ಹೇಗೆ ಪ್ರತಿಕ್ರಿಯಿಸಬೇಕೆಂದು ಯಾರಿಗೂ ತೋಚಲಿಲ್ಲ. ಸ್ವಲ್ಪ ದಿನಗಳ ನಂತರ, ಮಹಾಲಿಂಗನನ್ನು ಗುಟ್ಟಾಗಿ ಭೇಟಿಯಾದ ಅವನ ಬಂಧುಗಳು, ಕುರುಡಿಯೊಂದಿಗೆ ಎಷ್ಟು ದಿನ ಹೆಣಗ್ತೀಯ? ಇನ್ನೊಂದು ಮದುವೆ ಮಾಡಿಕೋ ಎಂದು ಬುದ್ಧಿ ಹೇಳಲು ಹೋಗಿ ಛೀಮಾರಿ ಹಾಕಿಸಿಕೊಂಡರು. ಫ್ಲಾಟ್ ಖರೀದಿಗೆಂದು 20 ಲಕ್ಷ ರೂ.ಗಳ ಭಾರಿ ಮೊತ್ತವನ್ನು ಗಾಯಿತ್ರಿ ಸಾಲವಾಗಿ ಪಡೆದಿದ್ದರಿಂದ ದಿಢೀರನೆ ಆಕೆ ನೌಕರಿ ತ್ಯಜಿಸುವುದೂ ಸಾಧ್ಯವಿರಲಿಲ್ಲ. ಇಂಥ ಸಂದರ್ಭದಲ್ಲಿ ಮಹಾಲಿಂಗನೇ ಗಾಯಿತ್ರಿಗೆ ಬಗೆಬಗೆಯಲ್ಲಿ ಸಮಾಧಾನ ಹೇಳಿದ. ಯಾರ ಹಣೇಲಿ ಏನು ಬರೆದಿರ್ತದೋ ಯಾರಿಗೂ ಗೊತ್ತಾಗಲ್ಲ. ಅದೆಂಥ ಕಷ್ಟ ಬರ್ತದೋ ಬರಲಿ. ನಾನು ಬದುಕಿರುವ ತನಕ ನಿನ್ನನ್ನು ಚೆನ್ನಾಗಿ ನೋಡ್ಕೋತೇನೆ...' ಎಂದು ಧೈರ್ಯ ಹೇಳಿದ್ದ.
ಮರುದಿನದಿಂದಲೇ ಮೊದಲು ಹೆಂಡತಿಯನ್ನು ಹುಬ್ಬಳ್ಳಿಗೆ ಕರೆದೊಯ್ದ. ಬ್ಯಾಂಕ್‌ನ ಮುಂದೆ ಇಳಿಸಿ ನಂತರ ಧಾರವಾಡಕ್ಕೆ ಹೋಗುವುದು, ಸಂಜೆ ಮತ್ತೆ ಧಾರವಾಡದಿಂದ ಹುಬ್ಬಳ್ಳಿಗೆ ಬಂದು ಹೆಂಡತಿಯನ್ನು ಮನೆಗೆ ಕರೆ ತರುವುದು ಮಹಾಲಿಂಗನ ಕೆಲಸವಾಯಿತು. ಹೀಗೇ ಮೂರು ತಿಂಗಳು ಕಳೆದವು. ಆಗಲೇ ಧಾರವಾಡದಲ್ಲಿದ್ದ ಕೆಲವು ಎಟಿಎಂ ಸೆಂಟರ್‌ಗಳ ಮೇಲೆ ಕಳ್ಳರು ದಾಳಿ ನಡೆಸಿದ ಸುದ್ದಿ ಬಂತು. ಆಗ ಮೇಲಧಿಕಾರಿಗಳು ಮಹಾಲಿಂಗನಿಗೆ ಖಡಕ್ಕಾಗಿ ಹೇಳಿದರು: 'ಇನ್ನು ಮುಂದೆ ನಿಮ್ಮ ಹೊಣೆಗಾರಿಕೆ ಹೆಚ್ಚಲಿದೆ. ಎರಡು ಗಂಟೆ ಹೆಚ್ಚುವರಿ ಕೆಲಸ ಮಾಡಲೇಬೇಕು...'
ಬದಲಾದ ಪರಿಸ್ಥಿತಿಗೆ ಮಹಾಲಿಂಗ ತಲೆ ಬಾಗಲೇಬೇಕಿತ್ತು. ಅವತ್ತೇ ಆತ ಕುರುಡರು ಬಳಸುವಂಥ ವಾಕಿಂಗ್‌ಸ್ಟಿಕ್‌ನೊಂದಿಗೆ ಮನೆಗೆ ಬಂದ. ಹೆಂಡತಿಯ ಮುಂದೆ ಕೂತು ತನ್ನ ಹೆಗಲೇರಿದ ಹೊಸ ಜವಾಬ್ದಾರಿಯ ಬಗೆಗೆ ಹೇಳಿದ. ನಾಳೆಯಿಂದ ನಾನು ಬೇಗ ಆಫೀಸಿಗೆ ಹೋಗಬೇಕು. ಹಾಗಾಗಿ ನಿಂಗೆ ಇನ್ಮೇಲೆ ಡ್ರಾಪ್ ಕೊಡೋಕೆ ಆಗಲ್ಲ. ಈಗ ಹುಷಾರಾಗಿ ಕೇಳಿಸ್ಕೋ. ದಿನಾಲೂ 8.20ಕ್ಕೆ ನೀನು ಮನೆ ಬಿಡಬೇಕು. ಮನೆಯಿಂದ ಐದು ನಿಮಿಷ ನಡೆದರೆ ಲೋಕೇಶನ ಕಿರಾಣಿ ಅಂಗಡಿ, ಅಲ್ಲಿಂದ ಹತ್ತು ಹೆಜ್ಜೆ ಮುಂದೆ ಹೋದ್ರೆ ಗೋವರ್ಧನ್ ಮೆಡಿಕಲ್ಸ್. ಮತ್ತೆ ಐದು ನಿಮಿಷ ನಡೆದರೆ ಸಾನು ಡಾಕ್ಟರ್ ಶಾಪ್. ಅದಾದ ಮೇಲೆ ಸಿಕ್ಕೋದು ಸಂಗಂ ಬೇಕರಿ. ಅಲ್ಲಿಂದ ಮುಂದಕ್ಕೆ ಗಣೇಶ ಸಭಾಗೃಹ. ಅಲ್ಲಿಂದ ಆರು ನಿಮಿಷ ಮುಂದೆ ಹೋದ್ರೆ ನೀಲಾಚಲ ಸಲೂನ್. ಅಲ್ಲಿಂದ ಹತ್ತು ಹೆಜ್ಜೆ ಮುಂದೆ ಹೋದ್ರೆ ಹನುಮಾನ್ ದೇವರ ಗುಡಿ ಸಿಗುತ್ತೆ. ಇವಿಷ್ಟೂ ಮುಗಿದ ಮೇಲೆ ಮೈನ್ ರೋಡ್ ಸಿಗುತ್ತೆ. ನೀನು ಹುಷಾರಾಗಿ ರಸ್ತೆ ದಾಟಿ ಬಸ್ ಹತ್ತಬೇಕು...' ಎಂದ. ಅವತ್ತು ರಾತ್ರಿಯಿಡೀ ಕಡಿಮೆಯೆಂದರೂ ಹದಿನೈದು ಬಾರಿ ಹಾದಿಯುದ್ದಕ್ಕೂ ಸಿಗುವ ಸ್ಥಳಗಳ ಬಗ್ಗೆ ಹೇಳಿ ಏಕಾಂಗಿ ಪ್ರಯಾಣಕ್ಕೆ ಆಕೆಯನ್ನು ಮಾನಸಿಕವಾಗಿ ಸಜ್ಜುಗೊಳಿಸಿದ.
ಬೆಳಗ್ಗೆ ಏಳುತ್ತಿದ್ದಂತೆಯೇ, ಗಂಡ ತನ್ನನ್ನು ದೂರ ಮಾಡುವ ಉದ್ದೇಶದಿಂದಲೇ ಹೀಗೆಲ್ಲಾ ಮಾಡುತ್ತಿದ್ದಾನಾ ಎಂಬ ಅನುಮಾನ ಗಾಯಿತ್ರಿಗೆ ಶುರುವಾಯಿತು. ಹಿಂದೆಯೇ, ತುಂಬಾ ವೇಗವಾಗಿ ಬೈಕ್, ಕಾರ್‌ಗಳಲ್ಲಿ ಬರುವ ಜನ ತನಗೆ ಡಿಕ್ಕಿ ಹೊಡೆದರೆ ಗತಿ ಏನು ಅನ್ನಿಸಿ ಹೆದರಿಕೆಯಾಯಿತು. ರಸ್ತೆ ದಾಟುತ್ತಿರುವಾಗಲೇ ಲಾರಿಯೊಂದು ಗುದ್ದಿದಂತಾಗಿ ಮೈ ಬೆವರಿತು. ಮರುಕ್ಷಣವೇ ಗಂಡನ ಕೊರಳು ಬಳಸಿದ ಗಾಯಿತ್ರಿ ಕೇಳಿ ಬಿಟ್ಟಳು: "ರೀ, ಒಂಟಿಯಾಗಿ ಪಯಣ ಶುರು ಮಾಡ್ತೀನಲ್ಲ; ಆಗ ಯಾವುದೋ ವೆಹಿಕಲ್‌ಗೆ ಸಿಕ್ಕೊಂಡು ನಾನು ಸತ್ತು ಹೋಗಲ್ಲ ಅಲ್ವ? ನೀವು ನನ್ನನ್ನು ಮರೆತು ಬಿಡಲ್ಲ ಅಲ್ವ?' ಈ ಪ್ರಶ್ನೆಗೆ ಮಹಾಲಿಂಗ ಉತ್ತರಿಸಲಿಲ್ಲ. ಬದಲಿಗೆ, ಅವಳ ಹಣೆಗೆ ಮುತ್ತಿಟ್ಟು ಮೌನವಾದ.
ಮರುದಿನದಿಂದ ಗಾಯಿತ್ರಿಯ ಏಕಾಂಗಿ ಯಾತ್ರೆ ಶುರುವಾಯಿತು. ಕಪ್ಪು ಕನ್ನಡಕ ಧರಿಸಿ, ವಾಕಿಂಗ್‌ಸ್ಟಿಕ್ ಹಿಡಿದುಕೊಂಡು, ಅದರಿಂದ ಒಮ್ಮೆ ಬಲಕ್ಕೆ ಮತ್ತೊಮ್ಮೆ ಎಡಕ್ಕೆ ಕುಟ್ಟುತ್ತಾ ದಾರಿ ಮಾಡಿಕೊಂಡು ಆಕೆ ಹೋಗುವುದನ್ನು ಅದೇ ನವನಗರದ ಜನ ಸಂಕಟದಿಂದ ನೋಡಿದರು. ಕೆಲವರು ಆಕೆಗೆ ಕೇಳಿಸುವಂತೆಯೇ -'ಒಂದು ಕಾಲಕ್ಕೆ ತ್ರಿಲೋಕ ಸುಂದರಿ ಥರಾ ಮೆರೆದಳು. ಆದರೆ ಈಗ ದೇವರು ಕಣ್ಣು ಕಿತ್ಕೊಂಡು ಅನ್ಯಾಯ ಮಾಡಿಬಿಟ್ಟ' ಎಂದರು. ಇಂಥ ಮಾತುಗಳನ್ನು ಕೇಳಿದಾಗೆಲ್ಲ ಗಾಯಿತ್ರಿ ಸಂಕಟದಿಂದ ಬಿಕ್ಕಳಿಸುತ್ತಿದ್ದಳು. ಡಿಪ್ರೆಷನ್‌ನಿಂದ ಮುಗ್ಗರಿಸುತ್ತಿದ್ದಳು. ಆಗೆಲ್ಲ ದಿಢೀರನೆ ಯಾರಾದರೂ ಆಕೆಗೆ ಆಸರೆಯಾಗುತ್ತಿದ್ದರು. ಯಾರೋ ರಸ್ತೆ ದಾಟಿಸುತ್ತಿದ್ದರು. ಬಸ್‌ನಲ್ಲಿ, ಡ್ರೈವರ್‌ನ ಹಿಂಬದಿಯ ಸೀಟ್ ಅವಳಿಗೆ ಮೀಸಲಾಗಿರುತ್ತಿತ್ತು.
ಎಂದಿನಂತೆ ಅವತ್ತೂ ಬಸ್ ಹತ್ತಿದಳು ಗಾಯಿತ್ರಿ. ವಿಶೇಷವೆಂದರೆ ಅವತ್ತು ಆ ಸ್ಟಾಪ್‌ನಲ್ಲಿ ಹತ್ತಿದ್ದು ಇವಳೊಬ್ಬಳೇ. ಡ್ರೈವರ್ರೇ ಕಂಡಕ್ಟರೂ ಆಗಿದ್ದ ಬಸ್ ಅದು. ಗಾಯಿತ್ರಿಗೆ ಟಿಕೆಟ್ ಕೊಡುವ ಮುನ್ನ ಆತ ಗಟ್ಟಿಯಾಗಿ  - 'ನಿನ್ಮೇಲೆ ತುಂಬಾ ಹೊಟ್ಟೆಕಿಚ್ಚಾಗ್ತಿದೆ ಕಣೋ' ಅಂದು ಬಿಟ್ಟ. ಬಸ್ ಹತ್ತಿದ್ದು ತಾನೊಬ್ಬಳೇ ಎಂದು ಗಾಯಿತ್ರಿಗೆ ಖಚಿತವಾಗಿತ್ತು. ಹಾಗಿದ್ದರೂ ಹುಡುಗರೊಂದಿಗೆ ಮಾತಾಡುವಂತೆ ನಟಿಸುತ್ತಾ ಈ ಡ್ರೈವರ್ ನನ್ನ ಕುರುಡುತನವನ್ನು ಗೇಲಿ ಮಾಡ್ತಿದ್ದಾನೇನೋ ಅನ್ನಿಸಿತು. ಆಕೆ ಸಂಕಟ ತಾಳಲಾರದೆ-'ಸಾರ್, ಹೇಳಿ ಕೇಳಿ ನಾನು ಕುರುಡಿ. ನನ್ನನ್ನು ಹೀಗೆಲ್ಲ ಗೇಲಿ ಮಾಡಿದ್ರೆ ನಿಮ್ಗೆ ಏನು ಸಿಗುತ್ತೆ' ಎಂದೇ ಬಿಟ್ಟಳು.
ತಕ್ಷಣವೇ ಬಸ್ ಡ್ರೈವರ್ ಹೇಳಿದ:'ಅಯ್ಯೋ, ಹಾಗಲ್ಲಮ್ಮಾ. ನಾನೂ ಒಂದು ವಾರದಿಂದ ಗಮನಿಸ್ತಾ ಇದೀನಿ. ಯೂನಿಫಾರಂನಲ್ಲಿರೋ ಪೊಲೀಸ್ ಕಟಿಂಗ್ ಮಾಡಿಸಿರೋ ಒಬ್ಬ ದಿನಾಲೂ ನಿಮ್ಮನ್ನು ದೂರದಿಂದ ಫಾಲೋ ಮಾಡ್ತಾನೆ. ನೀವು ಎಡವಿದಾಗ, ಜಾರಿದಾಗ ನಿಮ್ಮನ್ನು ರಕ್ಷಿಸುವಂತೆ ಸುತ್ತ ಇದ್ದವರಿಗೆ ಸಿಗ್ನಲ್ ಕೊಡ್ತಾನೆ. ನೀವು ರಸ್ತೆ ದಾಟುವವರೆಗೂ ನಿಂತಲ್ಲೇ ನಡುಗ್ತಾ ಇರ್ತಾನೆ. ಬಸ್ ಹತ್ತಿ, ಸೀಟಲ್ಲಿ ನೀವು ಕೂರುತ್ತಿದ್ದಂತೆಯೇ ನಿಮಗೆ ಒಂದು ಹೂ ಮುತ್ತು ತೂರಿ, ಆಕಾಶದ ಕಡೆಗೆ ಕೈ ಮಾಡಿ ನಮಸ್ಕರಿಸಿ ಬೈಕ್ ಹತ್ತಿ ವಿರುದ್ಧ ದಿಕ್ಕಲ್ಲಿ ಹೋಗಿ ಬಿಡ್ತಾನೆ. ಅವನ ಪ್ರೀತಿ ಮತ್ತು ಕಾಳಜಿ ಕಂಡು ಹೊಟ್ಟೆ ಕಿಚ್ಚಾಯ್ತು. ಅದನ್ನೇ ಇವತ್ತು ಅವನಿಗೆ ಕೂಗಿ ಹೇಳಿಬಿಟ್ಟೆ...'
ಯೂನಿಫಾರಂನಲ್ಲಿ ತನ್ನನ್ನು ಹಿಂಬಾಲಿಸುವಾತ ಗಂಡನೇ ಎಂದು ಅರ್ಥವಾಗುತ್ತಿದ್ದಂತೆಯೇ ಗಾಯಿತ್ರಿಗೆ ಮಾತೇ ಹೊರಡಲಿಲ್ಲ...

- ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com